Tuesday, April 21, 2026
Tuesday, April 21, 2026

ನಾನು 'ನರಕ'ಕ್ಕೆ ಹೋಗಿದ್ದೆ, ಅದು 'ಸ್ವರ್ಗ'ಕ್ಕಿಂತ ಸುಂದರವಾಗಿತ್ತು!

ಈ ಗ್ರಾಮಕ್ಕೆ ಹೋದವರು ತಾವು ಸುಂದರ ಜಾಗ ನೋಡಿದ್ದಕ್ಕಿಂತ ಹೆಚ್ಚಾಗಿ, ತಾವು 'ನರಕಕ್ಕೆ ಹೋಗಿ ಬಂದೆವು' ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಇಲ್ಲಿನ ರೈಲ್ವೆ ನಿಲ್ದಾಣದ ಬೋರ್ಡ್ ಮೇಲೆ 'HELL' ಎಂದು ದೊಡ್ಡದಾಗಿ ಬರೆಯಲಾಗಿದೆ. ಅದರ ಕೆಳಗೆ 'Gods-expedition' ಎಂದು ಬರೆಯಲಾಗಿದೆ. ನಾರ್ವೇಜಿಯನ್ ಭಾಷೆಯಲ್ಲಿ ಇದರರ್ಥ 'ಸರಕು ಸಾಗಣೆ ವಿಭಾಗ' ಎಂದಿದ್ದರೂ, ಇಂಗ್ಲಿಷ್‌ನಲ್ಲಿ ಇದನ್ನು ನೋಡಿದವರು 'ದೇವರಿಗೂ ನರಕಕ್ಕೂ ಇಲ್ಲಿ ಕನೆಕ್ಷನ್ ಇದೆ' ಎಂದು ಭಾವಿಸಬಹುದು.

ಸುಮಾರು ಏಳು ವರ್ಷಗಳ ಹಿಂದೆ ನಾನು 'ನರಕ'ಕ್ಕೆ ಹೋಗಿದ್ದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಿಜ, ನಾನು ಸಾಕ್ಷಾತ್ ಭೂಮಿ ಮೇಲಿನ 'ನರಕ'ವನ್ನು ನೋಡಿದ್ದೇನೆ.

ಆ ದಿನ ನನ್ನ ಜತೆಗಿದ್ದ ಗೈಡ್ ಬೆಳಗ್ಗೆ ಕಾಫಿ ಹೀರುತ್ತಾ, 'Today we will be going to Hell' ಎಂದು ಹೇಳಿದಾಗ ತಕ್ಷಣ ನನಗೆ ಅರ್ಥವಾಗಲಿಲ್ಲ. ನಾನು ಅಚ್ಚರಿಯಿಂದ 'What?' ಎಂದೆ. ಅದಕ್ಕೆ ಆತ, 'ಇಂದು ನಿಮಗೆ ಭೂಮಿಯ ಮೇಲಿನ ಅಧಿಕೃತ ನರಕವನ್ನು ತೋರಿಸುತ್ತೇನೆ' ಎಂದು ಹೇಳಿದ. ನನಗೆ ಮುಂದೆ ಮಾತಾಡುವ ಧೈರ್ಯ ಸಾಕಾಗಲಿಲ್ಲ. ಆತ ನನ್ನನ್ನು 'ಮಂಗಾ' ಮಾಡುತ್ತಿದ್ದಾನೆ ಎಂದು ಅನಿಸಿ ಸುಮ್ಮನಾದೆ.

ನಂತರ ನನಗೆ ಗೊತ್ತಾಗಿದ್ದೇನೆಂದರೆ, ಆತ ನಮ್ಮನ್ನು 'ಹೆಲ್' (Hell) ಎಂಬ ಊರಿಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು. ಸಾಮಾನ್ಯವಾಗಿ 'ನರಕ' (Hell) ಎಂದರೆ ನಮ್ಮ ಕಣ್ಮುಂದೆ ಬರುವುದು ಭಯಾನಕವಾಗಿರುವ, ಅಸಹನೀಯವೆನಿಸುವ ತಾಣ. ಆದರೆ ನಾರ್ವೆ ದೇಶಕ್ಕೆ ಹೋದರೆ ನೀವು ಅತ್ಯಂತ ಸುಂದರವಾದ, ಶಾಂತವಾದ ಮತ್ತು 'ಅತಿ ಶೀತಲ'ವಾದ 'ನರಕ'ವನ್ನು ನೋಡಬಹುದು! ಹೌದು, ನಾರ್ವೆಯ ಸ್ಟಜೋರ್ಡಾಲ್ (Stjørdal) ಪ್ರಾಂತ್ಯದಲ್ಲಿರುವ ಆ ಪುಟ್ಟ ಗ್ರಾಮದ ಹೆಸರು 'ಹೆಲ್'.

ಇದನ್ನೂ ಓದಿ: 'ವೈರಲ್ ಸಂಸ್ಕೃತಿ'ಯಲ್ಲಿ ನಲುಗುತ್ತಿರುವ ಪ್ರವಾಸೋದ್ಯಮ ತಾಣಗಳು

ಈ ಹೆಸರು ಬಂದಿದ್ದು ಹೇಗೆ?

ಇಂಗ್ಲಿಷ್‌ನಲ್ಲಿ 'Hell' ಎಂದರೆ ನರಕ ಎಂದರ್ಥವಾದರೂ, ನಾರ್ವೇಜಿಯನ್ ಭಾಷೆಯಲ್ಲಿ ಇದರ ಮೂಲಾರ್ಥವೇ ಬೇರೆ. ಪುರಾತನ ನಾರ್ಸ್ ಭಾಷೆಯ 'hellir' ಎಂಬ ಪದದಿಂದ ಇದು ಬಂದಿದೆ, ಇದರರ್ಥ 'ಗುಹೆ' ಅಥವಾ 'ಬಂಡೆಗಳ ನಡುವಿನ ಆಶ್ರಯ ತಾಣ' ಎಂದರ್ಥ. ಆಧುನಿಕ ನಾರ್ವೇಜಿಯನ್ ಭಾಷೆಯಲ್ಲಿ 'ಹೆಲ್' ಎಂದರೆ 'ಅದೃಷ್ಟ' ಎಂದೂ ಅರ್ಥವಿದೆ. ಆದರೆ ಇಂಗ್ಲಿಷ್ ಭಾಷಿಕರಿಗೆ ಮಾತ್ರ ಇದು 'ನರಕ'ವಾಗಿ ಕಂಡಿದ್ದರಿಂದ ಈ ಗ್ರಾಮ ಇಂದು ಜಾಗತಿಕವಾಗಿ ಪ್ರಖ್ಯಾತವಾಗಿದೆ.

Untitled design - 2026-04-21T165703.634

ಇಂಗ್ಲಿಷ್‌ನಲ್ಲಿ ಒಂದು ಪ್ರಸಿದ್ಧ ಗಾದೆ ಮಾತಿದೆ—'When hell freezes over'. ಅಂದರೆ 'ನರಕ ಹೆಪ್ಪುಗಟ್ಟಿದಾಗ' ಅಥವಾ 'ಯಾವತ್ತೂ ಸಾಧ್ಯವಾಗದ ಕೆಲಸ ನಡೆದಾಗ' ಈ ಮಾತನ್ನು ಬಳಸುತ್ತಾರೆ. ಆದರೆ ನಾರ್ವೆಯ 'ಹೆಲ್' ಗ್ರಾಮದಲ್ಲಿ ಇದು ಪ್ರತಿ ವರ್ಷವೂ ನಡೆಯುವ ಸಾಮಾನ್ಯ ಸಂಗತಿ!

ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್ 20 ಡಿಗ್ರಿ ಸೆಂಟಿಗ್ರೇಡ್ ನಿಂದ ಮೈನಸ್ 25 ಡಿಗ್ರಿ ಸೆಂಟಿಗ್ರೇಡ್ ವರೆಗೆ ಕುಸಿಯುತ್ತದೆ. ಆಗ ಇಡೀ ಗ್ರಾಮ ಮಂಜುಗಡ್ಡೆಯಿಂದ ಆವೃತವಾಗಿರುತ್ತದೆ. ಆಗ ಪ್ರವಾಸಿಗರು ಇಲ್ಲಿನ ರೈಲ್ವೆ ಸ್ಟೇಷನ್ ಮುಂದೆ ನಿಂತು, 'ನೋಡಿ, ನರಕ ಈಗ ಹೆಪ್ಪುಗಟ್ಟಿದೆ' ಎಂದು ತಮಾಷೆ ಮಾಡುತ್ತಾರೆ. ಇದು ಪ್ರವಾಸಿಗರ ಪಾಲಿಗೆ ಅತ್ಯಂತ ನೆಚ್ಚಿನ ಜೋಕ್.

ಈ ಗ್ರಾಮಕ್ಕೆ ಹೋದವರು ತಾವು ಸುಂದರ ಜಾಗ ನೋಡಿದ್ದಕ್ಕಿಂತ ಹೆಚ್ಚಾಗಿ, ತಾವು 'ನರಕಕ್ಕೆ ಹೋಗಿ ಬಂದೆವು' ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಇಲ್ಲಿನ ರೈಲ್ವೆ ನಿಲ್ದಾಣದ ಬೋರ್ಡ್ ಮೇಲೆ 'HELL' ಎಂದು ದೊಡ್ಡದಾಗಿ ಬರೆಯಲಾಗಿದೆ. ಅದರ ಕೆಳಗೆ 'Gods-expedition' ಎಂದು ಬರೆಯಲಾಗಿದೆ. ನಾರ್ವೇಜಿಯನ್ ಭಾಷೆಯಲ್ಲಿ ಇದರರ್ಥ 'ಸರಕು ಸಾಗಣೆ ವಿಭಾಗ' ಎಂದಿದ್ದರೂ, ಇಂಗ್ಲಿಷ್‌ನಲ್ಲಿ ಇದನ್ನು ನೋಡಿದವರು 'ದೇವರಿಗೂ ನರಕಕ್ಕೂ ಇಲ್ಲಿ ಕನೆಕ್ಷನ್ ಇದೆ' ಎಂದು ಭಾವಿಸಬಹುದು.

ಪ್ರವಾಸಿಗರು ಇಲ್ಲಿನ ಸೈನ್ ಬೋರ್ಡ್ ಮುಂದೆ ನಿಂತು "I have been to Hell and back" (ನಾನು ನರಕಕ್ಕೆ ಹೋಗಿ ವಾಪಸ್ ಬಂದೆ) ಎಂಬ ಕ್ಯಾಪ್ಶನ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯ.

1990ರಲ್ಲಿ ಮಿಸ್ ಯೂನಿವರ್ಸ್ ಆಗಿದ್ದ ಮೋನಾ ಗ್ರುಡ್ ಇದೇ ಗ್ರಾಮದವಳು ! ಆಗ ಮಾಧ್ಯಮಗಳು ಅವರನ್ನು 'The Beauty Queen from Hell' (ನರಕದಿಂದ ಬಂದ ಸುಂದರಿ) ಎಂದು ತಮಾಷೆಯಾಗಿ ಕರೆದಿದ್ದವು. ಈ ವಿಚಿತ್ರ ವೈರುಧ್ಯವು ಜಾಗತಿಕವಾಗಿ ಭಾರಿ ಕುತೂಹಲ ಮೂಡಿಸಿತ್ತು. ಸ್ವತಃ ಮೋನಾ ಈ ಹೆಸರನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದಳು ಮತ್ತು ತನ್ನ ಊರಿನ ಹೆಸರನ್ನು ಪ್ರಪಂಚಕ್ಕೆ ಪರಿಚಯಿಸಲು ಇದನ್ನು ಬಳಸಿಕೊಂಡಳು. ಈ ಒಂದು ಸಾಲು ಅದೆಷ್ಟು ಪ್ರಸಿದ್ಧವಾಯಿತೆಂದರೆ, ಇಂದಿಗೂ 'ಹೆಲ್' ಗ್ರಾಮದ ಪ್ರವಾಸೋದ್ಯಮಕ್ಕೆ ಇದೊಂದು ದೊಡ್ಡ ಬ್ರ್ಯಾಂಡ್ ಆಗಿ ಉಳಿದಿದೆ. ಒಬ್ಬ ಸುಂದರಿ 'ನರಕ'ದಿಂದ ಬಂದು ಇಡೀ ವಿಶ್ವವನ್ನೇ ಗೆದ್ದಿದ್ದು ನಿಜಕ್ಕೂ ಒಂದು ರೋಚಕ ಪ್ರಸಂಗವೇ ಸರಿ!

ಮೋನಾ ಗ್ರುಡ್ ಮಿಸ್ ಯೂನಿವರ್ಸ್ ಆದಾಗ 'ಜಗತ್ತಿನ ಸುಂದರಿಯರೆಲ್ಲ ಸ್ವರ್ಗದಿಂದ ಇಳಿದು ಬರ್ತಾರೆ ಅಂದುಕೊಂಡಿದ್ದೆವು, ಆದರೆ ಈಕೆ ನರಕದಿಂದಲೇ ಬಂದಿದ್ದಾಳೆ!' ಎಂಬ ಜೋಕ್ ಬಹಳ ಜನಪ್ರಿಯವಾಗಿತ್ತು.

ಹೆಸರು ನರಕವಾಗಿದ್ದರೂ, ಇಲ್ಲಿನ ಜೀವನ ಸ್ವರ್ಗದಂತಿದೆ. ಕೇವಲ 1,500 ಜನಸಂಖ್ಯೆ ಇರುವ ಈ ಗ್ರಾಮವು ಅತ್ಯಂತ ಅಚ್ಚುಕಟ್ಟಾಗಿದೆ. ಇಲ್ಲಿನ ಮನೆಗಳು ಸುಂದರವಾದ ಬಣ್ಣಗಳಿಂದ ಕೂಡಿದ್ದು, ಸುತ್ತಲೂ ಹಚ್ಚಹಸಿರಿನ ಬೆಟ್ಟಗಳು ಮತ್ತು ನದಿಗಳಿವೆ. ರಸ್ತೆಗಳು ಕನ್ನಡಿಯಂತೆ. ಇಲ್ಲಿ ಕಸ ಹಾಕುವವರು ಅಥವಾ ಟ್ರಾಫಿಕ್ ಕಿರಿಕಿರಿ ಮಾಡುವವರು ಯಾರೂ ಇಲ್ಲ. ಹೆಸರಿಗೆ ಮಾತ್ರ 'ನರಕ', ಆದರೆ ಅಲ್ಲಿನ ಶಿಸ್ತು ನೋಡಿದರೆ ಅದು ದೇವಲೋಕದಂತೆ ಭಾಸವಾಗುತ್ತದೆ.

ಇಲ್ಲಿನ ಜನರು ಪರಸ್ಪರ ಆತ್ಮೀಯತೆ, ಅನ್ಯೋನ್ಯವಾಗಿ ಬದುಕು ನಡೆಸುತ್ತಿದ್ದಾರೆ. ಅಪರಾಧ ಎಂಬುದು ಇಲ್ಲಿ ಕೇಳದ ಮಾತು. ಬಾಗಿಲು ಹಾಕದೇ ಮಲಗುವಷ್ಟು ಸುರಕ್ಷಿತವಾಗಿರುವ ಈ ಗ್ರಾಮದಲ್ಲಿ, ಜನರ ನಡುವಿನ ನಂಬಿಕೆಯೇ ದೊಡ್ಡ ಆಸ್ತಿ. ಪ್ರವಾಸಿಗರು ಬಂದಾಗ ಇಲ್ಲಿನ ನಿವಾಸಿಗಳು ತಮ್ಮ ಊರಿನ ಹೆಸರಿನ ಬಗ್ಗೆ ಇರುವ ತಮಾಷೆಗಳನ್ನು ಹಂಚಿಕೊಳ್ಳುತ್ತಾ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ.

ಇಲ್ಲಿನ ಜನಜೀವನ ಸರಳವಾಗಿದ್ದರೂ, ಜೀವನದ ಗುಣಮಟ್ಟ ಮಾತ್ರ ಅತ್ಯುನ್ನತ ಮಟ್ಟದಲ್ಲಿದೆ. ಹೆಸರಿನಲ್ಲಿರುವ ವಿಚಿತ್ರತೆಯನ್ನು ಬಿಟ್ಟರೆ, 'ಹೆಲ್' ಗ್ರಾಮವು ಪ್ರಶಾಂತತೆ, ಸುರಕ್ಷತೆ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಾಗಿದ್ದು, ಬದುಕಲು ಬಯಸುವ ಪ್ರತಿಯೊಬ್ಬರಿಗೂ ಇದು ನಿಜಕ್ಕೂ ಒಂದು 'ಸ್ವರ್ಗ'ವೇ ಸರಿ. ಪ್ರತಿ ವರ್ಷ ಇಲ್ಲಿ 'Hell Blues Festival' ಎಂಬ ಸಂಗೀತೋತ್ಸವ ನಡೆಯುತ್ತದೆ, ಇದಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಸಂಗೀತ ಪ್ರಿಯರು ಬರುತ್ತಾರೆ.

ಆ ಊರಿನಲ್ಲಿ ಅಲ್ಲಿನ ನಿವಾಸಿಗಳಿಗೆ 'ನೀವು ಎಲ್ಲಿರೋದು?' ಎಂದು ಕೇಳಿದರೆ, ಅವರು ಅಭಿಮಾನದಿಂದ, 'ನಾವು ನರಕದಲ್ಲೇ ಇರೋದು, ಆದ್ರೆ ಇಲ್ಲಿರುವ ನೆಮ್ಮದಿ ಬೇರೆಲ್ಲೂ ಇಲ್ಲ' ಎಂದು ಅತ್ಯಂತ ಸಂತೋಷದಿಂದ ಹೇಳುತ್ತಾರೆ.

ಧರ್ಮಗ್ರಂಥಗಳಲ್ಲಿರುವ, ನಾವು ಕೇಳಿರುವ ಕಥೆಗಳಲ್ಲಿರುವ 'ನರಕ'ಕ್ಕೆ ಯಾರೂ ಹೋಗಲು ಬಯಸುವುದಿಲ್ಲ, ಒಮ್ಮೆ ಹೋದರೆ, ವಾಪಸ್ ಬಂದವರು ಯಾರೂ ಇಲ್ಲ. ಆದರೆ ನಾರ್ವೆಯ ಈ 'ಹೆಲ್'ಗೆ ಹೋದರೆ ನೀವು ಸುಂದರ ನೆನಪುಗಳು ಮತ್ತು ಒಂದಿಷ್ಟು ಹಾಸ್ಯದ ಸಾಲುಗಳೊಂದಿಗೆ ಖುಷಿಯಾಗಿ ವಾಪಸ್ ಬರಬಹುದು!

ನೀವು 'ಹೆಲ್'ಗೆ ಹೋದಾಗ, ಯಾರಾದರೂ ಲೊಕೇಶನ್ ಕಳಿಸಿ ಅಂದಾಗ, ಕಳಿಸಿದಿರೆನ್ನಿ. 'ಇದೇನು ಈತ 'ಹೆಲ್'ನಲ್ಲಿದ್ದಾನೆ ಇಂದು ಗಾಬರಿಯಾಗುವುದು ಸಹಜ. ನಾನು ಆ ಊರಿಗೆ ಹೋಗಿ ಬಂದು, ನನ್ನ ಸ್ನೇಹಿತರ ಮುಂದೆ ಹೇಳಿದ್ದೆ - 'ಸತ್ತ ಮೇಲೆ ನರಕಕ್ಕೆ ಹೋಗೋದು ಎಲ್ಲರಿಗೂ ಗೊತ್ತು, ಆದರೆ ಬದುಕಿದ್ದಾಗಲೇ ನರಕ ನೋಡಿ ಬಂದವನು ನಾನೊಬ್ಬನೇ!'

**

ಹೆಲ್ ಕುರಿತು ತಮಾಷೆ

ನಾರ್ವೆಯ 'ಹೆಲ್' (Hell) ಗ್ರಾಮದ ಬಗ್ಗೆ ಕೆಲವು ತಮಾಷೆಯ ಪ್ರಸಂಗಗಳಿವೆ. ಆ ಪೈಕಿ ಮೂರು.

* ಪ್ರವಾಸಿಗ ನಾರ್ವೆಯಲ್ಲಿ ದಾರಿ ಕೇಳುತ್ತಾನೆ - 'ಸರ್, ನಾನು ನರಕಕ್ಕೆ ಹೋಗಬೇಕಿದೆ, ದಾರಿ ತೋರಿಸ್ತೀರಾ?'

ಸ್ಥಳೀಯ ವ್ಯಕ್ತಿ - 'ಖಂಡಿತ, ಈ ರೈಲಿನಲ್ಲಿ ಹತ್ತಿ ಕೂತ್ಕೊಳ್ಳಿ, ಅರ್ಧ ಗಂಟೆಯಲ್ಲಿ ನೀವು ನರಕದಲ್ಲಿ ಇರ್ತೀರಾ!'

Untitled design - 2026-04-21T165713.353

* ಟಿಕೆಟ್ ಕೌಂಟರ್‌ನಲ್ಲಿ ಪ್ರವಾಸಿ - 'ನನಗೊಂದು ನರಕಕ್ಕೆ ಒನ್-ವೇ ಟಿಕೆಟ್ ಕೊಡಿ.'

ಕ್ಲರ್ಕ್ - 'ಒನ್-ವೇ ಬೇಡ ಸರ್, ಅಲ್ಲಿನ ಚಳಿ ತಡೆಯಲಾರದೆ ನೀವೇ ವಾಪಸ್ ಬರ್ತೀರಾ, ರಿಟರ್ನ್ ಟಿಕೆಟ್ ತಗೊಳ್ಳಿ'

* ಯಾರಾದರೂ 'ನೀವು ಎಲ್ಲಿರೋದು?' ಎಂದು ಕೇಳಿದರೆ, ಅಲ್ಲಿನ ನಿವಾಸಿಗಳು ಹೇಳುತ್ತಾರೆ - 'ನಾವು ನರಕದಲ್ಲೇ ಇರೋದು, ಆದ್ರೆ ಇಲ್ಲಿರೋ ನೆಮ್ಮದಿ ಬೇರೆಲ್ಲೂ ಇಲ್ಲ'

**

ಹೆಸರಿಲ್ಲದ ಊರು!

ಪ್ರಪಂಚದಾದ್ಯಂತ ನಾವು ವೈವಿಧ್ಯಮಯ ಹೆಸರಿನ ನಗರಗಳನ್ನು ನೋಡುತ್ತೇವೆ. ಕೆಲವು ಹೆಸರುಗಳು ಇತಿಹಾಸವನ್ನು ಸಾರಿದರೆ, ಇನ್ನು ಕೆಲವು ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುತ್ತವೆ. ಆದರೆ ಅಮೆರಿಕದ ಕೊಲೊರಾಡೋ ಪ್ರಾಂತ್ಯದಲ್ಲಿರುವ 'ನೋ ನೇಮ್' (No Name) ಎಂಬ ಊರಿಗೆ ಹೋದಾಗ ನನಗೆ ವಿಚಿತ್ರ ಸಮಸ್ಯೆ ಆಗಿತ್ತು. ಇದು ಕೇವಲ ಹೆಸರಲ್ಲ, ಹೆಸರಿಲ್ಲದಿರುವುದೇ ಒಂದು ಹೆಸರಾದ ವಿಚಿತ್ರ ಮತ್ತು ಕುತೂಹಲಕಾರಿ ಪ್ರಸಂಗ. ಪ್ರತಿ ಊರಿಗೂ ಒಂದು ಹೆಸರು ಇರಲೇಬೇಕಲ್ಲ, ಆದರೆ ಆ ಊರಿನ ಹೆಸರೇ 'ನೋ ನೇಮ್' ಅಂದರೆ 'ಹೆಸರು ಇಲ್ಲ' ಅನ್ನೋದೇ ಹೆಸರು.

ಈ ಹೆಸರು ಬಂದಿದ್ದು ಹೇಗೆ?

ಈ ಸ್ಥಳಕ್ಕೆ 'ನೋ ನೇಮ್' ಎಂಬ ಹೆಸರು ಬರಲು ಯಾವುದೇ ದೊಡ್ಡ ಇತಿಹಾಸ ಅಥವಾ ಗಂಭೀರ ಕಾರಣವಿಲ್ಲ. ಬದಲಾಗಿ, ಇದು ಕೇವಲ ಒಂದು ಆಡಳಿತಾತ್ಮಕ ಅಚಾತುರ್ಯ ಅಥವಾ ತಾತ್ಕಾಲಿಕ ನಿರ್ಧಾರದ ಫಲ. ಹಲವು ದಶಕಗಳ ಹಿಂದೆ, ಅಮೆರಿಕದ ಅಂತಾರಾಜ್ಯ ಹೆದ್ದಾರಿ-70 (ಇಂಟರ್‌ಸ್ಟೇಟ್ 70) ಅನ್ನು ನಿರ್ಮಿಸುವಾಗ, ಎಂಜಿನಿಯರ್‌ಗಳು ಮತ್ತು ಯೋಜನಾಧಿಕಾರಿಗಳು ಪ್ರತಿ ನಿರ್ಗಮನ ದಾರಿಗೂ (Exit) ಒಂದು ಹೆಸರನ್ನು ನೀಡಬೇಕಿತ್ತು. ಈ ನಿರ್ದಿಷ್ಟ ಪ್ರದೇಶದ ಬಳಿ ಹೆದ್ದಾರಿಯ ಎಕ್ಸಿಟ್ ನಿರ್ಮಿಸಿದಾಗ, ಅದಕ್ಕೆ ಅಧಿಕೃತವಾಗಿ ಯಾವ ಹೆಸರಿಡಬೇಕು ಎಂಬ ಗೊಂದಲವಿತ್ತು. ಹೀಗಾಗಿ, ಅಲ್ಲಿನ ಸೈನ್ ಬೋರ್ಡ್‌ಗಳಲ್ಲಿ ತಾತ್ಕಾಲಿಕವಾಗಿ 'No Name' ಎಂದು ಬರೆಯಲಾಗಿತ್ತು. ಅಂದರೆ, 'ಇನ್ನೂ ಹೆಸರಿಟ್ಟಿಲ್ಲ' ಎಂದರ್ಥ.

ಆದರೆ ಕಾಲಾನಂತರದಲ್ಲಿ, ಜನರು ಆ ಸ್ಥಳವನ್ನು ಅದೇ ಹೆಸರಿನಿಂದ ಗುರುತಿಸಲು ಶುರು ಮಾಡಿದರು. ಅಧಿಕಾರಿಗಳು ಬೇರೆ ಹೆಸರು ಬದಲಾಯಿಸಲು ಪ್ರಯತ್ನಿಸಿದಾಗ, ಸ್ಥಳೀಯರು ಮತ್ತು ಪ್ರವಾಸಿಗರು ಈ ವಿಚಿತ್ರ ಹೆಸರೇ ಚೆನ್ನಾಗಿದೆ ಎಂದು ಅದನ್ನು ಹಾಗೆಯೇ ಉಳಿಸಿಕೊಂಡರು.

ಎಲ್ಲಿದೆ ಈ ಸ್ಥಳ?

ಇದು ಕೊಲೊರಾಡೋದ ಸುಂದರವಾದ ಗ್ಲೆನ್‌ವುಡ್ ಕ್ಯಾನ್ಯನ್ ಪ್ರದೇಶದಲ್ಲಿದೆ. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಈ ಜಾಗವು ಪರ್ವತಗಳು ಮತ್ತು ನದಿಗಳಿಂದ ಸುತ್ತುವರಿದಿದೆ. ಹೆಸರಿನಲ್ಲಿ 'ನೋ ನೇಮ್' ಎಂದಿದ್ದರೂ, ಪ್ರಕೃತಿಯ ದೃಷ್ಟಿಯಿಂದ ಇದು ಅತ್ಯಂತ ಸಮೃದ್ಧವಾದ ಜಾಗ.

ಈ ಹೆಸರಿನ ಕಾರಣಕ್ಕಾಗಿಯೇ ಈ ಪುಟ್ಟ ಪ್ರದೇಶವು ಇಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಹೆದ್ದಾರಿಯಲ್ಲಿ ಚಲಿಸುವ ಪ್ರವಾಸಿಗರು 'No Name' ಎಂಬ ಬೋರ್ಡ್ ಕಂಡ ತಕ್ಷಣ ಕುತೂಹಲದಿಂದ ಗಾಡಿ ನಿಲ್ಲಿಸಿ ಫೊಟೋ ತೆಗೆದುಕೊಳ್ಳುತ್ತಾರೆ. ಇದು ಕೇವಲ ಒಂದು ಸ್ಥಳವಲ್ಲ, ಇಂದಿನ ಸೋಷಿಯಲ್ ಮೀಡಿಯಾ ದಿನಗಳಲ್ಲಿ ಒಂದು 'ಲ್ಯಾಂಡ್‌ಮಾರ್ಕ್' ಆಗಿ ಬದಲಾಗಿದೆ.

ಹಲವು ಬಾರಿ ಈ ಊರಿಗೆ ಬೇರೆ ಹೆಸರಿಡುವ ಪ್ರಯತ್ನಗಳಾದವು. ಆದರೆ ಪ್ರತಿ ಬಾರಿಯೂ 'ನೋ ನೇಮ್' ಎಂಬ ಹೆಸರೇ ಹೆಚ್ಚು ಜನಪ್ರಿಯವಾಗಿ ಉಳಿದುಕೊಂಡಿತು. ಅಲ್ಲಿನ ನಿವಾಸಿಗಳು ತಮ್ಮ ವಿಳಾಸದಲ್ಲಿ 'No Name' ಎಂದು ಬರೆಯಲು ಹೆಮ್ಮೆಪಡುತ್ತಾರೆ. ಇದು ಜಗತ್ತಿನಲ್ಲೇ ಅಪರೂಪದ ವಿಳಾಸಗಳಲ್ಲಿ ಒಂದು. ಆರಂಭದ ದಿನಗಳಲ್ಲಿ ಅಂಚೆ ಇಲಾಖೆಗೆ ಈ ಹೆಸರಿನಿಂದಾಗಿ ತುಂಬಾ ಗೊಂದಲವಾಗುತ್ತಿತ್ತು. ಆದರೆ ಈಗ ಗೂಗಲ್ ಮ್ಯಾಪ್ ಕೂಡ 'No Name, Colorado' ಎಂದು ಹೆಮ್ಮೆಯಿಂದ ತೋರಿಸುತ್ತದೆ.

ಹೆಸರಿಲ್ಲದಿರುವುದೇ ಒಂದು ವಿಶಿಷ್ಟ ಗುರುತಾಗಿ ಬದಲಾದ ಈ ಜಾಗವು, 'ಹೆಸರಿನಲ್ಲೇನಿದೆ?' ಎಂಬ ಷೇಕ್ಸ್‌ಪಿಯರ್‌ನ ಮಾತಿಗೆ ಉತ್ತಮ ಉದಾಹರಣೆಯಂತಿದೆ. ಹೆಸರಿಲ್ಲದಿದ್ದರೂ ಇದು ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ನಾನು ಅಲ್ಲಿಂದ ಬಂದಾಗ ನನ್ನ ಅನೇಕ ಸ್ನೇಹಿತರ ಮುಂದೆ, ನಾನು 'ನೋ ನೇಮ್ ಎಂಬ ಊರಿಗೆ ಹೋಗಿದ್ದೆ' ಎಂದು ಹೇಳಿದರೆ, ಅವರಿಗೆ ಅರ್ಥವೇ ಆಗುತ್ತಿರಲಿಲ್ಲ. ನಂತರ ವಿವರ ನೀಡಿದಾಗ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಆ ಊರಿನವರು ನಿಮಗೆ ಸಿಕ್ಕಾಗ, 'ನಿಮ್ಮ ಊರಿನ ಹೆಸರೇನು?' ಎಂದು ಕೇಳಿದರೆ, ಅವರು ನೀಡುವ ಉತ್ತರ ನಿಮ್ಮನ್ನು ಒಂದು ಕ್ಷಣ ಕಕ್ಕಾಬಿಕ್ಕಿ ಮಾಡುವುದು ಸಹಜ.

**

ಮೊಂಬಸ ನೆನಪಾದಾಗ...

ನಾನು ಕೆಲ ವರ್ಷಗಳ ಹಿಂದೆ ಕೀನ್ಯಾದ ಎರಡನೇ ದೊಡ್ಡ ನಗರ ಮೊಂಬಸಕ್ಕೆ ಹೋಗಿದ್ದೆ. ಅಲ್ಲಿನ ಇತಿಹಾಸದಲ್ಲಿ ಅತ್ಯಂತ ಭಾವನಾತ್ಮಕ ಮತ್ತು ಐತಿಹಾಸಿಕ ತಿರುವು ನೀಡಿದ ಒಂದು ಘಟನೆಯ ಬಗ್ಗೆ ಹೇಳಬೇಕು.

ಮೊಂಬಸದ ರಸ್ತೆಯಲ್ಲಿ ಸಾಗುವಾಗ ಪ್ರತಿಯೊಬ್ಬ ಪ್ರವಾಸಿಯ ಕಣ್ಣು ಸೆಳೆಯುವುದು ಅಲ್ಲಿನ ಬೃಹತ್ ಆನೆ ದಂತದ ಆಕೃತಿಯ ಕಮಾನುಗಳು. ಸ್ಥಳೀಯವಾಗಿ ಇವುಗಳನ್ನು 'ಮಾಪೆಂಬೆ ಯಾ ನೊವು' ಎಂದು ಕರೆಯಲಾಗುತ್ತದೆ. ಈ ಕಮಾನುಗಳ ಹಿಂದೆ ಬ್ರಿಟನ್ ರಾಜಮನೆತನದ ಅತಿ ದೊಡ್ಡ ಇತಿಹಾಸವೊಂದು ಅಡಗಿದೆ.

1952ರಲ್ಲಿ ಆಗಿನ್ನೂ ರಾಜಕುಮಾರಿಯಾಗಿದ್ದ ಎಲಿಜಬೆತ್ ಮತ್ತು ಅವರ ಪತಿ ಪ್ರಿನ್ಸ್ ಫಿಲಿಪ್ ಕೀನ್ಯಾ ಪ್ರವಾಸ ಹಮ್ಮಿಕೊಂಡಿದ್ದರು. ಅವರು ಮೊಂಬಸ ನಗರದ ಮೂಲಕ ಹಾದು ಹೋಗುವ ದಾರಿಯಲ್ಲಿ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಲು ಅಂದಿನ ಬ್ರಿಟಿಷ್ ಆಡಳಿತವು ಈ ಬೃಹತ್ ಕಮಾನುಗಳನ್ನು ನಿರ್ಮಿಸಿತು.

ಆಶ್ಚರ್ಯವಾಗಬಹುದು, ಇಂದು ನಾವು ನೋಡುವ ಈ ಕಮಾನುಗಳು ಅಂದು ಆನೆ ದಂತಗಳ ಮೇಲಿನ ಪ್ರೀತಿಗಾಗಲಿ ಅಥವಾ ಪರಿಸರ ಸಂರಕ್ಷಣೆಗಾಗಲಿ ನಿರ್ಮಿಸಿದ್ದಲ್ಲ. ಅದು ಕೇವಲ ರಾಜಕುಮಾರಿಯ ಸ್ವಾಗತಕ್ಕಾಗಿ ಮಾಡಿದ್ದ ತಾತ್ಕಾಲಿಕ ಅಲಂಕಾರಿಕ ಕಮಾನು ಮಾತ್ರವಾಗಿತ್ತು. ಅಂದು ಅವುಗಳನ್ನು ಮರ ಮತ್ತು ಕ್ಯಾನ್ವಾಸ್‌ನಿಂದ ಮಾಡಲಾಗಿತ್ತು. ನಂತರ ಅವುಗಳ ಜನಪ್ರಿಯತೆ ಕಂಡು, ಅವುಗಳನ್ನು ಅಲ್ಯೂಮಿನಿಯಂನಿಂದ ಖಾಯಂ ಆಗಿ ಮರುನಿರ್ಮಿಸಲಾಯಿತು. ಈ ಕಮಾನುಗಳು 'M' ಆಕಾರದಲ್ಲಿದ್ದು, ಮೊಂಬಸ (Mombasa) ನಗರದ ಹೆಸರನ್ನು ಸೂಚಿಸುತ್ತವೆ.

ಮೊಂಬಸದ ಈ ಪ್ರವಾಸವು ಎಲಿಜಬೆತ್ ಅವರ ಜೀವನವನ್ನೇ ಬದಲಿಸಿತು. ಫೆಬ್ರವರಿ 1952ರಲ್ಲಿ ಅವರು ಮೊಂಬಸದಲ್ಲಿದ್ದಾಗಲೇ ಲಂಡನ್‌ನಲ್ಲಿ ಅವರ ತಂದೆ ರಾಜ ಆರನೇ ಜಾರ್ಜ್ ನಿಧನರಾದ ಸುದ್ದಿ ತಿಳಿಯಿತು.

ಈ ಘಟನೆಯ ಬಗ್ಗೆ ಇತಿಹಾಸಕಾರರು ಒಂದು ಚಮತ್ಕಾರಿ ಮಾತನ್ನು ಹೇಳುತ್ತಾರೆ - 'ಒಬ್ಬ ಯುವತಿ ಮರದ ಮೇಲಿರುವ ಹೊಟೇಲ್‌ಗೆ (Treetops Hotel) ರಾಜಕುಮಾರಿಯಾಗಿ ಹೋದಳು, ಆದರೆ ಅಲ್ಲಿಂದ ಕೆಳಗೆ ಇಳಿದು ಬಂದಾಗ ಅವಳು ಇಡೀ ಬ್ರಿಟನ್ ಸಾಮ್ರಾಜ್ಯದ ರಾಣಿಯಾಗಿದ್ದಳು!'

ಹೌದು, ತಂದೆಯ ನಿಧನದ ಕ್ಷಣದಿಂದಲೇ ಎಲಿಜಬೆತ್ ಅವರು ಅಧಿಕೃತವಾಗಿ ಬ್ರಿಟನ್‌ನ ರಾಣಿಯಾದರು. ಅವರು ಮೊಂಬಸಕ್ಕೆ ಬಂದಾಗ ಕೇವಲ ಒಬ್ಬ ಅತಿಥಿ ರಾಜಕುಮಾರಿಯಾಗಿದ್ದರು, ಆದರೆ ಅಲ್ಲಿಂದ ವಾಪಸ್ ಲಂಡನ್‌ಗೆ ವಿಮಾನ ಹತ್ತುವಾಗ ಅವರು ಬ್ರಿಟನ್ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಪರಮಾಧಿಕಾರಿಯಾಗಿದ್ದರು!

ಇಂದು ಮೊಂಬಸದ ಈ ಆನೆ ದಂತಗಳು ಕೇವಲ ಒಂದು ಸ್ಮಾರಕವಾಗಿ ಉಳಿದಿಲ್ಲ, ಅವು ನಗರದ ಆತ್ಮದಂತಾಗಿವೆ. ಪ್ರತಿಯೊಬ್ಬ ಪ್ರವಾಸಿ ಅಲ್ಲಿ ನಿಂತು ಫೊಟೋ ತೆಗೆದುಕೊಳ್ಳುತ್ತಾನೆ. ಆದರೆ ಆ ಪ್ರತಿ ಫೊಟೋದ ಹಿಂದೆ, ಒಬ್ಬ ರಾಜಕುಮಾರಿ ತನ್ನ ಬದುಕಿನ ಅತಿ ದೊಡ್ಡ ಜವಾಬ್ದಾರಿಯನ್ನು ಹೊತ್ತ ಐತಿಹಾಸಿಕ ದಿನದ ನೆನಪು ಜೀವಂತವಾಗಿದೆ.

ಮೊಂಬಸದ ಬೀದಿಗಳಲ್ಲಿ ಗಾಳಿ ಬೀಸಿದಾಗ, ಈ ಕಮಾನುಗಳು ಅಂದಿನ ರಾಜವೈಭವ ಮತ್ತು ಅನಿರೀಕ್ಷಿತವಾಗಿ ನಡೆದ ಅಧಿಕಾರ ಹಸ್ತಾಂತರದ ಆ ರೋಚಕ ಕಥೆಯನ್ನು ಇಂದಿಗೂ ಸಾರುತ್ತಿವೆ.

**

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?