Thursday, August 20, 2026
Thursday, August 20, 2026

ಹನಿಮೂನ್ - ನೆಂಟರ ಮನೆಯಿಂದ ನೆರೆ ದೇಶಗಳವರೆಗೆ

ಮದುವೆಯಾದ ಬಳಿಕ ಇಬ್ಬರು ಜತೆಯಾಗಿ ಕಳೆಯುವ ಮೊದಲ ಪ್ರವಾಸವೇ ಹನಿಮೂನ್. ಆದರೆ, ಅದರ ರೂಪ ಕಾಲದೊಂದಿಗೆ ಸಾಕಷ್ಟು ಬದಲಾಗಿದೆ. ಒಂದೊಮ್ಮೆ ನೆಂಟರ ಮನೆಗಳ ಭೇಟಿ, ಊಟಿ–ಕೊಡೈಕೆನಾಲ್ ಪ್ರವಾಸವೇ ಮಧುಚಂದ್ರವಾಗಿದ್ದರೆ, ಇಂದು ನೆರೆ ದೇಶಗಳವರೆಗೂ ಅದರ ವ್ಯಾಪ್ತಿ ವಿಸ್ತರಿಸಿದೆ. ತಾಣಗಳು ಬದಲಾಗಿವೆ, ಪ್ರವಾಸದ ಶೈಲಿ ಬದಲಾಗಿದೆ, ಫೊಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿನ ನೆನಪುಗಳಾಗಿ ರೂಪಾಂತರಗೊಂಡಿವೆ. ಆದರೆ, ಎಲ್ಲಿ ಹೋದರೂ ಹನಿಮೂನ್‌ನ ನಿಜವಾದ ಸಿಹಿ ಉಳಿಯುವುದು ಇಬ್ಬರು ಪರಸ್ಪರ ಜತೆಯಾಗಿ ಕಳೆಯುವ ಆ ಅಮೂಲ್ಯ ಕ್ಷಣಗಳಲ್ಲೇ.

  • ಲೀನಾ ಜೋಶಿ


‘ಹನಿಮೂನ್’ ಅನ್ನೋ ಪದ ಕೇಳಿದ ತಕ್ಷಣ ಮನಸಿನಲ್ಲಿ ಏನು ಬರುತ್ತದೆ? ಹೊಸದಾಗಿ ಮದುವೆಯಾದ ಜೋಡಿ, ಯಾವುದೋ ಸುಂದರ ಜಾಗ, ಇಬ್ಬರು ಕೈ ಕೈ ಹಿಡಿದು ಓಡಾಡುವುದು, ಒಂದಿಷ್ಟು ರೊಮ್ಯಾನ್ಸ್, ಸೆಲ್ಫೀಗಳು, ಫೊಟೋಗಳು. ಕೊನೆಗೆ ಇನ್‌ಸ್ಟಾಗ್ರಾಮ್‌ಗೆ ಹಾಕುವ ಇನ್ನಷ್ಟು ಫೊಟೋ! ಹನಿಮೂನ್‌ಅನ್ನು ಕನ್ನಡಕ್ಕೆ ಭಾಷಾಂತರಿಸಿದ ವಿದ್ವಾಂಸರು ‘ಮಧುಚಂದ್ರ’ ಎಂದು ಹೆಸರಿಟ್ಟರು. ಪದವೇ ಎಷ್ಟು ಕಾವ್ಯಮಯ! ಈ ಜೇನುತುಪ್ಪದ ಚಂದ್ರ ಇತ್ತೀಚಿನ ವರ್ಷಗಳಲ್ಲಿ ತನ್ನ ಅರ್ಥವನ್ನೇ ಸಾಕಷ್ಟು ಬದಲಿಸಿಕೊಂಡಿದ್ದಾನೆ. ಹಿಂದೆ ಮದುವೆಯಾದ ಮೇಲೆ ಎಲ್ಲಿಗೆ ಹೋಗಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದ್ದರೆ, ಈಗ ‘ಹನಿಮೂನ್‌ಗೆ ಎಲ್ಲಿಗೆ ಹೋಗ್ತೀರಾ?’ ಎನ್ನುವುದೇ ಮದುವೆಯ ಮಾತುಕತೆಯ ಪ್ರಮುಖ ಪ್ರಶ್ನೆ. ಕೆಲವೊಮ್ಮೆ ಮದುವೆಗಿಂತ ಹನಿಮೂನ್ ಪ್ಲಾನ್ ದೊಡ್ಡದಾಗಿರುತ್ತದೆ!

ಇದನ್ನೂ ಓದಿ: ಬೆಂಗಳೂರು ಹೆರಿಟೇಜ್ ವಾಕ್ – ಸಂಸ್ಕೃತಿಯ ಮೂಲಕ ಒಂದು ಪ್ರವಾಸ

ಅರೇಂಜ್ಡ್ ಮ್ಯಾರೇಜ್ ಆದವರಿಗೆ ಹನಿಮೂನ್ ಅಂದರೆ ಸಣ್ಣ ಕಲ್ಪನೆ, ದೊಡ್ಡ ಆಸೆಗಳನ್ನು ಹುಟ್ಟಿಸುವ ಪದ. ಇಷ್ಟು ದಿನ ಪರಿಚಯವೇ ಇಲ್ಲದ, ಕಡಿಮೆ ಪರಿಚಯವಿರುವ ಇಬ್ಬರು, ಮದುವೆಯಾದ ತಕ್ಷಣ ಕೆಲ ದಿನಗಳ ಕಾಲ ಒಟ್ಟಿಗೆ ಎಲ್ಲೋ ದೂರ ಹೋಗುವುದು, ಅದರಲ್ಲೇ ಒಂದು ಕುತೂಹಲ. ಲವ್ ಮ್ಯಾರೇಜ್ ಆದವರ ಕಥೆ ಸ್ವಲ್ಪ ಬೇರೆ. ಮದುವೆಯ ಮುನ್ನವೇ ಒಟ್ಟಿಗೆ ಸುತ್ತಾಡಿದ್ದರೂ, ಮದುವೆಯ ನಂತರದ ಆ ಸುತ್ತಾಟಕ್ಕೆ ಒಂದು ಹೊಸ ಅರ್ಥ. ಕದ್ದು ಮುಚ್ಚಿ ಓಡಾಡದೇ, ಬಿಂದಾಸಾಗಿ ತಿರುಗಾಡುವ, ಸುತ್ತಾಡುವ, ತೇಲಾಡುವ ಸಮಯ.

ಕಾಲವನ್ನು ಸ್ವಲ್ಪ ಹಿಮ್ಮುಖವಾಗಿ ನೋಡಿದರೆ, ಈ ಹನಿಮೂನ್ ಕಥೆ ಬೇರೆಯೇ ಇದೆ. ಮದುವೆ ಮುಗಿದ ಮೇಲೆ ಮರುದಿನದಿಂದಲೇ ಪೂಜೆ, ಹರಕೆ, ದೇವಸ್ಥಾನ ಅಂತ ಕಾರ್ಯಕ್ರಮಗಳು ಶುರು. ಹುಡುಗಿ ಮನೆಯವರ ದೇವಸ್ಥಾನದ ಲಿಸ್ಟ್ ಬೇರೆ, ಹುಡುಗನ ಮನೆಯವರದ್ದು ಬೇರೆ. ಕೆಲವು ಹರಕೆಗಳು ಕೇಳಲು ತುಂಬಾ ಸಿಂಪಲ್. ಆದರೆ, ಅದರ ಖರ್ಚು ಕೇಳಿದರೆ ‘ಅಯ್ಯೋ!’ ಎನ್ನುವಂತದ್ದು. ಮತ್ತೆ ಕೆಲವು ಮನೆಗಳಲ್ಲಿ ಹರಕೆ ಕೂಡ ಕುಟುಂಬದ ಕೆಪ್ಯಾಸಿಟಿಗೆ ತಕ್ಕಂತೆ. ಕೆಲವರಿಗೆ ಮನೆ ದೇವರೇ ಮುಖ್ಯ, ಇನ್ನೊಬ್ಬರಿಗೆ ದೂರದೂರಿನ ಪ್ರಸಿದ್ಧ ದೇವರು. ಕೆಲ ಹರಕೆಗಳು ತೀರಿಸಲು ಬಲು ಕಠಿಣ. ಕಂಕಣ ಭಾಗ್ಯಕ್ಕಾಗಿ ಜನಪ್ರಿಯವಾಗಿರುವ ದೇವಸ್ಥಾನಗಳಿಗೂ ದೊಡ್ಡ ಭಕ್ತವೃಂದವಿದೆ, ಹಾಗಾಗಿ ಕೆಲವೊಮ್ಮೆ ಹರಕೆ ಬಲು ದುಬಾರಿ.

Untitled design (6)

ಮದುವೆಯ ಮರುದಿನ ಸತ್ಯನಾರಾಯಣ ಪೂಜೆ. ಅದಾದ ಮೇಲೆ ಕೆಲವು ಸಮುದಾಯಗಳಲ್ಲಿ ಬೀಗರ ಬಾಡೂಟ. ಮನೆಗೆ ವಧು-ವರರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಕ್ಕಿಂತ, ಬಂದವರನ್ನು ನೋಡಿಕೊಳ್ಳುವುದರಲ್ಲೇ ದಿನ ಕಳೆಯುತ್ತಿತ್ತು! ಇವೆಲ್ಲ ಮುಗಿಸುವಷ್ಟರಲ್ಲಿ ವಧು-ವರರ ಸ್ಥಿತಿ ಸುಸ್ತೋ ಸುಸ್ತು. ಆದರೆ, ಆಗ ಹನಿಮೂನ್ ಎಂಬ ಹೆಸರೇ ಇರಲಿಲ್ಲ. ಮದುವೆಯಾದ ಮೇಲೆ ವಧು ತವರು ಮನೆಗೆ ಹೋದರೆ ಅಕ್ಕಪಕ್ಕದ ಮನೆಗಳಿಗೆ ಹೋಗುವುದು, ನೆಂಟರ ಮನೆಗಳಿಗೆ ಭೇಟಿ ನೀಡುವುದು, ಎಲ್ಲೋ ಊಟ, ಎಲ್ಲೋ ಕಾಫಿ, ಎಲ್ಲೋ ಮಾತುಕತೆ. ವರನ ಮನೆಯಲ್ಲೂ ಅದೇ ಕಥೆ. ಮದುವೆಗೆ ಬಂದ ನೆಂಟರು ಮನೆಗೆ ಬಂದು ಊಟ ಮಾಡಿಕೊಂಡು, ‘ನಮ್ಮ ಮನೆಗೂ ಬನ್ನಿ’ ಎಂದು ಆಹ್ವಾನಿಸಿ ಹೋಗುತ್ತಿದ್ದರು. ಹೀಗೆ ಮದುವೆಯ ನಂತರದ ದಿನಗಳು ನೆಂಟರ ಮನೆಗಳಲ್ಲೇ ಕಳೆದುಹೋಗುತ್ತಿದ್ದವು. ಒಂದು ರೀತಿಯಲ್ಲಿ ನೋಡಿದರೆ ಅದೂ ಒಂದು ಹನಿಮೂ‌ನೇ, ಒಂಥರಾ ಗ್ರೂಪ್ ಮಧುಚಂದ್ರ - ಇಡೀ ಕುಟುಂಬವೇ ಮಧುಚಂದ್ರದ ಭಾಗ!
ನಿಧಾನವಾಗಿ ಕರ್ನಾಟಕದ ಜೋಡಿಗಳಿಗೆ ಊಟಿ, ಕೊಡೈಕೆನಾಲ್, ಮೈಸೂರು ಮುಂತಾದ ತಾಣಗಳು ಹನಿಮೂನ್ ಡೆಸ್ಟಿನೇಷನ್‌ಗಳಾದವು. ಹೊಸದಾಗಿ ಮದುವೆಯಾದ ಜೋಡಿ ಮನೆಯವರಿಂದ ಸ್ವಲ್ಪ ದೂರ ಹೋಗಿ, ಪ್ರಕೃತಿಯ ನಡುವೆ ಒಂದಿಷ್ಟು ದಿನ ಕಳೆಯುವುದು ದೊಡ್ಡ ಐಷಾರಾಮಿ ಅನುಭವವಾಗಿತ್ತು. ಆ ಕಾಲದ ಹನಿಮೂನ್ ಫೊಟೋಗಳಿಗೂ ಒಂದು ವಿಶೇಷ ಕಥೆ ಇದೆ. ಇವತ್ತಿನ ಹಾಗೆ ಮೊಬೈಲ್ ತೆಗೆದು ಬೇಕಾದಷ್ಟು ಫೊಟೋ ತೆಗೆದುಕೊಳ್ಳುವ ಕಾಲವಲ್ಲ ಅದು. ಕ್ಯಾಮೆರಾ ಇರಬೇಕು, ಇಲ್ಲದಿದ್ದರೆ ಫೊಟೋಗ್ರಾಫರ್‌ನಿಂದ ಕ್ಯಾಮೆರಾ ತೆಗೆದುಕೊಳ್ಳಬೇಕು. ಕೊಡಕ್, ಸೋನಿ ಕ್ಯಾಮೆರಾಗಳಲ್ಲಿ ಒಂದೆರಡು ರೋಲ್‌ಗಳನ್ನು ತೆಗೆದುಕೊಂಡು ಹೋಗುವುದು. ಫೊಟೋ ತೆಗೆಯುವಾಗಲೂ ಯೋಚಿಸಬೇಕು - ಕ್ಲಿಕ್ ಕ್ಲಿಕ್ ಮಾಡಿ ಖಾಲಿ ಮಾಡುವ ಹಾಗಿಲ್ಲ. ಪ್ರವಾಸ ಮುಗಿದ ಮೇಲೆ ಫಿಲ್ಮ್ ಡೆವಲಪ್ ಮಾಡಿಸಿ, ಫೊಟೋಗಳನ್ನು ಪ್ರಿಂಟ್ ಮಾಡಿಸಿ, ಅವುಗಳನ್ನು ಆಲ್ಬಮ್‌ನಲ್ಲಿ ಜೋಡಿಸುವುದು. ಮದುವೆಯ ಆಲ್ಬಮ್ ಜತೆ ಹನಿಮೂನ್ ಆಲ್ಬಮ್. ವರ್ಷಗಳಾದರೂ ಆ ಆಲ್ಬಮ್‌ಗಳು ಮನೆಯ ಕಪಾಟಿನಲ್ಲಿ ಸುರಕ್ಷಿತವಾಗಿ ಇರುತ್ತಿದ್ದವು.

ಇಂದು? ಒಂದೇ ದಿನದಲ್ಲಿ ನೂರಾರು ಫೊಟೋ. ಅದರಲ್ಲಿ ಹತ್ತು ಅತ್ಯುತ್ತಮ ಫೊಟೋ ಆಯ್ಕೆ. ಒಂದಿಷ್ಟು ಎಡಿಟ್, ಮ್ಯೂಸಿಕ್, ನಂತರ ಇನ್‌ಸ್ಟಾಗ್ರಾಮ್‌! ಹನಿಮೂನ್‌ನ ನಿಜವಾದ ಬದಲಾವಣೆ ಫೊಟೋಗಳಲ್ಲಿ ಮಾತ್ರ ಆಗಿಲ್ಲ. ಜನರ ಆರ್ಥಿಕ ಪರಿಸ್ಥಿತಿ ಬದಲಾದಂತೆ ಪ್ರಯಾಣದ ದೂರವೂ ಬದಲಾಗಿದೆ. ಒಂದಾನೊಂದು ಕಾಲದಲ್ಲಿ ಬಸ್ಸಿನಲ್ಲಿ ಊಟಿಗೆ ಹೋಗುತ್ತಿದ್ದ ಜೋಡಿಗಳು ನಂತರ ವಿಮಾನ ಹತ್ತಿದರು. ಊಟಿ- ಕೊಡೈಕೆನಾಲ್‌ನಿಂದ ಕಾಶ್ಮೀರ, ಕುಲು, ಮನಾಲಿಗೆ ಹನಿಮೂನ್ ಹೋಯಿತು. ಹಿಮದಲ್ಲಿ ನಿಂತು ಫೊಟೋ ತೆಗೆಸಿಕೊಳ್ಳುವುದು ಹೊಸ ಟ್ರೆಂಡ್ ಆಯಿತು. ‘ಹನಿಮೂನ್‌ಗೆ ಎಲ್ಲಿಗೆ ಹೋಗಿದ್ದಿರಿ?’ ಎಂಬ ಪ್ರಶ್ನೆಗೆ ‘ಕಾಶ್ಮೀರ’ ಎನ್ನುವುದು ಒಂದು ಕಾಲದಲ್ಲಿ ದೊಡ್ಡ ಹೆಮ್ಮೆಯ ಮಾತಾಗಿತ್ತು.

ಇಂದು ಆ ಪಟ್ಟಿ ಕೂಡ ಬದಲಾಗಿದೆ. ಹನಿಮೂನ್‌ಗಾಗಿ ಮಾಲ್ಡೀವ್ಸ್, ಥೈಲ್ಯಾಂಡ್, ಮಾರಿಷಸ್ ಮುಂತಾದ ಅಂತಾರಾಷ್ಟ್ರೀಯ ತಾಣಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸಮುದ್ರದ ಮಧ್ಯೆ ವಿಲ್ಲಾ, ಬೆಳಗ್ಗೆ ಕಣ್ಣು ತೆರೆದರೆ ನೀಲಿ ನೀರು, ಸಂಜೆ ಸೂರ್ಯಾಸ್ತ, ರಾತ್ರಿ ಕ್ಯಾಂಡಲ್‌ಲೈಟ್ ದಿನ್ನರ್, ನಡುವೆ ಫೊಟೋಶೂಟ್, ಎಲ್ಲವೂ ಪ್ಯಾಕೇಜ್! ಹನಿಮೂನ್ ಈಗ ಕೇವಲ ಎರಡು ಜನರ ಪ್ರವಾಸವಲ್ಲ, ಲೈಫ್ ಸ್ಟೈಲ್. ಆಗರ್ಭ ಶ್ರೀಮಂತರ ಹನಿಮೂನ್ ಇನ್ನೂ ಒಂದು ಹೆಜ್ಜೆ ಮುಂದೆ. ಯುರೋಪ್, ಸ್ವಿಟ್ಜರ್‌ಲ್ಯಾಂಡ್ ಮತ್ತು ಸುತ್ತಮುತ್ತಲಿನ ದೇಶಗಳನ್ನು ಒಳಗೊಂಡ ಪ್ರವಾಸ. ಒಂದೇ ದೇಶವಲ್ಲ; ಹಲವು ದೇಶಗಳು. ಕೆಲವೊಮ್ಮೆ ಹನಿಮೂನ್‌ಗಿಂತ ‘ಹನಿಮೂನ್ ಟೂರ್’ ದೊಡ್ಡ ಪ್ರಾಜೆಕ್ಟ್ ಆಗಿರುತ್ತದೆ. ಹನಿಮೂನ್ ಕಾಲಾವಧಿ ಮಾತ್ರವಲ್ಲ, ಅದರ ಪರಿಭಾಷೆಯೂ ಬದಲಾಗಿದೆ.

Untitled design (4)


ಇದಕ್ಕೆ ತಕ್ಕಂತೆ ಪ್ರವಾಸೋದ್ಯಮವೂ ಬದಲಾಗಿದೆ. ಈಗ ಹನಿಮೂನ್ ಪ್ಯಾಕೇಜ್ ಎಂದರೆ ಕೇವಲ ವಿಮಾನ ಟಿಕೆಟ್ ಮತ್ತು ಹೊಟೇಲ್ ಅಲ್ಲ. ವಿಶೇಷ ಕೊಠಡಿ ಅಲಂಕಾರ, ಕ್ಯಾಂಡಲ್‌ಲೈಟ್ ದಿನ್ನರ್, ಖಾಸಗಿ ಕ್ರೂಸ್, ಸ್ಪಾ, ಫೊಟೋಶೂಟ್, ಎಲ್ಲವೂ ಸೇರಿವೆ. ಜೋಡಿಯ ಬಜೆಟ್‌ಗೆ ತಕ್ಕಂತೆ ಪ್ಯಾಕೇಜ್‌ಗಳೂ ಸಿದ್ಧ. ಹೀಗಾಗಿ ಹನಿಮೂನ್‌ನ ಪರಿಭಾಷೆಯೇ ಬದಲಾಗಿದೆ. ಹಿಂದೆ ಹನಿಮೂನ್ ಎಂದರೆ ಮದುವೆಯ ನಂತರದ ಕೆಲವು ದಿನಗಳ ವಿಶ್ರಾಂತಿ, ಇಂದು ಅದು ಒಂದು ಅನುಭವ. ಹಿಂದೆ ನೆಂಟರ ಮನೆಗಳಲ್ಲಿ ಕಳೆದುಹೋಗುತ್ತಿದ್ದ ದಿನಗಳು. ನಂತರ ಊಟಿ-ಕೊಡೈಕೆನಾಲ್, ಆಮೇಲೆ ಕಾಶ್ಮೀರ-ಮನಾಲಿ. ಈಗ ಮಾಲ್ಡೀವ್ಸ್, ಮಾರಿಷಸ್, ಥೈಲ್ಯಾಂಡ್. ನಾಳೆ ಇನ್ನೇನೋ!
ಹನಿಮೂನ್‌ಗೆ ಎಷ್ಟು ಖರ್ಚು ಮಾಡಿದ್ದು ಎಂದು ಲೆಕ್ಕ ಹಾಕುವುದುಕ್ಕಿಂತ, ಇಬ್ಬರೂ ಒಟ್ಟಿಗೆ ಎಷ್ಟು ಸಮಯ ಕಳೆಯುತ್ತಾರೆ ಎನ್ನುವುದು ಮುಖ್ಯ. ದುಬಾರಿ ರಿಸಾರ್ಟ್‌ನಲ್ಲಿದ್ದರೂ ಪರಸ್ಪರ ಅರ್ಥ ಮಾಡಿಕೊಳ್ಳದಿದ್ದರೆ ಆ ಪ್ರವಾಸಕ್ಕೆ ಅರ್ಥವೇನು? ಸಾಮಾನ್ಯ ಬೆಟ್ಟದ ಊರಿನ ಸಣ್ಣ ಹೊಟೇಲ್‌ನಲ್ಲಿದ್ದರೂ, ಬೆಳಗಿನ ಚಹಾ ಹಿಡಿದು ಇಬ್ಬರೂ ಗಂಟೆಗಟ್ಟಲೆ ಮಾತನಾಡಿದರೆ ಅದೇ ನಿಜವಾದ ಹನಿಮೂನ್. ಹಿಂದೆ ಹನಿಮೂನ್ ನೆಂಟರ ಮನೆಗಳ ಸರಳ ಭೇಟಿಗಳಲ್ಲೇ ಕಳೆದುಹೋಗುತ್ತಿದ್ದರೂ, ಅಲ್ಲಿ ಸಂಬಂಧಗಳ ಮಧುರತೆಯಿತ್ತು . ಇಂದು ಅದು ಮಾಲ್ಡೀವ್ಸ್‌ನ ನೀಲಿ ಸಮುದ್ರದ ವಿಲ್ಲಾಗಳಲ್ಲಿ, ಸ್ವಿಟ್ಜರ್‌ಲ್ಯಾಂಡ್‌ನ ಹಿಮಪರ್ವತಗಳ ನಡುವೆ, ಇನ್‌ಸ್ಟಾಗ್ರಾಮ್‌ ಫೊಟೋಗಳ ಬೆಳಕಿನಲ್ಲಿ ಮಿಂಚುತ್ತಿದೆ. ತಾಣಗಳು ಬದಲಾಗಿವೆ, ಪ್ರಯಾಣದ ಶೈಲಿ ಬದಲಾಗಿದೆ, ಖರ್ಚು ಬದಲಾಗಿದೆ, ಪ್ರದರ್ಶನವೂ ಹೆಚ್ಚಾಗಿದೆ.

ಎರಡು ಹೃದಯಗಳು ಮದುವೆಯ ನಂತರ ಮೊದಲ ಬಾರಿಗೆ ತಮ್ಮದೇ ಆದ ಒಂದು ಪುಟ್ಟ ಜಗತ್ತನ್ನು ಕಟ್ಟಿಕೊಳ್ಳುವ ಆ ಕ್ಷಣವೇ ನಿಜವಾದ ಹನಿಮೂನ್. ಉಳಿದದ್ದು ಊರು, ದೇಶ, ಸಮುದ್ರ, ಬೆಟ್ಟ, ಹೊಟೇಲ್, ಫೊಟೋ… ಎಲ್ಲವೂ ಅದರ ಸುತ್ತಲಿನ ಅಲಂಕಾರ ಮಾತ್ರ. ಜೇನುತುಪ್ಪದ ಚಂದ್ರ ಎಲ್ಲಿ ಉದಯಿಸಿದರೂ ಪರವಾಗಿಲ್ಲ. ಅದರ ಸಿಹಿ ಇಬ್ಬರ ನಡುವೆ ಸದಾಕಾಲ ಉಳಿದಿದ್ದರೆ ಸಾಕು, ಅಲ್ವಾ?

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?