- ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ.)

ಭಾರತದ ಮೊದಲ ವಿದ್ಯುತ್ ಕಾರು ʻರೇವಾ ಎಲೆಕ್ಟ್ರಿಕ್‌ʼ 2001ರಲ್ಲಿ ಬೆಂಗಳೂರಿನಲ್ಲಿ ಉತ್ಪಾದನೆ ಪ್ರಾರಂಭಿಸಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇಂದು ಆ ಐತಿಹಾಸಿಕ ಆರಂಭಕ್ಕೆ 25 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ, EV ಕ್ಷೇತ್ರದ ಸಾಧನೆಗಳು ಮತ್ತು ಸವಾಲುಗಳನ್ನು ಸಮಗ್ರವಾಗಿ ಅವಲೋಕಿಸುವ ಅಗತ್ಯವಿದೆ.

ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಇಂಧನ ಉಳಿತಾಯ ಹಾಗೂ ವಿದೇಶಿ ತೈಲ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಳೆದ ಎರಡು ದಶಕಗಳಲ್ಲಿ ಅನೇಕ ನೀತಿಗಳು, ಸಬ್ಸಿಡಿಗಳು ಮತ್ತು ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತಂದಿವೆ. ಇಷ್ಟಾದರೂ 25 ವರ್ಷಗಳ ನಂತರವೂ ಇವಿ ವಾಹನಗಳು ದೇಶದ ಸಾಮಾನ್ಯ ಜನರ ಮೊದಲ ಆಯ್ಕೆಯ ಸಾರಿಗೆ ಸಾಧನವಾಗಲು ಸಾಧ್ಯವಾಗಿಲ್ಲ. ಇದಕ್ಕೆ ತಾಂತ್ರಿಕ ಅಡಚಣೆಗಳಿಗಿಂತ ಹೆಚ್ಚಾಗಿ ಮೂಲಸೌಕರ್ಯದ ಕೊರತೆ, ನೀತಿ ನಿರಂತರತೆಯ ಅಭಾವ ಮತ್ತು ಖರೀದಿ ವೆಚ್ಚದ ಸವಾಲುಗಳು ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: ಜವಾಬ್ದಾರಿಯುತ ಪ್ರವಾಸೋದ್ಯಮವೇ ಭಾರತದ ಗೌರವ

ಇಂದು ಭಾರತದಲ್ಲಿ ಸುಮಾರು 54.40 ಲಕ್ಷ ಇವಿ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ 31 ಲಕ್ಷ ದ್ವಿಚಕ್ರ ವಾಹನಗಳು, 18 ಲಕ್ಷ ಮೂರುಚಕ್ರ ವಾಹನಗಳು, ಸುಮಾರು 4 ಲಕ್ಷ ಕಾರುಗಳು ಮತ್ತು ಎಸ್‌ಯುವಿಗಳು, 1.25 ಲಕ್ಷ ಸರಕು ಸಾಗಣೆ ವಾಹನಗಳು ಹಾಗೂ 15 ಸಾವಿರ ಬಸ್ಸುಗಳು ಸೇರಿವೆ. ಈ ಅಂಕಿ-ಅಂಶಗಳು ಉತ್ತೇಜನಕಾರಿ ಎನ್ನಬಹುದು. ಆದರೆ ದೇಶದ ಒಟ್ಟು ವಾಹನಗಳ ಸಂಖ್ಯೆಗೆ ಹೋಲಿಸಿದರೆ ಇವಿ ವಾಹನಗಳ ಪಾಲು ಇನ್ನೂ ಕೇವಲ 2% ರಷ್ಟೇ ಇದೆ. ಅಂದರೆ ಭಾರತದ ʻಇವಿ ಕ್ರಾಂತಿʼ ಇನ್ನೂ ಆರಂಭಿಕ ಹಂತದಲ್ಲಿದೆ ಎಂಬುದು ಸ್ಪಷ್ಟ.

ಕರ್ನಾಟಕವು ಈ ಕ್ಷೇತ್ರದಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುಮಾರು 4.13 ಲಕ್ಷ ಇವಿ ವಾಹನಗಳು ನೋಂದಣಿಯಾಗಿದ್ದು, 2.80 ಲಕ್ಷ ದ್ವಿಚಕ್ರ ವಾಹನಗಳು, 70 ಸಾವಿರ ಮೂರುಚಕ್ರ ವಾಹನಗಳು, 50 ಸಾವಿರ ಕಾರುಗಳು ಮತ್ತು SUVಗಳು, 12 ಸಾವಿರ ಸರಕು ಸಾಗಣೆ ವಾಹನಗಳು ಹಾಗೂ 1,500 ಬಸ್ಸುಗಳು ರಸ್ತೆಗಿಳಿದಿವೆ. ದೇಶದ ಇವಿ ಅಳವಡಿಕೆಯಲ್ಲಿ ಕರ್ನಾಟಕದ ಪಾಲು ಸುಮಾರು 18–20% ಎಂದು ಅಂದಾಜಿಸಲಾಗಿದ್ದು, ಬೆಂಗಳೂರು ದೇಶದ ಪ್ರಮುಖ ಇವಿ ನಗರವಾಗಿ ಹೊರಹೊಮ್ಮಿದೆ.

Untitled design (89)

ಆದರೆ ಈ ಸಾಧನೆಗಳ ನಡುವೆಯೂ ಇವಿ ವಾಹನಗಳನ್ನು ಜನಸಾಮಾನ್ಯರ ವಾಹನವನ್ನಾಗಿಸಲು ಅಗತ್ಯವಿರುವ ವೇಗ ಇನ್ನೂ ಕಾಣುತ್ತಿಲ್ಲ. ದೇಶದ ಬಹುತೇಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿರಂತರ ವೇಗದ ಚಾರ್ಜಿಂಗ್ ಜಾಲ ಇನ್ನೂ ನಿರ್ಮಾಣವಾಗಿಲ್ಲ. ನಗರ ಪ್ರದೇಶಗಳಲ್ಲಿಯೂ ಸಾಕಷ್ಟು ಚಾರ್ಜಿಂಗ್ ಕೇಂದ್ರಗಳ ಕೊರತೆ ಇದೆ. ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಹೊಟೇಲ್‌ಗಳು, ಸಾರ್ವಜನಿಕ ಪಾರ್ಕಿಂಗ್ ಪ್ರದೇಶಗಳು ಮತ್ತು ಸಾರಿಗೆ ಕೇಂದ್ರಗಳಲ್ಲಿ ಕಡ್ಡಾಯ ಚಾರ್ಜಿಂಗ್ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಿಲ್ಲ. ಇದರ ಪರಿಣಾಮವಾಗಿ ದೂರ ಪ್ರಯಾಣ ಮಾಡುವವರು ಇವಿ ವಾಹನಗಳ ಬಗ್ಗೆ ಹಿಂಜರಿಯುತ್ತಿದ್ದಾರೆ.

ಇದೇ ವೇಳೆ ಇವಿ ವಾಹನಗಳ ಆರಂಭಿಕ ಖರೀದಿ ವೆಚ್ಚವೂ ಮಧ್ಯಮ ವರ್ಗದ ಕುಟುಂಬಗಳಿಗೆ ಸವಾಲಾಗಿ ಉಳಿದಿದೆ. ದೀರ್ಘಾವಧಿಯಲ್ಲಿ ನಿರ್ವಹಣೆ ಮತ್ತು ಇಂಧನ ವೆಚ್ಚ ಕಡಿಮೆ ಇದ್ದರೂ, ಮೊದಲ ಹೂಡಿಕೆಯ ಮೊತ್ತ ಹೆಚ್ಚಿನದಾಗಿರುವುದರಿಂದ ಹಲವರು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳತ್ತಲೇ ಮುಖ ಮಾಡುತ್ತಿದ್ದಾರೆ. ಆದ್ದರಿಂದ ಸರಕಾರಗಳು ತೆರಿಗೆ ವಿನಾಯಿತಿ, ಖರೀದಿ ಸಬ್ಸಿಡಿ, ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಹಾಗೂ ದೀರ್ಘಕಾಲಿಕ ಪ್ರೋತ್ಸಾಹ ಯೋಜನೆಗಳನ್ನು ಮುಂದುವರಿಸಬೇಕು.

ಇವಿ ಬಳಕೆಯನ್ನು ವೇಗಗೊಳಿಸಲು ಕೆಲವು ಮಹತ್ವದ ಕ್ರಮಗಳು ಅಗತ್ಯವಾಗಿವೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಪ್ರತಿ 25–50 ಕಿಮೀ. ಅಂತರದಲ್ಲಿ ವೇಗದ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಬೇಕು. ಎಲ್ಲಾ ಹೊಸ ವಾಣಿಜ್ಯ ಮತ್ತು ವಸತಿ ಕಟ್ಟಡಗಳಲ್ಲಿ ಇವಿ ಚಾರ್ಜಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಇವಿ ವಾಹನಗಳಿಗೆ ಕನಿಷ್ಠ ಐದು ವರ್ಷಗಳ ಕಾಲ ಟೋಲ್ ಶುಲ್ಕ ವಿನಾಯಿತಿ ಅಥವಾ ವಿಶೇಷ ರಿಯಾಯಿತಿ ನೀಡಬೇಕು. ನಗರ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕದಲ್ಲಿ ಸಡಿಲಿಕೆ ನೀಡಬೇಕು. ಪ್ರವಾಸೋದ್ಯಮ, ಟ್ಯಾಕ್ಸಿ, ಶಾಲಾ ವಾಹನ ಮತ್ತು ಸರಕು ಸಾಗಣೆ ಕ್ಷೇತ್ರಗಳಿಗೆ ವಿಶೇಷ ಪ್ರೋತ್ಸಾಹ ಪ್ಯಾಕೇಜ್‌ಗಳನ್ನು ಘೋಷಿಸಬೇಕು.

Untitled design (87)

ಇವಿ ವಾಹನಗಳ ಮಹತ್ವವನ್ನು ಕೇವಲ ಪರಿಸರದ ದೃಷ್ಟಿಯಿಂದ ನೋಡುವುದು ಸಾಕಾಗುವುದಿಲ್ಲ. ಭಾರತ ತನ್ನ ಕಚ್ಚಾ ತೈಲದ ಅಗತ್ಯದ ಶೇ.85 ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ನಡೆಯುವ ಯುದ್ಧಗಳು, ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಗಳು, ಇಂಧನ ಬಿಕ್ಕಟ್ಟುಗಳು ಹಾಗೂ ತೈಲ ಬೆಲೆ ಏರಿಳಿತಗಳು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ. ಇಂಥ ಸಂದರ್ಭದಲ್ಲಿ ಇವಿ ಬಳಕೆ ಹೆಚ್ಚಾದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ತೈಲ ಆಮದು ವೆಚ್ಚ ಇಳಿಯುತ್ತದೆ, ವಿದೇಶಿ ವಿನಿಮಯ ಉಳಿಯುತ್ತದೆ ಮತ್ತು ದೇಶದ ಇಂಧನ ಭದ್ರತೆ ಬಲವಾಗುತ್ತದೆ. ಇದು ಭಾರತದ ಇಂಧನ ಸ್ವಾವಲಂಬನೆಗೆ ಮಹತ್ವದ ಕೊಡುಗೆಯಾಗಲಿದೆ.

ಆಗಸ್ಟ್‌ 1ರಿಂದ ವಾಹನಗಳ ಬೆಲೆ ಏರಿಕೆ: CAFE-III, ಗ್ರಾಹಕರು ಮತ್ತು ಟ್ರಾವೆಲ್ಸ್ ಉದ್ಯಮಕ್ಕೆ ಹೊಸ ಸವಾಲು

ಭಾರತದಲ್ಲಿ 54.40 ಲಕ್ಷಕ್ಕೂ ಹೆಚ್ಚು ಹಾಗೂ ಕರ್ನಾಟಕದಲ್ಲಿ 4.13 ಲಕ್ಷಕ್ಕೂ ಅಧಿಕ ಇವಿ ವಾಹನಗಳು ನೋಂದಣಿಯಾಗಿರುವುದು ಹಸಿರು ಸಾರಿಗೆ ವ್ಯವಸ್ಥೆಯತ್ತ ದೇಶ ಮತ್ತು ರಾಜ್ಯಗಳು ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಆದರೆ ಒಟ್ಟು ವಾಹನಗಳ ಪೈಕಿ ಇವಿಗಳ ಪಾಲು ಇನ್ನೂ ಕೇವಲ 2% ಮಾತ್ರ ಇರುವುದರಿಂದ ಈ ಕ್ಷೇತ್ರದಲ್ಲಿ ಅಪಾರ ಅವಕಾಶಗಳು ಉಳಿದಿವೆ. ಕಳೆದ 25 ವರ್ಷಗಳಲ್ಲಿ ಇವಿ ವಾಹನಗಳನ್ನು ಜನಸಾಮಾನ್ಯರ ವಾಹನವನ್ನಾಗಿಸುವ ಗುರಿಯಲ್ಲಿ ನಾವು ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ಮುಂದಿನ ಹತ್ತು ವರ್ಷಗಳು ಭಾರತದ ಇವಿ ಕ್ಷೇತ್ರಕ್ಕೆ ನಿರ್ಣಾಯಕವಾಗಲಿವೆ. ಸರಕಾರಗಳು ಹೆಚ್ಚಿನ ಪ್ರೋತ್ಸಾಹ, ತೆರಿಗೆ ಸಡಿಲಿಕೆ, ಟೋಲ್ ವಿನಾಯಿತಿ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಗ್ರಾಹಕ ಸ್ನೇಹಿ ನೀತಿಗಳನ್ನು ಜಾರಿಗೆ ತಂದರೆ, ಭಾರತವು ವಿಶ್ವದ ಅತಿದೊಡ್ಡ ಇವಿ ಮಾರುಕಟ್ಟೆಗಳಲ್ಲಿ ಒಂದಾಗಿ ಹೊರಹೊಮ್ಮಬಹುದು. ಇದು ಕೇವಲ ವಾಹನ ಕ್ಷೇತ್ರದ ಪರಿವರ್ತನೆಯಲ್ಲ; ದೇಶದ ಇಂಧನ ಭದ್ರತೆ, ಆರ್ಥಿಕ ಸ್ವಾವಲಂಬನೆ ಮತ್ತು ಪರಿಸರ ಸಂರಕ್ಷಣೆಯ ಹೊಸ ಅಧ್ಯಾಯವಾಗಲಿದೆ.

“ಭಾರತದ ಇಂಧನ ಸ್ವಾವಲಂಬನೆಯ ಪಯಣದಲ್ಲಿ ಇವಿ ವಾಹನಗಳು ಪ್ರಮುಖ ಸಾಧನವಾಗಿವೆ. ಇವಿ ಕ್ರಾಂತಿ ಆರಂಭವಾಗಿದೆ. ಈಗ ಅದನ್ನು ಜನಸಾಮಾನ್ಯರ ಕ್ರಾಂತಿಯನ್ನಾಗಿಸುವ ಹೊಣೆ ಸರಕಾರ, ಕೈಗಾರಿಕೆ ಮತ್ತು ಸಮಾಜದ ಮೇಲಿದೆ.”