ಸಾಮಾನ್ಯವಾಗಿ ನಾನು ಯಾವುದೇ ದೇಶಕ್ಕೆ ಹೋದರೂ, ಬರುವಾಗ ಆ ದೇಶದ ಬಗ್ಗೆ ಇರುವ ಒಳ್ಳೆಯ ಪುಸ್ತಕವನ್ನು ಖರೀದಿಸಿ ತರುತ್ತೇನೆ. ಕೆಲವೊಮ್ಮೆ ಕೆಲವು ಪುಸ್ತಕಗಳು ಆ ದೇಶದಲ್ಲಿ ಮಾತ್ರ ಸಿಗುತ್ತವೆ. ಆನ್‌ಲೈನ್‌ನಲ್ಲೂ ಅವು ಸಿಗುವುದಿಲ್ಲ. ಇತ್ತೀಚೆಗೆ ನಾನು ಕಜ಼ಕಿಸ್ತಾನ್ ಮತ್ತು ಉಜ್ಬೆ಼ಕಿಸ್ತಾನ್ ಗೆ ಹೋದಾಗ, ಅಲ್ಲಿಂದ ಬರುವಾಗ ಒಂದು ಪುಸ್ತಕವನ್ನು ಖರೀದಿಸಿದ್ದೆ. ಆ ಪುಸ್ತಕದ ಹೆಸರು - Sovietistan: Travels in Turkmenistan, Kazakhstan, Tajikistan, Kyrgyzstan, and Uzbekistan ಅಂತ. ನಾನು ಕೆಲ ವರ್ಷಗಳ ಹಿಂದೆ, ಇದೇ ಲೇಖಕಿ ಬರೆದ The Border: A Journey Around Russia Through North Korea, China, Mongolia, Kazakhstan, Azerbaijan, Georgia, Ukraine, Belarus, Lithuania, Poland, Latvia, Estonia, Finland, Norway, and the Northeast Passage (2021) ಹಾಗೂ

High: A Journey Across the Himalaya, Through Pakistan, India, Bhutan, Nepal, and China (2023) ಎಂಬ ಎರಡು ಪುಸ್ತಕಗಳನ್ನು ಓದಿದ್ದರಿಂದ, ಲೇಖಕಿ ಮತ್ತು ಕೃತಿಗಳ ಬಗ್ಗೆ ಕುತೂಹಲ ಮೂಡಿತ್ತು.

ಇದನ್ನೂ ಓದಿ: ಈ ಲೈಬ್ರರಿಯಲ್ಲಿ ಪುಸ್ತಕಗಳ ಬದಲಿಗೆ ‘ಮನುಷ್ಯರೇ ಪುಸ್ತಕ’ಗಳಾಗಿರುತ್ತಾರೆ!

Sovietistan ಕೃತಿ 2015ರಲ್ಲಿ ಮೊದಲು ಪ್ರಕಟವಾಗಿದ್ದು. ಮಧ್ಯ ಏಷ್ಯಾದ ವಿಶಾಲ ಸ್ಟೆಪಿಸ್ ಹುಲ್ಲುಗಾವಲುಗಳು, ಹಿಮಾವೃತ ಟಿಯಾನ್ ಶಾನ್ ಪರ್ವತಶ್ರೇಣಿಗಳು, ಪ್ರಾಚೀನ ರೇಷ್ಮೆ ಹೆದ್ದಾರಿಯ ನೀಲಿ ಗುಮ್ಮಟಗಳು ಹಾಗೂ ಸೋವಿಯತ್ ಒಕ್ಕೂಟದ ಅವಶೇಷಗಳ ನಡುವೆ ಅಲೆದಾಡಿದ ನಾರ್ವೆ ಮೂಲದ ಸಾಹಸಿ ಲೇಖಕಿ ಎರಿಕಾ ಫ್ಯಾಟ್‌ಲ್ಯಾಂಡ್‌ರ ಈ ಕೃತಿ, ಕೊನೆಯಲ್ಲಿ ಸ್ತಾನ್‌ನಲ್ಲಿ ಕೊನೆಗೊಳ್ಳುವ ಐದು ದೇಶಗಳ ಬಗ್ಗೆ ಬರೆದ ಒಂದು ಅಪರೂಪದ ಪುಸ್ತಕ. ಇದು ಸಾಮಾನ್ಯ ಪ್ರವಾಸಿ ಮಾರ್ಗದರ್ಶಿಯಲ್ಲ. ಅದು ಇತಿಹಾಸ, ರಾಜಕೀಯ, ಮಾನವಶಾಸ್ತ್ರ ಮತ್ತು ಸಾಹಸ ಪ್ರವೃತ್ತಿಯ ಅದ್ಭುತ ಸಂಗಮ. 1991ರಲ್ಲಿ ಸೋವಿಯತ್ ಒಕ್ಕೂಟ ವಿಘಟನೆಯಾದ ನಂತರ ಸ್ವತಂತ್ರಗೊಂಡ ತುರ್ಕ್‌ಮೆನಿಸ್ತಾನ್, ಕಜ಼ಕಿಸ್ತಾನ್, ತಜಿ಼ಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಉಜ್ಬೆ಼ಕಿಸ್ತಾನ್ ಎಂಬ ಐದು ‘ಸ್ತಾನ್’ಗಳ ವಿಚಿತ್ರ, ಸಂಕೀರ್ಣ ಮತ್ತು ವಿಸ್ಮಯಕಾರಿ ಜಗತ್ತನ್ನು ಈ ಕೃತಿ ಅತ್ಯಂತ ತೀಕ್ಷ್ಣವಾಗಿ ಹಾಗೂ ಕಣ್ಣಿಗೆ ಕಟ್ಟುವಂತೆ ಅನಾವರಣಗೊಳಿಸುತ್ತದೆ.

Untitled Design - 2026-11-17T152925.891

ಲೇಖಕಿ ಎರಿಕಾ ಫ್ಯಾಟ್‌ಲ್ಯಾಂಡ್ 1983ರಲ್ಲಿ ನಾರ್ವೆಯಲ್ಲಿ ಜನಿಸಿದ ಖ್ಯಾತ ಸಮಾಜ-ಮಾನವಶಾಸ್ತ್ರಜ್ಞೆ (Social Anthropologist), ಪತ್ರಕರ್ತೆ ಹಾಗೂ ಬಹುಭಾಷಾ ಪ್ರವೀಣೆ. ಇಂಗ್ಲಿಷ್, ರಷ್ಯನ್, ಜರ್ಮನ್, ಇಟಾಲಿಯನ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಸಂವಹನ ನಡೆಸಬಲ್ಲ ಸಾಮರ್ಥ್ಯ ಅವರ ಪ್ರವಾಸ ಸಾಹಿತ್ಯಕ್ಕೆ ಅಸಾಧಾರಣ ಶಕ್ತಿ ತುಂಬಿದೆ. ರಷ್ಯಾದ ಬೆಸ್ಲಾನ್ ಶಾಲಾ ದುರಂತದ ಕುರಿತು ಬರೆದ ‘The Village of Secrets’ ಹಾಗೂ ನಾರ್ವೆಯ ಉಟೋಯಾ ದ್ವೀಪದ ಮಾರಣಹೋಮವನ್ನು ವಿಶ್ಲೇಷಿಸುವ ‘Yearology’ ಕೃತಿಗಳ ಮೂಲಕ ಜಾಗತಿಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದ ಎರಿಕಾ, ನಂತರ ಹೊರಟಿದ್ದು ರಷ್ಯಾದ ನೆರಳಿನಲ್ಲಿ ಬದುಕುತ್ತಿರುವ ಗಡಿಪ್ರದೇಶಗಳ ಅನ್ವೇಷಣೆಗೆ. ರಷ್ಯನ್ ಭಾಷೆಯ ಮೇಲೆ ಅವರಿಗಿದ್ದ ಪ್ರಭುತ್ವ, ಸೋವಿಯತ್ ಕಾಲದ ಗಾಯಗಳನ್ನು ಹೊತ್ತ ಮಧ್ಯ ಏಷ್ಯಾದ ಸಾಮಾನ್ಯ ಜನರ ಹೃದಯದ ಬಾಗಿಲುಗಳನ್ನು ತಟ್ಟಲು ಅವರಿಗೆ ಮುಕ್ತ ಪರವಾನಗಿಯಾಯಿತು.

ಕೃತಿಯ ಆರಂಭವಾಗುವುದೇ ಜಗತ್ತಿನ ಅತ್ಯಂತ ವಿಚಿತ್ರ ಮತ್ತು ಮುಚ್ಚಿದ ದೇಶಗಳಲ್ಲಿ ಒಂದಾದ ತುರ್ಕ್‌ಮೆನಿಸ್ತಾನದಿಂದ. ಉತ್ತರ ಕೊರಿಯಾದಷ್ಟೇ ನಿಗೂಢ ಹಾಗೂ ಕಠಿಣ ವೀಸಾ ನಿಯಮಗಳನ್ನು ಹೊಂದಿರುವ ಈ ದೇಶದ ರಾಜಧಾನಿ ಅಶ್ಗಾಬಾತ್‌ಗೆ ಎರಿಕಾ ಕಾಲಿಟ್ಟಾಗ, ಅವರಿಗೆ ಎದುರಾಗಿದ್ದು ಒಂದು ನೈಜ ಬಿಳಿ ಅಮೃತಶಿಲೆಯ ಮರೀಚಿಕೆ. ಗಿನ್ನೆಸ್ ದಾಖಲೆ ಸೇರಿರುವಂತೆ, ಇಡೀ ನಗರದ ಕಟ್ಟಡಗಳು ಕೇವಲ ಬಿಳಿ ಮಾರ್ಬಲ್‌ನಿಂದ ಕಂಗೊಳಿಸುತ್ತವೆ. ಹಿಂದಿನ ಸರ್ವಾಧಿಕಾರಿ ಸಪರ್ಮುರತ್ ನಿಯಾಜೋವ್ (ತನ್ನನ್ನು ‘ತುರ್ಕ್‌ಮೆನ್‌ಬಾಶಿ’ ಅಥವಾ ತುರ್ಕಮನ್ನರ ಪಿತಾಮಹ ಎಂದು ಕರೆದುಕೊಂಡವನು) ಜಾರಿಗೆ ತಂದ ಹುಚ್ಚು ನಿಯಮಗಳನ್ನು ಎರಿಕಾ ವಿವರಿಸುವ ಬಗೆ ಅಸಹಜ ನಗೆಯೊಂದಿಗೆ ಗಾಬರಿ ಹುಟ್ಟಿಸುತ್ತದೆ. 1990 ರಿಂದ 2006 ರವರೆಗೆ ದೇಶವನ್ನಾಳಿದ ಅವಧಿಯಲ್ಲಿ ವಿಚಿತ್ರ ಹಾಗೂ ಅಸಂಬದ್ಧ ಆದೇಶಗಳಿಗೆ ಕುಖ್ಯಾತನಾಗಿದ್ದ. ಆತ ತನ್ನ ಆಡಳಿತದಲ್ಲಿ ಪ್ರತಿಯೊಂದು ರಂಗದಲ್ಲೂ ತನ್ನ ಅಸ್ಮಿತೆಯನ್ನು ಹೇರಲು ಪ್ರಯತ್ನಿಸಿದ. ಕ್ಯಾಲೆಂಡರ್‌ನ ತಿಂಗಳುಗಳು ಮತ್ತು ವಾರದ ದಿನಗಳ ಹೆಸರುಗಳನ್ನು ತನ್ನ ಹಾಗೂ ತನ್ನ ತಾಯಿಯ ಹೆಸರಿಗೆ ಬದಲಾಯಿಸಿದ. ಜನವರಿಯನ್ನು ‘ತುರ್ಕ್‌ಮೆನ್‌ಬಾಶಿ’ ಎಂದೂ, ಏಪ್ರಿಲ್ ತಿಂಗಳನ್ನು ತನ್ನ ತಾಯಿಯ ಹೆಸರಾದ ‘ಗುರ್ಬಾನ್‌ಸುಲ್ತಾನ್’ ಎಂದೂ ಕರೆದ. ರಾಜಧಾನಿ ಅಶ್ಗಾಬಾತ್‌ನಲ್ಲಿ ಸೂರ್ಯನ ಚಲನೆಗೆ ತಕ್ಕಂತೆ ತಿರುಗುವ ತನ್ನ ಬೃಹತ್ ಚಿನ್ನದ ಪ್ರತಿಮೆಯನ್ನು ಸ್ಥಾಪಿಸಿಕೊಂಡು ಆತ್ಮವೈಭವ ಮೆರೆದ.

ಆತ ಬರೆದ 'ರುಹ್ನಾಮಾ' (Ruhnama) ಎಂಬ ಪುಸ್ತಕವನ್ನು ದೇಶದ ಪವಿತ್ರ ಗ್ರಂಥದಂತೆ ಪರಿಗಣಿಸಲಾಯಿತು. ಈ ಪುಸ್ತಕವನ್ನು ಶಾಲೆ, ಕಾಲೇಜುಗಳು ಮಾತ್ರವಲ್ಲ, ಚಾಲನಾ ಪರವಾನಗಿ ಪಡೆಯಲು ಮತ್ತು ಸರಕಾರಿ ನೌಕರಿಗಳ ಪರೀಕ್ಷೆಗಳಿಗೂ ಕಡ್ಡಾಯಗೊಳಿಸಲಾಯಿತು. ಯುವಕರು ಗಡ್ಡ, ಮೀಸೆ ಬೆಳೆಸುವುದನ್ನು ಮತ್ತು ಉದ್ದ ಕೂದಲು ಬಿಡುವುದನ್ನು ನಿಷೇಧಿಸಲಾಯಿತು. ಇಷ್ಟೇ ಅಲ್ಲ, ಜನರು ಬಂಗಾರದ ಹಲ್ಲುಗಳನ್ನು (Gold teeth) ಹಾಕಿಸಿಕೊಳ್ಳುವುದನ್ನು ನಿಷೇಧಿಸಿದ ಆತ, ನೈಸರ್ಗಿಕ ಹಲ್ಲುಗಳನ್ನು ಕಾಪಾಡಿಕೊಳ್ಳಲು ನಾಯಿಗಳಂತೆ ಎಲುಬುಗಳನ್ನು ಕಚ್ಚಿ ತಿನ್ನಬೇಕೆಂದು ವಿಚಿತ್ರ ಸಲಹೆ ನೀಡಿದ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡ ನಿಯಾಜೋವ್, ಬ್ಯಾಲೆ ನೃತ್ಯ, ಒಪೆರಾ, ಸರ್ಕಸ್ ಮತ್ತು ರೆಕಾರ್ಡ್ ಮಾಡಿದ ಸಂಗೀತದ ಬಳಕೆಯನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಿದ. ರಾಜಧಾನಿಯ ವಾತಾವರಣ ಮತ್ತು ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ನಾಯಿಗಳನ್ನು ಸಾಕುವುದು ಹಾಗೂ ಕಪ್ಪು ಕಾರುಗಳನ್ನು ಚಲಾಯಿಸುವುದನ್ನು ಕೂಡ ನಿರ್ಬಂಧಿಸಿದ. ವೈದ್ಯಕೀಯ ವೆಚ್ಚ ಉಳಿಸಲು ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಮುಚ್ಚಿ, ಎಲ್ಲರೂ ಚಿಕಿತ್ಸೆಗಾಗಿ ರಾಜಧಾನಿಗೇ ಬರಬೇಕೆಂಬ ಅವಿವೇಕದ ನಿಯಮ ತಂದ. ಇಂಥ ವಿಚಿತ್ರ ಮತ್ತು ನಿರಂಕುಶ ಆಜ್ಞೆಗಳ ಮೂಲಕ ಆತ ಇತಿಹಾಸದ ಅತ್ಯಂತ ವಿಲಕ್ಷಣ ಸರ್ವಾಧಿಕಾರಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡ. ಇದನ್ನು ಎರಿಕಾ ಅತ್ಯಂತ ಸ್ವಾರಸ್ಯವಾಗಿ ಬಣ್ಣಿಸುತ್ತಾರೆ.

ಅಶ್ಗಾಬಾತ್‌ನ ಚೌಕಗಳಲ್ಲಿ ಸೂರ್ಯನ ಗತಿಯೊಂದಿಗೆ ಮುಖ ತಿರುಗಿಸುವ ರುಹ್ನಾಮಾದ ಬೃಹತ್ ಯಾಂತ್ರಿಕ ಸ್ಮಾರಕ, ಸುವರ್ಣ ಲೇಪಿತ ಅಧ್ಯಕ್ಷರ ಪುತ್ಥಳಿಗಳು ಮತ್ತು ಸಂಪೂರ್ಣ ಬಿಕೋ ಎನ್ನುವ ವಿಶಾಲ ಹೆದ್ದಾರಿಗಳು ಈ ಪುಸ್ತಕದ ಮೊದಲ ಭಾಗದ ಮೈನವಿರೇಳಿಸುವ ಚಿತ್ರಣ. ರಸ್ತೆಯಲ್ಲಿ ಕಪ್ಪು ಕಾರುಗಳನ್ನು ನಿಷೇಧಿಸಿ ಕೇವಲ ಬಿಳಿ ಕಾರುಗಳಿಗಷ್ಟೇ ಅನುಮತಿ ನೀಡುವ ಆಡಳಿತ ವೈಖರಿ ಹಾಗೂ ಜನಸಾಮಾನ್ಯರು ಸದಾ ಗುಪ್ತಚರ ಇಲಾಖೆಯ ಕಣ್ಗಾವಲಿನಲ್ಲಿ ಬದುಕುವ ಅಸಹಾಯಕತೆಯನ್ನು ಎರಿಕಾ ನೇರವಾಗಿ ದಾಖಲಿಸುತ್ತಾರೆ. ನಿಯೋಜಿತ ಸರ್ಕಾರಿ ಗೈಡ್‌ಗಳ ಕಣ್ತಪ್ಪಿಸಿ ಸ್ಥಳೀಯರ ಜತೆ ಸಂಭಾಷಣೆ ನಡೆಸಲು ಲೇಖಕಿ ಹೆಣಗಾಡುವ ಸನ್ನಿವೇಶಗಳು ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತವೆ. ತುರ್ಕ್‌ಮೆನಿಸ್ತಾನದ ಕರಾಕುಮ್ ಮರುಭೂಮಿಯ ನಡುಭಾಗದಲ್ಲಿರುವ ‘ದರ್ವಾಜಾ ಗ್ಯಾಸ್ ಕ್ರೇಟರ್’ ಅಥವಾ ‘ನರಕದ ಬಾಗಿಲು’ ಭೇಟಿಯ ಪ್ರಸಂಗವಂತೂ ರೋಮಾಂಚನಕಾರಿ. 1971ರಲ್ಲಿ ಸೋವಿಯತ್ ಭೂವಿಜ್ಞಾನಿಗಳು ನೈಸರ್ಗಿಕ ಅನಿಲ ಶೋಧಿಸುವಾಗ ನೆಲ ಕುಸಿದು ಉಂಟಾದ ಈ ಬೃಹತ್ ಕುಳಿಯಿಂದ ವಿಷಾನಿಲ ಹರಡದಂತೆ ಬೆಂಕಿ ಹಚ್ಚಲಾಯಿತು. ಕೆಲವು ದಿನಗಳಲ್ಲಿ ನಂದಿಹೋಗಬಹುದು ಎಂದು ಭಾವಿಸಿದ್ದ ಆ ಜ್ವಾಲೆ, ದಶಕಗಳು ಕಳೆದರೂ ಇಂದಿಗೂ ನಿರಂತರವಾಗಿ ಉರಿಯುತ್ತಲೇ ಇದೆ. ಕತ್ತಲ ರಾತ್ರಿಯಲ್ಲಿ ಮರುಭೂಮಿಯ ನಡುನಡುವೆ ಕೆಂಪಗೆ ಧಗಧಗಿಸುವ ಆ ಅಗ್ನಿಕುಂಡದ ಅಂಚಿನಲ್ಲಿ ನಿಂತು, ಸುತ್ತಲಿನ ನಕ್ಷತ್ರಖಚಿತ ಆಕಾಶವನ್ನು ನೋಡುತ್ತಾ ಎರಿಕಾ ಅನುಭವಿಸುವ ಏಕಾಂತ ಹಾಗೂ ವಿಸ್ಮಯ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಅಲ್ಲಿಂದ ಲೇಖಕಿಯ ಪಯಣ ವಿಸ್ತಾರವಾದ ಕಜ಼ಕಿಸ್ತಾನದತ್ತ ಸಾಗುತ್ತದೆ. ವಿಸ್ತೀರ್ಣದಲ್ಲಿ ಜಗತ್ತಿನ ಒಂಬತ್ತನೆಯ ಅತಿ ದೊಡ್ಡ ದೇಶವಾದ ಕಜ಼ಕಿಸ್ತಾನದ ಭೂತಕಾಲವು ಅಷ್ಟೇ ಭೀಕರ. ಸೋವಿಯತ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಕಾಲದಲ್ಲಿ ಲಕ್ಷಾಂತರ ಜನರನ್ನು ಗಡೀಪಾರು ಮಾಡಿ ಹಿಂಸಿಸಲು ನಿರ್ಮಿಸಲಾಗಿದ್ದ ‘ಗುಲಾಗ್’ ಕಾರ್ಮಿಕ ಶಿಬಿರಗಳ ನೆಲೆಗಳು ಕಜ಼ಕ್ ಮೈದಾನಗಳಲ್ಲಿವೆ. ಕಾರ್ಲಗ್ ಶಿಬಿರದ ಅವಶೇಷಗಳಿಗೆ ಭೇಟಿ ನೀಡುವ ಎರಿಕಾ, ಸೋವಿಯತ್ ಸಾಮ್ರಾಜ್ಯವು ಇಡೀ ಜನಾಂಗಗಳನ್ನು—ಜರ್ಮನ್ನರು, ಚೆಚೆನ್ನರು, ಕೊರಿಯನ್ನರು, ಪೋಲಿಷ್ ಜನರನ್ನು—ಹೇಗೆ ಎತ್ತಂಗಡಿ ಮಾಡಿ ಇಲ್ಲಿ ತಂದು ಎಸೆಯಿತು ಎಂಬುದನ್ನು ಆರ್ದ್ರವಾಗಿ ನಿರೂಪಿಸುತ್ತಾರೆ. ತಾಯಂದಿರ ಮತ್ತು ಮಕ್ಕಳ ಆ ಶಿಬಿರಗಳ ಕ್ರೂರತೆ ಓದುಗರ ಕಣ್ಣಂಚನ್ನು ತೇವಗೊಳಿಸುತ್ತದೆ. ಕಜ಼ಕಿಸ್ತಾನದ ಮತ್ತೊಂದು ಬೆಚ್ಚಿಬೀಳಿಸುವ ಅಧ್ಯಾಯವೆಂದರೆ ‘ಸೆಮಿಪಾಲಾಟಿನ್ಸ್ಕ್’ (Semipalatinsk) ಅಥವಾ ‘ದಿ ಪಾಲಿಗಾನ್’. ಶೀತಲ ಸಮರದ ಕಾಲದಲ್ಲಿ ಸೋವಿಯತ್ ಒಕ್ಕೂಟವು ಸುಮಾರು 450ಕ್ಕೂ ಹೆಚ್ಚು ಪರಮಾಣು ಬಾಂಬ್‌ಗಳ ಪರೀಕ್ಷೆ ನಡೆಸಿದ್ದು ಇದೇ ನೆಲದಲ್ಲಿ. ಯಾವ ಮುನ್ಸೂಚನೆ ಇಲ್ಲದೇ ಸ್ಥಳೀಯ ನಿವಾಸಿಗಳನ್ನು ಗಿನಿ ಇಲಿಗಳಂತೆ ಬಳಸಿ ಪರಮಾಣು ಕಿರಣಗಳಿಗೆ ಒಡ್ಡಿದ ಪರಿಣಾಮವಾಗಿ, ಇಂದಿಗೂ ಅಲ್ಲಿನ ಮೂರು-ನಾಲ್ಕು ತಲೆಮಾರುಗಳು ಅಂಗವೈಕಲ್ಯ, ಕ್ಯಾನ್ಸರ್ ಮತ್ತು ವಿಕೃತಿಗಳನ್ನು ಹೊತ್ತು ಹುಟ್ಟುತ್ತಿವೆ. ಪರಮಾಣು ಪರೀಕ್ಷಾ ಕೇಂದ್ರದ ಬಂಜರು ಭೂಮಿಯಲ್ಲಿ ವಿಕಿರಣ ಮಾಪಕದ ‘ಕ್ಲಿಕ್’ ಶಬ್ದ ಹೆಚ್ಚಾಗುತ್ತಿದ್ದಂತೆ ಉಂಟಾಗುವ ಆತಂಕ ಹಾಗೂ ಸಂತ್ರಸ್ತ ಕುಟುಂಬಗಳ ಜತೆಗಿನ ಎರಿಕಾ ಅವರ ಮುಖಾಮುಖಿ ಇತಿಹಾಸದ ಅಮಾನುಷ ಮುಖವನ್ನು ಅನಾವರಣಗೊಳಿಸುತ್ತದೆ.

Untitled Design - 2026-11-17T152827.514

ಇದಕ್ಕೆ ತದ್ವಿರುದ್ಧವಾಗಿ, ಕಜ಼ಕಿಸ್ತಾನದ ಆಧುನಿಕ ರಾಜಧಾನಿ ನೂರ್-ಸುಲ್ತಾನ್ (ಈಗಿನ ಅಸ್ತಾನಾ) ನಗರದ ನಾರ್ಮನ್ ಫಾಸ್ಟರ್ ವಿನ್ಯಾಸದ ಅತಿ-ಆಧುನಿಕ ಗಗನಚುಂಬಿ ಕಟ್ಟಡಗಳು, ಖಾನ್ ಶಾತೀರ್ ಟೆಂಟ್ ಹಾಗೂ ಅಧ್ಯಕ್ಷ ನೂರ್-ಸುಲ್ತಾನ್ ನಜರ್‌ಬಾಯೆವ್ ಅವರ ವ್ಯಕ್ತಿಪೂಜೆಯ ವೈಭವವನ್ನು ಲೇಖಕಿ ವಿಡಂಬನಾತ್ಮಕವಾಗಿ ಸೆರೆಹಿಡಿಯುತ್ತಾರೆ. ಒಂದೆಡೆ ತೈಲ ಸಂಪತ್ತಿನಿಂದ ಮೆರೆಯುವ ನವನಗರ, ಇನ್ನೊಂದೆಡೆ ಹಳ್ಳಿಗಳಲ್ಲಿನ ಬಡತನ ಮತ್ತು ಪರಮಾಣು ಇತಿಹಾಸದ ಶಾಪ—ಈ ವೈರುಧ್ಯವೇ ಕಜ಼ಕಿಸ್ತಾನದ ನೈಜ ಚಿತ್ರಣ. ಕಜ಼ಕಿಸ್ತಾನವು ಎರಡು ತೀರಾ ವಿರುದ್ಧ ತುದಿಗಳಲ್ಲಿ ನಿಂತಿರುವ ದೇಶ. ಒಂದೆಡೆ ತೈಲ ಬಂಡವಾಳದಿಂದ ತಲೆಯೆತ್ತಿದ, ಬಾಹ್ಯಾಕಾಶ ಯುಗದಂತೆ ಕಂಗೊಳಿಸುವ ರಾಜಧಾನಿಯ ವಿಲಾಸವಾದರೆ, ಇನ್ನೊಂದೆಡೆ ಪರಮಾಣು ಇತಿಹಾಸದ ಶಾಶ್ವತ ಗಾಯಗಳನ್ನು ಹೊತ್ತು ನರಳುತ್ತಿರುವ ಹಳ್ಳಿಗಳ ಬಡಜನತೆಯ ವಾಸ್ತವ. ಆಡಳಿತಗಾರರ ರಾಜಕೀಯ ಮಹತ್ವಾಕಾಂಕ್ಷೆಯ ಕೃತಕ ವೈಭವ ಹಾಗೂ ಸಾಮಾನ್ಯ ಪ್ರಜೆಗಳ ಬದುಕಿನ ಸಂಕಟಗಳ ನಡುವಿನ ಈ ಕಟು ವೈರುಧ್ಯವೇ ಕಜ಼ಕಿಸ್ತಾನದ ನೈಜ, ಅಪೂರ್ಣ ಹಾಗೂ ಆಳವಾದ ಚಹರೆಯಾಗಿದೆ.

ಮುಂದಿನ ನಿಲ್ದಾಣ ಕಿರ್ಗಿಸ್ತಾನ್. ಪರ್ವತಗಳ ಸುಂದರ ಸ್ವರ್ಗವಾದರೂ, ಅಲ್ಲಿನ ಒಂದು ಕರಾಳ ಸಂಪ್ರದಾಯವಾದ ‘ಅಲಾ ಕಚು’ (Ala Kachuu) ಅಥವಾ ಹೆಣ್ಣುಮಕ್ಕಳ ಅಪಹರಣದ (Bride Kidnapping) ಸುತ್ತ ಎರಿಕಾ ನಡೆಸುವ ತನಿಖೆ ಆಘಾತಕಾರಿಯಾಗಿದೆ. ನಡುರಸ್ತೆಯಲ್ಲಿ ಯುವತಿಯರನ್ನು ಅಪರಿಚಿತ ಯುವಕರು ಕಾರಿನಲ್ಲಿ ಬಲವಂತವಾಗಿ ಅಪಹರಿಸಿ ತರುವುದು, ಹುಡುಗನ ಮನೆಯ ಹಿರಿಯ ಮಹಿಳೆಯರು ಆಕೆಯ ಮೇಲೆ ಬಿಳಿ ಶಾಲು ಹೊದಿಸಿ ಮದುವೆಗೆ ಒಪ್ಪಿಸುವಂತೆ ಮಾನಸಿಕ ಒತ್ತಡ ಹೇರುವುದು ಇಂದಿಗೂ ಜೀವಂತವಾಗಿರುವ ಪದ್ಧತಿ. ಈ ಸಾಮಾಜಿಕ ಅನಿಷ್ಟಕ್ಕೆ ಬಲಿಯಾಗಿ, ಕಣ್ಣೀರಿನಲ್ಲೇ ಬದುಕನ್ನು ಹೊಂದಿಸಿಕೊಂಡ ಮಹಿಳೆಯರ ಹಾಗೂ ಅದನ್ನು ಪ್ರತಿಭಟಿಸಲು ಸಾಧ್ಯವಾಗದ ಸಮಾಜದ ಮುಖಾಮುಖಿ ಓದುಗರಲ್ಲಿ ತೀವ್ರ ತಲ್ಲಣವನ್ನುಂಟುಮಾಡುತ್ತದೆ. ಕಿರ್ಗಿಸ್ತಾನದ ಅಲೆಮಾರಿ ಸಂಸ್ಕೃತಿ, ಬರ್ಕುಟ್‌ಚಿ ಎನ್ನಲಾಗುವ ಬೇಟೆಗಾರ ಹದ್ದುಗಳೊಂದಿಗೆ ಬದುಕುವ ಜನರ ಕೌಶಲ ಮತ್ತು ವಿಶ್ವದ ಅತ್ಯಂತ ಉದ್ದದ ಮಹಾಕಾವ್ಯವೆಂದು ಹೆಸರಾದ ‘ಮಾನಸ್’ ಕಾವ್ಯವನ್ನು ದಿನಗಟ್ಟಲೆ ನಿರಂತರವಾಗಿ ಹಾಡುವ ಗಾಯಕರ ಧ್ವನಿಯನ್ನು ಎರಿಕಾ ಅದ್ಭುತವಾಗಿ ವರ್ಣಿಸುತ್ತಾರೆ. ಕುದುರೆ ಸವಾರಿ, ಯುರ್ಟ್ (Yurt) ಟೆಂಟ್‌ಗಳಲ್ಲಿನ ವಾಸ್ತವ್ಯ, ಹುದುಗಿಸಿದ ಕುದುರೆ ಹಾಲು ‘ಕುಮಿಸ್’ ಕುಡಿಯುವಾಗ ತಮಗಾಗುವ ಅನುಭವಗಳನ್ನು ಹಾಸ್ಯದ ಲೇಪನದೊಂದಿಗೆ ಹಂಚಿಕೊಳ್ಳುತ್ತಾರೆ.

ಹಿಮಪರ್ವತಗಳ ಕಿರೀಟ ತೊಟ್ಟಿರುವ ತಜಿ಼ಕಿಸ್ತಾನದ ‘ಪಾಮಿರ್ ಹೆದ್ದಾರಿ’ಯ ಪ್ರಯಾಣವು ಪುಸ್ತಕದ ಅತ್ಯಂತ ಸಾಹಸಮಯ ಭಾಗ. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಮೀಟರ್‌ಗೂ ಅಧಿಕ ಎತ್ತರದಲ್ಲಿ, ಕಡಿದಾದ ಕಂದಕಗಳು ಮತ್ತು ಅಫ್ಘಾನಿಸ್ತಾನದ ಗಡಿಯನ್ನು ಹೊಂದಿಕೊಂಡಿರುವ ಪಂಜ ನದಿಯ ಉದ್ದಕ್ಕೂ ಸಾಗುವ ಈ ಜರ್ನಿ ಎಂಥವರಿಗೂ ಉಸಿರುಕಟ್ಟಿಸುತ್ತದೆ. ನದಿಯ ಆಚೆ ದಂಡೆಯಲ್ಲಿ ಕೇವಲ ನೂರು ಮೀಟರ್ ಅಂತರದಲ್ಲಿ ಕಾಣುವ ಆಫ್ಘನ್ ಹಳ್ಳಿಗಳು, ಮಣ್ಣಿನ ಮನೆಗಳು, ತಾಲಿಬಾನ್ ಪ್ರಭಾವದ ಛಾಯೆಗಳು ಮತ್ತು ಈಚೆ ದಂಡೆಯ ತಜಿಕಿಸ್ತಾನದ ಸೋವಿಯತ್ ಶೈಲಿಯ ಬದುಕು—ಇವೆರಡರ ನಡುವಿನ ಗಡಿರೇಖೆಯ ಸೂಕ್ಷ್ಮತೆಯನ್ನು ಲೇಖಕಿ ಅತ್ಯಂತ ರೋಮಾಂಚಕವಾಗಿ ಚಿತ್ರಿಸಿದ್ದಾರೆ. ತಜಿಕಿಸ್ತಾನದ ಪ್ರತ್ಯೇಕ ಕಣಿವೆಯಾದ ‘ಯಾಗ್ನೋಬ್’ ಕಣಿವೆಗೆ ಎರಿಕಾ ಕೈಗೊಳ್ಳುವ ದುರ್ಗಮ ಚಾರಣ ಚಾರಿತ್ರಿಕವಾಗಿ ಅತ್ಯಂತ ಅಪರೂಪದ್ದು. ಮಹಾನ್ ಅಲೆಕ್ಸಾಂಡರ್ ಕ್ರಿ.ಪೂ. 4ನೆಯ ಶತಮಾನದಲ್ಲಿ ದಾಳಿ ಮಾಡಿದ ಕಾಲದ ಪ್ರಾಚೀನ ಸೊಗ್ಡಿಯನ್ ಸಾಮ್ರಾಜ್ಯದ ಭಾಷೆಯನ್ನು ಇಂದಿಗೂ ಮಾತನಾಡುತ್ತಿರುವ ಏಕೈಕ ಜನಸಮುದಾಯ ಇಲ್ಲಿದೆ. ಪ್ರಪಂಚದ ಸಂಪರ್ಕವೇ ಇಲ್ಲದ, ಕಲ್ಲುಬಂಡೆಗಳ ನಡುವೆ ಹರಡಿದ ಪುಟ್ಟ ಮನೆಗಳಲ್ಲಿ ವಾಸಿಸುವ ಈ ಪುರಾತನ ಜನಾಂಗದ ಉಳಿವಿನ ಕಥೆಯನ್ನು, ಅವರ ಅತಿಥಿಸತ್ಕಾರವನ್ನು ಲೇಖಕಿ ದಾಖಲಿಸುವ ಬಗೆ ಅಪ್ಪಟ ಮಾನವಶಾಸ್ತ್ರಜ್ಞೆಯ ನೈಪುಣ್ಯಕ್ಕೆ ಸಾಕ್ಷಿಯಾಗಿದೆ.

ಪ್ರಾಚೀನ ರೇಷ್ಮೆ ಹೆದ್ದಾರಿಯ ಹೃದಯಭಾಗವಾದ ಉಜ್ಬೆ಼ಕಿಸ್ತಾನ್, ಇತಿಹಾಸದ ಸುವರ್ಣ ಪುಟಗಳನ್ನು ಇಂದಿಗೂ ಜೀವಂತವಾಗಿರಿಸಿರುವ ಮಾಂತ್ರಿಕ ನಾಡು. ಸಮರ್ಕಂಡ್‌ನ ಖ್ಯಾತ ರೆಗಿಸ್ತಾನ್ ಚೌಕ, ಬುಖಾರಾದ ಕಲ್ಯಾಣ್ ಮಿನಾರ್ ಹಾಗೂ ಖೀವ ನಗರದ ಸುತ್ತುವರಿದ ಕೋಟೆ-ಕೊತ್ತಲಗಳು ಮಧ್ಯಕಾಲೀನ ಜಗತ್ತಿನ ಕಲ್ಪನಾತೀತ ಸೌಂದರ್ಯವನ್ನು ತೆರೆದಿಡುತ್ತವೆ. ಆಕಾಶದ ಬಣ್ಣವನ್ನೇ ಮೈವೆತ್ತಂತೆ ಹೊಳೆಯುವ ನೀಲಿ, ವೈಡೂರ್ಯದ ಮೊಸಾಯಿಕ್ ಮತ್ತು ಮೆರುಗು ನೀಡಿದ ಸೆರಾಮಿಕ್ ಟೈಲ್ಸ್‌ಗಳಿಂದ ಅಲಂಕೃತವಾದ ಭವ್ಯ ಮಸೀದಿಗಳು ಮತ್ತು ಮದರಸಾಗಳು ಇಸ್ಲಾಮಿಕ್ ವಾಸ್ತುಶಿಲ್ಪದ ಪರಮೋಚ್ಚ ಶಿಖರಕ್ಕೆ ಸಾಕ್ಷಿಯಾಗಿ ನಿಂತಿವೆ. ವಿಶ್ವವಿಜೇತ ಚಕ್ರವರ್ತಿ ಅಮೀರ್ ತಿಮೂರ್ (ತಾಮರ್ಲೇನ್) ತನ್ನ ರಾಜಧಾನಿಯಾದ ಸಮರ್ಕಂಡ್‌ ಅನ್ನು ಇಡೀ ವಿಶ್ವವೇ ನಿಬ್ಬೆರಗಾಗುವಂತೆ ರೂಪಿಸಿದ ಕಥೆ ರೋಚಕ. ಆತನ ಸಮಾಧಿ ‘ಗುರ್-ಎ-ಅಮೀರ್’ನ ಆಕಾಶದೆತ್ತರದ ಸುಂದರ ನೀಲಿ ಗುಮ್ಮಟ, ಸೂಕ್ಷ್ಮ ಕೆತ್ತನೆಗಳು ಮತ್ತು ಜ್ಯಾಮಿತೀಯ ನಕ್ಷೆಗಳು ಕೇವಲ ರಾಜಭಕ್ತಿಯನ್ನಷ್ಟೇ ಅಲ್ಲ, ಗತಕಾಲದ ಕಲಾವಂತಿಕೆಯನ್ನು ಸಾರುತ್ತವೆ. ಮರುಭೂಮಿಯ ಧೂಳಿನ ನಡುವೆ ತಲೆಯೆತ್ತಿರುವ ಈ ಸ್ಮಾರಕಗಳ ವೈಭವ, ಲೇಖಕಿ ಎರಿಕಾನ ಸೂಕ್ಷ್ಮ ಅವಲೋಕನದ ಮೂಲಕ ಓದುಗರನ್ನು ನೇರವಾಗಿ ತೈಮೂರಿದ್ ಸಾಮ್ರಾಜ್ಯದ ಗತವೈಭವದ ನೆಲೆಗೆ ಕರೆದೊಯ್ಯುತ್ತದೆ. ಇದರೊಂದಿಗೆ, ಅಂದಿನ ಸಿಲ್ಕ್ ರೋಡ್ ಮಾರುಕಟ್ಟೆಗಳಲ್ಲಿ ಹರಿದಾಡುತ್ತಿದ್ದ ಚೀನೀ ರೇಷ್ಮೆ, ಭಾರತೀಯ ಸಾಂಬಾರ ಪದಾರ್ಥಗಳು ಹಾಗೂ ಯುರೋಪಿನ ಅಮೂಲ್ಯ ಸರಕುಗಳ ವ್ಯಾಪಾರದ ಗಿಜಿಗುಡುವ ಸದ್ದು ಇಲ್ಲಿ ಮರುಧ್ವನಿಸುತ್ತದೆ. ಒಂಟೆಗಳ ಸಾಲುಗಳು, ಕಾರವಾನ್‌ಸರೈಗಳ ಆತಿಥ್ಯ ಮತ್ತು ವಿವಿಧ ಸಂಸ್ಕೃತಿಗಳ ಮಹಾಸಂಗಮವಾಗಿದ್ದ ಈ ನಗರಗಳು ಜಾಗತಿಕ ವಾಣಿಜ್ಯದ ಜೀವನಾಡಿಯಾಗಿದ್ದವು. ಈ ವೃತ್ತಾಂತವು ಪ್ರಾಚೀನ ಇತಿಹಾಸ, ವಾಸ್ತುಶಿಲ್ಪ ಮತ್ತು ವ್ಯಾಪಾರದ ವೈಭವವನ್ನು ಕಣ್ಣಮುಂದೆ ತಂದು ನಿಲ್ಲಿಸಿ, ಮರೆಯಲಾಗದ ಸಾಂಸ್ಕೃತಿಕ ಅನುಭವವನ್ನು ಕಟ್ಟಿಕೊಡುತ್ತದೆ.

ಆದರೆ ಈ ಸೌಂದರ್ಯದ ಹಿಂದಿರುವ ಆಧುನಿಕ ದುರಂತವೆಂದರೆ ಅರಲ್ ಸಮುದ್ರದ (Aral Sea) ವಿನಾಶ. ಒಂದು ಕಾಲದಲ್ಲಿ ವಿಶ್ವದ ನಾಲ್ಕನೇ ಅತಿ ದೊಡ್ಡ ಒಳನಾಡ ಸರೋವರವಾಗಿದ್ದ ಅರಲ್ ಸಮುದ್ರವನ್ನು ಸೋವಿಯತ್ ಆಡಳಿತಗಾರರು ಹತ್ತಿ ಕೃಷಿಗಾಗಿ ನದಿಗಳ ದಿಕ್ಕು ಬದಲಿಸಿ ಸಂಪೂರ್ಣವಾಗಿ ಬತ್ತಿಸಿಬಿಟ್ಟರು. ಮುಯಿನ್ಯಾಕ್ ನಗರದ ಬಳಿ ಒಣಗಿದ ಉಪ್ಪು ನೆಲದ ಮೇಲೆ ತುಕ್ಕು ಹಿಡಿದು ನಿಂತಿರುವ ಬೃಹತ್ ಹಡಗುಗಳ ‘ರುದ್ರಭೂಮಿ’ಯನ್ನು (Ship Cemetery) ಎರಿಕಾ ಸಂದರ್ಶಿಸಿದಾಗ, ಮಾನವನ ದುರಾಶೆಯು ಪ್ರಕೃತಿಗೆ ತಂದೊಡ್ಡುವ ವಿನಾಶ ಎಷ್ಟು ಭೀಕರ ಎಂಬುದು ಕಣ್ಣೆದುರು ನಿಲ್ಲುತ್ತದೆ. ಉಜ್ಬೇಕಿಸ್ತಾನದ ಅಂದಿನ ಅಧ್ಯಕ್ಷ ಇಸ್ಲಾಂ ಕರಿಮೋವ್ ಅವರ ಸರ್ವಾಧಿಕಾರ, ಬಲವಂತದ ಹತ್ತಿ ಕೊಯ್ಲಿಗೆ ಶಾಲಾ ಮಕ್ಕಳನ್ನು ಹಾಗೂ ಸರಕಾರಿ ನೌಕರರನ್ನು ದೂಡುವ ಪದ್ಧತಿ ಮತ್ತು ರಾಜಕೀಯ ವಿರೋಧಿಗಳನ್ನು ಹಿಂಸಿಸುವ ಕ್ರೂರ ವಿಧಾನಗಳನ್ನು ಎರಿಕಾ ಮುಚ್ಚುಮರೆಯಿಲ್ಲದೆ ಬಯಲುಮಾಡುತ್ತಾರೆ. ಪ್ರವಾಸೋದ್ಯಮದ ಆಕರ್ಷಕ ಬ್ರೋಷರ್‌ಗಳಲ್ಲಿ ಎಂದಿಗೂ ಪ್ರಕಟವಾಗದ ನೈಜ ವಾಸ್ತವಗಳನ್ನು ಕೆದಕಿ ತೆಗೆಯುವುದು ಅವರ ಬರಹದ ದೊಡ್ಡ ಶಕ್ತಿ.

ಲೇಖಕಿ ಎರಿಕಾ ಪ್ರವಾಸ ಶೈಲಿ ಯಾವುದೇ ಕೃತಕತೆಯಿಲ್ಲದ, ಅಪಾರ ಸರಳತೆ ಮತ್ತು ಸಹಜತೆಯಿಂದ ಕೂಡಿದೆ. ಅವರು ಎಂದಿಗೂ ಐಶಾರಾಮಿ ಹೊಟೇಲ್‌ಗಳ ನಾಲ್ಕು ಗೋಡೆಗಳ ನಡುವೆ ಅಥವಾ ಆರಾಮದಾಯಕ ಪ್ರವಾಸಿ ವಾಹನಗಳಲ್ಲಿ ಬಂಧಿಯಾಗುವುದಿಲ್ಲ. ಬದಲಿಗೆ, ಸ್ಥಳೀಯ ಜನಜೀವನದೊಂದಿಗೆ ಬೆರೆತು, ಸಾಮಾನ್ಯರಂತೆ ಹಳೆಯ, ಕಿಕ್ಕಿರಿದ ‘ಮಾರ್ಶ್ರುಟ್ಕಾ’ ಮಿನಿಬಸ್‌ಗಳಲ್ಲಿ ಕುಲುಕಾಡುತ್ತಾ, ಧೂಳು ತುಂಬಿದ ಹಳ್ಳಿಗಾಡಿನ ನಿಲ್ದಾಣಗಳಲ್ಲಿ ಕಾಯುತ್ತಾ ಸಾಗುತ್ತಾರೆ. ರಾತ್ರಿ ಕಳೆಯಲು ಅವರು ಆಯ್ದುಕೊಳ್ಳುವುದು ಜನಸಾಮಾನ್ಯರ ಸಣ್ಣ ಮನೆಗಳನ್ನು. ಅಲ್ಲಿನ ಮನೆಯೊಡತಿಯರು ನೀಡುವ ಪ್ರೀತಿಯ ಆತಿಥ್ಯ, ಹಂಚಿಕೊಳ್ಳುವ ಬಿಸಿಬಿಸಿ ರೊಟ್ಟಿ ಮತ್ತು ಬಟ್ಟಲು ಚಹಾದ ಸವಿಯಲ್ಲೇ ಅವರು ಆ ನೆಲದ ಆಪ್ತತೆಯನ್ನು ಅನುಭವಿಸುತ್ತಾರೆ. ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮುಗಿಸುವ ಪ್ರವಾಸ ಇದಲ್ಲ, ಬದಲಾಗಿ ಆ ಮಣ್ಣಿನ ನಿಜವಾದ ಬದುಕನ್ನು ಮೈಗೂಡಿಸಿಕೊಳ್ಳುವ ಅಪರೂಪದ ಯಾನ.

Untitled Design - 2026-11-17T153009.264

ದಾರಿಯುದ್ದಕ್ಕೂ ಸಿಗುವ ಅಪರಿಚಿತರೊಂದಿಗೆ ಅವರು ಬೆಸೆಯುವ ಮುಕ್ತ ಸಂಬಂಧವೇ ಈ ಕೃತಿಯ ಅತಿ ದೊಡ್ಡ ಶಕ್ತಿ. ಜಂಟಿ ಟ್ಯಾಕ್ಸಿಗಳ ಚಾಲಕರ ಹರಟೆ, ಸಣ್ಣಪುಟ್ಟ ಟೀ ಅಂಗಡಿಗಳಲ್ಲಿ ನಡೆಯುವ ಹಳ್ಳಿಗರ ಹರಟೆ ಮತ್ತು ಸಾಮಾನ್ಯ ಜನರ ನಿತ್ಯದ ನೋವು-ನಲಿವುಗಳೇ ಅವರಿಗೆ ಆಕರವಾಗುತ್ತವೆ. ಸ್ಥಳೀಯರ ಪ್ರಾಮಾಣಿಕ ಮಾತುಕತೆಗಳ ಮೂಲಕವೇ ಆ ಇಡೀ ಪ್ರದೇಶದ ಒಳಮಿಡಿತ, ರಾಜಕೀಯ ತಲ್ಲಣಗಳು ಮತ್ತು ಬದುಕಿನ ಸಂಕಟಗಳನ್ನು ಅವರು ಅತ್ಯಂತ ಆಪ್ತವಾಗಿ ಹೆಕ್ಕಿ ತೆಗೆಯುತ್ತಾರೆ. ಈ ಮಣ್ಣಿನ ಸೊಗಡಿನ ಸರಳತೆಯೇ ಅವರ ನಿರೂಪಣೆಗೆ ಅನನ್ಯ ಜೀವಂತಿಕೆಯನ್ನು ತಂದುಕೊಟ್ಟಿದೆ.

ಇದನ್ನೂ ಓದಿ: ನಕಾಶೆ ಓದುವುದೆಂದರೆ ಅದು ಜಗತ್ತನ್ನು ನಾವೇ ಹುಡುಕಿಕೊಳ್ಳುವ ಅಂತರ್ಮುಖಿ ಪಯಣ

‘ಸೋವಿಯತಿಸ್ತಾನ್’ ಕೃತಿಯ ಅತಿ ದೊಡ್ಡ ಸೌಂದರ್ಯವಿರುವುದು ಅದರ ನಿಷ್ಪಕ್ಷಪಾತ ದೃಷ್ಟಿಕೋನದಲ್ಲಿ. ಸೋವಿಯತ್ ಆಡಳಿತವು ಈ ಪ್ರದೇಶಗಳಲ್ಲಿ ಅಕ್ಷರಸ್ಥತೆ ತಂದಿತು, ಮಹಿಳೆಯರಿಗೆ ಶಿಕ್ಷಣ ನೀಡಿತು, ಮೂಲಸೌಕರ್ಯಗಳನ್ನು ನಿರ್ಮಿಸಿತು ಎಂಬುದನ್ನು ಎರಿಕಾ ಒಪ್ಪಿಕೊಳ್ಳುತ್ತಲೇ, ಅದೇ ಆಡಳಿತವು ಅವರ ಸ್ಥಳೀಯ ಭಾಷೆ, ಸಂಸ್ಕೃತಿ, ಧಾರ್ಮಿಕ ನಂಬಿಕೆಗಳನ್ನು ಹೇಗೆ ಹೊಸಕಿಹಾಕಿತು ಮತ್ತು ವಿಚಿತ್ರ ಗಡಿರೇಖೆಗಳನ್ನು ಎಳೆದು ಜನಾಂಗೀಯ ಸಂಘರ್ಷಕ್ಕೆ ಮುನ್ನುಡಿ ಬರೆಯಿತು ಎಂಬುದನ್ನು ವಿಶ್ಲೇಷಿಸುತ್ತಾರೆ. ಈ ಐದೂ ದೇಶಗಳ ನಡುವಿನ ಪರಸ್ಪರ ಪೈಪೋಟಿ, ಗಡಿ ವಿವಾದಗಳು ಹಾಗೂ ಜನಾಂಗೀಯ ತಿಕ್ಕಾಟಗಳು ಸಾಮಾನ್ಯ ಜನರ ದೈನಂದಿನ ಜೀವನವನ್ನು ಹೇಗೆ ಕಷ್ಟಕರವಾಗಿಸಿವೆ ಎಂಬುದನ್ನು ವಿವಿಧ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಮಗಾಗುವ ಕಹಿ-ಸಿಹಿ ಅನುಭವಗಳ ಮೂಲಕ ಲೇಖಕಿ ಕಟ್ಟಿಕೊಡುತ್ತಾರೆ. ಲಂಚಕೋರ ಗಡಿ ಕಾವಲುಗಾರರು, ಕಾಗದಪತ್ರಗಳ ಪರಿಶೀಲನೆಯ ಕಿರಿಕಿರಿಗಳು ಓದುಗರಲ್ಲಿ ನಗುವನ್ನೂ, ಆಡಳಿತಶಾಹಿಯ ಬಗೆಗಿನ ಬೇಸರವನ್ನೂ ಒಟ್ಟಿಗೇ ತರಿಸುತ್ತವೆ.

ಎರಿಕಾ ಫ್ಯಾಟ್‌ಲ್ಯಾಂಡ್‌ರ ಭಾಷೆ ಕಾವ್ಯಾತ್ಮಕವೂ ಹೌದು, ತೀಕ್ಷ್ಣವೂ ಹೌದು. ಅವರು ಪ್ರಕೃತಿಯ ಸೊಬಗನ್ನು ವರ್ಣಿಸುವಾಗ ಎಷ್ಟು ತನ್ಮಯರಾಗುತ್ತಾರೋ, ರಾಜಕೀಯ ದಬ್ಬಾಳಿಕೆಯ ವಿರುದ್ಧ ಅಷ್ಟೇ ಪ್ರಖರವಾದ ಕಟು ಸತ್ಯಗಳನ್ನು ಇಡುತ್ತಾರೆ. ಅವರ ಕಣ್ಣುಗಳು ಕೇವಲ ಪ್ರವಾಸಿ ತಾಣಗಳನ್ನಷ್ಟೇ ಹುಡುಕುವುದಿಲ್ಲ. ಆ ತಾಣಗಳ ಮಣ್ಣಿನಲ್ಲಿ ಹೂತುಹೋದ ಜನರ ಕಣ್ಣೀರು ಮತ್ತು ಹತಾಶೆಯನ್ನು ಗ್ರಹಿಸುತ್ತವೆ.

‘ಸೋವಿಯತಿಸ್ತಾನ್’ ಕೃತಿಯು ಪ್ರವಾಸ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು. ಇದು ರೇಷ್ಮೆ ಹೆದ್ದಾರಿಯ ಇತಿಹಾಸವನ್ನು ಮೆಲುಕು ಹಾಕುವ ಪ್ರವಾಸಿಗರಿಗೆ ಮಾತ್ರವಲ್ಲ, ಜಾಗತಿಕ ರಾಜಕೀಯ, ಸೋವಿಯತ್ ಇತಿಹಾಸ ಹಾಗೂ ಮನುಷ್ಯ ಬದುಕಿನ ತುಮುಲಗಳನ್ನು ಅರಿಯಲು ಬಯಸುವ ಪ್ರತಿಯೊಬ್ಬ ಗಂಭೀರ ಓದುಗನಿಗೂ ಅತ್ಯಂತ ಮೌಲ್ಯಯುತ, ಸ್ಫೂರ್ತಿದಾಯಕ ದೃಶ್ಯಕಾವ್ಯದಂತಿದೆ. ಮಧ್ಯ ಏಷ್ಯಾದ ಈ ವಿಶಾಲ ಭೂಪ್ರದೇಶದಲ್ಲಿ ಎರಿಕಾ ಫ್ಯಾಟ್‌ಲ್ಯಾಂಡ್ ನಡೆಸುವ ಅಲೆದಾಟವು ಕೇವಲ ಭೌಗೋಳಿಕ ಗಡಿಗಳನ್ನು ದಾಟುವುದಷ್ಟೇ ಅಲ್ಲ, ಅದು ಆ ಜನರ ಸಂಕೀರ್ಣ ಮನೋಭೂಮಿಕೆಯನ್ನು ಆಳವಾಗಿ ಸ್ಪರ್ಶಿಸುವ ಪಯಣ. ಪುಸ್ತಕದ ಪುಟಗಳು ಮುಂದುವರಿದಂತೆ, ಸೋವಿಯತ್ ಒಕ್ಕೂಟದ ಪತನದ ಮೂರು ದಶಕಗಳ ನಂತರವೂ ಈ ರಾಷ್ಟ್ರಗಳು ತಮ್ಮದೇ ಆದ ಪ್ರತ್ಯೇಕ ಅಸ್ಮಿತೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವ ವಾಸ್ತವ ಕಣ್ಣಿಗೆ ರಾಚುತ್ತದೆ. ಲೆನಿನ್ ಮತ್ತು ಸ್ಟಾಲಿನ್‌ರ ಬೃಹತ್ ಪ್ರತಿಮೆಗಳನ್ನು ನೆಲಸಮ ಮಾಡಿ, ಅವುಗಳ ಜಾಗದಲ್ಲಿ ಹೊಸ ರಾಷ್ಟ್ರೀಯ ನಾಯಕರನ್ನು ಮತ್ತು ಮಧ್ಯಕಾಲೀನ ಯೋಧರನ್ನು ಪ್ರತಿಷ್ಠಾಪಿಸಿ ಇತಿಹಾಸವನ್ನು ಮರುಬರೆಯುವ ಪ್ರಕ್ರಿಯೆಯನ್ನು ಎರಿಕಾ ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ.

ಕಜ಼ಕಿಸ್ತಾನದ ಬೈಕನೂರ್ ಕಾಸ್ಮೊಡ್ರೋಮ್ ಪ್ರದೇಶದ ಪ್ರಸ್ತಾಪ ಕೃತಿಯಲ್ಲಿ ವಿಶಿಷ್ಟ ಆಕರ್ಷಣೆಯನ್ನು ಮೂಡಿಸುತ್ತದೆ. ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ಜಿಗಿದ ಐತಿಹಾಸಿಕ ತಾಣವಾದ ಇದು ಇಂದಿಗೂ ರಷ್ಯಾದ ಗುತ್ತಿಗೆಯಲ್ಲೇ ಉಳಿದಿದೆ. ಅತಿ-ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನದ ಹೆಗ್ಗುರುತಾಗಿರುವ ಈ ಜಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಇಂದಿಗೂ ಕನಿಷ್ಠ ಸೌಲಭ್ಯಗಳಿಲ್ಲದೇ ಬದುಕುತ್ತಿದ್ದಾರೆ. ರಾಕೆಟ್‌ಗಳು ಆಗಸಕ್ಕೆ ಚಿಮ್ಮುವಾಗ ಕೆಳಗೆ ಬೀಳುವ ಲೋಹದ ಅವಶೇಷಗಳನ್ನು ಹೆಕ್ಕಿ ಮಾರಿ ಹೊಟ್ಟೆಹೊರೆಯುವ ಸ್ಥಳೀಯ ಜನರ ಚಿತ್ರಣವು, ವಿಜ್ಞಾನದ ಪರಾಕಾಷ್ಠೆ ಮತ್ತು ಮಾನವ ಬಡತನದ ನಡುವಿನ ಕಟು ವ್ಯತ್ಯಾಸವನ್ನು ಕಣ್ಣಮುಂದೆ ತರುತ್ತದೆ.

ಇನ್ನೊಂದೆಡೆ, ಉಜ್ಬೆ಼ಕಿಸ್ತಾನದ ಕರಕಲ್ಪಕಸ್ತಾನ್ ಸ್ವಾಯತ್ತ ಪ್ರದೇಶದ ರಾಜಧಾನಿ ನುಕಸ್ ನಗರದಲ್ಲಿರುವ ‘ಸಾವಿಟ್ಸ್ಕಿ ಕಲಾ ಸಂಗ್ರಹಾಲಯ’ದ ಕಥನವಂತೂ ಕಲೆಯ ಅದ್ಭುತ ಲೋಕವನ್ನೇ ತೆರೆದಿಡುತ್ತದೆ. ಸೋವಿಯತ್ ಕಾಲದಲ್ಲಿ ‘ಅವಂತ್-ಗಾರ್ಡ್’ ಕಲೆಯನ್ನು ಬಂಡವಾಳಶಾಹಿ ಕಲೆಯೆಂದು ನಿಷೇಧಿಸಿ, ಕಲಾವಿದರನ್ನು ಗುಲಾಗ್ ಶಿಬಿರಗಳಿಗೆ ಅಟ್ಟಲಾಗುತ್ತಿತ್ತು. ಆಗ ಐಗೊರ್ ಸಾವಿಟ್ಸ್ಕಿ ಎಂಬ ಧೀಮಂತ ವ್ಯಕ್ತಿ, ಮಾಸ್ಕೋದಿಂದ ಸಾವಿರಾರು ಮೈಲಿ ದೂರದ ಈ ಮರುಭೂಮಿಯ ನಗರಕ್ಕೆ ಆ ನಿಷೇಧಿತ ಕಲಾಕೃತಿಗಳನ್ನು ಕದ್ದು ತಂದು ರಕ್ಷಿಸಿದ ರೋಚಕ ಇತಿಹಾಸವನ್ನು ಲೇಖಕಿ ವಿವರಿಸುವಾಗ, ಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಕಲೆಯು ಹೇಗೆ ಜೀವಂತವಾಗಿ ಉಳಿಯಬಲ್ಲದು ಎಂಬ ಸತ್ಯ ಗೋಚರವಾಗುತ್ತದೆ.

ಫರ್ಗಾನಾ ಕಣಿವೆಯ ಸಂಕೀರ್ಣತೆಯಂತೂ ಇಡೀ ಪುಸ್ತಕದಲ್ಲೇ ಅತ್ಯಂತ ಜಟಿಲವಾದ ಅಧ್ಯಾಯ. ಉಜ್ಬೆ಼ಕಿಸ್ತಾನ್, ಕಿರ್ಗಿಸ್ತಾನ್ ಮತ್ತು ತಜಿ಼ಕಿಸ್ತಾನ್—ಈ ಮೂರೂ ದೇಶಗಳ ಗಡಿಗಳು ಒಂದರೊಳಗೊಂದು ಬೆರೆತು, ಒಳಾವರಣಗಳಾಗಿ ಮಾರ್ಪಟ್ಟಿರುವ ಈ ಕಣಿವೆಯಲ್ಲಿ ಸ್ಟಾಲಿನ್ ಎಳೆದ ವಿಚಿತ್ರ ರೇಖೆಗಳು ಜನರ ಬದುಕನ್ನು ಹೈರಾಣಾಗಿಸಿವೆ. ಒಂದೇ ಹಳ್ಳಿಯ ಒಂದು ಬೀದಿ ಉಜ್ಬೆ಼ಕಿಸ್ತಾನದಲ್ಲಿದ್ದರೆ, ಮತ್ತೊಂದು ಬೀದಿ ಕಿರ್ಗಿಸ್ತಾನದಲ್ಲಿದೆ. ನೀರು, ರಸ್ತೆ ಮತ್ತು ಕೃಷಿಭೂಮಿಯ ಹಂಚಿಕೆಗೆ ಸಂಬಂಧಿಸಿದಂತೆ ನೆರೆಹೊರೆಯವರ ನಡುವೆಯೇ ಆಗಾಗ ಭುಗಿಲೇಳುವ ಜನಾಂಗೀಯ ಸಂಘರ್ಷಗಳನ್ನು ಎರಿಕಾ ಗಾಢವಾಗಿ ದಾಖಲಿಸುತ್ತಾರೆ.

ತಜಿ಼ಕಿಸ್ತಾನದ ಗೃಹಯುದ್ಧದ (1992-1997) ಕರಾಳ ನೆನಪುಗಳು ಅಲ್ಲಿನ ಜನರ ಮುಖಗಳಲ್ಲಿ ಇಂದಿಗೂ ಮಾಸಿಲ್ಲ. ಸೋವಿಯತ್ ಒಕ್ಕೂಟ ಕುಸಿದ ಬೆನ್ನಲ್ಲೇ ಅಧಿಕಾರಕ್ಕಾಗಿ ನಡೆದ ಆ ಆಂತರಿಕ ಕಲಹದಲ್ಲಿ ಲಕ್ಷಾಂತರ ಜನರು ಮನೆಮಠ ಕಳೆದುಕೊಂಡರು. ರಷ್ಯಾಗೆ ಕೂಲಿ ಕಾರ್ಮಿಕರಾಗಿ ವಲಸೆ ಹೋಗುವ ಲಕ್ಷಾಂತರ ತಜಿಕರು ಮತ್ತು ಉಜ್ಬೆ಼ಕ್‌ಗಳು ಕಳುಹಿಸುವ ಹಣದ ಮೇಲೆಯೇ ಇಂದಿಗೂ ಈ ದೇಶಗಳ ಆರ್ಥಿಕತೆ ನಿಂತಿರುವುದು ಹಾಗೂ ಮನೆಯಲ್ಲಿ ಕೇವಲ ಮಹಿಳೆಯರು ಮತ್ತು ವೃದ್ಧರಷ್ಟೇ ಉಳಿದು ನಿರ್ಮಾಣವಾಗಿರುವ ‘ಗಂಡಂದಿರೇ ಇಲ್ಲದ ಹಳ್ಳಿಗಳು’ ಎರಿಕಾನ ಮಾನವೀಯ ದೃಷ್ಟಿಗೆ ದಕ್ಕುವ ಅತಿ ದೊಡ್ಡ ವಾಸ್ತವ.

ಮಧ್ಯ ಏಷ್ಯಾದಾದ್ಯಂತ ಪ್ರವಾಸ ಮಾಡುವಾಗ ಎದುರಾಗುವ ಆಹಾರ ಸಂಸ್ಕೃತಿಯ ವೈವಿಧ್ಯವೂ ಓದುಗರಿಗೆ ವಿಶೇಷ ಆಪ್ತತೆಯನ್ನು ನೀಡುತ್ತದೆ. ಭರ್ಜರಿ ಮಾಂಸ ಮತ್ತು ಮಸಾಲೆಗಳಿಂದ ಕೂಡಿದ ರಾಷ್ಟ್ರೀಯ ಖಾದ್ಯ ‘ಪ್ಲೋವ್’ (ಉಜ್ಬೇಕ್ ಬಿರಿಯಾನಿ), ಮಣ್ಣಿನ ಒಲೆಯಲ್ಲಿ ಬೇಯಿಸುವ ಬಿಸಿಬಿಸಿ ನೊನ್ ರೊಟ್ಟಿಗಳು, ಕುರಿ ಮಾಂಸದ ‘ಶಶ್ಲಿಕ್’ ಕಬಾಬ್‌ಗಳು ಮತ್ತು ಅತಿಥಿಗಳು ಬಂದಾಗ ತಟ್ಟೆ ತುಂಬ ಹರಡುವ ಒಣಹಣ್ಣುಗಳು ಹಾಗೂ ಗ್ರೀನ್ ಟೀ ಸಂಪ್ರದಾಯದ ವರ್ಣನೆ ಸ್ವಾದಿಷ್ಟವಾಗಿವೆ. ಅಷ್ಟೇ ಅಲ್ಲ, ಚಳಿಗಾಲವನ್ನು ತಡೆದುಕೊಳ್ಳಲು ಅವರು ಮದ್ಯವಾಗಿ ಸೇವಿಸುವ ರಷ್ಯನ್ ಶೈಲಿಯ ವೋಡ್ಕಾ ಹಾಗೂ ಸ್ಥಳೀಯ ಚಹಾ ಕೂಟಗಳ ಸಾಮಾಜಿಕ ಮಹತ್ವವನ್ನು ಲೇಖಕಿ ಸ್ವಾರಸ್ಯಕರವಾಗಿ ಪರಿಚಯಿಸುತ್ತಾರೆ.

ಇದನ್ನೂ ಓದಿ: ಗೋಡೆಗಳೇ ಪುಸ್ತಕವಾಗಿರುವ ಲೀಡೆನ್ ನಗರದಲ್ಲೊಂದು ವಿಶಿಷ್ಟ ಕಾವ್ಯಯಾನ

ಧರ್ಮ ಮತ್ತು ಜಾತ್ಯತೀತತೆಯ ನಡುವಿನ ಜಿಜ್ಞಾಸೆಯು ಈ ಕೃತಿಯ ಮತ್ತೊಂದು ಪ್ರಮುಖ ಎಳೆ. ಶತಮಾನಗಳ ಕಾಲ ಸೋವಿಯತ್‌ನ ಬಲವಂತದ ನಿರೀಶ್ವರವಾದಕ್ಕೆ ಒಳಪಟ್ಟಿದ್ದ ಈ ಮುಸ್ಲಿಂ ಬಹುಸಂಖ್ಯಾತ ಸಮಾಜಗಳಲ್ಲಿ ಇಂದು ಇಸ್ಲಾಂ ಧರ್ಮವು ಮತ್ತೆ ಹೇಗೆ ಚಿಗುರುತ್ತಿದೆ, ಅದೇ ವೇಳೆಗೆ ಸರಕಾರಗಳು ಧಾರ್ಮಿಕ ಮೂಲಭೂತವಾದದ ಭಯದಿಂದ ಗಡ್ಡ ಬೆಳೆಸುವುದರ ಮೇಲಾಗಲಿ ಅಥವಾ ಹಿಜಾಬ್ ಧರಿಸುವುದರ ಮೇಲಾಗಲಿ ವಿಧಿಸಿರುವ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಲೇಖಕಿ ವಿಶ್ಲೇಷಿಸುತ್ತಾರೆ. ಸಾಂಪ್ರದಾಯಿಕ ಸೂಫಿ ಪರಂಪರೆ ಮತ್ತು ಆಧುನಿಕ ಸರಕಾರದ ಕಣ್ಗಾವಲಿನ ನಡುವೆ ಜನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದು ಇಲ್ಲಿ ಅನಾವರಣಗೊಳ್ಳುತ್ತದೆ.

ಒಂಟಿ ಮಹಿಳೆಯಾಗಿ ಇಂಥ ದುರ್ಗಮ ಹಾಗೂ ಪುರುಷಪ್ರಧಾನ ಸಮಾಜಗಳಲ್ಲಿ ತಿಂಗಳುಗಟ್ಟಲೆ ಪ್ರಯಾಣಿಸಿದ ಎರಿಕಾ ಫ್ಯಾಟ್‌ಲ್ಯಾಂಡ್‌ರ ವೈಯಕ್ತಿಕ ಧೈರ್ಯ ಮತ್ತು ಸಾಹಸಪ್ರವೃತ್ತಿ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಎದ್ದು ಕಾಣುತ್ತದೆ. ಮುರಿದುಬಿದ್ದ ರಸ್ತೆಗಳು, ಕೈಕೊಡುವ ವಾಹನಗಳು, ಭಾಷೆಯ ತೊಡಕುಗಳು ಹಾಗೂ ಅನುಮಾನಾಸ್ಪದ ಕಣ್ಣುಗಳಿಂದ ನೋಡುವ ಪೊಲೀಸ್ ಅಧಿಕಾರಿಗಳನ್ನು ತಮ್ಮ ನಗು, ತಾಳ್ಮೆ ಮತ್ತು ರಷ್ಯನ್ ಭಾಷಾ ಪ್ರಾವೀಣ್ಯದಿಂದಲೇ ಗೆಲ್ಲುವ ಅವರ ಚಾಕಚಕ್ಯತೆ ಈ ಕೃತಿಯ ತಾಕತ್ತು. ಸ್ಥಳೀಯ ಮಹಿಳೆಯರ ಅಡುಗೆಮನೆಗಳಿಗೆ ನುಗ್ಗಿ, ಅವರ ಆಸೆ-ಆಕಾಂಕ್ಷೆಗಳನ್ನು ಆಪ್ತವಾಗಿ ಕೇಳಿ ದಾಖಲಿಸುವ ಅವರ ವಿಧಾನ ಮಾನವಶಾಸ್ತ್ರೀಯ ಅಧ್ಯಯನಕ್ಕೆ ಮಾದರಿಯಾಗಿದೆ. ಸೋವಿಯತ್ ಒಕ್ಕೂಟದ ಭೌತಿಕ ಗಡಿಗಳು ಕಣ್ಮರೆಯಾಗಿದ್ದರೂ, ಆಡಳಿತಶಾಹಿಯ ಮನಸ್ಥಿತಿ, ಗುಪ್ತಚರ ಭಯ ಹಾಗೂ ರಷ್ಯಾದ ಸಾಂಸ್ಕೃತಿಕ ಪ್ರಭಾವ ಇಂದಿಗೂ ಈ ಪ್ರದೇಶಗಳನ್ನು ಬಿಟ್ಟುಹೋಗಿಲ್ಲ. ಅದೇ ವೇಳೆಗೆ, ಚೀನಾದ ‘ಬೆಲ್ಟ್ ಅಂಡ್ ರೋಡ್’ ಯೋಜನೆಯ ಮೂಲಕ ಹೆಚ್ಚುತ್ತಿರುವ ಆರ್ಥಿಕ ಪ್ರಭಾವ ಮತ್ತು ಹಳೆಯ ರೇಷ್ಮೆ ಹೆದ್ದಾರಿಯ ಮರುಹುಟ್ಟು ಈ ಐದೂ ದೇಶಗಳನ್ನು ಜಾಗತಿಕ ರಾಜಕೀಯದ ಹೊಸ ಚದುರಂಗದಾಟದ ಕೇಂದ್ರವನ್ನಾಗಿಸಿದೆ ಎಂಬುದನ್ನು ಲೇಖಕಿ ಗುರುತಿಸುತ್ತಾರೆ.

‘ಸೋವಿಯತಿಸ್ತಾನ್’ ಕಳೆದುಹೋದ ಸಾಮ್ರಾಜ್ಯದ ನೆರಳಿನಲ್ಲಿ ಬದುಕುತ್ತಿರುವ ಜನರ ಅಂತರಂಗದ ಕನ್ನಡಿ. ಭವ್ಯ ವಾಸ್ತುಶಿಲ್ಪದ ಹೊಳಪು ಮತ್ತು ಅರಲ್ ಸಮುದ್ರದ ಒಣಗಿದ ಬಂಜರುತನ, ನಿರಂಕುಶಾಧಿಕಾರಿಗಳ ಹುಚ್ಚುತನ ಮತ್ತು ಸಾಮಾನ್ಯ ಜನರ ಅಪಾರ ಪ್ರೀತಿ—ಈ ಎಲ್ಲ ವೈರುಧ್ಯಗಳನ್ನು ಎರಿಕಾ ಫ್ಯಾಟ್‌ಲ್ಯಾಂಡ್ ಅತ್ಯಂತ ಜೀವಂತವಾಗಿ ದಾಖಲಿಸಿದ್ದಾರೆ. ಮಧ್ಯ ಏಷ್ಯಾವನ್ನು ಕೇವಲ ಭೂಪಟದ ಗೆರೆಗಳಾಗಿ ನೋಡದೇ, ಜೀವಂತ ಉಸಿರಾಡುವ ಮನುಷ್ಯರ ನೆಲೆಯಾಗಿ ಗ್ರಹಿಸಲು ಈ ಕೃತಿ ಜಾಗತಿಕ ಪ್ರವಾಸ ಸಾಹಿತ್ಯದಲ್ಲಿ ಎಂದಿಗೂ ಮಿನುಗುವ ಒಂದು ಅತ್ಯಮೂಲ್ಯ ದಸ್ತಾವೇಜು.