ಕ್ಯಾಮೆರಾ ಮತ್ತದರ ಸೆಟ್ಟಿಂಗ್ಗಳು
ಕ್ಯಾಮೆರಾದಲ್ಲಿನ ಪ್ರಮುಖ ಬಟನ್ ʼಮೆನುʼ. ಇದರಲ್ಲಿ ಇಮೇಜ್ ಗಾತ್ರ, ಫೈಲಿನ ಫಾರ್ಮ್ಯಾಟ್, ರೆಕಾರ್ಡ್ ಸೆಟ್ಟಿಂಗ್, ಫೋಕಸ್ ಮೋಡ್, ರೆಡ್ ಐ ರಿಡೆಕ್ಷನ್, ಫ್ಲಾಷ್ ಮೋಡ್, ಆಟೋಫೋಕಸ್, ಎಕ್ಸ್ಪೋಷರ್ ಸೆಟ್ಟಿಂಗ್, ವೈಟ್ ಬ್ಯಾಲೆನ್ಸ್ ಸೆಟ್ಟಿಂಗ್, ಪಿಕ್ಚರ್ ಎಫೆಕ್ಟ್, ಜೂಮ್ ಸೆಟ್ಟಿಂಗ್, ಪೀಕಿಂಗ್, ಫೈಲ್ ನಂಬರ್ ಇನ್ನೂ ಅನೇಕ ಸೆಟ್ಟಿಂಗ್ಗಳನ್ನು ನೀವಿಲ್ಲಿ ಮಾಡಿಕೊಳ್ಳಬಹುದು.
- ಅನಂತ್ ಹರಿತ್ಸ
ಹೊಸ ಕ್ಯಾಮೆರಾವನ್ನೇನೋ ತೆಗೆದುಕೊಂಡಿರಿ. ಅದನ್ನು ಹೇಗೆ ಉಪಯೋಗಿಸಬೇಕು ಎಂದು ಅಂಗಡಿಯವ ಹೇಳಿದ್ದು ಮನೆಗೆ ಬರುವಷ್ಟರಲ್ಲಿ ಮರೆತು ಹೋಗಿರುತ್ತದೆ. ಮನೆಗೆ ಬಂದು ಕುತೂಹಲದಲ್ಲಿ ಕ್ಯಾಮೆರಾ ಬಾಕ್ಸನ್ನು ಓಪನ್ ಮಾಡಿ ಒಂದೊಂದು ಬಟನ್ಗಳನ್ನು ನೋಡುವಾಗ ಹೇಗೆ ಉಪಯೋಗಿಸುವುದು ಎನ್ನುವ ಗೊಂದಲ. ಯಾವ ಸೆಟ್ಟಿಂಗ್ ಮಾಡಿಕೊಳ್ಳಬೇಕು, ಇದೇನು, ಅದೇನು ಎನ್ನುವ ಕನ್ಫ್ಯೂಷನ್ ಶುರುವಾಗುತ್ತದೆ. ಹೊಸಬರಿಗೆ ಅದು ಸಹಜ ಕೂಡ.
ಇದನ್ನೂ ಓದಿ: ಕ್ಯಾಮೆರಾ ಚರಿತೆ
ಮೊದಲು ಕ್ಯಾಮೆರಾದ ಲೆನ್ಸ್ ಅನ್ನು ಬದಲಾಯಿಸುವುದು ಹೇಗೆ ಎಂದು ತಿಳಿಯಿರಿ. ಸಾಮಾನ್ಯವಾಗಿ ಎಲ್ಲ ಕ್ಯಾಮೆರಾಗಳಲ್ಲೂ ಲೆನ್ಸ್ ಸಮೀಪ ಒಂದು ಚಿಕ್ಕ ಬಟನ್ ಇದ್ದು ಅದನ್ನು ಪ್ರೆಸ್ ಮಾಡಿ ಲೆನ್ಸನ್ನು ತಿರುಗಿಸಿದರೆ ಲೆನ್ಸ್ ಕ್ಯಾಮೆರಾದಿಂದ ಬೇರ್ಪಡುತ್ತದೆ. ಇನ್ನೊಂದು ಲೆನ್ಸ್ ಅಳವಡಿಸುವಾಗ ಕ್ಯಾಮೆರಾದಲ್ಲೊಂದು ಬಿಳಿಯ ಬಣ್ಣದ ಚುಕ್ಕಿಗೆ ಲೆನ್ಸ್ನಲ್ಲಿರುವ ಬಿಳಿಯ ಚುಕ್ಕಿಯನ್ನು ಸರಿಯಾಗಿ ಹೊಂದಿಸಿ ತಿರುಗಿಸಿದರೆ ಸಾಕು. ಟಕ್ ಎಂದು ಸದ್ದು ಬಂದರೆ ಲೆನ್ಸ್ ಸರಿಯಾಗಿ ಕ್ಯಾಮೆರಾಕ್ಕೆ ಹೊಂದಿಕೊಂಡಿದೆ ಎಂದು ಅರ್ಥ.
ಬ್ಯಾಟರಿ ಮತ್ತು ಇತರ ವಸ್ತು
ಬ್ಯಾಟರಿಯನ್ನು ಅಳವಡಿಸುವುದು ಕಷ್ಟವೇನಿಲ್ಲ. ಆದರೆ ಬ್ಯಾಟರಿಯನ್ನು ಹೊರತೆಗೆಯುವಾಗ ಅದನ್ನು ಯಾವ ಭಾಗದಿಂದ ಪುನಃ ಜೋಡಿಸಬೇಕೆನ್ನುವುದನ್ನು ನೋಡಿಕೊಳ್ಳಿ. ಹಾಗೆಯೇ ಮೆಮೋರಿ ಕಾರ್ಡನ್ನು ಕೂಡ. ಕ್ಯಾಮೆರಾದ ಬ್ಯಾಟರಿಯನ್ನು ಚಾರ್ಜ್ ಮಾಡಲು ಅದರ ಕೇಬಲ್ ಉಪಯೋಗಿಸಿ ಕ್ಯಾಮೆರಾಗೆ ನೇರವಾಗಿ ಅಳವಡಿಸಿಕೊಳ್ಳಬಹುದು. ಇಲ್ಲದಿದ್ದಲ್ಲಿ ಹೆಚ್ಚುವರಿ ಚಾರ್ಜರನ್ನು ಇಟ್ಟುಕೊಂಡು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಫ್ಲಾಷ್ಗಾಗಿ ಒಂದು ಪ್ರತ್ಯೇಕ ಬಟನ್ ನೀಡಲಾಗಿರುತ್ತದೆ. ಫ್ಲಾಷನ್ನು ಉಪಯೋಗಿಸುವ ಸಂದರ್ಭ ಬಂದಲ್ಲಿ ಅದನ್ನು ಒತ್ತಿದರೆ ಕ್ಯಾಮೆರಾದಲ್ಲಿ ಇರುವಂಥ ಫ್ಲಾಷ್ ಪಾಪ್ ಅಪ್ ಆಗುತ್ತದೆ. ಆದರೆ ಇದರಿಂದ ಹೆಚ್ಚು ಉಪಯೋಗ ಇರದ ಕಾರಣ ಹೆಚ್ಚುವರಿಯಾದ ಫ್ಲಾಷ್ ಅಳವಡಿಸಿಕೊಳ್ಳುವುದು ಸೂಕ್ತ.

ಮೆನು ಏನೇನು?
ಕ್ಯಾಮೆರಾದಲ್ಲಿನ ಪ್ರಮುಖ ಬಟನ್ ʼಮೆನುʼ. ಇದರಲ್ಲಿ ಇಮೇಜ್ ಗಾತ್ರ, ಫೈಲಿನ ಫಾರ್ಮ್ಯಾಟ್, ರೆಕಾರ್ಡ್ ಸೆಟ್ಟಿಂಗ್, ಫೋಕಸ್ ಮೋಡ್, ರೆಡ್ ಐ ರಿಡೆಕ್ಷನ್, ಫ್ಲಾಷ್ ಮೋಡ್, ಆಟೋಫೋಕಸ್, ಎಕ್ಸ್ಪೋಷರ್ ಸೆಟ್ಟಿಂಗ್, ವೈಟ್ ಬ್ಯಾಲೆನ್ಸ್ ಸೆಟ್ಟಿಂಗ್, ಪಿಕ್ಚರ್ ಎಫೆಕ್ಟ್, ಜೂಮ್ ಸೆಟ್ಟಿಂಗ್, ಪೀಕಿಂಗ್, ಫೈಲ್ ನಂಬರ್ ಇನ್ನೂ ಅನೇಕ ಸೆಟ್ಟಿಂಗ್ಗಳನ್ನು ನೀವಿಲ್ಲಿ ಮಾಡಿಕೊಳ್ಳಬಹುದು. ಕ್ಯಾಮೆರಾವನ್ನು ಬಳಸಿದಷ್ಟೂ ನಿಮಗೆ ಇವುಗಳ ಬಗ್ಗೆ ಮಾಹಿತಿ ದೊರೆಯುತ್ತದೆ.
ಇನ್ನೊಂದು ಪ್ರಮುಖ ಸೆಟ್ಟಿಂಗ್ 'ಫಂಕ್ಷನ್.' ಇದರಲ್ಲಿ ಮೀಟರಿಂಗ್ ಮೋಡ್ ಬದಲಾಯಿಸಲು, ಐಎಸ್ಓ ಬದಲಾಯಿಸಲು, ಫ್ಲಾಷ್ ಸೆಟ್ಟಿಂಗ್, ವೈಟ್ ಬ್ಯಾಲೆನ್ಸ್ ಬದಲಾಯಿಸಲು, ಫೋಕಸ್ ಮೋಡ್, ಫೋಕಸ್ ಏರಿಯಾ, ಚಿತ್ರದ ಕಲರ್ ವಿನ್ಯಾಸಗಳನ್ನು ಬದಲಾಯಿಸಲು, ಎಕ್ಸ್ಪೋಷರ್ ಸೆಟ್ಟಿಂಗ್ ಬದಲಾಯಿಸಲು ಅವಕಾಶವಿದೆ.
ಇವಿಷ್ಟೆ ಅಲ್ಲದೆ ಐಎಸ್ಓ, ಶಟರ್ ಸ್ಫೀಡ್, ಅಪಾರ್ಚರ್, ತ್ವರಿತವಾಗಿ ಬದಲಾಯಿಸಲು ಬೇರೆ ರೀತಿಯ ಬಟನ್ಗಳು, ಚಕ್ರಗಳನ್ನು ನೀಡಲಾಗಿರುತ್ತದೆ. ನಿಮಗೆ ಬೇಡವಾದ ಚಿತ್ರವನ್ನು ಅಳಿಸಲು ಕೂಡ ಸಾಧ್ಯವಿದೆ. ಕ್ಲಿಕ್ಕಿಸಿದ ಚಿತ್ರದ ಗುಣಮಟ್ಟವನ್ನು ಜೂಮ್ ಮಾಡಿ ಪರೀಕ್ಷಿಸಬಹುದು. ವಿಡಿಯೋ ರೆಕಾರ್ಡಿಂಗ್ಗೆ ಬೇರೆಯದೆ ಬಟನ್ ನೀಡಲಾಗಿರುತ್ತದೆ.
ಇನ್ನೊಂದು ಮುಖ್ಯ ಬಟನ್ ಎಂದರೆ, ಅಪಾರ್ಚರ್ ಮೋಡ್, ಶಟರ್ ಸ್ಫೀಡ್ ಮೋಡ್, ಮ್ಯಾನ್ಯುಯಲ್ ಮೋಡ್, ಆಟೋ ಮೋಡ್, ವಿಡಿಯೋ ಮೋಡ್. ಕ್ಯಾಮೆರಾವನ್ನು ಯಾವ ಮೋಡಿನಲ್ಲಿಟ್ಟು ಚಿತ್ರ ಸೆರೆಹಿಡಿಯಬೇಕು ಎನ್ನುವುದನ್ನು ನಾವಿಲ್ಲಿ ನಿರ್ಧರಿಸಬಹುದು. ನಾವು ಸೆರೆಹಿಡಿಯ ಬೇಕಾದ ಚಿತ್ರವನ್ನು ಚಿತ್ರದರ್ಶಕ (View Finder)ದಲ್ಲಿಯಲ್ಲದೆ LCD/OLED ಪರದೆಯಲ್ಲೂ ನೋಡಬಹುದು.
ಇವಿಷ್ಟು ಕ್ಯಾಮೆರಾದಲ್ಲಿರುವ ಸೆಟ್ಟಿಂಗ್ ಬಟನ್ಗಳು. ಒಂದೊಂದು ಕ್ಯಾಮೆರಾದಲ್ಲೂ ಇದು ವಿಭಿನ್ನವಾಗಿದ್ದರೂ, ಅಂಕೀಯವಾಗಿದ್ದರೂ ಇಲ್ಲಿ ಹೇಳಿದಷ್ಟು ಸೆಟ್ಟಿಂಗ್ ಇದ್ದೇ ಇರುತ್ತದೆ. ಇವೆಲ್ಲವನ್ನು ಓದಿ ಇಷ್ಟೊಂದು ಸೆಟ್ಟಿಂಗ್ಗಳು ಹೇಗಪ್ಪ ಅರ್ಥಮಾಡಿಕೊಳ್ಳುವುದು ಎಂದುಕೊಳ್ಳಬೇಡಿ. ಇವುಗಳ ಬಗ್ಗೆ ಒಂದೊಂದಾಗಿ ಮುಂದೆ ತಿಳಿಯೋಣ.