- ಬಡೆಕ್ಕಿಲ ಪ್ರದೀಪ

ಟ್ರಾವೆಲ್‌ ಡೀಪ್‌

ಪ್ರಯಾಣ, ಪಂಚಪ್ರಾಣ ಅನ್ನೋರಿಗೆ, ಪ್ರವಾಸ ಮಾಡೋದೆ ನನ್‌ ಪ್ರಪಂಚ ಅನ್ನೋರಿಗೆ ಪ್ಯಾಕಿಂಗ್‌ ಅನ್ನೋದು ಒಂದೊಂದು ರೀತಿಯ ಇಮೋಶನ್ ಹುಟ್ಟುಹಾಕುತ್ತದೆ. ಕೆಲವರಿಗೆ ಪ್ಯಾಕಿಂಗ್‌ ಅಂದ್ರೆ ಟೆನ್ಶನ್‌, ಇನ್ನು ಕೆಲವರಿಗೆ ಪ್ಯಾಕಿಂಗ್‌ ಅಂದರೆ ಥೆರಪಿ. ಒಬ್ಬೊಬ್ಬರದು ಒಂದೊಂದು ಫ್ಯಾಶನ್, ಆದರೆ ಎಲ್ಲರದೂ ಒಂದೇ ಪ್ಯಾಶನ್, ಅದು ಪ್ರಯಾಣದಲ್ಲಿ ಸಿಗುವ ಮಜ.

ಈ ಬಾರಿಯ ಟೈಟಲ್ಲಿಗೂ, ಬ್ಯಾಗ್‌ ಪ್ಯಾಕ್‌ ಮಾಡುವುದಕ್ಕೂ ಸಂಬಂಧ ಇದ್ದೇ ಇದೆ. ಆದರೆ, ಅಲ್ಲಿಗೂ ಹೋಗುವ ಮುನ್ನ, ಯಾವ ಯಾವ ರೀತಿಯ ಪ್ಯಾಕಿಂಗ್‌ ಮಾಡುವವರಿದ್ದಾರೆ ಅನ್ನುವ ಬಗ್ಗೆ ಒಂದು ಇಣುಕುನೋಟ ಹಾಕಿಬರೋಣ. ಏನಂತೀರಾ?

ಇದನ್ನೂ ಓದಿ: ಬಿಟ್ಟು ಬರಬೇಡಿ, ಏನಾದರೂ ಕೊಟ್ಟು ಬನ್ನಿ!

ಕೊನೇ ಕ್ಷಣದ ಪ್ಯಾಕಿಂಗ್ vs ಪ್ಲಾನ್‌ ಮಾಡಿ ಮಾಡೋ ಪ್ಯಾಕಿಂಗ್‌

ವಾರದ ಮೊದಲೇ ಬ್ಯಾಗ್‌ ಪ್ಯಾಕಿಂಗ್‌ ಶುರು ಮಾಡುವ ಮಂದಿ, ನನ್ನ ಅಮ್ಮನ ಥರ. ನನ್ನಮ್ಮ ಇನ್ನೂ ಸ್ವಲ್ಪ ಜಾಸ್ತೀನೇ ಬಿಡಿ. ಫೆಬ್ರವರಿ ಕೊನೆಯಲ್ಲಿ ಅಯೋಧ್ಯೆ-ಕಾಶಿ ಹೋಗುವವರು ಜನವರಿಯ ಕೊನೆಯಲ್ಲೇ ಪ್ಯಾಕಿಂಗ್‌ ಶುರು ಮಾಡಿದ್ರು.

ಕೊನೆಯ ಕ್ಷಣದಲ್ಲಿ, ಇನ್ನೇನು ಗಾಡಿ ಹೊರಡತ್ತೆ ಅನ್ನುವಾಗ ಬ್ಯಾಗ್‌ ಎಲ್ಲಿದೆ ಪ್ಯಾಕ್‌ ಮಾಡೋಕೆ ಅಂತ ಹುಡುಕುವವರು, ನನ್ನ ಥರ. ಏನೇನು ಬೇಕೋ ಅದನ್ನೆಲ್ಲಾ ಹುಡುಕಿ ತುಂಬಿಸುವಾಗ ಸಿಗುವ ಥ್ರಿಲ್‌ ಒಂದು ರೀತಿ ಬೇರೆಯದೇ ಅಂತ ವಾದ ಮಾಡುವವರು.

ಕಮ್ಮಿ ಸಾಕು ಅನ್ನೋರು vs ಇನ್ನೂ ಬೇಕು ಅನ್ನೋರು

ಬ್ಯಾಗಲ್ಲಿ ಎಷ್ಟು ತುಂಬಿಸಿದರೂ ಸಾಕಾಗದವರು ತುಂಬಾ ಮಂದಿ ಇದ್ದಾರೆ ಬಿಡಿ. ಮೂರು ದಿನದ ಟ್ರಿಪ್ಪಿಗೆ ಮೂರು ವಾರದ ಬಟ್ಟೆ ಬರೆ ತುಂಬುವವರು ನಮ್ಮಲ್ಲಿ ಎಷ್ಟಿಲ್ಲ ಹೇಳಿ.

ಇನ್ನು ನನ್ನ ಬ್ಯಾಗ್‌ ಎಷ್ಟು ಕಮ್ಮಿ ಭಾರ ಇದ್ದರೂ ಸಮಾಧಾನ ಆಗದೇ ಇರುವವರೂ ಇದ್ದಾರೆ. ಮಿನಿಮಲಿಸ್ಟ್‌ ಗಳು ಅಂತ ಅವರನ್ನು ಕರೆಯೋದಾದರೂ, ಇದು ಒಂದು ರೀತಿಯಲ್ಲಿ ಒಳ್ಳೆಯದೇ. ಎರಡರಲ್ಲೂ ಅದರದೇ ಲಾಭ-ನಷ್ಟಗಳು ಇದ್ದೇ ಇವೆ ಅನ್ನೋದು ಅವರಿಗೂ ಗೊತ್ತಿದೆ. ಆದರೂ ಅದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿರುವುದಿಲ್ಲ ಬಿಡಿ.

Untitled design - 2026-05-01T204127.801

ವ್ಯವಸ್ಥೆ vs ಅವ್ಯವಸ್ಥೆ

ಕೆಲವರ ಬ್ಯಾಗ್‌ ನೋಡಿದರೆ, ಇವರು ಒಂದೊಳ್ಳೆ ಲೈಬ್ರೆರಿ ಮೇಂಟೇನ್‌ ಮಾಡಬಹುದು ಅಂತ ಅನಿಸುತ್ತೆ. ಪ್ರತಿಯೊಂದನ್ನೂ ಅಷ್ಚು ಅಚ್ಚುಕಟ್ಟಾಗಿ, ಬೇರೆ ಬೇರೆ ಪ್ಯಾಕ್‌ಗಳಲ್ಲಿ, ರೋಲ್‌ ಮಾಡಿ, ವ್ಯಾಕ್ಯೂಮ್‌ ಬ್ಯಾಗ್‌ಗಳಲ್ಲಿ ಹಾಕಿ, ವ್ಯವಸ್ಥಿತವಾಗಿ ಇಟ್ಟಿರುವುದು ನೋಡುವುದೇ ಚಂದ, ಕಣ್ಣು ಮುಚ್ಚಿ ಬೇಕಾದರೂ, ಅವರಿಗೇನು ಬೇಕು ಅನ್ನುವುದನ್ನು ಹೆಕ್ಕಿ ತೆಗೆಯಬಲ್ಲರು.

ಇನ್ನು ಕೆಲವರ ಬ್ಯಾಗ್‌ಗೂ ಡ್ರೈ ವೇಸ್ಟ್‌ಗೆ ತಯಾರಾಗಿಟ್ಟಿರುವ ಚೀಲಕ್ಕೂ ಹೋಲಿಕೆ ತುಂಬಾ ಇರುತ್ತದೆ. ಮೂರು ದಿನದ ಟ್ರಿಪ್ಪಿನ ವೇಳೆ, ಯಾವುದು ಬಳಸಿದ ಬಟ್ಟೆ, ಯಾವುದು ಫ್ರೆಶ್‌ ಅನ್ನುವುದನ್ನು, ಪಾಪ, ಮೂಸಿ ನೋಡಿಯೇ ನಿರ್ಧರಿಸುತ್ತಿರುತ್ತಾರೆ!

ಇನ್ನೂನು ತರಬೇಕಿತ್ತು vs ಬೇಕಿದ್ರೆ ತಗೊಂಡ್ರಾಯ್ತು

ಕೆಲವರ ಬ್ಯಾಗಲ್ಲಿ ಪ್ಯಾಕ್‌ ಮಾಡಲಾದ ವಸ್ತುಗಳ ಲಿಸ್ಟ್‌ ನೋಡಿದರೆ, ಅಲ್ಲಿ ಬೇಕಾದ್ದು ಬೇಡದ್ದು ಎಲ್ಲವೂ ಇರುತ್ತದೆ. ಮೆಡಿಕಲ್‌ ಕಿಟ್‌, ಎಮರ್ಜೆನ್ಸಿ ಐಟಂಗಳು, ಮರುಭೂಮಿಗೆ ಹೋದರೂ ರೇನ್‌ಕೋಟ್‌, ಹೀಗೆ, ಒಂದೋ ಎರಡೋ!

ಇನ್ನು ಹಲವರು, ಏನಾದರೂ ಬೇಕಾದರೆ ಅಲ್ಲೇ ಕೊಂಡುಕೊಂಡ್ರಾಯ್ತು. ಇಲ್ಲಿಂದ ಯಾರು ಹೊತ್ಕೊಂಡು ಹೋಗೋದು ಅಂತ, ಇದ್ದದ್ರಲ್ಲೇ ಕಡಿಮೆ ಹೊತ್ತೊಯ್ಯವವರು.

ಈ ಪಟ್ಟಿ ಇನ್ನೂ ಉದ್ದ ಇದೆ, ಆದರೆ ಇಲ್ಲಿಗೆ ಇಷ್ಟು ಸಾಕು. ಯಾಕಂದ್ರೆ ʼಲೆಸ್‌ ಇಸ್‌ ಮೋರ್‌ʼ ಅನ್ನೋ ಇಂಗ್ಲಿಷ್‌ ಮಾತಿನಂತೆ, ರುಚಿಗೆ ತಕ್ಕಷ್ಟು ಇಲ್ಲಿ ನಿಮಗಾಗಿ ಇಷ್ಟು ಮಾಹಿತಿಯನ್ನು ಪ್ಯಾಕ್‌ ಮಾಡಿದ್ದೇನೆ. ಇನ್ನು ಭಾರ ಮಾಡುವುದು ಬೇಡ, ಆದರೆ ಇಷ್ಟು ವಿಷಯಗಳನ್ನು ನಿಮ್ಮ ಮನಸಿನ ಬ್ಯಾಗಿಗೆ ತುರುಕುವುದಕ್ಕೆ ಪ್ರಯತ್ನ ಮಾಡಿದ್ದು ಹೌದು.

ಹೋಗುವ ಮುನ್ನ್‌, ಟೈಟಲ್‌ ವಿಚಾರದ ಬಗ್ಗೆ ಮಾತಾಡುವ ಸಮಯ…

5-4-3-2-1 ರೂಲ್‌ ಮಾಡಿಕೊಳ್ಳೋಣ!

ಎಲ್ಲಾ ಕಡೆ ಇದು ಉಪಯೋಗ ಆಗದಿದ್ರೂ, ನಮ್ಮ ನಿಮ್ಮ ಹೆಚ್ಚಿನೆಲ್ಲಾ ಟ್ರಿಪ್‌ಗಳಿಗೆ ಇದು ಸರಳ-ಸುಲಭ ಸೂತ್ರ ಆಗುವುದರಲ್ಲಿ ಸಂಶಯವಿಲ್ಲ.

  1. ಐದು ಟಾಪ್‌-ಬಾಟಮ್‌ಗಳು

ಐದು ವೆರೈಟಿಯ ಟಾಪ್‌ (ಶರ್ಟ್‌-ಟಿ-ಶರ್ಟ್‌-ಕುರ್ತಾ ಇತ್ಯಾದಿ), ಐದು ಬಾಟಮ್‌ (ಪ್ಯಾಂಟ್‌, ಲೆಹೆಂಗಾ, ಲೆಗಿಂಗ್ಸ್‌-ಶಾರ್ಟ್ಸ್‌ ಇತ್ಯಾದಿ)

  1. ನಾಲ್ಕು ಆಕ್ಸೆಸರಿಗಳು

ತಂಪು ಕನ್ನಡಕ, ಬೆಲ್ಟ್‌, ಶೂಗಳು ಹೀಗೆ, ಏನೇ ಆದರೂ, ನಾಲ್ಕನ್ನು ಮೀರದಂತೆ ಇಟ್ಟುಕೊಳ್ಳುವುದನ್ನು ಪ್ರಯತ್ನ ಪಡೋಣ.

  1. ಮೂರು ಕನೆಕ್ಶನ್‌ಗಳು

ಫೋನು, ಕ್ಯಾಮರ, ಪವರ್‌ ಬ್ಯಾಂಕ್‌. ಬೇಕಾಗಬಹುದು ಅಂತ ಸಿಕ್ಕೆಲ್ಲಾ ಗ್ಯಾಜೆಟ್‌ಗಳನ್ನು ಹೊತ್ತೊಯ್ಯೋದಕ್ಕಿಂತ, ಯಾವುದು ಅನಿವಾರ್ಯವೋ ಅದನ್ನು ಮಾತ್ರ ಪ್ಯಾಕ್‌ ಮಾಡಿದರೆ, ಬ್ಯಾಗಿನ ಭಾರವೂ ಕಮ್ಮಿ, ಬೆಲೆಬಾಳುವ ಗ್ಯಾಜೆಟ್‌ ಕಳೆದುಹೋಗುವ ಭಯವೂ ಕಮ್ಮಿ.

  1. ಎರಡು ವಿಶಿಷ್ಟ ವಸ್ತುಗಳು

ಈ ಎರಡು ವಸ್ತುಗಳು ನಿಮ್ಮನ್ನು ಡಿಫೈನ್‌ ಮಾಡಬೇಕು, ಅಂದರೆ, ಒಂದು ಸಂಗೀತ ಸಾಧನ ಇರಬಹುದು, ನೀವು ಓದಬಯಸುವ ಪುಸ್ತಕ ಇರಬಹುದು, ಜಪಮಾಲೆಯೂ ಆಗಿರಬಹುದು. ಎರಡನ್ನು ಮೀರದಿದ್ದರೆ ಒಳಿತು.

  1. ಒಂದು: ಒಂದಷ್ಟು ಖಾಲಿ ಜಾಗ

ಯಾವುದೇ ಟ್ರಿಪ್ಪಲ್ಲೂ ಕೊಂಡೊಯ್ಯುವಾಗ ಎಷ್ಟಿದೆಯೋ, ಅಷ್ಟನ್ನೇ ವಾಪಸ್ಸು ತರೋದಿಲ್ಲ. ಹಾಗಾಗಿ, ಒಂದಿಷ್ಟನ್ನು ತುಂಬಿಸಲು ಜಾಗ ಮೀಸಲಿಡಿ. ಆ ಖಾಲಿ ಜಾಗ, ನೀವು ತುಂಬಿ ತರುವ ಅನುಭವಕ್ಕೂ ಮೀಸಲಿಟ್ಟದ್ದು ಅಂದುಕೊಂಡರೂ ತಪ್ಪಿಲ್ಲ.

ಪಂಚ್‌-ರ್‌ ಶಾಪ್‌

ಪಶ್ಚಿಮ ಘಟ್ಟಗಳ ಚಾರಣಕ್ಕೆ ಹೊರಟ ಫ್ರೆಂಡ್‌ ಬ್ಯಾಗಲ್ಲಿ ಪೇಟ-ಧೋತಿ ನೋಡಿ ಆಶ್ಚರ್ಯ ಆಯ್ತು. ಅವನು ನೋಡಿದ್ರೆ, ಕಿಂಗ್‌ ಕೋಬ್ರಾ ಸಿಕ್ರೆ ಮ್ಯಾಚಿಂಗ್‌ ಡ್ರೆಸ್‌ ಬೇಕಲ್ಲಾ ಅನ್ಬೇಕಾ!