ಹಿಮಾಲಯದ ತಪ್ಪಲಲ್ಲಿ ಪ್ರೇಮದ ನೆಲೆ: ಲಿಂಡಾ ಅಕ್ಷರಗಳಲ್ಲಿ ತೇಲಿದ ಸಂತಸದ ಅಲೆ

ನಾನು ಭೂತಾನ್‌ಗೆ ಹೋದಾಗ, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಕೆಲವು ಪುಸ್ತಕಗಳು ಗಮನ ಸೆಳೆದವು. ಆ ಪೈಕಿ ಲಿಂಡಾ ಲೀಮಿಂಗ್ ಬರೆದ A Field Guide to Happiness: What I Learned in Bhutan about Living, Loving, and Waking Up ಮತ್ತು Married to Bhutan : How One Woman Got Lost, Said “I Do,” and Found Bliss ಕೃತಿಗಳು ಪ್ರಮುಖವಾದವು. ಲಿಂಡಾ ಭೂತಾನ್ ದೇಶದ ಕುರಿತು ಪಾಶ್ಚಿಮಾತ್ಯ ಜಗತ್ತಿಗೆ ಒಂದು ವಿಭಿನ್ನ ಮತ್ತು ಆಪ್ತವಾದ ಕಿಟಕಿಯನ್ನು ತೆರೆದುಕೊಟ್ಟ ಅಮೆರಿಕನ್ ಲೇಖಕಿ. ಅವರ ಬರಹಗಳು ಪ್ರವಾಸಿ ಕಥನಗಳ ಜತೆಗೆ ಜೀವನದ ದೃಷ್ಟಿಕೋನವನ್ನೇ ಬದಲಿಸುವ ಅನುಭವಾತ್ಮಕ ಕೃತಿಗಳು ಎನ್ನಬಹುದು. ಲಿಂಡಾ ಮೂಲತಃ ಅಮೆರಿಕದ ಟೆನೆಸ್ಸಿಯವರು. ನ್ಯಾಶ್ವಿಲ್ಲೆಯಲ್ಲಿ ಬೆಳೆದ ಅವರು ಸೃಜನಶೀಲ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆದರೆ ಅವರ ಜೀವನದ ದಿಕ್ಕು ಬದಲಾಗಿದ್ದು 1990ರ ದಶಕದ ಕೊನೆಯಲ್ಲಿ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಪ್ರವಾಸ: ಮರೆಯಾಗುತ್ತಿದೆ ಪ್ರಕೃತಿಯ ಸಹವಾಸ!

ಆಗಿನ್ನೂ ಭೂತಾನ್ ಹೊರಜಗತ್ತಿಗೆ ಸಂಪೂರ್ಣವಾಗಿ ತೆರೆದುಕೊಂಡಿರಲಿಲ್ಲ. ಆ ಸಮಯದಲ್ಲಿ ಅವರು ಭೂತಾನ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಆಗಮಿಸಿದರು. ಆ ಒಂದು ನಿರ್ಧಾರ ಅವರ ಬದುಕಿನ ಅತ್ಯಂತ ದೊಡ್ಡ ತಿರುವಾಗಿ ಪರಿಣಮಿಸಿತು. ಅಮೆರಿಕದಂಥ ಅತ್ಯಂತ ವೇಗದ ಮತ್ತು ಭೌತಿಕ ಸುಖಕ್ಕೆ ಆದ್ಯತೆ ನೀಡುವ ದೇಶದಿಂದ ಬಂದ ಲಿಂಡಾ ಅವರಿಗೆ, ಭೂತಾನ್‌ನ ಶಾಂತಿಯುತ ಮತ್ತು ಸರಳ ಬದುಕು ಆರಂಭದಲ್ಲಿ ಸವಾಲಾಗಿ ಕಂಡರೂ, ನಂತರ ಅದು ಅವರ ಆತ್ಮದ ಭಾಗವಾಯಿತು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕಿಂತ ಹೆಚ್ಚಾಗಿ, ಅಲ್ಲಿನ ಜನರ ಮನಸ್ಥಿತಿ ಮತ್ತು 'ಒಟ್ಟು ರಾಷ್ಟ್ರೀಯ ಸಂತೋಷ' (Gross National Happiness) ಎಂಬ ಪರಿಕಲ್ಪನೆ ಅವರನ್ನು ತೀವ್ರವಾಗಿ ಆಕರ್ಷಿಸಿತು. ಲಿಂಡಾ ಭೂತಾನ್ ಸೊಬಗು, ಜನಜೀವನಕ್ಕೆ ಮಾರು ಹೋಗಿ ಆ ದೇಶದೊಂದಿಗೆ ವಿವಾಹವಾದಂತೆ, ನಿಜಾರ್ಥದಲ್ಲಿ ಭೂತಾನಿಯನ್ನು ಮದುವೆ ಆದರು. ಭೂತಾನ್‌ನ ಸಾಂಪ್ರದಾಯಿಕ ಥಾಂಕ ಚಿತ್ರಕಲಾವಿದರಾದ ಫರ್ಬಾ ನಮ್ಗೆ ಅವರನ್ನು ಪ್ರೀತಿಸಿ, ಮದುವೆಯಾಗಿ ಅಲ್ಲಿಯೇ ನೆಲೆಸಿದರು.

Untitled design - 2026-05-08T121127.849

ಸಮಾಜವು ಹಣ ಮತ್ತು ಪ್ರಗತಿಯ ಹಿಂದೆ ಓಡುತ್ತಿರುವಾಗ, ಭೂತಾನ್ ಹೇಗೆ ಮಾನಸಿಕ ಶಾಂತಿ ಮತ್ತು ಪರಿಸರಕ್ಕೆ ಒತ್ತು ನೀಡುತ್ತದೆ ಎಂಬುದನ್ನು ಲಿಂಡಾ ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು. ಅವರು ಕೇವಲ ಲೇಖಕಿಯಾಗಿ ಉಳಿಯದೇ ಭೂತಾನ್‌ನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಒಬ್ಬ ಸಾಂಸ್ಕೃತಿಕ ರಾಯಭಾರಿಯೂ ಆದರು. ಅವರ ಲೇಖನಗಳು 'ದಿ ಲಂಡನ್ ಟೈಮ್ಸ್', 'ದಿ ಗಾರ್ಡಿಯನ್', 'ವುಮೆನ್ಸ್ ಏಷ್ಯಾ', 'ಲೇಡೀಸ್ ಹೋಂ ಜರ್ನಲ್' ಮತ್ತು 'ಎ ಪ್ಲೇಸ್ ಇನ್ ದಿ ಸನ್' ನಂಥ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಲಿಂಡಾ ಲೀಮಿಂಗ್ ಅವರ ಈ ಪುಸ್ತಕವನ್ನು ಓದುತ್ತಿದ್ದರೆ, ಯಾವುದೋ ಒಂದು ಮಳೆಗಾಲದ ಸಂಜೆ ಕಿಟಕಿಯ ಪಕ್ಕ ಕುಳಿತು ಹಬೆ ಏಳುವ ಚಹಾದ ಕಪ್ ಹಿಡಿದು ದೂರದ ಬೆಟ್ಟಗಳನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಈ ಪುಸ್ತಕ ಅಮೆರಿಕದ ಕಿಕ್ಕಿರಿದ ರಸ್ತೆಗಳಿಂದ ಹಿಮಾಲಯದ ನಿಶ್ಯಬ್ದಕ್ಕೆ ಜಿಗಿದ ಒಂದು ಚೇತನದ ಆತ್ಮಕಥೆ. ಪಶ್ಚಿಮದ ಗಡಿಯಾರಗಳ ಸದ್ದಿನ ನಡುವೆ ಕಳೆದುಹೋಗಿದ್ದ ಜೀವವೊಂದು, ಭೂತಾನ್ ಎಂಬ ಪುಟ್ಟ ದೇಶದ ಮಣ್ಣಿನ ವಾಸನೆಯಲ್ಲಿ ತನ್ನನ್ನು ತಾನು ಮರುಶೋಧಿಸಿಕೊಂಡ ಕಥೆಯಿದು.

Married to Bhutan ಕೃತಿಯು ಪಾಶ್ಚಿಮಾತ್ಯ ನಾಗರೀಕತೆಯ ಗದ್ದಲದಿಂದ ಬಂದ ಮಹಿಳೆಯೊಬ್ಬಳು ಭೂತಾನ್ ಎಂಬ ಪುಟ್ಟ ಹಿಮಾಲಯದ ದೇಶದ ಶಾಂತತೆ ಮತ್ತು ಸರಳತೆಗೆ ಹೇಗೆ ಮಾರುಹೋದಳು ಎಂಬುದರ ಸುಂದರ ಚಿತ್ರಣ. ಇದು ನಿಜಕ್ಕೂ ಆತ್ಮಶೋಧನೆ ಮತ್ತು ಸಾಂಸ್ಕೃತಿಕ ರೂಪಾಂತರದ ಅದ್ಭುತ ಪಯಣ. ಅಮೆರಿಕದಲ್ಲಿ ಹುಟ್ಟಿದ ಹೆಣ್ಣುಮಗಳು ಹಿಮಾಲಯದ ಮಡಿಲಲ್ಲಿರುವ ಪುಟ್ಟ ದೇಶ ಭೂತಾನ್‌ನಲ್ಲಿ ಬದುಕು ಕಟ್ಟಿಕೊಳ್ಳುವುದು ಸಣ್ಣ ಸಂಗತಿಯಲ್ಲ. ಜೀವನದ ಹೊಸ ಅರ್ಥವನ್ನು ಕಂಡುಕೊಳ್ಳಲು ಅವರು ನಡೆಸಿದ ಹೋರಾಟವನ್ನು ಈ ಪುಸ್ತಕವು ಮನೋಜ್ಞವಾಗಿ ವಿವರಿಸುತ್ತದೆ. ಪಾಶ್ಚಿಮಾತ್ಯ ನಾಗರೀಕತೆಯು ವೇಗ, ತಂತ್ರಜ್ಞಾನ ಮತ್ತು ಭೌತಿಕ ಸುಖಕ್ಕೆ ಆದ್ಯತೆ ನೀಡುತ್ತದೆ. ಲಿಂಡಾ ಇಂಥ ಪರಿಸರದಿಂದ ಭೂತಾನ್ ತಲುಪಿದಾಗ ಅವರಿಗೆ ಎದುರಾಗಿದ್ದು ಸಂಪೂರ್ಣ ಭಿನ್ನವಾದ ಜಗತ್ತು. ಭೂತಾನೀಯರು ಗಡಿಯಾರದ ಮುಳ್ಳಿನಂತೆ ಓಡುವುದಿಲ್ಲ, ಬದಲಿಗೆ ಆ ಕ್ಷಣದ ನೆಮ್ಮದಿಗೆ ಪ್ರಾಮುಖ್ಯ ನೀಡುತ್ತಾರೆ. ಈ ವ್ಯತಿರಿಕ್ತ ಜೀವನಶೈಲಿಯು ಲೇಖಕಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ.

ಲಿಂಡಾ ಭೂತಾನ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ, ಸ್ಥಳೀಯ ಕಲಾವಿದನಾದ ಫರ್ಬಾ ನಮ್ಗೆ ಎಂಬುವವರನ್ನು ಭೇಟಿಯಾಗುತ್ತಾರೆ. ಈ ಭೇಟಿಯು ಹೇಗೆ ಅವರ ಜೀವನವನ್ನೇ ಬದಲಿಸಿತು. ಪಾಶ್ಚಿಮಾತ್ಯ ಜಗತ್ತಿನ ಡೇಟಿಂಗ್ ಸಂಸ್ಕೃತಿಗೂ ಮತ್ತು ಭೂತಾನ್‌ನ ಸಂಪ್ರದಾಯಬದ್ಧ, ಸಂಕೋಚದ ಪ್ರೇಮಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಅವರಿಬ್ಬರ ಭೇಟಿ ಮತ್ತು ವಿವಾಹ ಅದು ಕೇವಲ ಇಬ್ಬರು ವ್ಯಕ್ತಿಗಳ ಭೇಟಿಯಾಗಿರಲಿಲ್ಲ. ಬದಲಿಗೆ ಪಶ್ಚಿಮದ ತರ್ಕ ಮತ್ತು ಪೂರ್ವದ ಅಧ್ಯಾತ್ಮದ ಭೇಟಿಯಾಗಿತ್ತು. ಫರ್ಬಾ ಅವರ ಮೃದು ಸ್ವಭಾವ ಮತ್ತು ಸಾಂಪ್ರದಾಯಿಕ ಬದುಕನ್ನು ಇಷ್ಟಪಡುವ ಆಸಕ್ತಿ, ಲಿಂಡಾ ಅವರನ್ನು ಆಕರ್ಷಿಸಿತು. ಈ ಪ್ರೇಮವನ್ನು ಆಕಸ್ಮಿಕ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು 'ದೈವಿಕ ಅದೃಷ್ಟ' ಎಂದು ಲಿಂಡಾ ಭಾವಿಸುತ್ತಾರೆ.

ಒಬ್ಬ ಅಮೆರಿಕನ್ ಮಹಿಳೆಯಾಗಿ, ಭೂತಾನ್‌ನ ಕಟ್ಟುನಿಟ್ಟಾದ ಸಂಪ್ರದಾಯಗಳಿಗೆ ಒಗ್ಗಿಕೊಳ್ಳುವುದು ಸುಲಭವಾಗಿರಲಿಲ್ಲ. ಫರ್ಬಾ ಅವರ ಕುಟುಂಬ ಮತ್ತು ಸಮಾಜದೊಂದಿಗೆ ಬೆರೆಯುವಾಗ ಲಿಂಡಾ ಅನೇಕ ಸಾಂಸ್ಕೃತಿಕ ಅಡೆತಡೆಗಳನ್ನು ಎದುರಿಸುತ್ತಾರೆ. ಉದಾಹರಣೆಗೆ, ಅಲ್ಲಿನ ಆಹಾರ ಪದ್ಧತಿ, ಮನೆಯೊಳಗಿನ ಆಚರಣೆಗಳು ಮತ್ತು ಸಂಬಂಧಗಳಲ್ಲಿರುವ ಮಿತಿಗಳು. ಆದರೆ ಫರ್ಬಾ ಅವರ ತಾಳ್ಮೆ ಲಿಂಡಾ ಅವರಿಗೆ ಈ ಸಂಸ್ಕೃತಿಯನ್ನು ಪ್ರೀತಿಸಲು ಕಲಿಸುತ್ತದೆ. ಪ್ರೀತಿಯು ಭಾಷೆಯನ್ನು ಮೀರಿದ್ದು.ಫರ್ಬಾ ಅವರ ಇಂಗ್ಲಿಷ್ ಜ್ಞಾನ ಕಡಿಮೆ ಇದ್ದರೂ, ಅವರ ಕಣ್ಣುಗಳು ಮತ್ತು ನಗು ಲಿಂಡಾ ಅವರಿಗೆ ಭದ್ರತೆಯ ಭಾವವನ್ನು ನೀಡುತ್ತವೆ. ಭೂತಾನ್‌ನಲ್ಲಿ ಪ್ರೀತಿ ಎಂದರೆ ಅದು ಕರ್ಮದ ಒಂದು ಭಾಗ. ಫರ್ಬಾ ಅವರೊಂದಿಗಿನ ಜೀವನದಲ್ಲಿ ಲಿಂಡಾ ಅವರು 'ಸಂತೋಷ' ಎಂದರೆ ಕೇವಲ ಸೌಲಭ್ಯಗಳಲ್ಲ, ಅದು ಮನುಷ್ಯರ ನಡುವಿನ ಬೆಸುಗೆ ಎಂಬುದನ್ನು ಅರಿಯುತ್ತಾರೆ. ಪ್ರೀತಿಯು ಕೇವಲ ಭಾವನೆಯಲ್ಲ, ಅದು ಒಂದು ಪರಿವರ್ತಕ ಶಕ್ತಿ. ಲಿಂಡಾ ಅವರು ಅಮೆರಿಕದ ತನ್ನ ಹಳೆಯ ಜೀವನವನ್ನು ಮರೆತು ಭೂತಾನ್‌ನ ಮಣ್ಣಿನ ಮಗಳಾಗಿ ಬದಲಾಗುವ ಪ್ರಕ್ರಿಯೆಯು ಪ್ರತಿಯೊಬ್ಬ ಓದುಗನಿಗೂ ಸ್ಫೂರ್ತಿ ನೀಡುತ್ತದೆ. ಸರಳತೆ, ಸಂಕೋಚ ಮತ್ತು ನಿಸ್ವಾರ್ಥತೆಯ ಮೂಲಕ ಹೇಗೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ.

Untitled design - 2026-05-08T121140.249

'ಅಮೆರಿಕದಲ್ಲಿ 'ಸಮಯ' ಎನ್ನುವುದು ಒಂದು ಶತ್ರುವಿನಂತೆ ನಮ್ಮನ್ನು ಬೆನ್ನಟ್ಟುತ್ತಿರುತ್ತದೆ. ಆದರೆ ಭೂತಾನ್‌ನಲ್ಲಿ ಫರ್ಬಾ ಅವರನ್ನು ಭೇಟಿಯಾದಾಗ 'ಕಾಯುವಿಕೆಯ ಸೌಂದರ್ಯ' ಏನೆಂಬುದು ಅರ್ಥವಾಗುತ್ತದೆ. ಭೂತಾನ್‌ನಲ್ಲಿ ಯಾರೂ ಗಡಿಯಾರ ನೋಡಿ ಪ್ರೀತಿಸುವುದಿಲ್ಲ. ಭೂತಾನ್‌ನಲ್ಲಿ ಎಲ್ಲವೂ ನಿಧಾನ. ಅಲ್ಲಿ ಮನುಷ್ಯರು 'ಓಡುವುದಿಲ್ಲ', ಬದಲಿಗೆ 'ಬಾಳುತ್ತಾರೆ'. ಲಿಂಡಾ ಅಲ್ಲಿಗೆ ಹೋದಾಗ ಅವರಿಗೆ ಮೊದಲು ಎದುರಾಗಿದ್ದೇ 'ಅನಿತ್ಯತೆ' (Impermanence). ಫರ್ಬಾ ಅವರ ಮೌನವು ಅಮೆರಿಕದ ಸಾವಿರ ಮಾತುಗಳಿಗಿಂತ ಹೆಚ್ಚು ಅರ್ಥಗರ್ಭಿತವಾಗಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿ ಭಾವನೆಗಳನ್ನು ನೇರವಾಗಿ, ಗಟ್ಟಿಯಾಗಿ ಹೇಳುವುದು ವಾಡಿಕೆ. ಆದರೆ ಫರ್ಬಾ ಅವರಲ್ಲಿ ಲಿಂಡಾ ಕಂಡದ್ದು ಒಂದು ವಿಶಿಷ್ಟವಾದ ಸಂಕೋಚ. ಅಲ್ಲಿ ಪ್ರೀತಿಯನ್ನು ಪದಗಳಲ್ಲಿ ಆಡುವ ಬದಲು, ಒಂದು ಕಪ್ ಬಿಸಿ ಚಹಾ ನೀಡುವಲ್ಲಿ ಅಥವಾ ಮೌನವಾಗಿ ಬೆಟ್ಟಗಳನ್ನು ಜತೆಯಾಗಿ ನೋಡುವಲ್ಲಿ ವ್ಯಕ್ತಪಡಿಸಲಾಗುತ್ತಿತ್ತು. 'ಈ ಸಂಕೋಚವೇ ನಮ್ಮ ಸಂಬಂಧಕ್ಕೆ ಒಂದು ಪಾವಿತ್ರ್ಯವನ್ನು ನೀಡಿತು' ಅಂತಾರೆ ಲಿಂಡಾ.

ನಾವು ಸಾಮಾನ್ಯವಾಗಿ ಬದುಕನ್ನು 'ದಕ್ಷತೆ'ಯಿಂದ ಅಳೆಯುತ್ತೇವೆ. ಎಷ್ಟು ಕೆಲಸ ಮುಗಿಸಿದೆವು? ಟಾರ್ಗೆಟ್ ರೀಚ್ ಆದೆವಾ? ಎಷ್ಟು ಹಣ ಗಳಿಸಿದೆವು? ಆದರೆ ಲಿಂಡಾ ಭೂತಾನ್‌ನಲ್ಲಿ ಕಲಿತ ಪಾಠವೇ ಬೇರೆ. ಅಲ್ಲಿನ ಜನರಿಗೆ ಸಮಯ ಎನ್ನುವುದು ಒಂದು ಹೊಳೆಯಂತೆ, ಅದು ಹರಿಯುತ್ತಲೇ ಇರುತ್ತದೆ. ಅಲ್ಲಿ ಯಾವುದೋ ಸರಕಾರಿ ಕಚೇರಿಯಲ್ಲಿ ಸಾಲಿನಲ್ಲಿ ನಿಂತಾಗ ಅಥವಾ ರಸ್ತೆಯಲ್ಲಿ ಗಾಡಿ ಕೆಟ್ಟು ನಿಂತಾಗ ಯಾರೂ ಕೂಗಾಡುವುದಿಲ್ಲ. ಲಿಂಡಾ ಅವರಿಗೆ ಆರಂಭದಲ್ಲಿ ಇದು ವಿಪರೀತ ಕಿರಿಕಿರಿ ಉಂಟುಮಾಡುತ್ತದೆ. ಆದರೆ ಮೆಲ್ಲನೆ ಅವರಿಗೆ ಅರ್ಥವಾಗುತ್ತದೆ— ಈ 'ನಿಧಾನಗತಿ'ಯಲ್ಲಿಯೇ ಒಂದು ರೀತಿಯ ಘನತೆ ಇದೆ. ಬದುಕುವುದು ಎಂದರೆ ಕೇವಲ ಗುರಿ ತಲುಪುವುದಲ್ಲ, ಆ ಹಾದಿಯಲ್ಲಿ ಸಿಗುವ ಮನುಷ್ಯರ ಮುಗುಳ್ನಗು ಮತ್ತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದು. ನಾನು ಎಲ್ಲಿದ್ದೀನೋ ಅಲ್ಲಿಯೇ ನನ್ನ ಸ್ವರ್ಗವಿದೆ. ನನ್ನ ಹಟಗಳು, ನನ್ನ ಅಹಂಕಾರಗಳು ಕರಗಿ ಹೋದಾಗ ಮಾತ್ರ ಬದುಕು ಹಗುರವಾಗುತ್ತದೆ.

'ಅಮೆರಿಕದ ಐಷಾರಾಮಿ ಜೀವನ ಬಿಟ್ಟು ಈ ಕುಗ್ರಾಮದಲ್ಲಿ ಹೇಗೆ ಬದುಕುತ್ತೀರಿ?' ಎಂದು ಲಿಂಡಾ ಅವರನ್ನು ಕೇಳಿದಾಗ ಅವರು ಹೇಳುವುದು - 'ಅಲ್ಲಿ ನನ್ನ ಬಳಿ ಬಟ್ಟೆಗಳನ್ನು ತೊಳೆಯುವ ವಾಷಿಂಗ್ ಮೆಷಿನ್ ಇರಬಹುದು, ಆದರೆ ಇಲ್ಲಿ ನನ್ನ ಮನಸ್ಸನ್ನು ಶುದ್ಧೀಕರಿಸುವ ಪ್ರಶಾಂತತೆ ಇದೆ. ಅಲ್ಲಿ ನನ್ನ ಬಳಿ ದೊಡ್ಡ ಕಾರು ಇರಬಹುದು, ಆದರೆ ಇಲ್ಲಿ ಫರ್ಬಾ ಜತೆ ಕೈಹಿಡಿದು ನಡೆಯುವಾಗ ಸಿಗುವ ಸುರಕ್ಷಿತ ಭಾವನೆ ಬೇರೆಲ್ಲಿಯೂ ಸಿಗದು. ನಾನು ಭೂತಾನ್‌ಗೆ ಬಂದದ್ದು ಇಂಗ್ಲಿಷ್ ಕಲಿಸಲು, ಆದರೆ ನಿಜವಾಗಿ ನಾನು ಅಲ್ಲಿಗೆ ಬಂದಿದ್ದು ಜೀವನವನ್ನು ಕಲಿಯಲು. ಫರ್ಬಾ ಭೇಟಿ ಆಕಸ್ಮಿಕವಲ್ಲ. ಅದು ನನ್ನ ಆತ್ಮವು ಹಿಂದಿನಿಂದಲೂ ಹಂಬಲಿಸುತ್ತಿದ್ದ ತಾಣವನ್ನು ತಲುಪಿದ ಕ್ಷಣ. ಅದೃಷ್ಟ ಎಂದರೆ ಲಾಟರಿ ಹೊಡೆಯುವುದಲ್ಲ ಅಥವಾ ಶ್ರೀಮಂತ ಜೀವನವಲ್ಲ. ಮನಸ್ಸಿಗೆ ಒಪ್ಪುವ ಮನುಷ್ಯನ ಜತೆ, ಪ್ರಕೃತಿಯ ಮಡಲಲ್ಲಿ, ಯಾವುದೇ ಆಡಂಬರವಿಲ್ಲದೆ ಬದುಕುವುದೇ ಜಗತ್ತಿನ ಅತ್ಯಂತ ದೊಡ್ಡ ಅದೃಷ್ಟ. ನಮ್ಮ ಜೀವನದ ಗದ್ದಲವನ್ನು ಕಡಿಮೆ ಮಾಡಿದಾಗ ಮಾತ್ರ, ನಮ್ಮ ಒಳಗಿನ ಮತ್ತು ಹೊರಗಿನ ನಿಜವಾದ ಪ್ರೀತಿಯ ಧ್ವನಿ ನಮಗೆ ಕೇಳಿಸಲು ಸಾಧ್ಯ. ಆ ದನಿ ನನಗೆ ನಿರಂತರ ಕೇಳಿಸುತ್ತಲೇ ಇರುತ್ತದೆ.'

ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮದುವೆ ಎಂದರೆ ತಿಂಗಳುಗಟ್ಟಲೆ ನಡೆಯುವ ಯೋಜನೆಗಳು, ದುಬಾರಿ ಗೌನ್‌ಗಳು, ಹೋಟೆಲ್ ಬುಕಿಂಗ್‌ಗಳು ಮತ್ತು ಅತಿಥಿಗಳ ಪಟ್ಟಿಗಳದ್ದೇ ಕಾರುಬಾರು. ಆದರೆ ಭೂತಾನ್‌ನಲ್ಲಿ ಮದುವೆಗೆ ಇಂಥ ಯಾವುದೇ ಭೌತಿಕ ಹಂಗುಗಳಿಲ್ಲ. ಭೂತಾನ್‌ನಲ್ಲಿ ಮದುವೆ ಎನ್ನುವುದು ಪ್ರದರ್ಶನದ ವಸ್ತುವಲ್ಲ; ಅದು ಜೀವನದ ಸಹಜ ಪ್ರಕ್ರಿಯೆ. ಅಲ್ಲಿ ದೊಡ್ಡ ಚರ್ಚ್‌ಗಳಿಲ್ಲ ಅಥವಾ ಕಾನೂನುಬದ್ಧ ಸಂಕೀರ್ಣ ಪೇಪರ್‌ಗಳ ಗದ್ದಲವಿಲ್ಲ. ಭೂತಾನಿ ಸಂಸ್ಕೃತಿಯಲ್ಲಿ ಇಬ್ಬರು ವ್ಯಕ್ತಿಗಳು ಒಂದಾಗುತ್ತಾರೆ ಎಂದರೆ ಅದು ಕೇವಲ ಈ ಜನ್ಮದ ನಿರ್ಧಾರವಲ್ಲ, ಬದಲಿಗೆ ಅದು 'ಕರ್ಮ'ದ ಫಲ. ಲಿಂಡಾ ಮತ್ತು ಫರ್ಬಾ ಒಂದಾದಾಗ, ಅಲ್ಲಿನ ಜನರು ಅದನ್ನು ಹಣೆಬರಹ ಅಥವಾ ಪೂರ್ವಜನ್ಮದ ನಂಟು ಎಂದು ಕಂಡರು. ಪಾಶ್ಚಿಮಾತ್ಯ ಜಗತ್ತಿನಲ್ಲಿ ಮದುವೆಗೆ ವೈಯಕ್ತಿಕ ಇಷ್ಟ-ಕಷ್ಟಗಳ ತರ್ಕವಿದ್ದರೆ, ಭೂತಾನ್‌ನಲ್ಲಿ ಪ್ರಕೃತಿ ಮತ್ತು ವಿಧಿಯ ಇಚ್ಛೆಗೆ ಶರಣಾಗುವ ಭಾವನೆಯಿದೆ. ಈ ನಂಬಿಕೆಯು ದಂಪತಿಗಳ ನಡುವೆ ಒಂದು ರೀತಿಯ ಭಕ್ತಿ ಮತ್ತು ಪರಸ್ಪರ ಗೌರವವನ್ನು ಹುಟ್ಟುಹಾಕುತ್ತದೆ.

ಮದುವೆಯ ಸಂಭ್ರಮಕ್ಕಿಂತಲೂ ಅಲ್ಲಿ ಮಠಗಳಲ್ಲಿ (Lhakhangs) ನಡೆಯುವ ಪೂಜೆ ಮತ್ತು ಲಾಮಾ (ಗುರು)ಗಳ ಆಶೀರ್ವಾದಕ್ಕೆ ಹೆಚ್ಚಿನ ಬೆಲೆ ಇದೆ. ಮಂತ್ರಗಳ ಪಠಣ, ತುಪ್ಪದ ದೀಪಗಳ ಬೆಳಗುವಿಕೆ ಮತ್ತು ಪ್ರಾರ್ಥನೆಗಳ ನಡುವೆ ನಡೆಯುವ ಈ ಪ್ರಕ್ರಿಯೆಯು ಮನಸ್ಸಿಗೆ ಒಂದು ರೀತಿಯ ಅಲೌಕಿಕ ಶಾಂತಿಯನ್ನು ನೀಡುತ್ತದೆ. ಇದು ಕಾನೂನುಬದ್ಧ ಸಹಿಗಿಂತಲೂ ಮಿಗಿಲಾದ ನೈತಿಕ ಮತ್ತು ಆಧ್ಯಾತ್ಮಿಕ ಬದ್ಧತೆಯನ್ನು ದಂಪತಿಗಳಲ್ಲಿ ಮೂಡಿಸುತ್ತದೆ. ಲಿಂಡಾ ಅವರಿಗೆ ಭೂತಾನ್‌ನಲ್ಲಿ ಮದುವೆಯಾದಾಗ ಸಿಕ್ಕಿದ್ದು ದೊಡ್ಡ ಉಡುಗೊರೆಗಳಲ್ಲ, ಬದಲಿಗೆ ಸಮುದಾಯದ ಪ್ರೀತಿ ಮತ್ತು ಸರಳವಾದ ಆಶೀರ್ವಾದಗಳು. ಅಲ್ಲಿನ ಮದುವೆಯಲ್ಲಿ ಯಾರು ಏನು ಉಟ್ಟಿದ್ದಾರೆ ಅಥವಾ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬ ಚರ್ಚೆ ಇರುವುದಿಲ್ಲ. ಬದಲಿಗೆ, ಹೊಸ ದಂಪತಿಗಳು ಹೇಗೆ ನೆಮ್ಮದಿಯಿಂದ ಬದುಕುತ್ತಾರೆ ಎಂಬ ಹಾರೈಕೆ ಮಾತ್ರ ಇರುತ್ತದೆ. ಭೂತಾನಿಗಳು ಸಣ್ಣ ಸಣ್ಣ ವಿಷಯಗಳಿಗೂ ದೇವರಿಗೆ ಧನ್ಯವಾದ ಅರ್ಪಿಸುತ್ತಾರೆ. ಮದುವೆಯಂಥ ಪವಿತ್ರ ಬಂಧದಲ್ಲಿ 'ನಾನು' ಎನ್ನುವುದಕ್ಕಿಂತ 'ನಾವು' ಮತ್ತು 'ನಮ್ಮ ಸುತ್ತಲಿನ ಪ್ರಕೃತಿ' ಎಂಬ ಭಾವನೆ ಹಾಸುಹೊಕ್ಕಾಗಿದೆ. ಭೂತಾನ್‌ನಲ್ಲಿ ಎಲ್ಲೂ ಅವಸರ ಕಾಣುವುದಿಲ್ಲ. ಅಲ್ಲಿ ಎಲ್ಲವೂ ಅದರದ್ದೇ ಆದ ಲಯದಲ್ಲಿ ನಡೆಯುತ್ತದೆ.

Untitled design - 2026-05-08T121146.863

ಭೂತಾನ್ ಸಂಸ್ಕೃತಿಯಲ್ಲಿ ಪ್ರೀತಿಯು ಒಂದು ಘೋಷಣೆಯಲ್ಲ, ಅದು ಒಂದು 'ಅಭ್ಯಾಸ'. ಗಂಡ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಪದಗಳಲ್ಲಿ ಹೇಳದಿದ್ದರೂ, ಅವರ ಪ್ರತಿ ನಡೆಯೂ ಅದನ್ನು ಸಾಬೀತುಪಡಿಸುತ್ತದೆ. ಬೆಳಗ್ಗೆ ಎದ್ದು ತಯಾರಿಸುವ ಬಿಸಿ ಚಹಾ, ಲಿಂಡಾ ಅವರ ಸುರಕ್ಷತೆಯ ಬಗ್ಗೆ ಇರುವ ಅತೀವ ಕಾಳಜಿ ಮತ್ತು ಅವರ ಕಲಾಕೃತಿಗಳಲ್ಲಿ ಬಿಂಬಿತವಾಗುವ ತಾಳ್ಮೆ—ಇವೆಲ್ಲವೂ ಸಾವಿರಾರು I Love You ಗಳಿಗಿಂತ ಹೆಚ್ಚು ಪ್ರಭಾವಶಾಲಿ. ಭಾಷೆ ಎನ್ನುವುದು ಮೆದುಳಿನಿಂದ ಬರುವಂಥದ್ದು. ಅದಕ್ಕೆ ವ್ಯಾಕರಣ, ಪದಕೋಶ ಮತ್ತು ತರ್ಕದ ಹಂಗು ಇರುತ್ತದೆ. ಆದರೆ ಪ್ರೀತಿ ಎನ್ನುವುದು ಆತ್ಮದಿಂದ ಉಕ್ಕುವಂಥದ್ದು. ಅವರಿಬ್ಬರ ನಡುವೆ ಭಾಷೆಯ ಸೇತುವೆ ಇಲ್ಲದಿದ್ದರೂ, ಆತ್ಮಗಳ ನಡುವೆ ನೇರ ಸಂಪರ್ಕವಿತ್ತು. ಪದಗಳು ಇಲ್ಲದಿದ್ದಾಗ ಮನುಷ್ಯ ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಾನೆ. ಲಿಂಡಾ ತಮ್ಮ ಪತಿಯ ಕಣ್ಣುಗಳಲ್ಲಿನ ಕಾಳಜಿಯನ್ನು ಓದುತ್ತಿದ್ದರು, ಇದು ಯಾವುದೇ ಡಿಕ್ಷನರಿಗೂ ಅರ್ಥವಾಗದ ಭಾಷೆ.

ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮೌನ ಎಂದರೆ ಹೆಚ್ಚಾಗಿ 'ಹೇಳಲು ಏನೂ ಇಲ್ಲ' ಅಥವಾ 'ಬೇಸರ' ಎಂದು ಅರ್ಥೈಸಲಾಗುತ್ತದೆ. ಆದರೆ ಭೂತಾನ್‌ನಲ್ಲಿ ಮೌನವು ಭದ್ರತೆಯ ಸಂಕೇತ. ಲಿಂಡಾ ಅವರಿಗೆ ಗಂಡ ನೀಡಿದ ದೊಡ್ಡ ಉಡುಗೊರೆಯೆಂದರೆ ಆ ಮೌನದ ನಡುವೆಯೂ ಇರುವ ಆಪ್ತತೆ. ಯಾವುದೇ ಮಾತುಗಳಿಲ್ಲದೇ ಗಂಟೆಗಟ್ಟಲೆ ಜತೆಯಾಗಿರುವುದು, ಒಬ್ಬರ ಅಸ್ತಿತ್ವವನ್ನು ಇನ್ನೊಬ್ಬರು ಗೌರವಿಸುವುದು ಪ್ರೀತಿಯ ಪರಮಾವಧಿ. ಪ್ರೀತಿ ಎಂಬುದು ಭಾಷೆಯ ಗಡಿಗಳನ್ನು ಮೀರಿ ನಿಲ್ಲುವ ಅದ್ಭುತ ಶಕ್ತಿ. ನಿಜವಾದ ಪ್ರೀತಿಗೆ ಶಬ್ದಗಳ ಹಂಗಿಲ್ಲ, ಅಲ್ಲಿ ಕೇವಲ ಭಾವನೆಗಳ ತರಂಗಾಂತರಗಳು ಒಂದಾದರೆ ಸಾಕು. ಈ ಮೌನ ಸಂವಹನವೇ ಭೂತಾನ್ ಸಂಸ್ಕೃತಿಯ ಸೌಂದರ್ಯ ಎಂಬುದನ್ನು ಲಿಂಡಾ ಇಲ್ಲಿ ಮನವರಿಕೆ ಮಾಡಿಕೊಡುತ್ತಾರೆ.

ಭೂತಾನ್‌ನಾದ್ಯಂತ ಕಂಡುಬರುವ ಬಣ್ಣಬಣ್ಣದ 'ಪ್ರಾರ್ಥನಾ ಧ್ವಜಗಳು' ಲಿಂಡಾ ಅವರ ಮೇಲೆ ಗಾಢವಾದ ಪ್ರಭಾವ ಬೀರಿದವು. ಈ ಧ್ವಜಗಳು ಗಾಳಿಯಲ್ಲಿ ಹಾರಾಡುತ್ತಾ ಶಾಂತಿ ಮತ್ತು ಮರುಕದ ಮಂತ್ರಗಳನ್ನು ಜಗತ್ತಿಗೆ ಹರಡುತ್ತವೆ ಎಂಬ ನಂಬಿಕೆ ಅಲ್ಲಿಯದು. ಲಿಂಡಾ ಅವರು ತಮ್ಮ ವೈವಾಹಿಕ ಜೀವನವನ್ನು ಈ ಧ್ವಜಗಳಿಗೆ ಹೋಲಿಸುತ್ತಾರೆ—ಹೇಗೆ ಧ್ವಜಗಳು ಗಾಳಿಗೆ ತಕ್ಕಂತೆ ಅಲುಗಾಡುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆಯೋ, ಹಾಗೆಯೇ ದಾಂಪತ್ಯವೂ ಏರಿಳಿತಗಳ ನಡುವೆ ಶಾಂತವಾಗಿರಬೇಕು ಎಂಬುದನ್ನು ಅವರು ಅಲ್ಲಿನ ಪರಿಸರದಿಂದ ಕಲಿಯುತ್ತಾರೆ. ಬೌದ್ಧ ಮಠಗಳಿಂದ ಕೇಳಿಬರುವ ಮಂತ್ರಘೋಷಗಳು ಮತ್ತು ಅಲ್ಲಿನ ಗಂಟಾನಾದವು ಲಿಂಡಾ ಅವರ ಮನಸ್ಸಿನಲ್ಲಿದ್ದ ಗೊಂದಲಗಳನ್ನು ನಿವಾರಿಸಿದವು. ಮದುವೆ ಎಂದರೆ ಕೇವಲ ಒಟ್ಟಿಗೆ ಇರುವುದಲ್ಲ, ಬದಲಿಗೆ ಪರಸ್ಪರರ ಆಂತರಿಕ ಶಾಂತಿಯನ್ನು ಗೌರವಿಸುವುದು. ಜೀವನದ ಪ್ರತಿ ಕ್ಷಣವೂ ಕ್ಷಣಿಕ, ಹಾಗಾಗಿ ಇರುವ ಕ್ಷಣದಲ್ಲಿ ಪರಸ್ಪರರಿಗೆ ಎಷ್ಟು ಪ್ರೀತಿ ನೀಡಲು ಸಾಧ್ಯವೋ ಅಷ್ಟು ನೀಡುವುದೇ ಜೀವನದ ಸಾರ್ಥಕತೆ.

ಭೂತಾನ್ ಸಂಸ್ಕೃತಿಯಲ್ಲಿ ಮರಣದ ಬಗ್ಗೆ ಮಾತನಾಡುವುದು ಅಮಂಗಲವಲ್ಲ. ಬದಲಿಗೆ, ಸಾವು ಸದಾ ನಮ್ಮ ಜತೆಗೇ ಇರುತ್ತದೆ ಎಂಬ ಅರಿವು ಅಲ್ಲಿನ ಜನರಿಗೆ ಇದೆ. ನಾವು ನಾಳೆ ಇರುತ್ತೇವೋ ಇಲ್ಲವೋ ಎಂಬ ಅರಿವು ಇದ್ದಾಗ ಮಾತ್ರ, ಇಂದು ನಮ್ಮ ಎದುರಿರುವ ವ್ಯಕ್ತಿಯನ್ನು ನಾವು ಪೂರ್ಣ ಪ್ರಮಾಣದಲ್ಲಿ ಪ್ರೀತಿಸಲು ಸಾಧ್ಯ. ಭೂತಾನ್‌ನಲ್ಲಿ ಮದುವೆಗೆ ಯಾವುದೇ ಕಟ್ಟುನಿಟ್ಟಾದ 'ಡೆಡ್‌ಲೈನ್' ಇಲ್ಲ. ಅಮೆರಿಕದಲ್ಲಿ ಮದುವೆ ಮುರಿದುಬೀಳುವ ಭೀತಿ ಅಥವಾ ಅದನ್ನು ಉಳಿಸಿಕೊಳ್ಳುವ ಒತ್ತಡ ಹೆಚ್ಚಿರುತ್ತದೆ. ಆದರೆ ಭೂತಾನ್‌ನಲ್ಲಿ, ಇಬ್ಬರು ವ್ಯಕ್ತಿಗಳು ಜತೆಗಿದ್ದಾರೆ ಎಂದರೆ ಅದು ವಿಧಿಯ ಆಟ. ಭೂತಾನ್‌ನಲ್ಲಿ 'ಬದುಕಿರುವವರೆಗೆ' ಎನ್ನುವುದು ಒಂದು ಒತ್ತಡದ ಭರವಸೆಯಲ್ಲ, ಬದಲಿಗೆ ಅದೊಂದು ಸಹಜ ಹರಿವು. ಭೂತಾನಿ ನಂಬಿಕೆಯ ಪ್ರಕಾರ, ಈ ಜನ್ಮದಲ್ಲಿ ಪ್ರೀತಿಸಿದವರು ಮುಂದಿನ ಜನ್ಮದಲ್ಲೂ ಯಾವುದೋ ಒಂದು ರೂಪದಲ್ಲಿ ಭೇಟಿಯಾಗುತ್ತಾರೆ. ಹೀಗಾಗಿ, 'As long as we both shall live' ಎಂಬುದು ಕೇವಲ ಈ ಶರೀರದ ಅಂತ್ಯಕ್ಕೆ ಮುಗಿಯುವ ಕಥೆಯಲ್ಲ. ಅದು ಸಾವನ್ನೂ ಮೀರಿ ಬೆಳೆಯುವ ಆತ್ಮದ ಪಯಣ. ಪ್ರೀತಿಯನ್ನು ಹಿಡಿದಿಟ್ಟುಕೊಳ್ಳುವ ಆತುರಕ್ಕಿಂತ, ಅದನ್ನು ಮುಕ್ತವಾಗಿ ಹರಿಯಲು ಬಿಡುವುದರಲ್ಲಿ ನಿಜವಾದ ಸುಖವಿದೆ. ಭೂತಾನ್‌ನ ಮಣ್ಣು, ಗಾಳಿ ಮತ್ತು ಅಲ್ಲಿನ ದೈವಿಕ ಪರಿಸರವು ಅವರಿಗೆ ಮದುವೆ ಎನ್ನುವುದು ದೈಹಿಕ ಬಂಧನಕ್ಕಿಂತ ಹೆಚ್ಚಾಗಿ, ಎರಡು ಮುಕ್ತ ಆತ್ಮಗಳ ಸುಂದರ ನೃತ್ಯ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಟ್ಟಿದೆ.

ಲಿಂಡಾ ತಮ್ಮ ಪುಸ್ತಕದಲ್ಲಿ ಒಂದು ಕಡೆ ಹೇಳುತ್ತಾರೆ - 'ನಮ್ಮ ಬಳಿ ಇರುವ ವಸ್ತುಗಳೇ ನಮಗೆ ಹೊರೆಯಾಗತೊಡಗುತ್ತವೆ. ಅಮೆರಿಕದಂಥ ದೇಶದಲ್ಲಿ 'ಹೆಚ್ಚು' ಎನ್ನುವುದೇ ಯಶಸ್ಸಿನ ಮಾಪನ. ಆದರೆ ಭೂತಾನ್‌ನಲ್ಲಿ ನಾನು ಕಲಿತದ್ದು ಏನೆಂದರೆ, ನಮ್ಮ ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಂಡಷ್ಟೂ ನಮಗೆ ಆಂತರಿಕ ಸ್ವಾತಂತ್ರ್ಯ ಸಿಗುತ್ತದೆ. ಅಲ್ಲಿನ ಮನೆಗಳು, ಆಹಾರ ಮತ್ತು ಜೀವನಶೈಲಿ ಎಲ್ಲವೂ ಅತ್ಯಂತ ಕನಿಷ್ಠ (Minimalist) ಆದರೆ ಅತ್ಯಂತ ಅರ್ಥಪೂರ್ಣ. ಹಿಮಾಲಯದ ಚಳಿ ಮತ್ತು ಕಠಿಣ ಹವಾಮಾನವು ಮನುಷ್ಯರನ್ನು ಪರಸ್ಪರ ಹತ್ತಿರ ತರುತ್ತವೆ. ಸಣ್ಣ ಬೆಂಕಿಯ ಮುಂದೆ ಕುಳಿತು ಹರಟೆ ಹೊಡೆಯುವುದು, ಬೆಚ್ಚಗಿನ ಚಹಾವನ್ನು ಹಂಚಿಕೊಳ್ಳುವುದು—ಇಂಥ ಸಣ್ಣ ಸಂಗತಿಗಳೇ ಬದುಕಿನ ಅತಿದೊಡ್ಡ ಸಂತೋಷಗಳು. ಅಮೆರಿಕದ 'ಹವಾನಿಯಂತ್ರಿತ' ಕೃತಕ ಸುಖಕ್ಕಿಂತ, ಪ್ರಕೃತಿಯ ಕಾಠಿಣ್ಯದ ನಡುವಿನ ಈ 'ನೈಜ ಸುಖ' ಹೆಚ್ಚು ಪ್ರಿಯವಾಗುತ್ತದೆ.

ಲಿಂಡಾ ಅವರ ಮೊದಲ ಕೃತಿ 'Married to Bhutan' ಒಂದು ಸುಂದರವಾದ ಮುನ್ನುಡಿಯಂತೆ ಕಂಡರೆ, ಅದರ ಮುಂದುವರಿದ ಭಾಗದಂತೆ 'A Field Guide to Happiness' ಕೃತಿ ಆ ಕಥೆಗೆ ಸಿಕ್ಕ ಅಪರೂಪದ ರಾಗಮಾಲಿಕೆಯಂತೆ ಭಾಸವಾಗುತ್ತದೆ. ಇದು ಕೇವಲ ಒಂದು ಪುಸ್ತಕದ ಮುಂದುವರಿಕೆಯಲ್ಲ, ಬದಲಿಗೆ ಮಳೆಯ ಹನಿಗಳು ಕೆರೆಯ ನೀರನ್ನು ಸೇರಿದ ಮೇಲೆ ಅಲ್ಲಿ ಏಳುವ ಅಲೆಗಳ ವಿಸ್ತಾರ. ಮೊದಲ ಪುಸ್ತಕದಲ್ಲಿ ಭೂತಾನ್ ದೇಶದ ಪ್ರವೇಶದ ಬಗ್ಗೆ ಹೇಳಿದರೆ, 'A Field Guide to Happiness' ನಲ್ಲಿ ಲಿಂಡಾ ಕೇವಲ ಒಬ್ಬ ಪ್ರವಾಸಿಗಳಷ್ಟೇ ಅಲ್ಲ, ಬದಲಿಗೆ ಆ ಹಿಮಾಲಯದ ಗಾಳಿಯನ್ನೇ ಉಸಿರಾಡುವ ಮನೆಮಗಳಂತೆ ಗೋಚರಿಸುತ್ತಾಳೆ. ಭೂತಾನ್‌ನ ಬಗ್ಗೆ ಲಿಂಡಾ ಈ ಕೃತಿಯಲ್ಲಿ ಹೆಚ್ಚು ಅಧಿಕಾರವಾಣಿಯಲ್ಲಿ ಮಾತಾಡುತ್ತಾರೆ. ಹೀಗಾಗಿ ಈ ಕೃತಿಯಲ್ಲಿ ಭೂತಾನ್ ಹೆಚ್ಚು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಹಾದಿಯಲ್ಲಿ ಯಾರೋ ಅಪರಿಚಿತರು ನಿಮ್ಮನ್ನು ನೋಡಿ ಮುಗುಳ್ನಗುತ್ತಾರಲ್ಲ, ಆ ನಗುವಿನಲ್ಲಿ ಜಗತ್ತಿನ ಎಲ್ಲ ಆಸ್ತಿಗಿಂತ ಹೆಚ್ಚಿನ ಐಶ್ವರ್ಯವಿದೆ. ಅಲ್ಲಿನ ಜನರಿಗೆ ಸಮಯ ಎನ್ನುವುದು ಯಾರಿಗೂ ಮಾರಾಟ ಮಾಡಲಿಕ್ಕಿರುವ ವಸ್ತುವಲ್ಲ. ಯಾರೋ ದಾರಿ ಕೇಳಿದರೆ, ಅವರು ಕೇವಲ ಕೈಸನ್ನೆ ಮಾಡುವುದಿಲ್ಲ. ಬದಲಿಗೆ ನಿಮ್ಮ ಜತೆ ಹೆಜ್ಜೆ ಹಾಕಿ, ಹರಟೆ ಹೊಡೆಯುತ್ತಾ ನೀವು ತಲುಪಬೇಕಾದ ಜಾಗಕ್ಕೆ ಬಿಟ್ಟು ಬರುತ್ತಾರೆ. ಇದಕ್ಕಿಂತ ದೊಡ್ಡ ದಾನ ಇನ್ನೇನಿದೆ? ತನ್ನ ಪಾಲಿನ ಅಮೂಲ್ಯವಾದ 'ಸಮಯ'ವನ್ನು ನಿಮಗಾಗಿ ಧಾರೆ ಎರೆಯುವುದು ಅಲ್ಲಿನವರಿಗೆ ಅತ್ಯಂತ ಸಹಜವಾದ ಕ್ರಿಯೆ.

ಪಾಶ್ಚಿಮಾತ್ಯ ಜಗತ್ತಿನಲ್ಲಿ 'ಸಮಯವೇ ಹಣ' (Time is Money). ಅಲ್ಲಿ ಯಾರಿಗಾದರೂ ಸ್ವಲ್ಪ ಸಮಯ ನೀಡುವುದು ಕೂಡ ದೊಡ್ಡ ಲೆಕ್ಕಾಚಾರದ ಭಾಗವಾಗಿರುತ್ತದೆ. ಆದರೆ ಭೂತಾನ್‌ನಲ್ಲಿ ಒಬ್ಬರಿಗಾಗಿ ಸಮಯ ಮೀಸಲಿಡುವುದೇ ಅಲ್ಲಿನ ಅತಿದೊಡ್ಡ ಔದಾರ್ಯ. ಇಲ್ಲಿ ಸಮಯವನ್ನು 'ಖರ್ಚು' ಮಾಡಲಾಗುವುದಿಲ್ಲ, ಬದಲಿಗೆ ಮನುಷ್ಯ ಸಂಬಂಧಗಳಿಗಾಗಿ 'ಹೂಡಿಕೆ' ಮಾಡಲಾಗುತ್ತದೆ.

ಲಿಂಡಾ ಅವರು ಭೂತಾನ್‌ನಲ್ಲಿ ಗಮನಿಸಿದ ಒಂದು ವಿಶೇಷ ಅಂಶವೆಂದರೆ, ನಮ್ಮ ಯಾಂತ್ರಿಕ ಬದುಕಿನಲ್ಲಿ ನಾವು ಬೇರೆಯವರ ಮಾತನ್ನು ಕೇಳಿಸಿಕೊಳ್ಳುತ್ತೇವೆ, ಆದರೆ ಅದನ್ನು ಗ್ರಹಿಸುವುದಿಲ್ಲ. ಆದರೆ ಭೂತಾನೀಯರು ಮಾತನಾಡುವಾಗ ನೀಡುವ ಸಂಪೂರ್ಣ ಗಮನ ವಿಶೇಷವಾದುದು. ಒಬ್ಬರ ಸುಖ-ದುಃಖಗಳನ್ನು ಯಾವುದೇ ತೀರ್ಪು ನೀಡದೇ, ತಾಳ್ಮೆಯಿಂದ ಕೇಳಿಸಿಕೊಳ್ಳುವುದು ಅಲ್ಲಿನ ಔದಾರ್ಯದ ಒಂದು ಭಾಗ. ಈ ಗುಣವು ಮನುಷ್ಯರಲ್ಲಿ ಒಂಟಿತನವನ್ನು ಹೋಗಲಾಡಿಸಿ, ಭದ್ರತೆಯ ಭಾವವನ್ನು ಮೂಡಿಸುತ್ತದೆ. ಔದಾರ್ಯ ಎಂದರೆ ಕೇವಲ ವಸ್ತುಗಳನ್ನು ನೀಡುವುದಲ್ಲ, ಬದಲಾಗಿ ನಮ್ಮಲ್ಲಿರುವ ಪ್ರೀತಿ ಮತ್ತು ಸಮಾಧಾನವನ್ನು ಇತರರಿಗೆ ಹಂಚುವುದು. ಭೂತಾನ್‌ನ ಜನರು ತಮ್ಮ ನೆಮ್ಮದಿಯನ್ನೇ ಇತರರಿಗೆ ಆಶೀರ್ವಾದದ ರೂಪದಲ್ಲಿ ನೀಡುತ್ತಾರೆ. ಅಲ್ಲಿನ ಪ್ರಾರ್ಥನಾ ಧ್ವಜಗಳು ಕೂಡ 'ಜಗತ್ತಿನ ಎಲ್ಲ ಜೀವಿಗಳಿಗೂ ಒಳ್ಳೆಯದಾಗಲಿ' ಎಂಬ ಉದಾರ ಹಾರೈಕೆಯನ್ನೇ ಗಾಳಿಯಲ್ಲಿ ಹರಡುತ್ತವೆ. ನಮಗೆ ಉದಾರವಾಗಿರಲು ಹಣದ ಅಗತ್ಯವಿಲ್ಲ, ಕೇವಲ ವಿಶಾಲ ಮನಸ್ಸಿದ್ದರೆ ಸಾಕು. ಮನುಷ್ಯತ್ವದ ಸಣ್ಣ ಸಣ್ಣ ಕ್ರಿಯೆಗಳೇ ಜಗತ್ತಿನ ಅತಿದೊಡ್ಡ ಔದಾರ್ಯ ಎಂಬುದು ಭೂತಾನ್ ನಮಗೆ ಕಲಿಸುವ ಜೀವನದರ್ಶನ ಅಂತಾರೆ ಲಿಂಡಾ.

ಅಷ್ಟೇ ಅಲ್ಲ, ಭೂತಾನ್‌ನಲ್ಲಿ 'ಔದಾರ್ಯ' ಎನ್ನುವುದು ಕೇವಲ ವೈಯಕ್ತಿಕ ಗುಣವಲ್ಲ. ಅದೊಂದು ಸಾಮಾಜಿಕ ಪ್ರಕ್ರಿಯೆ. ಒಬ್ಬ ವ್ಯಕ್ತಿ ಅಪರಿಚಿತನಿಗೆ ಅಥವಾ ನೆರೆಹೊರೆಯವನಿಗೆ ತೋರುವ ಒಂದು ಸಣ್ಣ ಸಹಾಯ ಅಥವಾ ಪ್ರೀತಿಯ ಮಾತು, ಆ ವ್ಯಕ್ತಿಯಲ್ಲಿ ಹೊಸ ಉತ್ಸಾಹವನ್ನು ತುಂಬುತ್ತದೆ. ಆ ಸಮಾಧಾನದ ಭಾವದಿಂದ ಪ್ರೇರಿತನಾದ ಆ ವ್ಯಕ್ತಿ, ತನಗರಿವಿಲ್ಲದಂತೆಯೇ ಮತ್ತೊಬ್ಬರಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಹೀಗೆ ಒಳ್ಳೆಯತನವು ಒಂದು ಸರಪಳಿಯಂತೆ ಇಡೀ ಸಮಾಜದಲ್ಲಿ ಹರಡುತ್ತಾ ಹೋಗುತ್ತದೆ. ರೋಗದಂತೆ 'ನಗು' ಮತ್ತು 'ನೆಮ್ಮದಿ' ಕೂಡ ಸಾಂಕ್ರಾಮಿಕ. ಭೂತಾನ್‌ನ ರಸ್ತೆಗಳಲ್ಲಿ ಸಿಗುವ ಜನರ ಮುಗುಳ್ನಗು ಕೇವಲ ಒಂದು ಕ್ಷಣದ ಪ್ರತಿಕ್ರಿಯೆಯಲ್ಲ. ಅದು ಎದುರಿಗಿರುವವರ ದಿನವನ್ನೇ ಸುಂದರಗೊಳಿಸುವ ಶಕ್ತಿಯನ್ನು ಹೊಂದಿದೆ. ಒಬ್ಬರ ಉದಾರ ಗುಣವು ಇನ್ನೊಬ್ಬರೊಳಗಿನ ಕಾಠಿಣ್ಯವನ್ನು ಕರಗಿಸುತ್ತದೆ. ಲಿಂಡಾ ಅವರು ಅಮೆರಿಕದ ಸ್ಪರ್ಧಾತ್ಮಕ ಬದುಕಿನಲ್ಲಿ ಈ ಗುಣವನ್ನು ಕಾಣದೇ ಪರದಾಡಿದ್ದರು, ಆದರೆ ಭೂತಾನ್‌ನಲ್ಲಿ ಇದು ಗಾಳಿಯಂತೆ ಎಲ್ಲೆಡೆ ಹರಡಿರುವುದನ್ನು ಕಂಡು ವಿಸ್ಮಿತರಾಗುತ್ತಾರೆ. ನಮ್ಮೊಳಗಿನ ಒಳ್ಳೆಯತನವನ್ನು ನಾವು ಹಂಚಿಕೊಂಡಾಗ ಮಾತ್ರ ಅದು ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು.

ಭೂತಾನಿ ಸಂಸ್ಕೃತಿಯ ಈ ವಿಶಿಷ್ಟ ಗುಣವನ್ನು ಲಿಂಡಾ ಲೀಮಿಂಗ್ ಅವರು ಅತ್ಯಂತ ಆಳವಾದ ಗೌರವದೊಂದಿಗೆ ಚಿತ್ರಿಸಿದ್ದಾರೆ. ಅವರ ಪ್ರಕಾರ, ಭೂತಾನ್‌ನಲ್ಲಿ 'ಇಲ್ಲ' ಎನ್ನುವುದು ಕೇವಲ ಒಂದು ನಿಷೇಧಾತ್ಮಕ ಪದವಲ್ಲ, ಬದಲಿಗೆ ಅದು ಮನುಷ್ಯ ಸಂಬಂಧಗಳ ನಡುವೆ ಅಡ್ಡಬರುವ ಒಂದು ಗೋಡೆ. ಭೂತಾನೀಯರು ಈ ಗೋಡೆಯನ್ನು ಕಟ್ಟಲು ಇಷ್ಟಪಡುವುದಿಲ್ಲ. ಆಧುನಿಕ ಜಗತ್ತು 'ನಾನು' ಮತ್ತು 'ನನ್ನ ಪ್ರಗತಿ' ಎನ್ನುವ ಅಹಂಕಾರದ ಸುತ್ತ ಸುತ್ತುತ್ತಿದ್ದರೆ, ಭೂತಾನ್‌ನ ಜನಜೀವನ 'ಮೊದಲು ನೀನು' ಎಂಬ ತತ್ವದ ಮೇಲೆ ನಿಂತಿದೆ. ಭೂತಾನಿಗಳಿಗೆ ತಮ್ಮ ಕೆಲಸಕ್ಕಿಂತ ಎದುರಿಗಿರುವ ಮನುಷ್ಯನ ಅಗತ್ಯವೇ ದೊಡ್ಡದಾಗಿ ಕಾಣುತ್ತದೆ.

ಇದು ಕೇವಲ ಔಪಚಾರಿಕತೆಯಲ್ಲ, ಅದು ಅವರ ರಕ್ತಗತವಾಗಿ ಬಂದ ಸಂಸ್ಕಾರ. ನಾವು ಸಾಮಾನ್ಯವಾಗಿ 'ಇಲ್ಲ' ಎಂದು ಹೇಳುವುದು ನಮ್ಮ ಸಮಯ ಅಥವಾ ಸಂಪತ್ತನ್ನು ಉಳಿಸಿಕೊಳ್ಳುವ ಹಂಬಲದಿಂದ. ಆದರೆ ಭೂತಾನ್‌ನಲ್ಲಿ ಜನರು ಸಹಾಯ ಹಸ್ತ ಚಾಚುವ ಮೂಲಕ ತಮ್ಮೊಳಗಿನ 'ಅಹಂಕಾರ'ವನ್ನು ಕರಗಿಸಿಕೊಳ್ಳುತ್ತಾರೆ. ಬೇರೆಯವರಿಗೆ ಉಪಯುಕ್ತವಾಗುವುದು ತಮ್ಮ ಆತ್ಮಕ್ಕೆ ಮಾಡುವ ದೊಡ್ಡ ಸೇವೆ ಎಂದು ಅವರು ನಂಬುತ್ತಾರೆ. ಲಿಂಡಾ ಬರೆಯುವಂತೆ, ಅಲ್ಲಿ ಸಹಾಯ ಮಾಡುವುದು ಎನ್ನುವುದು ಒಂದು 'ಉಪಕಾರ'ವಲ್ಲ, ಅದು ಬದುಕಿನ ಒಂದು 'ಸಹಜ ಕ್ರಿಯೆ'. 'ನನಗೆ ಸಾಧ್ಯವಿಲ್ಲ' ಎನ್ನುವ ಬದಲು 'ನಾನು ಹೇಗೆ ಸಹಾಯ ಮಾಡಲಿ?' ಎಂದು ಯೋಚಿಸುವ ಅವರ ಮನೋಭಾವವೇ ಆ ದೇಶದ ಪ್ರೀತಿಯಲ್ಲಿ ಬೀಳುವಂತೆ ಮಾಡಿತು ಅಂತಾರೆ ಲಿಂಡಾ.

ಭೂತಾನ್‌ನಲ್ಲಿ ಜನರು ಬೆಳಗ್ಗೆ ಎದ್ದ ತಕ್ಷಣ ತಮಗೆ ಸಿಕ್ಕ ಈ ಸುಂದರ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ, ಆ ಪ್ರಾರ್ಥನೆಯೇ ಅವರನ್ನು ಇಡೀ ದಿನ ಇತರರೊಂದಿಗೆ ಮೃದುವಾಗಿ ವರ್ತಿಸುವಂತೆ ಮಾಡುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಪ್ರತಿಯೊಂದಕ್ಕೂ ಬೆಲೆ ಕಟ್ಟುತ್ತೇವೆ. 'ಬೆಲೆ ಕಟ್ಟಲಾಗದ ವಸ್ತುಗಳೇ ಜೀವನದಲ್ಲಿ ಅತ್ಯಂತ ಅಮೂಲ್ಯವಾದುವು.' ಒಂದು ಕಿರುನಗೆ, ಒಂದು ಒಳ್ಳೆಯ ಮಾತು ಅಥವಾ ಯಾರಿಗಾದರೂ ನೀಡುವ ಸಣ್ಣ ಸಹಾಯವು ದೊಡ್ಡ ಬದಲಾವಣೆಯನ್ನು ತರಬಲ್ಲದು. ಈ ಔದಾರ್ಯ ನಮ್ಮ ಸುತ್ತಲಿನ ವಾತಾವರಣವನ್ನು ಸಕಾರಾತ್ಮಕವಾಗಿ ಬದಲಿಸುತ್ತದೆ.

ಇದನ್ನೂ ಓದಿ: ಹೋಗದ ಊರಿನ ಸುದೀರ್ಘ ಹೆಸರು: ಅಕ್ಷರಗಳ ನಡುವೆ ಭಾವಗಳ ಉಸಿರು

ಪಾಶ್ಚಿಮಾತ್ಯ ಜಗತ್ತಿನಲ್ಲಿ ನಾವು ಪ್ರತಿಯೊಂದನ್ನೂ ಪ್ಲಾನ್ ಮಾಡುತ್ತೇವೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಮ್ಮ ವೇಳಾಪಟ್ಟಿ ಸಿದ್ಧವಿರುತ್ತದೆ. ಒಂದು ವೇಳೆ ಆ ಪ್ಲಾನ್‌ನಲ್ಲಿ ಸಣ್ಣ ವ್ಯತ್ಯಾಸವಾದರೂ ನಮಗೆ ಸಿಟ್ಟು ಬರುತ್ತದೆ. ಆದರೆ ಭೂತಾನ್‌ನಲ್ಲಿ 'ಯೋಜನೆಗಳು ಬದಲಾಗುವುದೇ ಒಂದು ಯೋಜನೆ'. ರಸ್ತೆ ಕುಸಿತವಾಗಿ ದಾರಿ ಬಂದ್ ಆದಾಗ ಅಥವಾ ವಾಹನ ಕೆಟ್ಟಾಗ ಅಲ್ಲಿನ ಜನರು ಗಾಬರಿಯಾಗುವುದಿಲ್ಲ. ಬದಲಾಗಿ, 'ಸರಿ, ಈಗ ಇಲ್ಲಿ ಚಹಾ ಕುಡಿಯುತ್ತಾ ಪ್ರಕೃತಿಯನ್ನು ಸವಿಯೋಣ' ಎಂದು ಸುಮ್ಮನಾಗುತ್ತಾರೆ. ಯಾವುದೂ ಆಕಸ್ಮಿಕವಲ್ಲ, ಎಲ್ಲವೂ ನಡೆಯಬೇಕಾದ ಸಮಯಕ್ಕೇ ನಡೆಯುತ್ತಿದೆ ಎಂಬ ನಂಬಿಕೆ ಅವರದು.

ನಮಗೆ ಏನಾದರೂ ಕೆಟ್ಟದಾದಾಗ 'ಇದು ಯಾಕೆ ಆಯಿತು?' ಎಂದು ತರ್ಕ ಮಾಡುತ್ತೇವೆ. ಆದರೆ ಭೂತಾನೀಯರು ಘಟನೆಗಳನ್ನು ವಿಶ್ಲೇಷಿಸುವ ಬದಲು ಅವುಗಳನ್ನು ಒಪ್ಪಿಕೊಳ್ಳುತ್ತಾರೆ. ಯಾವುದೋ ಒಂದು ಬಸ್ ಮಿಸ್ ಆಯಿತು ಎಂದರೆ, ಆ ಬಸ್‌ನಲ್ಲಿ ಹೋಗಿದ್ದರೆ ಏನೋ ಅಪಾಯ ಕಾದಿತ್ತೇನೋ ಅಥವಾ ಮಿಸ್ ಆಗಿದ್ದರಿಂದಲೇ ನಮಗೆ ಇನ್ನೊಬ್ಬ ಒಳ್ಳೆಯ ವ್ಯಕ್ತಿಯ ಪರಿಚಯವಾಯಿತೇನೋ ಎಂಬ ಸಕಾರಾತ್ಮಕ ಚಿಂತನೆ ಅವರಲ್ಲಿರುತ್ತದೆ. 'ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯಗಳ ಬಗ್ಗೆ ಚಿಂತಿಸುವುದು ವ್ಯರ್ಥ' ಎಂಬುದು ಅವರ ಧೋರಣೆ.

ಲಿಂಡಾ ಲೀಮಿಂಗ್ ಈ ಪ್ರವಾಸ ಕಥನವು ಕೇವಲ ಒಂದು ದೇಶದ ಬಗ್ಗೆಯಲ್ಲ, ಅದು ನಮ್ಮದೇ ಒಳಗಿನ ಅನ್ವೇಷಣೆಯ ಕಥನ. ನಾವು ಯಾಕೆ ಇಷ್ಟು ಗದ್ದಲದಲ್ಲಿ ಬದುಕುತ್ತಿದ್ದೇವೆ? ನಾವು ಯಾರನ್ನು ಖುಷಿಪಡಿಸಲು ಇಷ್ಟೆಲ್ಲ ಕಷ್ಟಪಡುತ್ತೇವೆ? ನಾವು ನಮ್ಮನ್ನೇ ಹಿಂದಕ್ಕೆ ಹಾಕಿ ಮುಂದೆ ಮುಂದೆ ಓಡುವುದು ಯಾವ ತಾಣ ತಲುಪಲು? ನಮ್ಮೊಳಗೂ ಒಂದು ಭೂತಾನ್ ಇಲ್ಲವೇ? ಇಂಥ ನೂರಾರು ಪ್ರಶ್ನೆಗಳನ್ನು ಮನಸಿನಲ್ಲಿ ಮೂಡಿಸುವ ಈ ಕೃತಿಗಳು, ಅವುಗಳಿಗೆ ಪರಿಹಾರವಾಗಿ ನಮ್ಮಲ್ಲಿ ಸಮಾಧಾನದ ಸಾಂತ್ವನವನ್ನು ಚಿಮುಕಿಸುತ್ತವೆ. ಇದು ಬಾಳಿನ ಸಣ್ಣ ಪುಟ್ಟ ಸೌಂದರ್ಯಗಳನ್ನು ಪ್ರೀತಿಸಲು ಕಲಿಸುವ ಒಂದು 'ಪ್ರೀತಿಯ ಕೈಪಿಡಿ' ಎನ್ನಬಹುದು.