ಮನುಷ್ಯನ ದೈಹಿಕ ಶಕ್ತಿ - ಪ್ರಕೃತಿಯ ಅಪ್ರತಿಮ ಸೌಂದರ್ಯದ ಜುಗಲ್‌ಬಂದಿ!

ಪಗಸಂಜನ್ ಫಾಲ್ಸ್ !

ಅಂದು ನಾವು ಫಿಲಿಪ್ಪೈನ್ಸ್‌ನ ರಾಜಧಾನಿ ಮನಿಲಾದಿಂದ ಸುಮಾರು ನೂರು ಕಿಮೀ ದೂರದಲ್ಲಿರುವ ಈ ಜಲಪಾತಕ್ಕೆ ಹೋಗುವ ಕಾರ್ಯಕ್ರಮವಿತ್ತು. ಕೆಲವೊಮ್ಮೆ ನಾನು ಹೋಗುವ ಜಾಗದ ಬಗ್ಗೆ ಯಾವ ವಿವರವನ್ನೂ ನೋಡಲು ಹೋಗುವುದಿಲ್ಲ. ಮೊದಲೇ ಎಲ್ಲ ಮಾಹಿತಿ ಕಲೆ ಹಾಕಿಕೊಂಡರೆ, ಅಲ್ಲಿ ಯಾವ ಅಚ್ಚರಿಯೂ ಇರುವದಿಲ್ಲ. ಅಂಥದ್ದೊಂದು ಕುತೂಹಲ ನನ್ನೊಳಗೆ ಬೆಚ್ಚಗಿರಲಿ ಎಂಬ ಕಾರಣಕ್ಕೆ ಈ ಜಲಪಾತದ ಬಗ್ಗೆ ಏನನ್ನೂ ಮೊದಲೇ ತಿಳಿದುಕೊಳ್ಳಲು ಹೋಗಲಿಲ್ಲ. ಮಾಹಿತಿ ಕಲೆಹಾಕುವುದಕ್ಕಿಂತ ಹೆಚ್ಚಾಗಿ, ಅಲ್ಲಿನ ಪರಿಸರವನ್ನು ನೇರವಾಗಿ ಕಂಡು ಉಂಟಾಗುವ ಆ ಕ್ಷಣದ ರೋಮಾಂಚನವೇ ನನಗೆ ಮುಖ್ಯವಾಗಿತ್ತು. ಯಾವುದೇ ನಿರೀಕ್ಷೆಯಿಲ್ಲದೇ ಹೋದ ಕಾರಣ, ಅಲ್ಲಿನ ಸಿದ್ಧತೆಗಳೇ ನನಗೆ ಮೊದಲ ಆಶ್ಚರ್ಯದ ಉಡುಗೊರೆಯಾಗಿದ್ದವು.

ಇದನ್ನೂ ಓದಿ: ಒಂದು ದೇಶದ ರಾಜಧಾನಿ ಎರಡು ದೇಶಗಳ ಗಡಿಯೊಂದಿಗೆ ಹಂಚಿಕೊಂಡಾಗ!

ಅಂದು ಬೆಳಗ್ಗೆ ನದಿಯ ದಡಕ್ಕೆ ಬಂದಾಗ ಸಾಲು ಸಾಲಾಗಿ ನಿಂತಿರುವ 'ಬಂಕಾ' ಎಂಬ ಕಿರಿದಾದ ದೋಣಿಗಳು ನಮ್ಮನ್ನು ಸ್ವಾಗತಿಸಿದವು. ಈ ದೋಣಿಗಳು ಎಷ್ಟು ಕಿರಿದಾಗಿರುತ್ತವೆ ಎಂದರೆ, ನೀವು ಸ್ವಲ್ಪ ಅತ್ತಿತ್ತ ಸರಿದರೂ ದೋಣಿ ಉಲ್ಟಾ ಆಗುವ ಭಯ ಕಾಡುತ್ತದೆ. ಹೆಚ್ಚೆಂದರೆ ಆ ದೋಣಿಯಲ್ಲಿ ಮೂವರು ಪ್ರವಾಸಿಗರು ಮತ್ತು ಇಬ್ಬರು ಚಾಲಕರು (ಹುಟ್ಟು ಹಾಕುವವರು) ಕುಳಿತುಕೊಳ್ಳಬಹುದು. ಆ ದೋಣಿ ಮಧ್ಯದಲ್ಲಿ ಸುಮಾರು ಮೂರು ಅಡಿ ಅಗಲವಿರಬಹುದು. ಅಷ್ಟು ಕಿರಿದಾದ ದೋಣಿ. ಅಲ್ಲಿ ಕುಳಿತುಕೊಳ್ಳುವವರು ಸದಾ ಬ್ಯಾಲೆನ್ಸ್ ಮಾಡುತ್ತಲೇ ಇರಬೇಕು. ಸ್ವಲ್ಪ ಹೊರಳಾಡಿದರೂ, ಮಗುಚಿಬಿಡಬಹುದು. ಅದರಲ್ಲಿ ಕುಳಿತುಕೊಳ್ಳುವಾಗಲೇ ಎಂಥವರಿಗಾದರೂ ನಡುಕವಾಗುತ್ತದೆ. ಈ ಫಾಲ್ಸ್ ನೋಡಲು ಹೋಗುವ ದೋಣಿ ಪಯಣ, ಕೇವಲ ನೋಡುವುದಲ್ಲ, ಅನುಭವಿಸಬೇಕಾದ ಮಹಾಸಾಹಸ ಎಂಬ ಸಣ್ಣ ಅರಿವೂ ನನಗಿರಲಿಲ್ಲ.

Untitled design (17)

ನಮ್ಮ ದೋಣಿ ನದಿ ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಸಾಗಲಾರಂಭಿಸಿತು. ದೋಣಿ ಚಾಲಕರು ಜೋರಾಗಿ ಹುಟ್ಟು ಹಾಕಲಾರಂಭಿಸಿದರು. ದೋಣಿ ವೇಗ ಸ್ವಲ್ಪ ಕುಂಠಿತವಾದರೂ, ಅದು ಮಗುಚಬಹುದಾ ಎಂಬ ಭಯ ಕಾಡುತ್ತಿತ್ತು. ಆದರೆ ಆ ನದಿ ನೀರಿನಲ್ಲಿ ಅಲ್ಲಲ್ಲಿ ಮಕ್ಕಳು ಈಜುವುದನ್ನು ನೋಡಿ, ನದಿ ಆಳ ಹೆಚ್ಚು ಇರಲಿಕ್ಕಿಲ್ಲ ಎಂದು ತುಸು ಸಮಾಧಾನವಾಯಿತು. ಈ ಪಯಣದ ನಿಜವಾದ ಹೀರೊಗಳೆಂದರೆ ದೋಣಿ ಚಾಲಕರು. ಸಾಮಾನ್ಯವಾಗಿ ಯಾವುದೇ ನದಿ ಪ್ರವಾಸದಲ್ಲಿ ದೋಣಿಗಳು ನೀರಿನ ಹರಿವಿನ ಜತೆ ಸಲೀಸಾಗಿ ಸಾಗುತ್ತವೆ, ಆದರೆ ಇಲ್ಲಿನ ಕಥೆಯೇ ಬೇರೆ. ಇಲ್ಲಿ ದೋಣಿಯು ನದಿಯ ಉಗಮ ಸ್ಥಾನದ ಕಡೆಗೆ, ಅಂದರೆ ಅತ್ಯಂತ ವೇಗವಾಗಿ ಹರಿಯುವ ನೀರಿನ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಈ ಹಂತದಲ್ಲಿ ಪ್ರಕೃತಿಯ ಶಕ್ತಿಗೂ ಮನುಷ್ಯನ ಜಿಗುಟು ಸಾಹಸಕ್ಕೂ ನಡುವೆ ಒಂದು ದೊಡ್ಡ ಸಮರವೇ ನಡೆಯುತ್ತದೆ.

ಇಲ್ಲಿ ದೋಣಿ ನಡೆಸಲು ಯಾವುದೇ ಆಧುನಿಕ ಎಂಜಿನ್‌ಗಳ ಸಹಾಯವಿಲ್ಲ. ಕೇವಲ ಮನುಷ್ಯನ ತೋಳಬಲ ಮತ್ತು ದೃಢ ಸಂಕಲ್ಪವನ್ನೇ ನಂಬಿ ಈ ಯಾನ ಶುರುವಾಗುತ್ತದೆ. ಇಬ್ಬರು ಚಾಲಕರು ದೋಣಿಯ ಎರಡು ತುದಿಗಳಲ್ಲಿ ನಿಂತು, ತಮ್ಮ ಇಡೀ ದೇಹದ ತೂಕವನ್ನು ಬಳಸಿ ದೋಣಿಯನ್ನು ಮುನ್ನಡೆಸುತ್ತಾರೆ. ಅವರ ಪ್ರತಿಯೊಂದು ಸ್ನಾಯುವೂ ನೀರಿನ ಸೆಳೆತಕ್ಕೆ ವಿರುದ್ಧವಾಗಿ ಹೋರಾಡುವುದನ್ನು ನೋಡಿದಾಗ ನಮಗೆ ಅವರ ಶ್ರಮದ ಅರಿವಾಗುತ್ತದೆ. ನಮ್ಮ ದೋಣಿ ನದಿಯಲ್ಲಿ ಸುಮಾರು ಒಂದು-ಒಂದೂವರೆ ಕಿಮೀ ಕ್ರಮಿಸಿದ ಬಳಿಕ, ನದಿಯ ಅಗಲ ಅಚಾನಕ್ಕಾಗಿ ಕಡಿಮೆಯಾಗಿ ಸಣ್ಣ ಕಾಲುವೆಯಷ್ಟು ಕಿರಿದಾಗುತ್ತದೆ. ಮೇಲಿಂದ ಬರುವ ನದಿ ಐದಾರು ಕಾಲುವೆಯಾಗಿ ಹರಿದು ಹಂಚಿಹೋಗುತ್ತದೆ. ಅಂಥ ಕಡೆಗಳೆಲ್ಲ ನೀರಿನ ಆಳ ಹೆಚ್ಚೆಂದರೆ ಮೂರು ಅಡಿ. ಕಾಲುವೆಯ ಬದುವಿಗೆ ಸಣ್ಣ ಸಣ್ಣ ಕಲ್ಲು ಬಂಡೆಗಳು. ಇವುಗಳನ್ನು ಬಳಸಿಯೇ ದೋಣಿ ನೀರು ಹರಿಯುವ ವಿರುದ್ಧ ದಿಕ್ಕಿಗೆ ಚಲಿಸುತ್ತಿರುತ್ತದೆ.

ಹೀಗೆ ಚಲಿಸುವಾಗ ದೋಣಿಯ ತಳಕ್ಕೆ ಕಲ್ಲುಗಳು ತಾಕುವುದು, ಅಣೆಯುವ ಅನುಭವವಾಗುತ್ತದೆ. ಯಾವ ಸನ್ನಿವೇಶದಲ್ಲೂ ನಾವು ಕೈಗಳನ್ನು ದೋಣಿಯ ಹೊರಗಿಟ್ಟುಕೊಳ್ಳುವಂತಿಲ್ಲ. ಕಾರಣ ದೋಣಿ ಅಕ್ಕಪಕ್ಕದ ಕಲ್ಲು ಬಂಡೆಗಳಿಗೆ ಸವರಿಕೊಂಡು ಸಾಗುತ್ತಿರುತ್ತದೆ. ಕೆಲವು ತಾಣಗಳಲ್ಲಿ ದೋಣಿ ಹೋಗುವಾಗ ಸಾಕಷ್ಟು ನೀರಿಲ್ಲದೇ, ಏರಿನಲ್ಲಿ ನಿಂತು ಬಿಡುತ್ತದೆ. ಆಗ ಚಾಲಕರು ಕೆಳಗೆ ನೀರಿಗಿಳಿದು ದೋಣಿಯನ್ನು ಅನಾಮತ್ತು ತಳ್ಳುತ್ತಾರೆ. ಬಂಡೆಗಳ ಮೇಲೆ ಕಾಲಿಟ್ಟು, ದೋಣಿಯನ್ನು ಅಕ್ಷರಶಃ ಮೇಲೆಕ್ಕೆತ್ತಿ ನೂಕುತ್ತಾರೆ. ಕೆಲವೆಡೆ ನೀರು ಸಣ್ಣ ಝರಿಯಂತೆ ಧುಮುಕುವ ಕಡೆ ಎರಡೂ ಕಡೆಗಳಲ್ಲಿ ಕಬ್ಬಿಣದ ಪೈಪ್ ಗಳನ್ನಿಟ್ಟು ದೋಣಿಯನ್ನು ಅದರ ಮೇಲೆ ತೆಗೆದುಕೊಂಡು ಹೋಗುತ್ತಾರೆ. ಆಗ ದೋಣಿ ನೀರಿನಿಂದ ಮೇಲೆದ್ದು ಚಲಿಸುತ್ತದೆ. 'ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು' ಎಂಬ ಹಾಡನ್ನು ಸುಳ್ಳಾಗಿಸುವಂತೆ, ದೋಣಿ ನೀರನ್ನು ಬಿಟ್ಟು ಅದರ ಮೇಲೆ ಹಾಕಿದ ಪೈಪ್ ಮೇಲೆ (ಗಾಳಿಯಲ್ಲಿ) ಚಲಿಸಲಾರಂಭಿಸುತ್ತದೆ.

ಹೊರಟ ಒಂದು ಕಿಮೀ ನಂತರ ಯಾವ ಕಡೆಯೂ ದೋಣಿಯ ಹಾದಿ ಸುಗಮವಾಗಿಲ್ಲ. ಇಲ್ಲಿ ಯಾವುದೇ ಎಂಜಿನ್ ಕೆಲಸ ಮಾಡುವುದಿಲ್ಲ, ಕೇವಲ ಮಾನವನ ಮಾಂಸಖಂಡಗಳ ಬಲವೊಂದೇ ದಾರಿ. ಚಾಲಕರು ಬಂಡೆಗಳ ಮೇಲೆ ಕಾಲಿಟ್ಟು, ದೋಣಿಯನ್ನು ಎತ್ತಿ, ನೀರಿನ ಸೆಳೆತಕ್ಕೆ ವಿರುದ್ಧವಾಗಿ ನೂಕುತ್ತಿದ್ದರೆ, ಅವರ ಶ್ರಮಕ್ಕೆ ಮನಸ್ಸು ಸಲಾಮು ಹೊಡೆಯುತ್ತದೆ. ಅವರು ಬಂಡೆಗಳ ಮೇಲೆ ಹಾರುವ ರೀತಿ ನೋಡಿದರೆ ಸ್ಪೈಡರ್ ಮ್ಯಾನ್ ಕೂಡ ಒಂದು ಕ್ಷಣ ಮೂಕವಿಸ್ಮಿತನಾಗಬಹುದು.

Untitled design (16)

ದೋಣಿ ನದಿಯ ಆಳಕ್ಕೆ ಸಾಗುತ್ತಿದ್ದಂತೆ ನಮ್ಮ ಸುತ್ತಲಿನ ಜಗತ್ತೇ ಬದಲಾದಂತೆ ಭಾಸವಾಗುತ್ತದೆ. ನದಿಯ ಎರಡೂ ಬದಿಗಳಲ್ಲಿ ನೂರಾರು ಅಡಿ ಎತ್ತರದ ಭೀಮಕಾಯದ ಕಂದಕಗಳು (Gorges) ಎದ್ದು ನಿಂತಿರುತ್ತವೆ. ಈ ಬೃಹತ್ ಗೋಡೆಗಳನ್ನು ನೋಡುತ್ತಿದ್ದರೆ, ಪ್ರಕೃತಿಯು ನಮಗಾಗಿ ಒಂದು ರಹಸ್ಯ ಹಾದಿಯನ್ನು ನಿರ್ಮಿಸಿದೆಯೇನೋ ಎಂದು ಅನ್ನಿಸುತ್ತದೆ. ಆ ಕಂದಕಗಳ ಮೇಲಿನಿಂದ ಹಸಿರು ಬಳ್ಳಿಗಳು ಜಲಪಾತದಂತೆ ಕೆಳಕ್ಕೆ ಇಳಿದುಬಂದಿದ್ದು, ಇಡೀ ಪರಿಸರಕ್ಕೆ ಒಂದು ಮಾಂತ್ರಿಕ ಮೆರುಗನ್ನು ನೀಡುತ್ತವೆ.

ಈ ಕಡಿದಾದ ಗೋಡೆಗಳ ಮೇಲಿನಿಂದ ಅಲ್ಲಲ್ಲಿ ಸಣ್ಣ ಸಣ್ಣ ಹನಿ ಜಲಪಾತಗಳು ಮುತ್ತಿನ ಹನಿಗಳಂತೆ ಪ್ರವಾಸಿಗರ ಮೇಲೆ ಉದುರುತ್ತವೆ. ಆ ತಂಪಾದ ಹನಿಗಳು ಮೈ ಸೋಕಿದಾಗ ಆಗುವ ಆನಂದ ಒಂದೆಡೆಯಾದರೆ, ದೋಣಿ ಸಾಗುವ ಹಾದಿಯಲ್ಲಿ ಎದುರಾಗುವ ಬೃಹತ್ ಬಂಡೆಗಳು ಮತ್ತೊಂದೆಡೆ ಆತಂಕ ಮೂಡಿಸುತ್ತವೆ. 'ಮುಂದಿನ ಕ್ಷಣ ದೋಣಿ ಯಾವ ಬಂಡೆಗೆ ಗುದ್ದುತ್ತದೋ' ಎಂಬ ಭಯದ ನಡುವೆಯೂ, ಕಣ್ಣೆದುರು ಬಿಚ್ಚಿಕೊಳ್ಳುವ ಪ್ರಕೃತಿಯ ಈ ಅಗಾಧ ಸೌಂದರ್ಯ ನಮ್ಮನ್ನು ಮೌನವಾಗಿಸುತ್ತದೆ, ಬೆರಗುಗೊಳಿಸುತ್ತದೆ. ಈ ಅದ್ಭುತ ಪಯಣದಲ್ಲಿ ಸೌಂದರ್ಯ ಮತ್ತು ಸಾಹಸ ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಎದುರಾಗುತ್ತವೆ. ಆ ಕಂದಕಗಳ ನಡುವಿನ ಪ್ರಯಾಣವು ಜೀವನದ ಅನಿಶ್ಚಿತತೆ ಮತ್ತು ಮಹಾದಾನಂದವನ್ನು ಏಕಕಾಲದಲ್ಲಿ ನೆನಪಿಸುತ್ತದೆ.

ನದಿಯ ಬಂಡೆಗಳ ಮೇಲೆ ಆ ದೋಣಿ ಚಾಲಕರು ತೋರುವ ಚಮತ್ಕಾರವು ಕಣ್ಣು ಮಿಟುಕಿಸುವಷ್ಟರಲ್ಲಿ ನಡೆಯುವ ಅದ್ಭುತ. ಅವರ ಕಾಲುಗಳು ಜಾರುವ ಬಂಡೆಗಳ ಮೇಲೆ ಅದೆಷ್ಟು ಭದ್ರವಾಗಿರುತ್ತವೆ ಎಂದರೆ, ಪ್ರಕ್ಷುಬ್ಧವಾಗಿ ಹರಿಯುವ ನೀರು ಕೂಡ ಅವರ ಸಮತೋಲನವನ್ನು ಕಿಂಚಿತ್ತೂ ಅಲುಗಾಡಿಸಲು ಸಾಧ್ಯವಿಲ್ಲ. ಒಂದು ಬಂಡೆಯಿಂದ ಇನ್ನೊಂದಕ್ಕೆ ಅವರು ಹಾರುವ ಶೈಲಿ ನೋಡಿದರೆ, ಅದು ದೈಹಿಕ ಶ್ರಮ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಲಯಬದ್ಧವಾದ ನೃತ್ಯದಂತೆ ಭಾಸವಾಗುತ್ತದೆ. ಮಿಂಚಿನ ವೇಗದಲ್ಲಿ ದೋಣಿಯ ದಿಕ್ಕನ್ನು ಬದಲಿಸುವ ಅವರ ನೈಪುಣ್ಯ ಅಸಾಮಾನ್ಯವಾದದ್ದು.

ನೀರಿನ ಸೆಳೆತಕ್ಕೆ ದೋಣಿ ಸಿಲುಕಿ ಬಂಡೆಗೆ ಅಪ್ಪಳಿಸುತ್ತದೆ ಎನ್ನುವಷ್ಟರಲ್ಲಿ, ತಮ್ಮ ತೋಳಬಲದಿಂದ ಅದರ ಗತಿಯನ್ನೇ ಬದಲಿಸಿಬಿಡುತ್ತಾರೆ. ಇವರನ್ನು ಕೇವಲ ಸಾಮಾನ್ಯ ದೋಣಿ ಚಾಲಕರು ಎನ್ನಲಾಗದು, ಇವರು 'ಜಮಖಂಡಿಯ ಪೈಲ್ವಾನ'ರಂತೆ ಅಖಾಡದಲ್ಲಿ ಎದುರಾಳಿಯನ್ನು ಮಣಿಸುವ ತಾಕತ್ತು ಹೊಂದಿದವರು. ಅಲ್ಲಿ ಮಣ್ಣಿನ ಅಖಾಡವಾದರೆ, ಇಲ್ಲಿ ನೀರಿನ ಆರ್ಭಟವೇ ಇವರ ರಣರಂಗ. ಪ್ರಕೃತಿಯ ಈ ರೌದ್ರಾವತಾರವನ್ನು ಎದುರಿಸಿ, ಪ್ರವಾಸಿಗರನ್ನು ಸುರಕ್ಷಿತವಾಗಿ ಮುನ್ನಡೆಸುವ ಇವರ ಕೌಶಲವು ನಿಜಕ್ಕೂ ಗೌರವಾರ್ಹ. ಆ ಕ್ಷಣದಲ್ಲಿ ನಮಗೆ ಕಾಣುವುದು ಕೇವಲ ಅವರ ಸ್ನಾಯುಗಳ ಬಲವಲ್ಲ, ಬದಲಿಗೆ ಜಲದ ಹಾದಿಯನ್ನು ಕರಗತ ಮಾಡಿಕೊಂಡ ಒಬ್ಬ ಶ್ರೇಷ್ಠ ಕಲೆಗಾರನ ಏಕಾಗ್ರತೆ!

ನದಿಯ ರಭಸ ಹೆಚ್ಚಾದಂತೆ ದೋಣಿ ಚಾಲಕರ ಉತ್ಸಾಹ ಮತ್ತು ವೇಗವೂ ಇಮ್ಮಡಿಯಾಗುತ್ತದೆ. ನದಿಯ ಅಲೆಗಳು ದೋಣಿಗೆ ಅಪ್ಪಳಿಸಿ ನೀರು ಮುಖಕ್ಕೆ ಸಿಡಿಯುತ್ತಿದ್ದರೂ, ಆ ಚಾಲಕರ ಮುಖದಲ್ಲಿ ಭಯದ ನೆರಳೂ ಸುಳಿಯುವುದಿಲ್ಲ. ನಮಗೆ ಅದು ಜೀವದ ಹಂಗು ತೊರೆದು ಮಾಡುವ ಸಾಹಸದಂತೆ ಕಂಡರೆ, ಅವರಿಗೆ ಮಾತ್ರ ಅದು ದಿನನಿತ್ಯದ ‘ಉಪ್ಪಿಟ್ಟು-ಕಾಫಿ’ ಸವಿಯುವಷ್ಟೇ ಸಹಜವಾದ ಪ್ರಕ್ರಿಯೆ. ತೀವ್ರವಾದ ದೈಹಿಕ ಶ್ರಮದ ನಡುವೆಯೂ ಅವರು ಪ್ರವಾಸಿಗರ ಜೊತೆ ನಗುನಗುತ್ತಾ ಮಾತನಾಡುತ್ತಾ, ಪರಿಸರದ ಬಗ್ಗೆ ವಿವರಿಸುತ್ತಾ ಸಾಗುವ ರೀತಿಗೆ ಸಾಟಿಯಿಲ್ಲ. ಬಂಡೆಗಳ ನಡುವೆ ದೋಣಿ ಸಿಲುಕಿದಾಗ ಅಥವಾ ನೀರಿನ ಸೆಳೆತಕ್ಕೆ ಸಿಕ್ಕಿ ದೋಣಿ ಅಲುಗಾಡಿದಾಗ ನಮ್ಮ ಹೃದಯ ಬಡಿತ ಏರುತ್ತದೆ.

ಆದರೆ ಚಾಲಕರು ಮಾತ್ರ ಅತ್ಯಂತ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಅವರ ಪಾಲಿಗೆ ಪ್ರತಿಯೊಬ್ಬ ಪ್ರವಾಸಿಯೂ ಒಬ್ಬ ಅತಿಥಿ. ಅವರನ್ನು ಸುರಕ್ಷಿತವಾಗಿ ಜಲಪಾತದ ಬುಡಕ್ಕೆ ತಲುಪಿಸುವುದೇ ಅವರ ಜೀವನದ ಪರಮ ಗುರಿ. ಆ ಗುರಿಯ ಸಾಧನೆಗಾಗಿ ಅವರು ತಮ್ಮ ಬೆವರಿನ ಹನಿಗಳನ್ನು ನದಿಯ ನೀರಿನಲ್ಲಿ ಬೆರೆಸುತ್ತಾರೆ. ಅವರ ಈ ನಿಸ್ವಾರ್ಥ ಶ್ರಮ ಮತ್ತು ವೃತ್ತಿಪರತೆ ಪಗಸಂಜನ್ ಪ್ರವಾಸವನ್ನು ಕೇವಲ ಪ್ರೇಕ್ಷಣೀಯ ಸ್ಥಳದ ಭೇಟಿಯನ್ನಾಗಿಸದೇ, ಮಾನವೀಯ ಸಂಬಂಧಗಳ ಮತ್ತು ಅದಮ್ಯ ಚೇತನದ ಅನಾವರಣವನ್ನಾಗಿಸುತ್ತದೆ. ಪ್ರಕೃತಿಯ ಸವಾಲನ್ನು ನಗುವಿನಿಂದಲೇ ಎದುರಿಸುವ ಅವರ ಆ ಗುಣ, ಅದೆಷ್ಟೋ ಸಾರಿ ನಮಗೆ ಜೀವನದ ದೊಡ್ಡ ಪಾಠಗಳನ್ನು ಕಲಿಸುತ್ತದೆ. ಆ ದೋಣಿ ಸವಾರಿಯ ನಂತರ, ಜಲಪಾತದ ನೆನಪಿಗಿಂತಲೂ ಹೆಚ್ಚಾಗಿ ನಮ್ಮನ್ನು ಸುರಕ್ಷಿತವಾಗಿ ದಡಕ್ಕೆ ತಂದ ಆ ನಗುಮುಖದ ಚಾಲಕರ ಶ್ರಮವೇ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ.

ನದಿಯ ಹಾದಿಯಲ್ಲಿ ಹರಡಿಕೊಂಡಿರುವ ಆ ಬೃಹತ್ ಬಂಡೆಗಳು ದೋಣಿಗೆ ತಗುಲಿದಾಗ ಉಂಟಾಗುವ ಆ ಸದ್ದು, ಎಂಥ ಧೈರ್ಯವಂತನನ್ನೂ ಒಂದು ಕ್ಷಣ ಬೆಚ್ಚಿಬೀಳಿಸುತ್ತದೆ. 'ಇನ್ನೇನು ದೋಣಿ ಎರಡು ತುಂಡಾಯಿತು' ಅಥವಾ 'ನಾವು ನೀರಿನ ಪಾಲಾದೆವು' ಎಂಬ ಭಯ ಪ್ರವಾಸಿಗರನ್ನು ಕಾಡುವುದು ಸಹಜ. ಪ್ರತಿ ಬಾರಿಯೂ ಬಂಡೆಗಳ ಘರ್ಷಣೆಯಾದಾಗ ಹೃದಯ ಬಡಿತ ಜೋರಾಗುತ್ತದೆ. ಆದರೆ, ಅಚ್ಚರಿಯೆಂದರೆ ಈ ದೋಣಿ ಚಾಲಕರಿಗೆ ಆ ಇಡೀ ನದಿಯ ನಕ್ಷೆಯೇ ಸುಪರಿಚಿತ. ಯಾವ ಬಂಡೆ ನೀರಿನ ಆಳದಲ್ಲಿದೆ, ಯಾವುದರ ಮೇಲೆ ಕಾಲಿಟ್ಟರೆ ದೋಣಿಯನ್ನು ಸುಲಭವಾಗಿ ನೂಕಬಹುದು ಎಂಬುದು ಅವರಿಗೆ ಹಸ್ತರೇಖೆಯಂತೆ ಸ್ಪಷ್ಟ. ದಶಕಗಳ ಕಾಲ ಅದೇ ನದಿಯ ಮಡಿಲಲ್ಲಿ ಬೆಳೆದ ಅವರಿಗೆ ಈ ಹಾದಿ ಜನ್ಮಜಾತವಾಗಿ ಬಂದ ಕಲೆಯಂತೆ ಒಲಿದಿದೆ.

ಕಿರಿದಾದ ಕಂದಕಗಳ ನಡುವೆ, ದೋಣಿಯು ಕೇವಲ ಒಂದೆರಡು ಇಂಚುಗಳ ಅಂತರದಲ್ಲಿ ಬಂಡೆಗಳ ನಡುವೆ ನುಸುಳಿ ಹೋಗುವಾಗ ಅವರ ಜಾಣ್ಮೆ ನಮಗೆ ಅರಿವಾಗುತ್ತದೆ. ಯಾವುದೇ ಆಧುನಿಕ ಸಲಕರಣೆ ಅಥವಾ ತಂತ್ರಜ್ಞಾನವಿಲ್ಲದೇ, ಕೇವಲ ತಮ್ಮ ಅನುಭವ ಮತ್ತು ಕಣ್ಣಳತೆಯಿಂದಲೇ ಅವರು ದೋಣಿಯನ್ನು ಅತ್ಯಂತ ಸುರಕ್ಷಿತವಾಗಿ ಮುನ್ನಡೆಸುತ್ತಾರೆ. ಆ ಕಡಿದಾದ ದಾರಿಯಲ್ಲಿ ದೋಣಿಯನ್ನು ಎತ್ತಿ ಹಿಡಿಯುವಾಗ ಅಥವಾ ತಿರುಗಿಸುವಾಗ ಅವರು ತೋರುವ ಸಮಯಪ್ರಜ್ಞೆ ಅದ್ಭುತ. ಪ್ರಕೃತಿಯ ಅಡೆತಡೆಗಳನ್ನೇ ಅವರು ತಮ್ಮ ದಾರಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಪರಿ ಅನನ್ಯ. ಪ್ರವಾಸಿಗರಿಗೆ ಅದು ಜೀವಭಯ ಹುಟ್ಟಿಸುವ ಹಾದಿಯಾದರೆ, ಆ ಚಾಲಕರಿಗೆ ಅದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ರಂಗಮಂಟಪ. ಈ ಅದ್ಭುತ ಜಾಣ್ಮೆಯೇ ಪಗಸಂಜನ್ ಪ್ರವಾಸವನ್ನು ವಿಶ್ವದ ಅತ್ಯಂತ ಸಾಹಸಮಯ ಜಲಪ್ರಯಾಣಗಳಲ್ಲಿ ಒಂದನ್ನಾಗಿ ಮಾಡಿದೆ.

ಪ್ರಯಾಣದ ದಾರಿಯುದ್ದಕ್ಕೂ ಹಸಿರು ಕಾಡುಗಳು ಮತ್ತು ಎತ್ತರದ ಕಂದಕಗಳು ನಮ್ಮನ್ನು ಸುತ್ತುವರಿದಿರುತ್ತವೆ. ಎರಡು ಕಂದಕ ಅಥವಾ ಕಣಿವೆ ಮಧ್ಯೆ ನಮ್ಮ ಪುಟ್ಟ ದೋಣಿ ಸಾಗುತ್ತಿದ್ದರೆ, ಯಾವುದೋ ಅಜ್ಞಾತ ಸ್ಥಳದ ಶೋಧಕ್ಕೋ, ನಿಗೂಢ ಲೋಕಕ್ಕೋ ಕರೆದೊಯ್ಯುವ ಕಾಲಯಾನದಂತೆ ಭಾಸವಾಗುತ್ತದೆ. ನದಿಯ ಇಕ್ಕೆಲಗಳಲ್ಲಿ ಗಗನಚುಂಬಿ ಕಂದಕಗಳು ರಕ್ಷಣಾ ಗೋಡೆಗಳಂತೆ ಎದ್ದು ನಿಂತಿದ್ದರೆ, ಅವುಗಳ ಮೇಲೆ ಹರಡಿರುವ ದಟ್ಟ ಹಸಿರು ಕಾಡು ಅಜ್ಞಾತ ಲೋಕದ ರಹಸ್ಯಗಳನ್ನು ಅಡಗಿಸಿಟ್ಟಂತೆ ಕಾಣುತ್ತದೆ. ಎರಡು ಬೃಹತ್ ಕಣಿವೆಗಳ ಮಧ್ಯೆ ನಮ್ಮ ಪುಟ್ಟ ದೋಣಿ ನಿಧಾನವಾಗಿ ನುಸುಳುತ್ತಿದ್ದರೆ, ನಾವು ಯಾವುದೋ ಹಳೆಯ ಸಾಹಸಮಯ ಸಿನಿಮಾದಲ್ಲಿ ನಿಧಿ ಶೋಧಕ್ಕೆ ಹೊರಟವರಂತೆ ಅಥವಾ ಭೂಮಿಯ ಕೊನೆಯ ಅಂಚನ್ನು ಪತ್ತೆಹಚ್ಚಲು ಹೊರಟ ಅನ್ವೇಷಕರಂತೆ ನಮಗೆ ನಾವೇ ಕಾಣಿಸಿಕೊಳ್ಳುತ್ತೇವೆ.

ಆ ಎತ್ತರದ ಕಂದಕಗಳ ನಡುವೆ ಸೂರ್ಯನ ಕಿರಣಗಳೂ ಕೂಡ ಇಣುಕಿ ನೋಡಲು ಪರದಾಡುತ್ತವೆ. ಈ ನೆರಳು-ಬೆಳಕಿನ ಆಟ ಮತ್ತು ಬಂಡೆಗಳ ಮರೆಯಲ್ಲಿ ಅಡಗಿರುವ ನಿಶ್ಶಬ್ದವು ಒಂದು ರೀತಿಯ ಗಾಂಭೀರ್ಯವನ್ನು ಸೃಷ್ಟಿಸುತ್ತದೆ. ಮನುಷ್ಯನ ಹಸ್ತಕ್ಷೇಪವಿಲ್ಲದ ಆ ನಿಗೂಢ ಪರಿಸರದಲ್ಲಿ, ಪ್ರತಿ ತಿರುವಿನಲ್ಲೂ ಒಂದು ಹೊಸ ಅಚ್ಚರಿ ಅಥವಾ ಕಾಣದ ನಿಧಿ ಸಿಗಬಹುದು ಎಂಬ ಕುತೂಹಲ ಪ್ರತಿಯೊಬ್ಬ ಪ್ರವಾಸಿಯಲ್ಲೂ ಮನೆಮಾಡುತ್ತದೆ. ಆ ಕ್ಷಣದಲ್ಲಿ ನಾವು ಕೇವಲ ಪ್ರವಾಸಿಗರಾಗಿ ಉಳಿಯದೆ, ಯಾವುದೋ ಒಂದು ಪ್ರಾಚೀನ ರಹಸ್ಯವನ್ನು ಭೇದಿಸಲು ಹೊರಟ ಸಾಹಸಿಗಳಾಗಿ ಬದಲಾಗಿರುತ್ತೇವೆ. ಪ್ರಕೃತಿಯ ಈ ಅಗಾಧತೆಯ ಮುಂದೆ ನಮ್ಮ ಅಸ್ತಿತ್ವ ಎಷ್ಟು ಸಣ್ಣದು ಎಂಬ ಅರಿವು ಮೂಡುವುದರ ಜತೆಗೆ, ಅಜ್ಞಾತವನ್ನು ಅರಿಯುವ ಆ ಹಂಬಲವೇ ನಮ್ಮ ಪಯಣಕ್ಕೆ ಹೊಸ ಅರ್ಥ ನೀಡುತ್ತದೆ.

ನದಿಯ ತಿರುವುಗಳನ್ನು ಒಂದೊಂದಾಗಿ ದಾಟುತ್ತಾ ಸಾಗುತ್ತಿದ್ದಂತೆ, ಮೌನವಾಗಿದ್ದ ಪರಿಸರದಲ್ಲಿ ಹಠಾತ್ತನೆ ಭೋರ್ಗರೆತವೊಂದು ಕೇಳತೊಡಗುತ್ತದೆ. ಆ ಶಬ್ದ ಹತ್ತಿರವಾಗುತ್ತಿದ್ದಂತೆ, ಕಣಿವೆಯ ಒಂದು ಮೂಲೆಯಲ್ಲಿ ಕಣ್ಣೆದುರು ಬಿಚ್ಚಿಕೊಳ್ಳುವುದೇ ಹಾಲಿನ ಧಾರೆಯಂತೆ ಧುಮುಕುವ ಪಗಸಂಜನ್ ಜಲಪಾತ!

ಇದನ್ನು ಸ್ಥಳೀಯರು ಭಕ್ತಿಯಿಂದ 'ಮಾಗ್ಡಾಪಿಯೊ' ಅಂತಾರೆ. ಬೆಟ್ಟದ ಮೇಲಿಂದ ಬೆಳ್ಳಿಯ ಪರದೆಯಂತೆ ಧುಮ್ಮಿಕ್ಕುವ ಆ ನೀರನ್ನು ನೋಡಿದಾಗ, ಅಲ್ಲಿಯವರೆಗಿನ ಎಲ್ಲ ದೈಹಿಕ ಆಯಾಸವೂ ಒಂದು ಕ್ಷಣದಲ್ಲಿ ಮಾಯವಾಗಿ ಮನಸ್ಸಿನಲ್ಲಿ ಅನೂಹ್ಯ ಸಂಭ್ರಮ ಮನೆಮಾಡುತ್ತದೆ. ಆದರೆ, ದೂರದಿಂದ ಜಲಪಾತವನ್ನು ನೋಡಿ ಆನಂದಿಸುವುದು ಕೇವಲ ಅರ್ಧ ಪ್ರವಾಸವಷ್ಟೇ. ಅಸಲಿ ರೋಮಾಂಚನ ಕಾದಿರುವುದು ಆ ನೀರಿನ ಅಬ್ಬರದ ಒಳಗಡೆ ಹೋಗುವುದರಲ್ಲಿ. ಇದಕ್ಕಾಗಿ ನಮ್ಮನ್ನು ಒಂದು ಬೃಹತ್ ಬಿದಿರಿನ ತೆಪ್ಪದ ಮೇಲೆ ಕುಳ್ಳರಿಸಲಾಗುತ್ತದೆ. ಸಾಹಸಿಗಳು ಆ ತೆಪ್ಪವನ್ನು ಹಗ್ಗದ ಸಹಾಯದಿಂದ ಜಲಪಾತದ ಭೀಕರ ಧಾರೆಗಳ ಕಡೆಗೆ ಎಳೆದೊಯ್ಯುವಾಗ, ಎಂಥ ಧೈರ್ಯವಂತನೂ ಒಂದು ಕ್ಷಣ ಉಸಿರು ಬಿಗಿಹಿಡಿದು ಕುಳಿತುಕೊಳ್ಳುತ್ತಾನೆ.

ಜಲಪಾತದ ನೇರ ಕೆಳಗೆ ತೆಪ್ಪ ಹೋದಾಗ ಅನುಭವಿಸುವ ಆ ಕ್ಷಣ ವರ್ಣನಾತೀತ. ಖಂಡಿತ, ಅದು ಸ್ನಾನದಂತೆ ಇರುವುದಿಲ್ಲ. ಬದಲಿಗೆ ಆಕಾಶದಿಂದ ಯಾರೋ ಸಾವಿರಾರು ಬಕೆಟ್ ನೀರನ್ನು ಒಂದೇ ಸಮನೆ ತಲೆಯ ಮೇಲೆ ಸುರಿಯುತ್ತಿದ್ದಾರೇನೋ ಎನಿಸುತ್ತದೆ. ಆ ನೀರಿನ ಸೆಳೆತ ಮತ್ತು ವೇಗಕ್ಕೆ ನಮ್ಮ ಮುಖದ ಆಕಾರವೇ ಬದಲಾದಂತೆ ಭಾಸವಾಗುತ್ತದೆ. ಪ್ರಕೃತಿಯ ಈ ಹೈಡ್ರೋ ಮಸಾಜ್ ಎಷ್ಟು ಶಕ್ತಿಶಾಲಿಯೆಂದರೆ, ದೇಹದ ಪ್ರತಿ ಅಣುವೂ ಆ ನೀರಿನ ಹೊಡೆತಕ್ಕೆ ಜಾಗೃತವಾಗುತ್ತದೆ. ಜಲಪಾತದ ಆ ಬೆಳ್ಳಿಯ ತೆರೆಯನ್ನು ಸೀಳಿಕೊಂಡು ಒಳಹೋದಾಗ ಸಿಗುವುದೇ ನಿಗೂಢವಾದ 'ಡೆವಿಲ್ಸ್ ಕೇವ್' ಅಥವಾ ದೆವ್ವದ ಗುಹೆ. ಹೊರಗಡೆ ನರಕದಂತೆ ಆರ್ಭಟಿಸುತ್ತಿದ್ದ ಜಲಪಾತದ ಸದ್ದು ಗುಹೆಯ ಒಳಗೆ ಬರುತ್ತಿದ್ದಂತೆ ಒಂದು ರೀತಿಯ ಗಂಭೀರವಾದ ಮೌನಕ್ಕೆ ಶರಣಾಗುತ್ತದೆ. ಜಲಪಾತದ ಹಿಂದಿನ ಆ ಗುಹೆಯ ತಂಪು ಮತ್ತು ಅಲ್ಲಿನ ನಿಶ್ಶಬ್ದವು ಮನಸ್ಸಿಗೆ ಒಂದು ವಿಚಿತ್ರವಾದ ಶಾಂತಿಯನ್ನು ನೀಡುತ್ತದೆ.

Untitled design (18)

ಆ ಗುಹೆಯ ಒಳಗೆ ಕುಳಿತು ಹೊರಕ್ಕೆ ನೋಡಿದಾಗ, ಜಲಪಾತದ ಧಾರೆಗಳು ಒಂದು ತೆರೆಯಂತೆ ಕಂಡರೆ, ಹೊರಗಿನ ಪ್ರಪಂಚಕ್ಕೂ ನಮಗೂ ನಡುವೆ ಈ ನೀರಿನ ಗೋಡೆ ಅಡ್ಡ ನಿಂತಿದೆಯೇನೋ ಎಂಬ ಭ್ರಮೆ ಉಂಟಾಗುತ್ತದೆ. ಪ್ರಕೃತಿಯ ಅತಿ ದೊಡ್ಡ ಆರ್ಭಟದ ಬೆನ್ನ ಹಿಂದೆಯೇ ಇಷ್ಟು ಗಾಢವಾದ ಶಾಂತಿ ಅಡಗಿರಲು ಹೇಗೆ ಸಾಧ್ಯ ಎಂಬ ವಿಸ್ಮಯ ನಮ್ಮನ್ನು ಕಾಡದೇ ಇರದು. ಆ ಕ್ಷಣದ ಅನುಭವವು ಕೇವಲ ದೈಹಿಕವಲ್ಲ, ಅದು ಮಾನಸಿಕವಾಗಿ ನಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ. ಈ ಕ್ಷಣ ಸಾಹಸ ಮತ್ತು ಅಧ್ಯಾತ್ಮದ ವಿಚಿತ್ರ ಸಂಗಮ. ಜಲಪಾತದ ನೀರಿನ ಆರ್ಭಟಕ್ಕೆ ಮೈಯೆಲ್ಲ ಒದ್ದೆಯಾಗಿದ್ದರೂ, ಗುಹೆಯ ಒಳಗಿನ ಆ ಮೌನ ನಮ್ಮ ಆತ್ಮವನ್ನು ತಟ್ಟುತ್ತದೆ. ಪ್ರಕೃತಿಯು ಎಷ್ಟು ಭಯಾನಕವೋ ಅಷ್ಟೇ ನಿಗೂಢ ಮತ್ತು ಸುಂದರ ಎಂಬುದಕ್ಕೆ ಈ 'ಡೆವಿಲ್ಸ್ ಕೇವ್' ಪ್ರಯಾಣವೇ ಸಾಕ್ಷಿ. ಆ ಗುಹೆಯಿಂದ ಹೊರಬಂದಾಗ ನಾವು ಕೇವಲ ಪ್ರವಾಸಿಗರಾಗಿರದೇ, ಪ್ರಕೃತಿಯ ರಹಸ್ಯವೊಂದನ್ನು ಭೇದಿಸಿ ಬಂದ ವೀರರಂತೆ ಸಂಭ್ರಮಿಸುತ್ತೇವೆ.

ಪಗಸಂಜನ್ ಜಲಪಾತದ ದರ್ಶನ ಮುಗಿಸಿ ವಾಪಸ್ ಬರುವ ಹಾದಿ ನಿಜಕ್ಕೂ ಒಂದು ಅಡ್ರೆನಲಿನ್ ರಶ್! ಹೋಗುವಾಗ ನೀರಿನ ಹರಿವಿನ ವಿರುದ್ಧ ಹೋರಾಡುತ್ತಾ ಆಮೆಗತಿಯಲ್ಲಿ ಸಾಗಿದ್ದ ನಮಗೆ, ಹಿಂದಿರುಗುವಾಗ ನದಿಯೇ ತನ್ನ ವೇಗವನ್ನು ಉಡುಗೊರೆಯಾಗಿ ನೀಡುತ್ತದೆ. ಈ ರೋಚಕ ಪ್ರಕ್ರಿಯೆಯನ್ನು 'ಶೂಟಿಂಗ್ ದಿ ರಾಪಿಡ್ಸ್' (Shooting the Rapids) ಅಂತಾರೆ. ಇಲ್ಲಿ ದೋಣಿಯು ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿ, ಹರಿಯುವ ಹಾಲಿನ ನೊರೆಯಂತೆ ಕಾಣುವ ಅಲೆಗಳ ಮೇಲೆ ಸವಾರಿಯನ್ನು ಆರಂಭಿಸುತ್ತದೆ. ಆ ಕ್ಷಣದಲ್ಲಿ ದೋಣಿಯ ವೇಗವು ಚಿರತೆಯ ನಾಗಾಲೋಟದಂತೆ ಭಾಸವಾಗುತ್ತದೆ. ದೋಣಿ ಬಂಡೆಗಳ ನಡುವೆ ಕೇವಲ ಕೂದಲೆಳೆ ಅಂತರದಲ್ಲಿ ನುಸುಳುತ್ತಾ, ಅಲೆಗಳ ಮೇಲೆ ಕುಣಿಯುತ್ತಾ ಸಾಗುವಾಗ ಪ್ರತಿಯೊಬ್ಬ ಪ್ರವಾಸಿಯ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದ ಅನುಭವ!

ನೀರಿನ ಹನಿಗಳು ದೋಣಿಯೊಳಗೆ ಚಿಮ್ಮುತ್ತಾ ನಮ್ಮನ್ನು ಪೂರ್ತಿ ತೋಯಿಸುತ್ತಿದ್ದರೆ, ಭಯ ಮತ್ತು ಸೌಂದರ್ಯದ ಸಮ್ಮಿಶ್ರಣದಿಂದ ಹೊರಬರುವ ಪ್ರವಾಸಿಗರ ಕಿರುಚಾಟವು ಜಲಪಾತದ ಆರ್ಭಟವನ್ನೂ ಮೀರಿ ಮುಗಿಲು ಮುಟ್ಟುತ್ತದೆ. ಬಂಡೆಗಳ ತೀಕ್ಷ್ಣವಾದ ಅಂಚುಗಳನ್ನು ದೋಣಿ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಹೋಗುವಾಗ, ಇದು ಯಾವುದೋ ಹೈ-ಸ್ಪೀಡ್ ಆಕ್ಷನ್ ಸಿನಿಮಾದ ದೃಶ್ಯದಂತೆ ಅನಿಸುತ್ತದೆ. ಆ ವೇಗ, ಆ ಅನಿಶ್ಚಿತತೆ ಮತ್ತು ಪ್ರಕೃತಿಯ ಆ ರೌದ್ರ ಗತಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಪಗಸಂಜನ್ ಪ್ರವಾಸದ ಈ ಅಂತಿಮ ಹಂತವು ಕೇವಲ ಪ್ರಯಾಣವಲ್ಲ; ಅದು ಪ್ರಕೃತಿಯ ಶಕ್ತಿಯೊಂದಿಗೆ ನಾವು ನಡೆಸುವ ಅತ್ಯಂತ ವೇಗದ ಮತ್ತು ಸ್ಮರಣೀಯ ಸಂವಾದ. ವಾಪಸ್ ದಡಕ್ಕೆ ಬಂದಾಗ ಮೈಯೆಲ್ಲಾ ನೆನೆದು ತೊಪ್ಪೆಯಾಗಿದ್ದರೂ, ಆ ವೇಗದ ಸವಾರಿಯ ಅಮಲು ಮಾತ್ರ ತಲೆಯಲ್ಲಿ ಹಾಗೆಯೇ ಉಳಿದಿರುತ್ತದೆ.

ಪಗಸಂಜನ್ ಪ್ರವಾಸವು ಕೇವಲ ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡಿ ಮರಳುವ ಕ್ರಿಯೆಯಲ್ಲ; ಅದೊಂದು ಜೀವನದ ಪಾಠಗಳನ್ನು ಕಲಿಸುವ ಅನುಭವ. ಅಲ್ಲಿನ ದೋಣಿ ಚಾಲಕರು ಅಷ್ಟು ಭಾರದ ದೋಣಿಯನ್ನು ತಮ್ಮ ಮಾಂಸಖಂಡಗಳ ಬಲದಿಂದ ನೀರಿನ ಹರಿವಿಗೆ ವಿರುದ್ಧವಾಗಿ ತಳ್ಳುವುದನ್ನು ನೋಡಿದಾಗ, ಮನುಷ್ಯನ ಶ್ರಮದ ಮುಂದೆ ಯಾವುದೇ ಅಡೆತಡೆ ದೊಡ್ಡದಲ್ಲ ಎಂಬ ಅರಿವಾಗುತ್ತದೆ. ಅವರ ಅಸಾಧಾರಣ ಪರಿಶ್ರಮಕ್ಕೆ ನಾವು ತಲೆಬಾಗಲೇಬೇಕು. ಗಗನಚುಂಬಿ ಕಂದಕಗಳು ಮತ್ತು ರೌದ್ರವಾಗಿ ಧುಮ್ಮಿಕ್ಕುವ ಜಲಪಾತದ ಮುಂದೆ ನಿಂತಾಗ, ಈ ಪ್ರಕೃತಿಯ ಅಗಾಧ ಶಕ್ತಿಯ ಮುಂದೆ ಮನುಷ್ಯನೆಷ್ಟು ಸಣ್ಣವನು ಎಂಬ ವಿನಮ್ರ ಭಾವ ಮೂಡುತ್ತದೆ.

ಇದನ್ನೂ ಓದಿ; ಗೋಡೆಗಳೇ ಪುಸ್ತಕವಾಗಿರುವ ಲೀಡೆನ್ ನಗರದಲ್ಲೊಂದು ವಿಶಿಷ್ಟ ಕಾವ್ಯಯಾನ

ಅಲ್ಲಿನ 'ಶೂಟಿಂಗ್ ದಿ ರಾಪಿಡ್ಸ್' ಸವಾರಿ ನಮಗೆ ಜೀವನದ ಏರಿಳಿತಗಳನ್ನು ಎದುರಿಸುವ ಕಲೆಯನ್ನು ಕಲಿಸುತ್ತದೆ. ಬಂಡೆಗಳ ನಡುವೆ ದೋಣಿ ಅಪ್ಪಳಿಸುವ ಅಪಾಯವಿದ್ದರೂ, ಚಾಲಕರು ಹೇಗೆ ನಗುನಗುತ್ತಾ ಮುನ್ನಡೆಯುತ್ತಾರೋ, ಹಾಗೆಯೇ ಜೀವನದ ಸಂಕಷ್ಟಗಳನ್ನೂ ನಗುಮುಖದಿಂದಲೇ ಎದುರಿಸಬೇಕು ಎಂಬ ಸಂದೇಶ ಅಲ್ಲಿ ಸಿಗುತ್ತದೆ. ಪ್ರವಾಸ ಮುಗಿಸಿ ಮರಳಿದ ಮರುದಿನ ಮೈಕೈ ನೋವು ಕಾಣಿಸಿಕೊಳ್ಳುವುದು ಸಹಜ, ಆದರೆ ಆ ರೋಮಾಂಚಕ ಕ್ಷಣಗಳು ಮತ್ತು ಅದ್ಭುತ ನೆನಪುಗಳ ಮುಂದೆ ಆ ದೈಹಿಕ ನೋವು ಬಹಳ ಕ್ಷುಲ್ಲಕ ಅನಿಸುತ್ತದೆ. ಪಗಸಂಜನ್ ಎನ್ನುವುದು ಕೇವಲ ಕಣ್ಣಿಗೆ ಹಬ್ಬವಲ್ಲ, ಅದು ಸಾಹಸ ಮತ್ತು ಸಂಯಮದ ಮಹತ್ವವನ್ನು ಸಾರುವ ಒಂದು ಅಪೂರ್ವ ಸಾಹಸಗಾಥೆ.

ಈ 'ಜಲಮಯ ಸರ್ಕಸ್' ಪ್ರದರ್ಶನವನ್ನು ತೋರಿಸುವ ಪಗಸಂಜನ್ ಜಲಪಾತ ಕೇವಲ ಒಂದು ಪ್ರವಾಸಿ ತಾಣ ಎಂದು ಹೇಳಿದರೆ, ಏನನ್ನೂ ಹೇಳಿದಂತಾಗುವುದಿಲ್ಲ. ಕಾರಣ ಇಂಥ ಅನೇಕ ಜಲಪಾತಗಳಿವೆ. ಆದರೆ ಇದು ಮನುಷ್ಯನ ದೈಹಿಕ ಶಕ್ತಿ ಮತ್ತು ಪ್ರಕೃತಿಯ ಅಪ್ರತಿಮ ಸೌಂದರ್ಯದ ನಡುವೆ ನಡೆಯುವ ಒಂದು ಅದ್ಭುತ ಜುಗಲ್‌ಬಂದಿ!

ಹಾಂ...ಪಗಸಂಜನ್‌ಗೆ ಹೋಗುವವರು ಮೊಬೈಲ್‌ಗಾಗಿ ವಾಟರ್‌ಪ್ರೂಫ್ ಕವರ್ ಒಯ್ಯುವುದು ಕಡ್ಡಾಯ. ಇಲ್ಲದಿದ್ದರೆ ಜಲಪಾತದ ನೀರು ನಿಮ್ಮ ಫೋನಿನೊಳಗೆ ಹೋಗಿ ಅದನ್ನೂ ಒಂದು 'ಜಲಮಯ ಸ್ಮಾರಕ'ವನ್ನಾಗಿ ಮಾಡಬಹುದು!