- ಪಿ.ಶ್ರೀಧರ್ ನಾಯಕ್


ಇಂಗ್ಲೆಂಡ್‍ನಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ನೂರಾರು ಇವೆ. ಅವುಗಳಲ್ಲಿ ಕೆಂಟ್ ವ್ಯಾಪ್ತಿಯಲ್ಲಿರುವ ನೋಲ್‍ನಲ್ಲಿರುವ ಜಿಂಕೆ ಉದ್ಯಾನ ಮತ್ತು ಅರಮನೆ ಅಥವಾ ದೊಡ್ಡ ನಿವಾಸವನ್ನು ನೋಡದೆ ಯಾರೂ ಮರಳಬಾರದು. 1456ರಿಂದ 1538ರವರೆಗೆ ಅದು ಬಿಷಪ್‌ರ ಅರಮನೆ ಎಂದೇ ಜನರಿಗೆ ಪರಿಚಿತವಾಗಿತ್ತು. ಇದರ ಪ್ರವೇಶ ದ್ವಾರದ ಮೂಲಕ ಒಳಗೆ ಬಂದರೆ ಭಾರೀ ಎತ್ತರದ ಮೇಲ್ಚಾವಣಿಯ ಹಜಾರ ಎದುರಾಗುತ್ತದೆ. ಇದನ್ನು 1460ರಲ್ಲಿ ನಿರ್ಮಿಸಲಾಗಿತ್ತು. ಕೆಲ ಸಮಯದ ನಂತರ ಒಂದನೆಯ ಎಲಿಜಬೆತ್ ರಾಣಿಯ ಸ್ವಾಧೀನಕ್ಕೆ ಈ ನಿವಾಸ ಬರುತ್ತದೆ. ಆ ಕಾಲದಲ್ಲಿ ಉತ್ತಮವಾದುದೆಲ್ಲ ರಾಜ, ರಾಣಿಯರ ವಶದಲ್ಲಿರಬೇಕು ಎಂಬ ತೀರ್ಮಾನ ಅವರದ್ದಾಗಿತ್ತು. ನಮ್ಮಲ್ಲೂ ಹಿಂದೆ ಹೀಗೆಯೇ ಇತ್ತು ಅಲ್ಲವೇ?
ಈ ರೀತಿ ಹಸ್ತಾಂತರಗೊಳ್ಳುತ್ತಾ ಬಂದು ಆಗ ಮಾಲೀಕರಾಗಿದ್ದವರ ಬಳಿ ಖರೀದಿ ಮಾಡಿದ್ದು ವಿಕ್ಟೋರಿಯಾ ಮೇರಿ ಸೆಕ್ ವಿಲೇ ವೆಸ್ಟ್ ಅವಳ ಸೋದರ ಮಾವ.

ಇದನ್ನೂ ಓದಿ: ಡಾರ್ಟ್ ಫೋರ್ಡ್‌ ನಗರದಲ್ಲಿ ಮನೆಯ ಮಾಡಿ ಪ್ರವಾಸ ಮಾಡದಿದ್ದರೆಂತಯ್ಯ

ವಿಕ್ಟೋರಿಯಾ ಕವಯತ್ರಿ. ಹದಿನಾಲ್ಕನೆಯ ವಯಸ್ಸಿನಲ್ಲಿ ಕಾದಂಬರಿ, ಕವನ ಮತ್ತು ನಾಟಕಗಳನ್ನು ರಚಿಸಿರುತ್ತಾಳೆ. ಅವಳ ಆಸಕ್ತಿ ಕೇವಲ ಸಾಹಿತ್ಯ ಒಂದೇ ಆಗಿರಲಿಲ್ಲ. ತೋಟಗಾರಿಕೆ ಕೂಡ ಅವಳ ನೆಚ್ಚಿನ ಹವ್ಯಾಸವಾಗಿರುತ್ತದೆ. ಆಕೆ 1913ರಲ್ಲಿ ವಿವಾಹವಾಗುತ್ತಾಳೆ. ಅವಳ ಗಂಡ ಹೆರಾಲ್ಡ್ ನಿಕೋಲ್ಸನ್ ಕೂಡ ಸಾಹಿತಿ. ವಿಮರ್ಶಕನಾಗಿಯೂ ಹೆಸರು ಗಳಿಸಿದ್ದ. ವ್ಯಾಪಾರ, ವಹಿವಾಟಿನಿಂದಾಗಿ ಸಾಕಷ್ಟು ಹಣ ಸಂಪಾದಿಸಿದ್ದ. ಅವರ ವಿವಾಹಕ್ಕೆ ಸಂಬಂಧಿಕರು, ಗೆಳೆಯರು, ಗೆಳೆತಿಯರು, ಅಕ್ಕಪಕ್ಕದ ಮನೆಯವರು ಸುಮಾರು 600 ಉಡುಗೊರೆಗಳನ್ನು ನೀಡಿರುತ್ತಾರೆ. ಅವುಗಳಲ್ಲಿ ಹಸಿರು ಬಣ್ಣದ ಎಮರಾಲ್ಡ್ ಹರಳುಗಳೂ ಇರುತ್ತವೆ.

New Project (26)

ಉಡುಗೊರೆಯಾಗಿ ಬಂದ ಸುಮಾರು 50 ಪುಸ್ತಕಗಳು ಅವಳ ಪುಸ್ತಕ ಭಂಡಾರವನ್ನು ಸೇರುತ್ತವೆ. ಅವಳ ಉತ್ತಮ ಅಭಿರುಚಿ ಗೊತ್ತಿದ್ದವರು ಸುಂದರ ಕೆತ್ತನೆ ಕೆಲಸದ ಪೀಠೋಪಕರಣಗಳನ್ನು ಕೂಡ ಉಡುಗೊರೆಯಾಗಿ ಕೊಡುತ್ತಾರೆ. ಅವುಗಳನ್ನು ಈಗ ನೆಲಮಹಡಿಯ ಹಜಾರದಲ್ಲಿ (ಇದನ್ನು ಗ್ರೇಟ್ ಹಾಲ್ ಎಂದು ಕರೆಯುತ್ತಾರೆ.) ಪ್ರದರ್ಶನಕ್ಕೆ ಇಟ್ಟಿದ್ದಾರೆ. ನೋಲ್ ಮತ್ತು ಸ್ಯಾಕ್ ವಿಲ್ಲೇ ಕುಟುಂಬಗಳು ಸುದೀರ್ಘ ಕಾಲದಿಂದ ರಾಜಮನೆತನದ ಜೊತೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರು. ಹಜಾರದಲ್ಲಿ ರಾಜ ಜಾರ್ಜ್ ಮತ್ತು ರಾಣಿ ಚಾರ್ಲೆಟ್ ಅವರ ದೊಡ್ಡ ಗಾತ್ರದ ತೈಲ ಚಿತ್ರಗಳನ್ನುಇಟ್ಟಿದ್ದಾರೆ. ಕುಟುಂಬದ ಸಂಪರ್ಕಕ್ಕೆ ಬಂದ ಇತರ ಗಣ್ಯ ವ್ಯಕ್ತಿಗಳ ದೊಡ್ಡ ಗಾತ್ರದ ಚಿತ್ರಗಳೂ ಹಲವು ಇಲ್ಲಿವೆ. ಇದೊಂದು ಆಕರ್ಷಕ ಹಜಾರ.
ಆ ಕುಟುಂಬದ ಹಿನ್ನೆಲೆ ನೀವು ಅರಿಯಲೇಬೇಕು. ಥಾಮಸ್ ಸ್ಯಾಕ್‍ವಿಲ್ಲೆ ಸಸೆಕ್ಸ್‌ನಲ್ಲಿ 1536ರಲ್ಲಿ ಜನಿಸಿದರು. ಅವರು ಶ್ರೀಮಂತ ವಕೀಲ, ವರ್ತಕ ಸರ್ ರಿಚರ್ಡ್ ಸ್ಯಾಕ್ ವಿಲ್ಲೇ ಅವರ ಪುತ್ರ. ಥಾಮಸ್ ಒಂದನೇ ಎಲಿಜಬೆತ್ ರಾಣಿಯ ಸಮೀಪದ ಸಂಬಂಧಿ. ಥಾಮಸ್ ಸ್ಯಾಕ್‍ ವಿಲ್ಲೇ ನೋಲ್ ಆಸ್ತಿಯನ್ನು 1605ರಲ್ಲಿ ಖರೀದಿಸಿದ ನಂತರ ಇದನ್ನು ಅತ್ಯಂತ ವೈಭವಯುತ ಆಕರ್ಷಕ ನಿವಾಸವನ್ನಾಗಿ ಪರಿವರ್ತಿಸಿದರು. ಅವರು ಕವಿ ಮತ್ತು ನಾಟಕಕಾರ. ಅವರು ಖರೀದಿಸಿದ ನಂತರ ಸ್ಯಾಕ್ ವಿಲ್ಲೇ ಮನೆತನಕ್ಕೆ ಸೇರಿದವರು ಇಲ್ಲಿ ವಾಸಿಸಲಾರಂಭಿಸಿದರು.
1554ರಲ್ಲಿ ಥಾಮಸ್ ಸಿಸಿಲಿ ಬೇಕರ್ ಎಂಬುವವಳನ್ನು ವಿವಾಹವಾದರು. ಅವರಿಗೆ ಏಳು ಮಕ್ಕಳು ಹುಟ್ಟಿದವು. ಥಾಮಸ್ ಮೊದಲು ಕೇಂಬ್ರಿಜ್‌ನಲ್ಲಿ ಓದಿದರು. ಅನಂತರ ಇನ್ನರ್ ಟೆಂಪಲ್‍ನಲ್ಲಿ ಕಾನೂನು ಓದಿ ಪದವಿ ಪಡೆದರು. ಅವರು ʼದಿ ಟ್ರಾಜಿಡಿ ಆಫ್ ಗೋರ್ಬಡ್ಯೂಸ್ʼ ಎಂಬ ನಾಟಕವನ್ನು ತನ್ನ ಸಹಪಾಠಿ ಜತೆ ಬರೆದು 1562ರಲ್ಲಿ ಒಂದನೆಯ ಎಲಿಜಬೆತ್ ಮುಂದೆ ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಇದನ್ನು ಬರೆದದ್ದು ಮುಕ್ತ ಛಂದದಲ್ಲಿ. ಈ ಮುಕ್ತಛಂದವನ್ನು ಮೊದಲು ಬಳಸಿದ್ದು ಥಾಮಸ್.

New Project (27)

ಥಾಮಸ್ ಅವರ ರಾಜಕೀಯ ಜೀವನ ಆರಂಭವಾಗಿದ್ದು 1558ರಲ್ಲಿ. ಅವರಿಗೆ ಪ್ರಮುಖ ಹೊಣೆ ಹೊರುವುದು ಅನಿವಾರ್ಯವಾಯಿತು. 1571ರಲ್ಲಿ ಥಾಮಸ್ ಅವರನ್ನು ಫ್ರಾನ್ಸ್‌ಗೆ ರಾಯಭಾರಿಯಾಗಿ ಕಳುಹಿಸಲಾಯಿತು. ಆನಂತರ ಒಂದನೇ ಎಲಿಜಬೆತ್ ಮತ್ತು ಫ್ರಾನ್ಸ್‌ನ ರಾಜನ ಸೋದರನ ಮಧ್ಯೆ ಮದುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಕಳುಹಿಸಲಾಯಿತು. 1586ರಲ್ಲಿ ಸ್ಕಾಟ್‍ನ ರಾಣಿ ಮೇರಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ ಎಂಬ ಆದೇಶ ತಲುಪಿಸುವ ಹೊಣೆ ನೀಡಲಾಯಿತು. 1599ರಲ್ಲಿ ರಾಣಿಯು ಅವರನ್ನು ಕೋಶಾಧಿಕಾರಿಯಾಗಿ ನೇಮಿಸಿದರು.
1603ರಲ್ಲಿ ಒಂದನೇ ಜೇಮ್ಸ್ ರಾಜರಾಗಿ ನೇಮಕಗೊಂಡರು. 1604ರಲ್ಲಿ ಥಾಮಸ್ ಅರ್ಲ್ ಆಫ್ ಡೊರ್ಸೆಟ್ ಆಗಿ ನೇಮಕಗೊಂಡರು. ಆಗ ಅವರು ನೋಲ್ ಆಸ್ತಿಯನ್ನು ಖರೀದಿಸಿ ಬೃಹತ್ ನಿವಾಸದ ಆಧುನೀಕರಣಕ್ಕೆ ಮುಂದಾದರು. ರಾಜಮನೆತನಕ್ಕೆ ಸೇವೆ ಸಲ್ಲಿಸುತ್ತಿದ್ದ ಕಟ್ಟಡ ನಿರ್ಮಾಣ ಪರಿಣಿತರ ಸೇವೆ ಬಳಸಲು ಅವರಿಗೆ ಇದ್ದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಅದು ಸ್ಯಾಕ್ ವಿಲ್ಲೇ ಕುಟುಂಬದ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನದ ಸಂಕೇತವಾಯಿತು.
1608ರಲ್ಲಿ ಥಾಮಸ್ ಹೃದಯಾಘಾತದಿಂದ ನಿಧನರಾದರು. ಈ ರೀತಿ ಹಸ್ತಾಂತರಗೊಳ್ಳುತ್ತಾ ಬಂದು ಆಗ ಮಾಲೀಕರಾಗಿದ್ದವರ ಬಳಿ ಖರೀದಿ ಮಾಡಿದ್ದು ವಿಕ್ಟೋರಿಯಾ ಮೇರಿ ಸ್ಯಾಕ್ ವಿಲ್ಲೇ ವೆಸ್ಟ್ (ವಿಟಾ ಸ್ಯಾಕ್ ವಿಲ್ಲೇ) ಅವರ ಸೋದರ ಮಾವ.
ನೋಲ್ ಮತ್ತು ಸ್ಯಾಕ್ ವಿಲ್ಲೇ ಕುಟುಂಬಗಳು ಸುದೀರ್ಘ ಕಾಲದಿಂದ ರಾಜಮನೆತನದ ಜತೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದು ಹಜಾರದಲ್ಲಿ ರಾಜ ಜಾರ್ಜ್ ಮತ್ತು ರಾಣಿ ಚಾರ್ಲೆಟ್ ಅವರ ದೊಡ್ಡ ಗಾತ್ರದ ತೈಲ ಚಿತ್ರಗಳು ಇಲ್ಲಿವೆ. ಕುಟುಂಬಕ್ಕೆ ಸಂಪರ್ಕಕ್ಕೆ ಬಂದ ಇತರ ಗಣ್ಯ ವ್ಯಕ್ತಿಗಳ ದೊಡ್ಡ ಗಾತ್ರದ ಚಿತ್ರಗಳೂ ಇಲ್ಲಿವೆ. ಮೇಲೆ ಇರುವ ದೊಡ್ಡ ಹಜಾರದಲ್ಲಿ ಅಂದಿನ ಗಣ್ಯರ ತೈಲ ಚಿತ್ರಗಳು ಮತ್ತು ಆಕರ್ಷಕ ಪೀಠೋಪಕರಣಗಳು ಇವೆ. ಇವನ್ನು ನೋಡಿದರೆ ನಾವು ಯಾವುದೋ ಅರಮನೆಯನ್ನು ಪ್ರವೇಶಿಸಿದಂತೆ ಭಾಸವಾಗುತ್ತದೆ. ನೆಲಹಾಸು, ಕಿಟಕಿಯ ಪರದೆಗಳು ಶಯ್ಯಾಗೃಹದ ವೈಭವ, ಅಂದಿನ ಅವರ ಅಪಾರವಾದ ಸಂಪತ್ತಿಗೆ ಸಾಕ್ಷಿ ನುಡಿಯವಂತೆ ಇದೆ. ಶಯ್ಯಾಗೃಹವೊಂದು ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಭಸ್ಮ ಅದಾಗ ಅದನ್ನು ಪುನರ್ ಸೃಷ್ಟಿಸಿದ್ದಾರೆ. ರೋಮನ್ ಶೈಲಿಯ ನಗ್ನ ಗಂಡು ಶಿಲ್ಪಗಳಿವೆ.

New Project (28)

ಹೆರಾಲ್ಡ್ ವ್ಯಾಪಾರ ಸಂಬಂಧ ಲಂಡನ್‍ನಲ್ಲಿ ಇರುತ್ತಿದ್ದರು. ವಾರಾಂತ್ಯದಲ್ಲಿ ತಮ್ಮ ನಿವಾಸಕ್ಕೆ ಬರುತ್ತಿದ್ದರು. ಅವರು ಲಂಡನ್‌ನಲ್ಲಿ ಇದ್ದಷ್ಟು ದಿನ ವಿಟಾ ಅವರಿಗೆ ಅವರ ಮನೆಯಲ್ಲಿ ಆತ್ಮೀಯ ಗೆಳತಿಯರ ಸಹಚರ್ಯ. ಗೆಳತಿಯರಲ್ಲಿ ಕಾದಂಬರಿಗಾರ್ತಿ ವರ್ಜಿನಿಯಾ ಉಲ್ಫ್ ಕೂಡ ಒಬ್ಬರು. ಅವರು ತಮ್ಮ ಕೃತಿಯೊಂದರ ಹಸ್ತಪ್ರತಿಯನ್ನು ವಿಟಾ ಅವರಿಗೆ ಕೊಟ್ಟಿದ್ದು ಅದನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಶನಿವಾರ ಹೆರಾಲ್ಡ್ ಮನೆಗೆ ಬರುವ ಮುನ್ನವೇ ಈ ಗೆಳತಿಯರು ಮನೆಯಿಂದ ಹೊರ ಹೋಗುತ್ತಿದ್ದರು. ಕೆಲವು ಬಾರಿ ಮುಖಾಮುಖಿ ಆದದ್ದೂ ಇದೆ. ಹೆರಾಲ್ಡ್ ಲಂಡನ್‍ನಲ್ಲಿ ತಮ್ಮ ವ್ಯವಹಾರ ಸಂಬಂಧ ಇರುವಾಗ ಅವರ ಆಪ್ತ ಗೆಳೆಯರು ಜೊತೆ ಕೊಡುತ್ತಿದ್ದರು. ಇದು ಪರಸ್ಪರರಿಗೆ ತಿಳಿದಿತ್ತು.
ಕೋಟೆ ಹೋಲುವ ಈ ಸುಂದರ ನಿವಾಸ ತನ್ನ ಹೆಸರಿಗೆ ವರ್ಗಾಯಿಸಲು ವಿಟಾ ಬಯಸಿದ್ದರೂ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಆಗಿನ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿಯ ಮೇಲೆ ಹಕ್ಕಿರಲಿಲ್ಲ.

ಈ ನಿವಾಸದ ಪ್ರವೇಶದ ಆರಂಭದಲ್ಲಿ ಇರುವ ಗೋಪುರದಲ್ಲಿ ವಿಟಾ ತಮ್ಮ ವಿವಾಹದ ಮೊದಲ ರಾತ್ರಿ ಕಳೆದಿದ್ದರು. ಅದು ಈಗ ವಸ್ತು ಸಂಗ್ರಹಾಲಯ. ಅಲ್ಲಿ ಹಿಂದೆ ಬಳಸುತ್ತಿದ್ದ ಹಕ್ಕಿಯ ಗರಿಯ ಲೆಕ್ಕಣಿ, ಶಾಯಿಯ ಬಾಟಲಿ, ಪತ್ರಗಳು, ಬಿಬಿಸಿ ರೇಡಿಯೋ ಕಾರ್ಯಕ್ರಮಗಳ ಮಾಹಿತಿಗೆ ಪ್ರಕಟಿಸುತ್ತಿದ್ದ ಅಂದಿನ ಪತ್ರಿಕೆ, ಸಾಹಿತ್ಯ ಕೃತಿಗಳು, ಕರೆನ್ಸಿ, ಛಾಯಾಚಿತ್ರಗಳು, ಅಂದಿನ ಉಡುಪುಗಳು, ಸ್ನಾನಗೃಹ, ನೀರು ಬಿಸಿ ಮಾಡಲು ಬಳಸುತ್ತಿದ್ದ ಬಾಯ್ಲರ್-ಈ ಎಲ್ಲವನ್ನೂ ಉಳಿಸಿ ಪ್ರವಾಸಿಗರ ಕುತೂಹಲ ತಣಿಸುತ್ತಾರೆ. ಇದನ್ನು ಹತ್ತಿ ಹೋಗಲು ಇರುವ ಮೆಟ್ಟಲುಗಳ ಅಗಲ ಕಿರಿದು. ಇಳಿಯುವವರು ಎದುರಾದಾಗ ಹತ್ತುವವರು ಹತ್ತಲು ಅಸಾಧ್ಯ. ಇದೇ ರೀತಿ ಇಳಿಯಲು ಮುಂದಾದಾಗ ಹತ್ತುವವರು ಅರ್ಧ ದಾರಿ ಕ್ರಮಿಸಿದ್ದರೆ ಇಳಿಯುವರು ಇಳಿಯಲು ಹೋಗಬಾರದು. ಮತ್ತೆ ಸ್ವಸ್ಥಾನಕ್ಕೆ ಮರಳಬೇಕು. ಇದನ್ನು ತಪ್ಪಿಸಲು ನೌಕರರನ್ನು ನೇಮಿಸಲಾಗಿದೆ. ಈ ಗೋಪುರ ಮತ್ತು ಸ್ಯಾಕ್ ವಿಲ್ಲೇ ನಿವಾಸ ಪ್ರವೇಶಕ್ಕೆ ಟಿಕೆ ಟ್‌ ಖರೀದಿಸಬೇಕು. ಇಂಥ ಇತಿಹಾಸವಿರುವ ಇಂಗ್ಲೆಂಡ್‌ನ ದೊಡ್ಮನೆ ಇತಿಹಾಸಪ್ರಿಯರು ತಪ್ಪದೇ ನೋಡಬೇಕಿರುವ ಸ್ಥಳಗಳಲ್ಲೊಂದು.