- ಹರ್ಷದ್‌ ಉದಯ್‌ ಕಾಮತ್‌

ಸೂರ್ಯೋದಯದ ನಂತರದ ಮೊದಲ ಒಂದು ಗಂಟೆ ಹಾಗೂ ಸೂರ್ಯಾಸ್ತಕ್ಕೂ ಮುನ್ನದ ಸುಮಾರು ಒಂದು ಗಂಟೆಯನ್ನು ಛಾಯಾಗ್ರಹಣದ ಭಾಷೆಯಲ್ಲಿ ‘ಗೋಲ್ಡನ್ ಹವರ್’ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಸೂರ್ಯನು ಬಾನಂಗಳದಲ್ಲಿ ತುಸು ಕೆಳಮಟ್ಟದಲ್ಲಿರುವುದರಿಂದ ಅವನ ಕಿರಣಗಳು ನೇರವಾಗಿ, ತೀವ್ರವಾಗಿ ಭೂಮಿಗೆ ಬೀಳದೆ, ಮೃದುವಾಗಿ ಬೆಚ್ಚಗಿನ ಬಣ್ಣದ ಛಾಯೆಯೊಂದಿಗೆ ಕಾಣಿಸುತ್ತದೆ. ಇದರಿಂದ ಫೊಟೋಗಳಿಗೆ ಸುಂದರವಾದ ಹೊಳಪು ದೊರೆಯುತ್ತದೆ.

ಇದನ್ನೂ ಓದಿ: ರಾಯಲ್ ಫೊಟೋಗ್ರಫರ್‌ನ ರೋಚಕ ಜೀವನಗಾಥೆ

ಪ್ರೀ ವೆಡ್ಡಿಂಗ್ ಫೊಟೋಗ್ರಫಿಯಲ್ಲಿ ಗೋಲ್ಡನ್ ಹವರ್‌ಗೆ ಬಹಳಷ್ಟು ಬೇಡಿಕೆ. ಜೋಡಿಯ ನಡುವಿನ ಪ್ರೀತಿ, ಆತ್ಮೀಯತೆ ಮತ್ತು ಭಾವನೆಗಳನ್ನು ತೋರಿಸಲು ಇದು ಬೆಸ್ಟ್ ಟೈಮ್. ಹಾಗೆಯೇ ಪೋರ್ಟ್ರೇಟ್ ಫೋಟೋಗ್ರಫಿಯಲ್ಲಿ ಗೋಲ್ಡನ್ ಹವರ್ ಬೆಳಕು, ವ್ಯಕ್ತಿಯ ಮುಖದ ಮೇಲೆ ಮೃದುವಾಗಿ ಬೀರುತ್ತಿರುವಾಗ ಚಿತ್ರ ಸೆರೆಹಿಡಿದರೆ ಅದು ಆಕರ್ಷಮಯವಾಗಿರುತ್ತದೆ. ಅಂತೆಯೇ ಸೂರ್ಯನ ರಶ್ಮಿಯನ್ನು ವ್ಯಕ್ತಿಯ ಹಿಂದಕ್ಕೆ ಕಾಣುವಂತೆ ಮಾಡಿ, ಬ್ಯಾಕ್ ಲೈಟ್ ಆಗಿ ಬಳಸಿದರೆ, ಕೇಶ ಮತ್ತು ದೇಹದ ಸುತ್ತಲೂ ಸುಂದರವಾದ ಚಿನ್ನದ ಬಣ್ಣದ ಬೆಳಕಿನ ಅಂಚು ಮೂಡುತ್ತದೆ. ಇದನ್ನು ರಿಮ್ ಲೈಟ್ ಎಂದು ಕರೆಯುತ್ತೇವೆ. ಈ ತರಹದ ಪ್ರಯೋಗವನ್ನು ಸಹ ಇಲ್ಲಿ ಪ್ರಯತ್ನಿಸಬಹುದು.

ಈ ಸಮಯ ಲ್ಯಾಂಡ್‌ಸ್ಕೇಪ್ ಫೊಟೋಗ್ರಫಿಯಲ್ಲಿಯೂ ಬಹಳ ವಿಶೇಷ. ಸೂರ್ಯನ ಬೆಳಕು ಮರಗಳ, ಕಟ್ಟಡ, ಹಾಗೂ ಬೆಟ್ಟಗಳಂಥ ವಸ್ತುಗಳ ಮೇಲೆ ಚೆಲ್ಲುವುದರಿಂದ ನೆರಳು ಉದ್ದವಾಗಿ ಮೂಡುತ್ತದೆ. ಇದರಿಂದ ಚಿತ್ರಕ್ಕೆ ಆಳ ಮತ್ತು ಆಯಾಮ ಹೆಚ್ಚುತ್ತದೆ. ಹಾಗೆಯೇ ಆಕಾಶದಲ್ಲಿನ ಬಣ್ಣಗಳೂ ನಿಧಾನವಾಗಿ ಬದಲಾಗುವುದರಿಂದ ಒಂದೇ ಸ್ಥಳದಲ್ಲಿ ವಿಭಿನ್ನ ರೀತಿಯ ಚಿತ್ರಗಳನ್ನು ತೆಗೆದು ಆಸ್ವಾದಿಸಬಹುದು.

Untitled design - 2026-11-02T160613.337

ಗೋಲ್ಡನ್ ಹವರ್‌ನಲ್ಲಿ ಕ್ಯಾಮೆರಾದಲ್ಲಿ ಬರುವಂಥ ಎಕ್ಸ್‌ಪೋಸರ್, ವೈಟ್ ಬ್ಯಾಲೆನ್ಸ್ ಮತ್ತು ಷಾಡೋಸ್ ಮೇಲೆ ಗಮನ ನೀಡುವುದು ಮುಖ್ಯ. ಸೂರ್ಯನ ಬೆಳಕು ಬದಲಾಗುತ್ತಿರುವುದರಿಂದ ಕೆಲವೇ ನಿಮಿಷಗಳಲ್ಲಿ, ಸೆಕೆಂಡುಗಳಲ್ಲಿ ಚಿತ್ರದ ಸ್ವರೂಪವೂ ಬದಲಾಗಬಹುದು. ಆದ್ದರಿಂದ ಇಂಥ ಸಮಯದಲ್ಲಿ ಮುಂಚಿತವಾಗಿ ಸ್ಥಳಕ್ಕೆ ತೆರಳಿ ಸಿದ್ಧರಾ ಗಿರುವುದು ಉತ್ತಮ. ಅಗತ್ಯಬಿದ್ದರೆ ಟ್ರೈ-ಪೊಡ್ ಸ್ಟಾಂಡ್ ಬಳಸುವುದರಿಂದ ಕ್ಯಾಮೆರಾವನ್ನು ಸ್ಥಿರವಾಗಿರಿಸಿ ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ತೆಗೆಯಬಹುದು.

ಸರಿಯಾದ ಬೆಳಕನ್ನು ಗುರುತಿಸುವ ಹೊಣೆ ಛಾಯಾಗ್ರಾಹಕನದು. ಅದನ್ನು ಬಳಸುವ ಪರಿಜ್ಞಾನವಿದ್ದರೆ ಸಾಮಾನ್ಯ ದೃಶ್ಯವೂ ಅದ್ಭುತ ಚಿತ್ರವಾಗುವುದರಲ್ಲಿ ಸಂಶಯವಿಲ್ಲ. ಪ್ರತಿ ದಿನ ಸಿಗುವ ಈ ಗೋಲ್ಡನ್ ಹವರ್ ನಲ್ಲಿ, ನಿಮ್ಮ ಕ್ಯಾಮೆರಾವನ್ನು ತೆಗೆದುಕೊಂಡು ಹೊರಗೆ ಅಡ್ಡಾಡಿ. ಬೆಳಕಿನೊಂದಿಗೆ ವಿಭಿನ್ನ ಕೋನಗಳಲ್ಲಿ ಪ್ರಯೋಗ ಮಾಡಿ, ಚಿತ್ರಗಳನ್ನು ಸೆರೆಹಿಡಿಯಿರಿ ಮತ್ತು ನಿಮ್ಮದೇ ಆದ ಒಂದು ಸುಂದರ ಕಥೆಯನ್ನು ಫೋಟೋಗಳ ಮೂಲಕ ಹೇಳಲು ಪ್ರಯತ್ನಿಸಿ.