ಪುಟ್ಟಮಲ್ಲಿಗೆ ಲವ್ವಾಗೋಯ್ತು!
ನನ್ನ ಕನಸಿನ ತಾಣಗಳು ಹಲವಿದೆ. ಆದರೆ ಅವುಗಳ ಪೈಕಿ ಪ್ಯಾರಿಸ್ ಪ್ರಮುಖವಾದುದು. ಪ್ಯಾರಿನ್‌ನ ಐಫಿಲ್ ಟವರ್ ಎಂದರೆ ನನಗೆ ಹುಚ್ಚು ಪ್ರೀತಿ. ಐಫಿಲ್ ಟವರ್ ಮುಂಭಾಗದಲ್ಲಿ ನಿಂತು ಯಾವುದಾದರೂ ರೊಮ್ಯಾಂಟಿಕ್ ಹಾಡಿಗೆ ಸೋಲೋ ಡ್ಯಾನ್ಸ್ ಮಾಡುವ ಆಸೆ ನನ್ನದು. ಸದ್ಯದ ಬ್ಯುಸಿ ಶೆಡ್ಯೂಲ್ ನಡುವೆ ಅದಕ್ಕೆ ಕಾಲ ಯಾವಾಗ ಕೂಡಿ ಬರುತ್ತದೆಯೆಂಬುದು ನನಗೂ ಗೊತ್ತಿಲ್ಲ. ಆದರೆ ಮಿಸ್ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ರೀಷ್ಮಾ ನಾಣಯ್ಯ.
ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರೀಷ್ಮಾ ನಾಣಯ್ಯ, ಸದ್ಯ ನಟ ಡಾಲಿ ಧನಂಜಯ್ ಜತೆಗೆ ಪುಟ್ಟಮಲ್ಲಿಯಾಗಿ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಬಹು ನಿರೀಕ್ಷಿತ ʻಅಣ್ಣ ಫ್ರಮ್ ಮೆಕ್ಸಿಕೋ' ಸಿನಿಮಾ ಚಿತ್ರೀಕರಣದ ಅನುಭವಗಳ ಜತೆಗೆ ಖುದ್ದು ರೀಷ್ಮಾ ಕಂಡ ಪ್ರವಾಸಿ ಪ್ರಪಂಚದ ಪರಿಚಯ ಓದುಗರೊಂದಿಗೆ ಹಂಚಿಕೊಂಡಿದ್ದು ಹೀಗೆ…
ವೃತ್ತಿಗಾಗಿ ಸುತ್ತಾಡುವ ಮಜವೇ ಬೇರೆ
ಪ್ರವಾಸ, ಪ್ರಯಾಣದಿಂದ ನನ್ನೊಳಗೆ ಹೊಸತನ, ಹೊಸ ಉತ್ಸಾಹ ಹುಟ್ಟಿಕೊಳ್ಳುತ್ತದೆ. ಸುತ್ತಲೂ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಪ್ರವಾಸದ ಮೂಲಕ ಹೊಸ ಜಾಗಗಳನ್ನು ಸುತ್ತಾಡುವುದು, ಹೊಸ ಜನರ ಪರಿಚಯ, ಅಲ್ಲಿನ ಆಹಾರ ಕ್ರಮ, ಸಂಸ್ಕೃತಿಯೆಲ್ಲವನ್ನೂ ಏಕಕಾಲದಲ್ಲಿ ತಿಳಿಯುವುದು ಸಾಧ್ಯವಾಗುತ್ತದೆ. ನಾನು ಹುಟ್ಟಿಬೆಳೆದದ್ದೆಲ್ಲವೂ ಬೆಂಗಳೂರಿನಲ್ಲಿ, ಆದರೆ ಸ್ನೇಹಿತರು, ಕುಟುಂಬದವರು ಕೂರ್ಗ್‌ನಲ್ಲಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಕೂರ್ಗ್‌ಗೆ ಹೋಗಿ, ಪ್ರಕೃತಿಯ ನಡುವೆ ಸುಂದರ ಸಮಯವನ್ನು ಕಳೆಯುತ್ತೇನೆ. ಬಣ್ಣದ ಬದುಕು ನನ್ನ ವೃತ್ತಿಯಾಗಿರುವುದುರಿಂದ ಚಿತ್ರೀಕರಣಕ್ಕಾಗಿಯೂ ಅನೇಕ ತಾಣಗಳಿಗೆ ಸುತ್ತುವ ಅವಕಾಶ ನನ್ನದಾಗಿದೆ.
ಇದನ್ನೂ ಓದಿ: ಪ್ರೇಮದ ಊರಲಿ ತಪಸ್ವಿನಿ ಪ್ರಯಾಣ
ಅಮ್ಮನ ಜತೆ ಮೊದಲ ಜಾರಣ
ನನಗೆ ಹಸಿರು ಪರಿಸರವೆಂದರೆ ಬಹಳ ಆಪ್ತವೆನಿಸುತ್ತದೆ. ಐ ಆಮ್ ಎ ಮೌಂಟೇನ್ ಪರ್ಸನ್. ಟ್ರಾವೆಲಿಂಗ್ ಜತೆಗೆ ಚಾರಣವನ್ನೂ ಎಂಜಾಯ್ ಮಾಡುತ್ತೇನೆ. ಕೂರ್ಗ್‌ನಲ್ಲಿ ಅನೇಕ ಕಡೆ ಟ್ರೆಕ್ ಮಾಡಿದ್ದೇನೆ.ಇತ್ತೀಚೆಗಷ್ಟೇ ಅಂಡಮಾನ್ಗೆ ಹೋಗುವ ವೇಳೆ, ಮೊದಲ ಬಾರಿಗೆ ಅಮ್ಮನ ಜತೆ ಟ್ರೆಕ್ ಮಾಡಿರುವುದು ನೆನಪಿನಲ್ಲಿ ಉಳಿಯುವಂಥ ಚಾರಣ. ಯಾಕೆಂದರೆ ಅಪ್ಪ ತುಂಬಾ ಆಕ್ಟೀವ್ ಆಗಿರುವ ವ್ಯಕ್ತಿ, ಚಾರಣ ಎಂದರೆ ಮೊದಲ ಸಾಲಿನಲ್ಲಿ ನಿಂತುಬಿಡುತ್ತಾರೆ. ಆದರೆ ಅಮ್ಮ ಚಾರಣ ಮಾಡುತ್ತಾರೆಂಬ ನಂಬಿಕೆ ಇರಲಿಲ್ಲ. ಮೊದಲ ಬಾರಿಗೆ ಟ್ರೆಕ್ಕಿಂಗ್ ಹೋದರೂ ತುಂಬಾ ಎಂಜಾಯ್ ಮಾಡಿದರು.

ಅಬುಧಾಬಿಯೆಂಬ ಮಾಯಾಲೋಕ
ನಾನು 15 ವರ್ಷದವಳಾಗಿದ್ದಾಗ ಮೊದಲ ಬಾರಿಗೆ ವಿಮಾನವೇರಿ ಕುಟುಂಬದ ಜತೆಗೆ ಅಬುಧಾಬಿಗೆ ಹೋಗಿದ್ದೆ. ಆದರೆ ಆಗ ನಾನು ಪ್ರವಾಸವನ್ನು ನೋಡುತ್ತಿದ್ದ ರೀತಿ ಬೇರೆಯದೇ ಇತ್ತು. ನಂತರ ನನ್ನ ಅಕ್ಕ ವೃತ್ತಿಗಾಗಿ ಅಬುಧಾಬಿಗೆ ಹೋದಾಗಲಂತೂ ಎರಡನೆಯ ಬಾರಿ ಒಬ್ಬಂಟಿಯಾಗಿಯೂ ಅಬುಧಾಬಿಗೆ ಪ್ರವಾಸ ಹೋಗಿದ್ದೆ. ಆಗ ಅಲ್ಲಿನ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೆ. ಪ್ರತಿ ಪ್ರವಾಸಿಗನೂ ಒಮ್ಮೆಯಾದರೂ ಭೇಟಿ ನೀಡಲೇಬೇಕಿರುವ ಪ್ರವಾಸಿ ತಾಣವದು.
ಕೆಡಿ ಜತೆಗೆ ಸ್ವಿಟ್ಜರ್‌ಲ್ಯಾಂಡ್
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ - ದಿ ಡೆವಿಲ್' ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡದ ಜತೆಗೆ ಸ್ವಿಟ್ಜರ್‌ಲ್ಯಾಂಡ್ ಹೋಗಿದ್ದೆ. ಐ ಫೆಲ್ ಇನ್ ಲವ್ ವಿತ್ ಸ್ವಿಟ್ಜರ್‌ಲ್ಯಾಂಡ್. ಚಿತ್ರೀಕರಣ ಮುಗಿದು ವಾಪಸ್ಸು ಬಂದಮೇಲೂ ಹಾಡನ್ನು ನೋಡಿದಾಗಲೆಲ್ಲ ಮತ್ತೆ ಮತ್ತೆ ಅಲ್ಲಿನ ಚಿತ್ರಣ ಕಣ್ಣ ಮುಂದೆ ಬರುತ್ತಲೇ ಇದೆ. ಇಂಟರ್‌ಲೇಕನ್, ಜೂರಿಚ್ ಸೇರಿದಂತೆ ಅನೇಕ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಧ್ರುವ ಸರ್ಜಾ ಅವರ ಜತೆಗೆ ಕೆಲಸ ಮಾಡುವಾಗ ಮೊದಲು ನರ್ವಸ್ ಆಗಿದ್ದೆ. ಆದರೆ ಅವರಂಥ ಸಹ ನಟನೊಂದಿಗೆ ಕೆಲಸ ಮಾಡಿರುವುದು ನನಗೆ ಖುಷಿ ನೀಡಿದೆ.
ಮತ್ತೊಂದು ಹಾಡು ವಿಯೆಟ್ನಾಂನಲ್ಲಿ!
ಬಹುನಿರೀಕ್ಷಿತ ʻಅಣ್ಣ ಫ್ರಮ್ ಮೆಕ್ಸಿಕೋ' ಸಿನಿಮಾದ ಪುಟ್ಟಮಲ್ಲಿ ಹಾಡು ಸದ್ಯ ಟ್ರೆಂಡ್ ಕ್ರಿಯೇಟ್ ಮಾಡಿದೆ. ಚೇತನ್ ಕುಮಾರ್ ಸಾಹಿತ್ಯವಿರುವ ಈ ಹಾಡಿಗೆ, ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಶೂಟಿಂಗ್‌ಗೂ ಮುನ್ನವೇ ಹಾಡಿನ ಬಗ್ಗೆ ಕೇಳಿದಾಗ ನನ್ನ ಮುಖದಲ್ಲಿ ನಗು ಮೂಡಿತ್ತು. ಅಷ್ಟೊಂದು ಇಷ್ಟವೆನಿಸಿತ್ತು. ಧನಂಜಯ್ ಮೊದಲ ಬಾರಿಗೆ ಅದ್ಧೂರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಹಾಡು ಬಿಡುಗಡೆಯಾಗಿ ಇಂದು ತಿಂಗಳ ಅಂತರದಲ್ಲೇ 10 ಮಿಲಿಯನ್ಗೂ ಹೆಚ್ಚಿನ ವೀಕ್ಷಣೆ ಕಂಡಿದ್ದು, 90,000ಕ್ಕೂ ಹೆಚ್ಚು ರೀಲ್ಸ್ ಮಾಡಿರುವುದು ನೋಡುವುದೇ ಖುಷಿ. ಬೆಂಗಳೂರಿನಲ್ಲಷ್ಟೇ ಅಲ್ಲದೆ ಮೈಸೂರನ ಅನೇಕ ಪರಿಸರದಲ್ಲಿ ಈ ಸಿನಿಮಾದ ಚಿತ್ರೀಕಣ ನಡೆದಿದೆ. ಚಿತ್ರದ ಇನ್ನೊಂದು ಹಾಡಿನ ಚಿತ್ರೀಕರಣ ಮೆಕ್ಸಿಕೋ- ವಿಯೆಟ್ನಾಂನಲ್ಲೂ ನಡೆದಿದೆ. ಆದರೆ ಅದರ ಬಗ್ಗೆ ಈಗಲೇ ಏನನ್ನೂ ಹೇಳಿಕೊಳ್ಳುವಂತಿಲ್ಲ. ಆದರೆ ಆ ಹಾಡಿನಲ್ಲೂ ಡಾಲಿ ಧನಂಜಯ್ ಅವರ ಜತೆಗೆ ಅದ್ಭುತವಾಗಿ ಡ್ಯಾನ್ಸ್ ಇರುವುದಂತೂ ನಿಜ.

ಐಫಿಲ್ ಟವರ್ ಮುಂದೆ ಸಖತ್ ಸ್ಟೆಪ್ಸ್
ನನ್ನ ಕನಸಿನ ತಾಣಗಳು ಹಲವಿದೆ. ಆದರೆ ಅವುಗಳ ಪೈಕಿ ಪ್ಯಾರಿಸ್ ಪ್ರಮುಖವಾದುದು. ಪ್ಯಾರಿನ್‌ನ ಐಫಿಲ್ ಟವರ್ ಎಂದರೆ ನನಗೆ ಹುಚ್ಚು ಪ್ರೀತಿ. ಐಫಿಲ್ ಟವರ್ ಮುಂಭಾಗದಲ್ಲಿ ನಿಂತು ಯಾವುದಾದರೂ ರೊಮ್ಯಾಂಟಿಕ್ ಹಾಡಿಗೆ ಸೋಲೋ ಡ್ಯಾನ್ಸ್ ಮಾಡುವ ಆಸೆ ನನ್ನದು. ಸದ್ಯದ ಬ್ಯುಸಿ ಶೆಡ್ಯೂಲ್ ನಡುವೆ ಅದಕ್ಕೆ ಕಾಲ ಯಾವಾಗ ಕೂಡಿ ಬರುತ್ತದೆಯೆಂಬುದು ನನಗೂ ಗೊತ್ತಿಲ್ಲ. ಆದರೆ ಮಿಸ್ ಮಾಡಿಕೊಳ್ಳುವುದಿಲ್ಲ.
ಪಾಸ್ತಾದ ರುಚಿಗೆ ಮಾರುಹೋದೆ..
ಯಾವುದೇ ಪ್ರವಾಸದಲ್ಲೂ ಅಲ್ಲಿನ ಸ್ಥಳೀಯ ಆಹಾರವನ್ನು ಸವಿಯುವುದೆಂದರೆ ನನಗೆ ಬಹಳ ಇಷ್ಟ. ಅದರಲ್ಲೂ ಸ್ವಿಟ್ಜರ್‌ಲ್ಯಾಂಡ್ ಪ್ರವಾಸದ ವೇಳೆ ರೆಸ್ಟೋರೆಂಟ್ ಒಂದರಲ್ಲಿ ಅಲ್ಲಿನ ಅಥೆಂಟಿಕ್ ಪಾಸ್ತಾವನ್ನು ತಿಂದಿದ್ದೆ. ಯಾವುದೇ ಕೃತಕ ಬಣ್ಣ, ರುಚಿಯನ್ನು ಹಾಕದೆ ತಯಾರಿಸಿದ್ದ ಹ್ಯಾಂಡ್‌ಮೇಡ್ ಪಾಸ್ತಾ ಆಗಿತ್ತು. ಮತ್ತೆ ಅಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕರೆ ಮತ್ತೆ ಪಾಸ್ತಾವನ್ನು ಟೇಸ್ಟ್ ಮಾಡಲು ಮರೆಯುವುದಿಲ್ಲ.
ಪ್ರವಾಸದ ನೆನಪು
ಯಾವುದೇ ಪ್ರವಾಸಕ್ಕೆ ಹೋದರೂ ಅಲ್ಲಿಂದ ಬರುವಾಗ ನೆನಪಿಗಾಗಿ ಫ್ರಿಡ್ಜ್ ಮ್ಯಾಗ್ನೆಟ್ಸ್ನಂಥ ವಸ್ತುಗಳನ್ನು ಸಂಗ್ರಹಿಸುತ್ತೇನೆ. ಅಲ್ಲಿನ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಕೊಂಡುಕೊಳ್ಳುತ್ತೇನೆ. ಇಲ್ಲವಾದರೆ ಅಲಂಕಾರಿಕ ವಸ್ತುಗಳನ್ನಾದರೂ ಶಾಪಿಂಗ್ ಮಾಡದೆ ನನ್ನ ಪ್ರವಾಸ ಪೂರ್ಣವಾಗುವುದಿಲ್ಲ.

ಚಳಿಯಲಿ..ಲೇಹ್ ಲಡಾಕ್‌ನಲ್ಲಿ..
'ಏಕ್ ಲವ್ ಯಾ' ಚಿತ್ರದ ಚಿತ್ರೀಕರಣದ ವೇಳೆ ಉತ್ತರ ಭಾರತದ ಅನೇಕ ಪ್ರವಾಸಿ ತಾಣಗಳನ್ನು, ಧಾರ್ಮಿಕ ಪ್ರದೇಶಗಳನ್ನು ಸುತ್ತಾಡಿದ ಅನುಭವ ನನ್ನದು. ಕಾಶ್ಮೀರ, ಗುಜರಾತ್, ರಾಜಸ್ಥಾನದಲ್ಲಿ ಶೂಟಿಂಗ್ ಮಾಡಲಾಗಿತ್ತು. ಅದರಲ್ಲೂ ಲೇಹ್ ಲಡಾಕ್ ಎಂದರೆ ನನ್ನ ನೆಚ್ಚಿನ ತಾಣ. ಡಿಸೆಂಬರ್ ತಿಂಗಳಿನಲ್ಲಿ ಅಲ್ಲಿಗೆ ಭೇಟಿ ನೀಡಿದ್ದರಿಂದ ನೀರು ಮಂಜುಗಡ್ಡೆಯಂತಾಗಿತ್ತು.ಕೊರೆಯುವ ಚಳಿಯ ನಡುವೆಯೂ ಚಿತ್ರೀಕರಣ ಮಾಡಿದ ಸಾಹಸಕ್ಕೆ ಇಡೀ ಚಿತ್ರತಂಡದ್ದು ಸಾಕ್ಷಿಯಾಗಿತ್ತು.
ಫೆರಾರಿ ವರ್ಲ್ಡ್ ಅನುಭವ ಅದೇ ಮೊದಲು
ಹೊಸ ಹೊಸ ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗುವುದು ನನಗೆ ಚಿಕ್ಕಂದಿನಿಂದಲೂ ಇರುವ ಹವ್ಯಾಸ. ನನ್ನ ಅಬುಧಾಬಿಯ ಪ್ರವಾಸದ ವೇಳೆ ಅಲ್ಲಿನ ಫೆರಾರಿ ವರ್ಲ್ಡ್‌ಗೆ ಹೋಗಿದ್ದೆ. ಅದು ಬೆಂಗಳೂರಿನ ವಂಡರ್ ಲಾ ದಂತೆ ಸುಲಭದಲ್ಲಿ ಸಿಗುವ ಮನರಂಜನೆಯಲ್ಲ. ಫೆರಾರಿ ವರ್ಲ್ಡ್ನಲ್ಲಿ ಭಯ ಹುಟ್ಟಿಸುವಂಥ ರೈಡ್‌ಗಳ ಅನುಭವ ಪಡೆಯಲು ಧೈರ್ಯವಿರಬೇಕು. ವಿಶ್ವದ ಫಾಸ್ಟೆಸ್ಟ್ ರೈಡ್ ಅಲ್ಲಿದ್ದು, ಕುಟುಂಬ ಸಮೇತವಾಗಿ ಅದನ್ನು ಎಂಜಾಯ್ ಮಾಡಿದ್ದೆ.