Wednesday, January 7, 2026
Wednesday, January 7, 2026

ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ತಂತ್ರಜ್ಞಾನದ ಬಳಕೆಯು ಕಲಾವಿದರಿಗೆ ಸಂಕಷ್ಟ ತರಬಹುದು! ; ಡಾ. ಬಿ.ಎಲ್‌ ಶಂಕರ್‌ ಕಳವಳ

ಸತತ 5ನೇ ಬಾರಿಗೆ ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಾ. ಬಿ.ಎಲ್‌. ಶಂಕರ್‌ಅವರು ಕರ್ನಾಟಕದಲ್ಲಿ ಚಿತ್ರಕಲೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರದ ಪಾತ್ರವನ್ನು ವಹಿಸಿದ್ದಾರೆ. ಪಾಶ್ಚಾತ್ಯರಿಗಷ್ಟೇ ಸೀಮಿತವೆಂಬಂತಿದ್ದ ಈ ಸಾಂಸ್ಕೃತಿಕ ಪರಂಪರೆಯನ್ನು ಬೆಂಗಳೂರು ಮಾತ್ರವಲ್ಲದೆ ಕರುನಾಡಿನೆಲ್ಲೆಡೆ ಹರಡುವಂತೆ ಮಾಡಿದ್ದಾರೆ. ಪ್ರತಿ ಮನೆಗೊಂದು ಸುಂದರ ಚಿತ್ತಾರವೆಂಬ ಪರಿಕಲ್ಪನೆಯೊಂದಿಗೆ ಸದ್ಯ 23ನೇ ಚಿತ್ರಸಂತೆಯ ಸಂಭ್ರಮದ ವೇಳೆ ಕರ್ನಾಟಕ ಚಿತ್ರಕಲಾ ಪರಿಷತ್‌ ನಡೆದು ಬಂದಿರುವ ಹಾದಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ.

ಚಿತ್ರಸಂತೆಗೆ ಯಾವರೀತಿಯ ಸಿದ್ಧತೆ ನಡೆಯುತ್ತಿದೆ?

2003ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಈ ಚಿತ್ರಸಂತೆ, ಈ ಬಾರಿ 23ನೇ ವರ್ಷದ ಆಚರಣೆಯಲ್ಲಿದೆ. ಭಾರತದ ಬಹುತೇಕ ಭಾಗಗಳಿಂದ ಕಲಾವಿದರು ಬಂದು ಸೇರುವ ಈ ಚಿತ್ರಕಲೆಯ ಹಬ್ಬದ ಹಿಂದೆ ಸುದೀರ್ಘವಾದ ಪಯಣವಿದೆ..ಪ್ರಪಂಚದಲ್ಲಿ ಒಂದು ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕಲಾವಿದರು ಮತ್ತು ಕಲಾಪ್ರೇಮಿಗಳ ಸಂಗಮವಾಗುವಂಥದ್ದು ಬಹಳ ಕಡಿಮೆ. ಕೆಲವು ರಾಷ್ಟ್ರಗಳಲ್ಲಿ ಈ ಥರದ ಪ್ರಯತ್ನಗಳು ಆಗಾಗ ನಡೆಯುತ್ತವೆಯಾದರೂ ನಮ್ಮಲ್ಲಂತೂ ಇದು ಹೊಸತನದ ಪ್ರಯತ್ನ. 2003ರಲ್ಲಿ ಹೆಚ್.‌ ಕೆ.ಚೌಟಾ ಅವರು ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಪ್ರೊ.ಕೆ.ಎಸ್.‌ ಅಪ್ಪಾಜಯ್ಯ ನಮ್ಮ ಕಾಲೇಜಿನ ಪ್ರಾಂಶುಪಾಲರಾಗಿದ್ದವರು. ಅವರೆಲ್ಲರೂ ಯೋಚಿಸಿ, ಈ ರೀತಿಯಲ್ಲಿ ಸಾಮಾನ್ಯ ಕಲಾವಿದರಿಗೂ ವೇದಿಕೆಯನ್ನು ಕೊಡಬೇಕೆಂಬ ಉದ್ದೇಶದಿಂದ ಚಿತ್ರಸಂತೆಯ ಪ್ರಾರಂಭವಾಯಿತು. ಈ ಮೂಲಕ ಚಿತ್ರಕಲೆಯೆಂಬುದು ಪಂಚತಾರಾ ಸಂಸ್ಕೃತಿಗೆ ಸೇರಿದ್ದು, ಇದೊಂದು ರೀತಿ ಬಂಡವಾಳ ಹೂಡುವ ಮಾಧ್ಯಮ ಎಂಬ ಧೋರಣೆಯಿಂದ ಹೊರಬಂದು ಜನಸಾಮಾನ್ಯರಿಗೂ ತಲುಪಿಸಬೇಕು ಎಂಬ ಕಾರಣಕ್ಕೆ ಈ ಪ್ರಯತ್ನ ಪ್ರಾರಂಭವಾಗಿತ್ತು.

ಪಾಶ್ಚಾತ್ಯ ಸಂಸ್ಖೃತಿಗೆ ಸೀಮಿತವೆಂಬಂತಿದ್ದ ಚಿತ್ರಕಲಾ ವಿದ್ಯಾಲಯಗಳು ಕರ್ನಾಟಕದಲ್ಲೂ ಹುಟ್ಟಿಕೊಂಡಿದ್ದು ಹೇಗೆ?

ಕರ್ನಾಟಕಕ್ಕೆ ಚಿತ್ರಕಲೆಯನ್ನು ಕಲಿಸುವ ಶಾಲೆ ಅಥವಾ ಕಾಲೇಜು ಇರಬೇಕೆಂಬ ಚಿಂತನೆ ಪ್ರಾರಂಭವಾಗಿದ್ದು, 60ರ ದಶಕಗಳಲ್ಲಿ ಅದಕ್ಕೂ ಮುನ್ನ ಕೆಂಗಲ್‌ ಹನುಮಂತಯ್ಯನವರು ವಿಧಾನ ಸೌಧ ಕಟ್ಟಿಸುವ ಸಂದರ್ಭದಲ್ಲಿ ಅಲ್ಲಿ ಕೆಲವು ಚಿತ್ರಕಲೆಗಳನ್ನು ರಚಿಸಲು ಕಲಾವಿದರನ್ನು ಆಹ್ವಾನ ಮಾಡಿದಾಗ ತಮಿಳುನಾಡು, ಕೇರಳ ಸೇರಿದಂತೆ ಅನ್ಯ ರಾಜ್ಯದವರೇ ಹೆಚ್ಚಿಗೆ ಬಂದು ಕರ್ನಾಟಕದವರ ಸಂಖ್ಯೆ ಬಹಳ ಕಡಿಮೆಯಿತ್ತು. ಆಗ ಕೆಂಗಲ್‌ ಹನುಮಂತಯ್ಯನವರು ಕರ್ನಾಟಕದಲ್ಲಿ ಮುಂಚೂಣಿಯಲ್ಲಿದ್ದ ಆರ್ಯ ಮೂರ್ತಿಯವರು, ಪ್ರೊ.ಎನ್‌ ಎಸ್‌ ನಂಜುಂಡರಾಯರನ್ನು ಕರೆಸಿ ಮಾತನಾಡಿ, ಕರ್ನಾಟಕದಲ್ಲೂ ಕಲಾವಿದರನ್ನು ತಯಾರು ಮಾಡುವ ಕಾಲೇಜನ್ನು ನಿರ್ಮಿಸಬೇಕೆಂಬ ಪ್ರಸ್ತಾಪ ಮಾಡಿದ್ದರಂತೆ. ಅದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಅವರೆಲ್ಲ ಸೇರಿ 60ರ ದಶಕಗಳಲ್ಲಿ ಸಣ್ಣಮಟ್ಟದಲ್ಲಿ ಮಲ್ಲೇಶ್ವರಂನಲ್ಲಿ, ನಂತರ ಗಾಂಧಿ ಭವನ ಹೀಗೆ ಅನೇಕ ಕಡೆ ಚಿಕ್ಕದಾದ ಕುಟೀರಗಳಲ್ಲಿ ಕಾಲೇಜು ನಡೆಸಿ, ನಂತರ ಇಲ್ಲಿಗೆ ಬರಬೇಕಾದರೆ 60ರ ದಶಕದಲ್ಲಿ ʻಮೈಸೂರು ಚಿತ್ರಕಲಾ ಶಾಲೆʼ ಎಂದು ಪ್ರಾರಂಭಿಸಿದರು. ಕ್ರಮೇಣ ಅದು ಕರ್ನಾಟಕ ಎಂದು ಬದಲಾಗಿ ʻಕರ್ನಾಟಕ ಚಿತ್ರಕಲಾ ಪರಿಷತ್‌ʼ ಎಂಬ ಹೆಸರು ಪಡೆದುಕೊಂಡಿತು. ಚಿತ್ರಕಲಾ ಪರಿಷತ್‌, ಚಿತ್ರಕಲಾ ಪರಿಷತ್‌ ಟ್ರಸ್ಟ್‌ ರೂಪದಲ್ಲಿ ಪ್ರಾರಂಭ ಮಾಡಲಾಗಿದೆ. ದೇವರಾಜ ಅರಸು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 70ರ ದಶಕದಲ್ಲಿ 3 ಎಕರೆಯ ಈ ಸರಕಾರಿ ಸ್ವಾಮ್ಯದ ಜಾಗವನ್ನು ಚಿತ್ರಕಲೆಗಾಗಿ ಮೀಸಲಿಟ್ಟರು. ಜಾಗದ ಜತೆಗೆ ಕಟ್ಟಡ ಕಟ್ಟುವುದಕ್ಕಾಗಿ ಆ ಕಾಲದಲ್ಲೇ 25 ಲಕ್ಷರು. ಅನುದಾನವನ್ನೂ ನೀಡಿದ್ದರು. ಅದರ ಜತೆಗೆ ಆಗ ಚಿತ್ರಕಲಾ ಪರಿಷತ್‌ ಗೆ ಬಹಳ ಆಪ್ತವಾಗಿ ಗುರುತಿಸಿಕೊಂಡಿದ್ದ ಕೇಜ್ರಿವಾಲ್‌ ಎಂಬುವವರು 25 ಲಕ್ಷ ರು. ಹಣ ನೀಡಿ ಸಹಾಯ ಮಾಡಿದ್ದಾರೆ. ಈಗ ಕಳೆದ ಆರೇಳು ವರ್ಷಗಳಿಂದ ಚಿತ್ರಕಲಾ ಮಹಾವಿದ್ಯಾಲಯ ರಾಜರಾಜೇಶ್ವರಿ ನಗರದ ಡಾ. ವಿಷ್ಣುವರ್ಧನ್‌ ರಸ್ತೆಯ ಸಮೀಪ ಹೊಸ ಜಾಗ ನೀಡಿದ್ದಾರೆ. 14 ಎಕರೆ ಜಾಗದಲ್ಲಿ ಹೊಸ ಕಾಲೇಜು ಬಂದಿದೆ. ಇಡೀ ಭಾರತದಲ್ಲಿ ಪ್ರಪ್ರಥಮ ಸಂಜೆ ಕಾಲೇಜು ಕಳೆದ 6 ವರ್ಷಗಳಿಂದ ಇಲ್ಲಿ ಪ್ರಾರಂಭವಾಗಿದೆ. ಸಕಾಲದಲ್ಲಿ ವಿದ್ಯಾಭ್ಯಾಸ ಮುಗಿಸುವುದಕ್ಕೆ ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ಸಿಗಲಿ ಎಂಬ ಚಿಂತನೆ ಇದರ ಹಿಂದಿದೆ. ಭಾರತದಲ್ಲಿರುವಂಥ ಪ್ರತಿಷ್ಠಿತ 10 ಕಾಲೇಜುಗಳ ಪೈಕಿ ಚಿತ್ರಕಲಾ ಪರಿಷತ್‌ ಮಹಾವಿದ್ಯಾಲಯ ಟಾಪ್‌ ಲಿಸ್ಟ್‌ ನಲ್ಲಿದೆ ಎಂಬುದು ಹೆಮ್ಮೆಯ ವಿಚಾರ.

ಪ್ರವಾಸೋದ್ಯಮದ ದೃಷ್ಟಿಯಿಂದ ಚಿತ್ರಕಲಾ ಪರಿಷತ್‌ ಗೆ ಇರುವ ಪ್ರಾಮುಖ್ಯತೆ?

ದೇಶ ವಿದೇಶಗಳಿಂದ ಎರಡು ಕಾರಣಕ್ಕಾಗಿ ಚಿತ್ರಕಲಾ ಪರಿಷತ್‌ ಗೆ ಜನ ಬರುತ್ತಾರೆ. ಕಲಿಯುವುದಕ್ಕಾಗಿ ಬರುವವರು ಅನೇಕರಾದರೆ ಚಿತ್ರಕಲಾ ಪರಿಷತ್‌ ನ ಮ್ಯೂಸಿಯಂ ವೀಕ್ಷಣೆಗೆ ಬರುವ ಮಂದಿ ಇನ್ನೂ ಹಲವರು. ಇಲ್ಲಿ 13 ಗ್ಯಾಲರಿಗಳಿವೆ. ಅವುಗಳಲ್ಲಿ ಅತ್ಯಂತ ಅಪರೂಪವಾಗಿರುವಂಥ ಚಿತ್ರಕಲೆಗಳಿವೆ. ರಾಷ್ಟವಲ್ಲದೆ ಪ್ರಪಂಚ ಕಂಡ ಹೆಸರಾಂತ ಕಲಾವಿದರಾದ ರೋರಿಕ್‌, ಠಾಗೂರ್‌, ಕೃಷ್ಣ ರೆಡ್ಡಿ, ಕಲಾಕೃತಿಗಳು ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ತೊಗಲು ಗೊಂಬೆಗಳ ಸಂಗ್ರಹ ನಮ್ಮಲ್ಲಿದೆ. ಹಾಗಾಗಿ ಇವೆಲ್ಲವನ್ನೂ ನೋಡುವುದಕ್ಕೆ ಜನ ಬೇರೆ ಬೇರೆಡೆಯಿಂದ ಬರುತ್ತಾರೆ. ವರ್ಷದ 365 ದಿನಗಳಲ್ಲೂ ನಮ್ಮಲ್ಲಿ ಚಿತ್ರಕಲೆಯ ಪ್ರದರ್ಶನ ನಡೆಯುತ್ತಿರುತ್ತವೆ. 6-8 ತಿಂಗಳ ಮುಂಚಿತವಾಗಿಯೇ ಗ್ಯಾಲರಿಗಳು ಬುಕ್‌ ಆಗಿರುತ್ತವೆ. ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಲಾಲ್‌ ಬಾಗ್‌, ಕಬ್ಬನ್‌ ಪಾರ್ಕ್‌, ಟಿಪ್ಪು ಕೋಟೆ ಇದ್ದೇ ಇದೆ. ಆದರೆ ಚಿತ್ರಕಲೆಗೆ ಸಂಬಂಧಪಟ್ಟಂತೆ ಇಂಥ ತಾಣ ಬೇರೆ ಯಾವುದೂ ಇಲ್ಲ.

ಚಿತ್ರಸಂತೆಗೆ ಬರುವ ಕಲಾವಿದರ ಆಯ್ಕೆ ಪ್ರಕ್ರಿಯೆ ಯಾವ ರೀತಿಯಲ್ಲಿರುತ್ತದೆ ?

ಮೊದಲಿನಿಂದಲೂ ಆಯ್ಕೆ ಪ್ರಕ್ರಿಯೆ ಮಾಡುವುದಕ್ಕಾಗಿ ಕಲಾವಿದರ ಕಮಿಟಿಯನ್ನು ರಚಿಸಿದ್ದೇವೆ. ಅಪ್ಲಿಕೇಶನ್‌ ಜತೆ ಮೂರು ಕಲಾಕೃತಿಗಳನ್ನು ಕಳುಹಿಸುವುದಕ್ಕೆ ಹೇಳುತ್ತೇವೆ. ಆದರೆ ಕಳೆದೊಂದು ವರ್ಷದಿಂದ ಎಲ್ಲವನ್ನೂ ಡಿಜಿಟಲೀಕರಣ ಮಾಡಿ ಆನ್‌ ಲೈನ್‌ ಮೂಲಕವೇ ಅಪ್ಲಿಕೇಶನ್‌ ಭರ್ತಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಯ್ಕೆಯಾದವುಗಳ ಮಾಹಿತಿಯನ್ನೂ ಆನ್‌ ಲೈನ್‌ ಮೂಲಕವೇ ನೀಡಲಾಗುತ್ತದೆ. ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿಲ್ಲ ಎಂಬ ನಿರಾಶೆ ಯಾವುದೇ ಕಲಾವಿದನಲ್ಲೂ ಬರಬಾರದೆಂಬ ಕಾರಣಕ್ಕೆ ಕಳೆದ ವರ್ಷದಿಂದಲೂ ಅರ್ಜಿಯ ಜತೆ ಕಳಿಸಲಾದ ಎಲ್ಲ ಕಲಾಕೃತಿಗಳನ್ನು ವೆಬ್‌ ಸೈಟ್‌ ನಲ್ಲಿ ಪ್ರದರ್ಶನಕ್ಕಿಡುತ್ತೇವೆ. ಅದನ್ನು ವರ್ಚ್ಯುವಲ್‌ ಗ್ಯಾಲರಿಯಾಗಿ ಪರಿವರ್ತಿಸುತ್ತೇವೆ. ಅದಾಗಿ ಒಂದು ತಿಂಗಳ ಕಾಲ ಉಚಿತವಾಗಿ ಈ ಪ್ರದರ್ಶನವನ್ನು ಪ್ರಪಂಚದ ಕಲಾಪ್ರೇಮಿಗಳ ಮುಂದಿಡುತ್ತೇವೆ. ನೇರವಾಗಿ ಕಲಾವಿದನನ್ನು ಸಂಪರ್ಕಿಸುವ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಲಾಗುತ್ತದೆ.

ʻಕವಿ ನಮನʼ ದಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪರಿಷತ್‌ ಅವರಣ ಸಜ್ಜಾಗಿರುವುದು ಹೇಗೆ ?

ಕೋವಿಡ್‌ ಗೂ ಮುಂಚೆ ಚಿತ್ರಕಲಾಪರಿಷತ್‌ ಆವರಣದಲ್ಲಿ ಓಪನ್‌ ಏರ್‌ ಥಿಯೇಟರ್‌ ನಲ್ಲಿ ಕವಿನಮನ ಕಾರ್ಯಕ್ರಮವನ್ನು ಮಾಡುತ್ತಿದ್ದೆವು. ಒಂದೊಂದು ತಿಂಗಳಿಗೆ ಒಬ್ಬೊಬ್ಬ ಕವಿಯನ್ನು ಆಯ್ಕೆ ಮಾಡಿಕೊಂಡು ಅವರ ಕವನಗಳನ್ನು ಪ್ರಖ್ಯಾತ ಗಾಯಕರಿಂದ ಹಾಡಿಸುವ ಕೆಲಸವದು. ʻಮಾರ್ನಿಂಗ್‌ ರಾಗʼ ಅನ್ನುವ ಸಂಗೀತ ಕಾರ್ಯಕ್ರಮ ವರ್ಷಕ್ಕೆರಡು ಬಾರಿ ನಡೆದಿದೆ. ಜತೆಗೆ ಶಂಕರ್‌ ನಾಗ್‌ ಅವರ ಕಾಲದಲ್ಲಿ ತೆರೆಕಂಡ ನಾಗಮಂಡಲ ಚಿತ್ರವನ್ನೂ ಇಲ್ಲಿ ಪ್ರದರ್ಶನ ಮಾಡಲಾಗಿತ್ತು.ಇವೆಲ್ಲದರ ಜತೆಗೆ ಸೆಮಿ ಪರ್ಮನೆಂಟ್‌ ಆದಂಥ ಒಂದಷ್ಟು ಸ್ಟಾಲ್‌ ಗಳನ್ನು ಸದ್ಯದಲ್ಲೇ ಪೂರ್ಣಗೊಳಿಸುವ ಉದ್ದೇಶವಿದೆ. ಅದಾದ ಬಳಿಕ ಓಪನ್‌ ಏರ್‌ ಥಿಯೇಟರ್‌ ಪುನಶ್ಚೇತನಗೊಳಿಸಿ 350ಕ್ಕೂ ಹೆಚ್ಚು ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಸ್ಥಳಾವಕಾಶ ಕಲ್ಪಿಸುವ ಯೋಜನೆಯೂ ಇದೆ.

ಚಿತ್ರಸಂತೆಯನ್ನು ಪ್ರತಿ ಬಾರಿಯೂ ಜನವರಿ ತಿಂಗಳಲ್ಲೇ ಮಾಡುತ್ತಿರುವುದು ಯಾಕಾಗಿ ?

ಡಿ ಕೆ ಚೌಟ ಅವರು ಜನವರಿಯ ಮೊದಲ ಭಾನುವಾರದಂದು ಮೊದಲ ಚಿತ್ರಸಂತೆಗೆ ಚಾಲನೆ ನೀಡಿದ್ದರು. ವರ್ಷದ ಮೊದಲ ಭಾನುವಾರವಾದರೆ ಒಳ್ಳೆಯದೆಂಬ ಉದ್ದೇಶದಿಂದ ಪ್ರಾರಂಭವಾಯ್ತು. ಜನವರಿಯಲ್ಲಿ ಪರೀಕ್ಷೆಗಳಿರುವುದಿಲ್ಲ, ಕಟಾವಿನ ಸಮಯವೂ ಮುಗಿದು ಹೊಸ ವರ್ಷದ ಸಣಭ್ರಮದಲ್ಲಿರುವ ಜನರಿಗೆ ಮನಸ್ಸಿಗೆ ಮುದ ನೀಡಲಿ ಎಂಬ ಉದ್ದೇಶವಿರಬಹುದು. ಅದಾದ ಮೇಲೆ ಒಂದೆರಡು ಬಾರಿ ಅನಿವಾರ್ಯವಾಗಿ ದಿನ ವ್ಯತ್ಯಾಸವಾಗಿರುವುದು ಬಿಟ್ಟರೆ ಉಳಿದಂತೆ ಮೊದಲ ಭಾನುವಾರಕ್ಕೇ ಮೊದಲ ಆದ್ಯತೆ.

ಚಿತ್ರಸಂತೆ ವರ್ಷಕ್ಕೆ ಒಂದೇ ಅಂತ ಸೀಮಿತ ಆಗುವ ಬದಲು ತಿಂಗಳು ಅಥವಾ ಮೂರು ತಿಂಗಳಿಗೊಂದು ಮಾಡಿದರೆ ಆರ್ಟ್ ಫೀಲ್ಡ್ ಗೆ ಸಹಕಾರಿ ಆಗಬಹುದಲ್ವಾ?

ಚಿತ್ರಸಂತೆ ಬೆಂಗಳೂರಿನಲ್ಲೇ ಯಾಕೆ ? ಬೇರೆ ಕಡೆಗಳಲ್ಲಿ ಯಾಕಾಗಿ ಮಾಡುತ್ತಿಲ್ಲ. ಒಂದೇ ದಿನಕ್ಕೆ ಸೀಮಿತಗೊಳಿಸಿರುವುದ್ಯಾಕೆ ಹೀಗೆ ಅನೇಕ ಪ್ರಶ್ನೆಗಳು ಕಲಾಪ್ರೇಮಿಗಳಿಂದ ಬರುತ್ತಲೇ ಇದೆ. ಚಿತ್ರಕಲೆ ಎಂಬುದು ಬರೀ ಪ್ರದರ್ಶನಕ್ಕಷ್ಟೇ ಸೀಮಿತವಲ್ಲ. ಇದನ್ನು ಕೊಳ್ಳುವವರೂ ಬೇಕಾಗುತ್ತಾರೆ. ಪ್ರದರ್ಶನವಾಗಿ ವ್ಯಾಪಾರವಾಗದೇ ಹೋದರೆ ಕಲಾವಿದರಿಗೆ ನಷ್ಟವಾಗುತ್ತದೆ. ಬೆಂಗಳೂರು ಬೈಯಿಂಗ್‌ ಕೆಪ್ಯಾಸಿಟಿ ಇರುವ ಪ್ರದೇಶವೆಂಬುದನ್ನು ಎಲ್ಲರೂ ಒಪ್ಪಲೇಬೇಕು.ಈ ಕಾರಣಕ್ಕಾಗಿಯೇ ಬೆಂಗಳೂರನ್ನು ಸಂತೆಗೆ ಆಯ್ಕೆ ಮಾಡಲಾಗಿದೆ. ಇನ್ನು ಸಂತೆಯೆಂದರೆ ಅದು ಬೆಳಗ್ಗಿನಿಂದ ಸಂಜೆಯವರೆಗೆ ನಡೆದರೇ ಚೆಂದ. ಅದನ್ನು ಇದನ್ನು ವಿಸ್ತರಿಸಿದರೆ ಇಲ್ಲಿರುವ ಸೆಕ್ಯುರಿಟಿ ಸಮಸ್ಯೆಗಳಿಂದ ಅದು ಸಾಧ್ಯವಾಗುವುದೂ ಇಲ್ಲ. ವರ್ಷದದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸಂತೆ ಮಾಡುವುದಕ್ಕೆ ಸಣ್ಣ ಪ್ರಯೋಗಗಳು ಕಳೆದ ವರ್ಷವೇ ನಡೆದಿವೆ. ʻನಮ್ಮ ಆರ್ಟ್‌ ಬೆಂಗಳೂರುʼ ಕಳೆದ ಮೇ ನಲ್ಲಿ ನಡೆದಿದ್ದು, ಆಯ್ದ 150-200 ಕಲಾವಿದರ ಕಲಾ ಪ್ರದರ್ಶನ ನಡೆಸಿದೆವು. ಆದರೆ ನಾನಾ ಕಾರಣಗಳಿಂದಾಗಿ ಯಶಸ್ಸು ಸಿಕ್ಕಿಲ್ಲ. ಆದರೂ ಈ ಕಾರ್ಯಕ್ರಮವನ್ನು ಮತ್ತೆ ಮಾಡುವ ಉದ್ದೇಶವಿದೆ.

ಚಿತ್ರಕಲಾ ಕ್ಷೇತ್ರದ ಮುಂದಿರುವ ಸವಾಲುಗಳು ಯಾವುದು?

ಫೈನ್‌ ಆರ್ಟ್‌ ಹೆಸರಿನಲ್ಲಿ ಡಿಸೈನ್‌ ಮಾಡುವ ತಂತ್ರಜ್ಞಾನ ಈಗ ಎಲ್ಲೆಡೆ ಪ್ರಾರಂಭವಾಗಿದೆ. ಆದರೆ ಇದು ಕಲಾವಿದರ ಪ್ರತಿಭೆಯನ್ನು ಹೊಸಕಿಹಾಕುತ್ತದೆ. ಇನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ತಂತ್ರಜ್ಞಾನದ ಬಳಕೆಯೂ ಕಲಾವಿದರಿಗೆ ಸಂಕಷ್ಟ ತರುವಂಥದ್ದು. ಇದರಿಂದ ಯಾವುದು ಕಲಾವಿದನಿಂದಲೇ ರಚಿತವಾಗಿರುವುದು, ಯಾವುದು ತಂತ್ರಜ್ಞಾನ ಆಧಾರಿತವಾದುದು ಎಂಬ ಗೊಂದಲ ಸೃಷ್ಟಿಯಾಗುತ್ತದೆ. ಭವಿಷ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಇದು ಕಾರಣವಾಗಬಹುದು

ಚಿತ್ರಕಲಾ ಪರಿಷತ್‌ ನಿಂದ ಯುವ ಜನಾಂಗದಲ್ಲಿ ಚಿತ್ರಕಲೆಯ ಬಗೆಗೆ ಆಸಕ್ತಿ ಬೆಳೆಸುವ ಪ್ರಯತ್ನಗಳು ಎಷ್ಟರ ಮಟ್ಟಿಗೆ ನಡೆಯುತ್ತಿದೆ ?

ಮಕ್ಕಳು, ಯುವ ಜನತೆಗಾಗಿ ಸಾಧ್ಯವಾದಷ್ಟು ಹಾಬಿ ಕ್ಲಾಸ್‌ಗಳನ್ನು ನಡೆಸುತ್ತೇವೆ. ಮಕ್ಕಳಿಗಾಗಿ ಸಮ್ಮರ್‌ ಕ್ಲಾಸ್‌, ವೆಕೇಷನ್‌ ಕೋರ್ಸ್‌ಗಳನ್ನು ಚಿತ್ರಕಲಾ ಪರಿಷತ್‌ನ ಎರಡೂ ಕ್ಯಾಂಪಸ್‌ ಗಳಲ್ಲಿ ಮಾಡಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಕ್ಕಳಿಗಾಗಿ ಚಿತ್ರಕಲಾ ಶಿಬಿರ ಮಾಡುವ ಬಗ್ಗೆ ಸಲಹೆಗಳು ಬಂದಿವೆ.

ನಿಮ್ಮ ಜೀವನದಲ್ಲಿ ಚಿತ್ರಕಲೆಗಿರುವ ಪ್ರಾಮುಖ್ಯತೆಯೇನು ?

ನಾನು ಮೂಲತಃ ವಿಜ್ಞಾನದ ವಿದ್ಯಾರ್ಥಿ. ನಂತರ ಕಾನೂನು ವಿದ್ಯಾಭ್ಯಾಸ, ಪೊಲಿಟಿಕಲ್‌ ಸೈನ್ಸ್‌ ಓದಿದೆ. ನಿಜ ಹೇಳಬೇಕೆಂದರೆ ನನಗೆ ಸಾಹಿತ್ಯದಲ್ಲಿ ಆಸಕ್ತಿಯಿತ್ತೇ ಹೊರತು ಚಿತ್ರಕಲೆಯಲ್ಲಿರಲಿಲ್ಲ. ಚಿಕ್ಕ ವಯಸ್ಸಿನಿಂದಲೂ ಸಾಹಿತಿಗಳೊಂದಿಗೆ ನನ್ನ ಒಡನಾಟವಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಪಿ.ಲಂಕೇಶ್‌, ಯು.ಆರ್‌ ಅನಂತಮೂರ್ತಿ, ಚಂದ್ರಶೇಖರ ಪಾಟೀಲರು, ಡಿ.ಆರ್‌ನಾಗರಾಜ್‌ ಅವರ ಒಡನಾಟ ಸಾಹಿತ್ಯದ ಅಭಿರುಚಿ ಬೆಳೆಸಿತ್ತು. ಸಾಂಸ್ಕೃತಿಕ ವ್ಯಕ್ತಿತ್ವವಿರುವ ರಾಜಕಾರಣಿಗಳ ಜತೆಗೆ ಒಡನಾಟವಿತ್ತು. ಆಕಸ್ಮಿಕವಾಗಿ ನಾನು ವಿಧಾನಪರಿಷತ್‌ ಸಭಾಪತಿಯಾಗಿದ್ದ ಸಂದರ್ಭದಲ್ಲಿ ನನಗೆ ಇಲ್ಲಿನ ಸದಸ್ಯತ್ವವಾಯಿತು. ಮುಂದೆ ಇಲ್ಲಿ ಅಧ್ಯಕ್ಷ ಸ್ಥಾನದ ಅವಕಾಶ ಒದಗಿಬಂತು. ಅಧ್ಯಕ್ಷನಾದ ಮೇಲೆ ನನ್ನ ಪರಿಪಾಠದಂತೆ ಸಿಕ್ಕಿರುವ ಜವಾಬ್ದಾರಿಗೆ ನ್ಯಾಯ ಒದಗಿಸಿದ್ದೇನೆ. ಸಂಪೂರ್ಣವಾಗಿ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ.

ಯುವ ಕಲಾವಿದರಿಗೆ ನೀವು ಹೇಳಬಯಸುವ ಸಂದೇಶವೇನು ?

21ನೇ ಶತಮಾನದ ಬದುಕಿನ ರೀತಿ, ವೇಗ ಸಾಮಾಜಿಕ, ರಾಜಕೀಯ, ಆರ್ಥಿಕ ಸವಾಲುಗಳ ನಡುವೆ ಅದರಿಂದ ಬಿಡುಗಡೆ ಅಥವಾ ವಿಶ್ರಾಂತಿ ಬೇಕೆನಿಸಿದಾಗ ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ ಹಾಗೂ ಚಿತ್ರಕಲೆಯತ್ತ ಮುಖಮಾಡಿ. ಅದರಿಂದಷ್ಟೇ ಎಲ್ಲದಕ್ಕೂ ಪರಿಹಾರ ನೀಡಲು ಸಾಧ್ಯ. ಬಿಡುವಿನ ಸಮಯವನ್ನು ಇಂಥ ವಿಚಾರಗಳಲ್ಲಿ ತೊಡಗಿಸಿಕೊಳ್ಳಿ.

10 ವರ್ಷಗಳ ನಂತರ ಚಿತ್ರಸಂತೆಯ ಚಿತ್ರಣ ಹೇಗೆ ಬದಲಾಗಲಿದೆ ? ಏನು ಬದಲಾಯಿಸಬೇಕೆಂದುಕೊಂಡಿದ್ದೀರಿ ?

ಬೆಂಗಳೂರಿನಲ್ಲಿ ಮಾಡುವ ಚಿತ್ರಸಂತೆಯಾದರೆ ಒಂದಷ್ಟು ವ್ಯವಸ್ಥಿತವಾಗಿ ಮಾಡಬಹುದಾ ಎಂಬುದರ ಬಗ್ಗೆ ಚಿಂತಿಸಲೇಬೇಕು. ಯಾಕೆಂದರೆ 10 ವರ್ಷಗಳ ನಂತರ ಬೆಂಗಳೂರು ಅದೆಷ್ಟರ ಮಟ್ಟಿಗೆ ಅಭಿವೃದ್ಧಿಯಾಗಬಹುದೆಂಬುದು ಊಹೆಗೂ ನಿಲುಕದು. ಆದ್ದರಿಂದ ಚಿತ್ರಸಂತೆಯನ್ನು ಬೇರೆ ಬೇರೆ ಕಡೆಗಳಲ್ಲಿ ಮಾಡಬಹುದಾ ಎಂಬುದಾಗಿಯೂ ಚಿಂತಿಸಬೇಕಿದೆ. ಕರ್ನಾಟಕದ ಬೇರೆ ಭಾಗಗಳಿಗೂ ಚಿತ್ರಸಂತೆಯನ್ನು ಹರಡುವಂತೆ ಮಾಡಬೇಕೆಂಬ ಚಿಂತನೆ ತಪ್ಪಲ್ಲ. ಅದನ್ನು ಸಾಕಾರಗೊಳಿಸುವಲ್ಲಿ ಹೆಚ್ಚಿನ ಶ್ರಮ ಬೇಕಾಗಬಹುದು. ಗುಲ್ಬರ್ಗಾದ ಕಲ್ಯಾಣ ಕರ್ನಾಟಕ ಬೋರ್ಡ್‌ ಈ ಬಗ್ಗೆ ಪ್ರಸ್ತಾಪನೆಯಿಟ್ಟಿದ್ದಾರೆ. ಹೀಗೆ ಕರ್ನಾಟಕದ ಅನೇಕ ಭಾಗಗಳಲ್ಲಿ ಚಿತ್ರಕಲಾ ಶಾಲೆಗಳನ್ನು ತೆರೆಯುವ ಪ್ರಸ್ತಾವನೆಗಳೂ ಬಂದಿವೆ. ಪರಿಷತ್‌ ಖಾಸಗಿಯಾದರೂ ನಾನ್‌ ಪ್ರಾಫಿಟೇಬಲ್‌ ಆರ್ಗನೈಸೇಷನ್.‌ ನಮಗೆ ಬ್ರೇಕ್‌ ಈವನ್‌ ಆದರೆ ಸಾಕು ಎಂದೇ ನಾವು ಪ್ರತಿ ಕಾರ್ಯಕ್ರಮವನ್ನು ಮಾಡುತ್ತೇವೆ. ಸಾರ್ವಜನಿಕರಿಗೂ ವಿಶೇಷ ಹೊರೆಯಾಗಬಾರದು,ಸರಕಾರದ ಮೇಲೂ ವಿಪರೀತ ಅವಲಂಬನೆಯಾಗಬಾರದು. ಎರಡನ್ನೂ ಸಮತೋಲನ ಮಾಡಿಕೊಂಡು ಕಲಾವಿದರಿಗೂ, ಕಲಾಸಕ್ತರಿಗೂ ಸಹಾಯ ಮಾಡಬೇಕೆಂಬ ಉದ್ದೇಶ ನಮ್ಮದು.

ಪ್ರತೀ ವರ್ಷ ನಾವು ಚಿತ್ರ ಸಂತೆಗೆ ಒಂದೊಂದು ಥೀಮ್‌ ಇದ್ದೇ ಇರುತ್ತದೆ. ಈ ಬಾರಿ ಪ್ರಕೃತಿ ವಿಷಯಾಧಾರಿತ ಕಲಾ ಪ್ರದರ್ಶನಕ್ಕೆ ಮೀಸಲಾಗಿದೆ. ವನಲೋಕ ಫೌಂಡೇಷನ್‌ ಜಂಟಿ ಆಶ್ರಯದಲ್ಲಿ ಬೆಂಗಳೂರಿನ ಪರಿಸರದ ಸವಾಲುಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶವನ್ನೂ ಗುರಿಯಾಗಿಸಲಾಗಿದೆ. ಬೆಂಗಳೂರಿನ ಜೀವನಾಡಿಗಳಾದ ನದಿಗಳು, ಅರಣ್ಯ, ವನ್ಯಜೀವಿ, ಮಾನವ ಸಹಬಾಳ್ವೆ, ಹವಾಮಾನ ಬದಲಾವಣೆಗಳ ಪರಿಣಾಮಗಳು ಸೇರಿದಂತೆ ನಗರ ಪರಿಸರದ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುವ ವಿಷಯಗಳೂ ಈ ಸಂತೆಯಲ್ಲಿ ಇರುತ್ತವೆ. ಆಯ್ದ ಕಲಾಕೃತಿಗಳು, ಅವರ್ತಕಗಳು, 3D ಮಾದರಿ, ವಿವರಣಾತ್ಮ ಪ್ರದರ್ಶನದ ಮೂಲಕ ವೈಜ್ಞಾನಿಕ ಅರಿವು, ಪರಿಸರದ ಜ್ಞಾನ ಎಲ್ಲವನ್ನು ಒಟ್ಟುಗೂಡಿಸಿ ದೃಶ್ಯ ಕಥನನಗಳನ್ನು ಆಯೋಜಿಸಲಾಗುತ್ತದೆ.

ಟಿ. ಪ್ರಭಾಕರ್‌, ಉಪಾಧ್ಯಕ್ಷರು ಚಿತ್ರಕಲಾ ಪರಿಷತ್‌

Untitled design (13)

ಈ ಬಾರಿ ಚಿತ್ರ ಸಂತೆಯಲ್ಲಿ ಸ್ಥಳೀಯ, ರಾಜ್ಯ ಮತ್ತು ಹೊರರಾಜ್ಯಗಳಿಂದಷ್ಟೇ ಅಲ್ಲದೆ ಹೊರ ದೇಶದಿಂದಲೂ ಕಲಾವಿದರು ಭಾಗವಹಿಸಲಿದ್ದಾರೆ. ವಿಶೇಷವಾಗಿ ತ್ರಿಪುರ, ಮೇಘಾಲಯ, ಅಸ್ಸಾಂ ಹೀಗೆ ಈಶಾನ್ಯ ರಾಜ್ಯದ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ಕಲಾವಿದರಷ್ಟೇ ಅಲ್ಲದೇ ನೋಡುವ ವರ್ಗ ಹಾಗೂ ಕೊಳ್ಳುವ ವರ್ಗವೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಜನದಟ್ಟಣೆ, ಟ್ರಾಫಿಕ್‌ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಶಶಿಧರ್‌ ಎಸ್‌.ಎನ್ , ಪ್ರಧಾನ ಕಾರ್ಯದರ್ಶಿ, ಚಿತ್ರಕಲಾ ಪರಿಷತ್‌

Bhagya Divana

Bhagya Divana

Bhagya Divana is a Professional Journalist. Working in Pravasi Prapancha.