Saturday, October 17, 2026
Saturday, October 17, 2026

ಶಿವಮೊಗ್ಗದಲ್ಲೊಂದು ಮೀನಾಕ್ಷಿ ಹೊಟೇಲ್‌

ಶಿವಮೊಗ್ಗ ನಗರಕ್ಕೆ ಭೇಟಿ ನೀಡುವವರಿಗೆ ಅಲ್ಲಿನ ಪ್ರಕೃತಿ ಸೌಂದರ್ಯದಷ್ಟೇ ಸ್ಥಳೀಯ ಆಹಾರದ ರುಚಿಯೂ ವಿಶೇಷ ಅನುಭವ ನೀಡುತ್ತದೆ. ಮಲೆನಾಡಿನ ಸೊಗಡನ್ನು ತಮ್ಮದೇ ಆದ ರುಚಿಯಲ್ಲಿ ಪರಿಚಯಿಸುವ ಅಲ್ಲಿನ ಹೊಟೇಲ್‌ಗಳ ಪೈಕಿ 100 ವರ್ಷಗಳ ಹಳೆಯ ಮೀನಾಕ್ಷಿ ಹೊಟೇಲ್‌ ಆಹಾರ ಪ್ರಿಯರ ಮನಗೆದ್ದಿದೆ.

ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಹೊಂದಿರುವ ಶಿವಮೊಗ್ಗಕ್ಕೆ ಪ್ರವಾಸ, ಕೆಲಸ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ಭೇಟಿ ನೀಡುವ ಅವಕಾಶ ನಿಮ್ಮದಾಗಿದೆಯಾ? ಹಾಗಾದರೆ ಸ್ಥಳೀಯ ರುಚಿಯನ್ನು ಸವಿಯಲು ಉತ್ತಮವಾದ ಹೊಟೇಲ್‌ಗಳ ಹುಡುಕಾಟವೂ ಪ್ರವಾಸದ ಒಂದು ಭಾಗವೇ. ಸರಳ ವಾತಾವರಣ, ಮನೆಯ ಅಡುಗೆಯ ನೆನಪು ಮೂಡಿಸುವ ರುಚಿ ಮತ್ತು ಹೊಟ್ಟೆ ತುಂಬಿಸುವ ಊಟಕ್ಕೆ ಹೆಸರುವಾಸಿಯಾಗಿರುವ ಮೀನಾಕ್ಷಿ ಹೊಟೇಲ್‌ ಶಿವಮೊಗ್ಗದ ಆಹಾರಪ್ರಿಯರ ಗಮನ ಸೆಳೆಯುವ ತಾಣಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: 90's ವಂಟಗದಿ ಕೋರಮಂಗಲದಲ್ಲೊಂದು ತೆಲುಗು ರುಚಿ

ಮೀನಾಕ್ಷಿ ಹೋಟೆಲ್‌ನ ಪ್ರಮುಖ ಆಕರ್ಷಣೆ ಅದರ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಊಟದ ಶೈಲಿ. ಮಲೆನಾಡಿನ ಅಡುಗೆಯಲ್ಲಿ ಬಳಸುವ ಪದಾರ್ಥಗಳು, ಸಾಂಬಾರ್‌, ಪಲ್ಯ, ರಸಂ ಸೇರಿದಂತೆ ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳು ಊಟದ ಅನುಭವವನ್ನು ಮತ್ತಷ್ಟು ವಿಶೇಷಗೊಳಿಸುತ್ತವೆ. ಮನೆಯಲ್ಲಿ ತಯಾರಿಸಿದ ಊಟದ ನೆನಪನ್ನು ಮೂಡಿಸುವ ಸರಳ ಹಾಗೂ ಸೊಗಸಾದ ರುಚಿ ಇಲ್ಲಿನ ಪ್ರಮುಖ ಆಕರ್ಷಣೆ..

Untitled design (83)

ಬೆಳಗಿನ ಉಪಾಹಾರದಿಂದ ಹಿಡಿದು ಮಧ್ಯಾಹ್ನದ ಊಟದವರೆಗೆ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಇಲ್ಲಿ ಸವಿಯಬಹುದು. ಬಿಸಿ ಬಿಸಿ ಇಡ್ಲಿ, ವಡೆ, ದೋಸೆ, ಪೂರಿ ಸೇರಿದಂತೆ ಜನಪ್ರಿಯ ಉಪಾಹಾರಗಳು ಸರಳವಾಗಿದ್ದರೂ ರುಚಿಯಲ್ಲಿ ವಿಶೇಷ ಅನುಭವ ನೀಡುತ್ತವೆ. ಅದರಲ್ಲೂ ದೋಸೆಗೆ ನೀಡುವ ಚಟ್ನಿ ಮತ್ತು ಸಾಂಬಾರ್‌ ಸ್ಥಳೀಯ ರುಚಿಯನ್ನು ಪರಿಚಯಿಸುವಂತಿರುತ್ತದೆ.

ಆಹಾರ ಪ್ರವಾಸ..

ಶಿವಮೊಗ್ಗದ ಪ್ರವಾಸಕ್ಕೆ ಬರುವವರು ಜೋಗ ಜಲಪಾತ, ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಣಾ ಕೇಂದ್ರ, ಗಾಜನೂರು, ಸಕ್ರೆಬೈಲು ಆನೆ ಶಿಬಿರ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಇಂಥ ಪ್ರವಾಸದ ನಡುವೆ ಸ್ಥಳೀಯ ಆಹಾರದ ರುಚಿ ಸವಿಯಲು ಮೀನಾಕ್ಷಿ ಹೊಟೇಲ್‌ ಒಂದು ಉತ್ತಮ ಆಯ್ಕೆ. ವಿಶೇಷವಾಗಿ ಮಲೆನಾಡಿನ ಆಹಾರ ಸಂಸ್ಕೃತಿಯನ್ನು ಹತ್ತಿರದಿಂದ ಅನುಭವಿಸಲು ಬಯಸುವವರಿಗೆ ಇಲ್ಲಿನ ಊಟ ವಿಭಿನ್ನ ಅನುಭವ ನೀಡುತ್ತದೆ.

ಆಡಂಬರಕ್ಕಿಂತ ಆಹಾರಕ್ಕೆ ಪ್ರಾಶಸ್ತ್ಯ

ಈ ಹೊಟೇಲ್‌ನ ಮತ್ತೊಂದು ವಿಶೇಷತೆ ಎಂದರೆ ಅದರ ಸರಳತೆ. ಇಲ್ಲಿನ ವಾತಾವರಣದಲ್ಲಿ ಆಡಂಬರಕ್ಕಿಂತ ಆಹಾರದ ರುಚಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಗಮನ ಸೆಳೆಯುತ್ತದೆ. ಕುಟುಂಬದೊಂದಿಗೆ ಊಟ ಮಾಡಲು, ಸ್ನೇಹಿತರೊಂದಿಗೆ ಭೇಟಿಯಾಗಲು ಅಥವಾ ಪ್ರವಾಸದ ನಡುವೆ ಹೊಟ್ಟೆ ತುಂಬಿಸಿಕೊಳ್ಳಲು ಇಂಥ ಸರಳ ಹೊಟೇಲ್‌ಗಳು ಪ್ರವಾಸಿಗರಿಗೆ ಆಪ್ತವಾಗುತ್ತವೆ.

ಪ್ರವಾಸವೆಂದರೆ ಹೊಸ ತಾಣಗಳನ್ನು ನೋಡುವುದಷ್ಟೇ ಎಂಬ ತಪ್ಪು ಕಲ್ಪನೆಯಲ್ಲಿ ನೀವಿದ್ದರೆ, ಅದನ್ನು ಈಗಲೇ ಬದಲಾಯಿಸಿಕೊಳ್ಳಿ. ಯಾಕೆಂದರೆ ಪ್ರವಾಸ ಅಂದರೆ ಅಲ್ಲಿನ ಸಂಸ್ಕೃತಿ, ಜೀವನಶೈಲಿ ಮತ್ತು ಆಹಾರ ಪರಂಪರೆಯನ್ನು ಅನುಭವಿಸುವ ವಿಶಿಷ್ಟ ಅವಕಾಶವೂ ಹೌದು. ಆ ದೃಷ್ಟಿಯಿಂದ ಶಿವಮೊಗ್ಗದ ಸ್ಥಳೀಯ ರುಚಿಯನ್ನು ಪರಿಚಯಿಸುವ ಮೀನಾಕ್ಷಿ ಹೊಟೇಲ್‌, ನಗರದ ಆಹಾರ ಸಂಸ್ಕೃತಿಯ ಒಂದು ಭಾಗವಾಗಿ ಗುರುತಿಸಿಕೊಳ್ಳುತ್ತದೆ. ಮಲೆನಾಡಿನ ಪ್ರವಾಸದ ನೆನಪಿನಲ್ಲಿ ಪ್ರಕೃತಿಯ ದೃಶ್ಯಗಳ ಜತೆಗೆ ಅಲ್ಲಿನ ಊಟದ ರುಚಿಯೂ ಉಳಿಯಬೇಕೆಂದರೆ, ಸ್ಥಳೀಯ ಆಹಾರ ತಾಣಗಳಿಗೆ ಭೇಟಿ ನೀಡುವುದು ಪ್ರವಾಸಕ್ಕೆ ಮತ್ತೊಂದು ಆಯಾಮವನ್ನು ನೀಡುತ್ತದೆ.

Untitled design (86)

ಈ ಹೊಟೇಲ್‌ ಪ್ರಾರಂಭವಾದ ದಿನಾಂಕದ ಬಗೆಗೆ ನನಗೆ ಸರಿಯಾದ ಮಾಹಿತಿಯಿಲ್ಲ. ನನ್ನ ತಂದೆಯವರು ಚಿಕ್ಕ ವಯಸ್ಸಿನಲ್ಲೇ ಈ ಹೊಟೇಲ್‌ ಪ್ರಾರಂಭ ಮಾಡಿದ್ದರು. ಈ ನಿಟ್ಟಿನಲ್ಲಿ ಹೇಳುವುದಾದರೆ ಸುಮಾರು 100 ವರ್ಷಕ್ಕೂ ಹಿಂದಿನ ಹೊಟೇಲ್‌ ಇದು. ನಂತರ ಇದನ್ನು ನಾನು ನಡೆಸಿಕೊಂಡು ಬರುತ್ತಿದ್ದೇನೆ. ಈಗಿರುವ ಕಟ್ಟಡದಲ್ಲೇ ಸುಂಆರು 60 ವರ್ಷಗಳಿಂದ ಹೊಟೇಲ್‌ ನಡೆಸುತ್ತಿದ್ದೇನೆ. ದಕ್ಷಿಣ ಕನ್ನಡದ ಸಾಂಪ್ರದಾಯಿಕ ಶೈಲಿಯ ಆಹಾರ ನಮ್ಮಲ್ಲಿ ಸಿಗುತ್ತದೆ. ಬೆಳಗ್ಗೆ 7.30ಕ್ಕೆ ರೆಸ್ಟೋರೆಂಟ್‌ ಓಪನ್‌ ಆದರೆ ರಾತ್ರಿ 8.30ಯ ತನಕ ಗ್ರಾಹಕರಿಗೆ ಮುಕ್ತವಾಗಿರುತ್ತದೆ.

- ಚಂದ್ರಶೇಖರ್‌, ಮೀನಾಕ್ಷಿ ಹೊಟೇಲ್‌ ಮಾಲೀಕ

ವಿಳಾಸ:

ಬೆಂಗಳೂರು - ಹೊನ್ನಾವರ ರಸ್ತೆ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ, ಕರ್ನಾಟಕ 577201

ಮೊಬೈಲ್:‌ 081822 70549

Bhagya Divana

Bhagya Divana

Bhagya Divana is a Professional Journalist. Working in Pravasi Prapancha.