ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ರಾಜ್ಯಾದ್ಯಂತ ಪ್ರವಾಸಗಳನ್ನು ನಡೆಸುತ್ತಿದೆ. ಇಲ್ಲಿ ಕಂಡ ಯಶಸ್ಸಿನಿಂದ ಹೊರ ರಾಜ್ಯಗಳಿಗೂ ಪ್ರವಾಸಿ ಪ್ಯಾಕೇಜ್‌ಗಳನ್ನೂ ಪರಿಚಯಿಸಿದೆ. ಕೆಎಸ್‌ಟಿಡಿಸಿಯ ಹೆಜ್ಜೆ ಗುರುತುಗಳು ವಿವಿಧ ರಾಜ್ಯಗಳಿಗೂ ಮುಟ್ಟಿವೆ. ಯಶಸ್ಸು ಎಂದರೆ ಇಲ್ಲಿ ಪ್ರವಾಸಿಗಳ ಧನ್ಯತಾ ಭಾವ. ತಾನು ಕರೆದುಕೊಂಡು ಹೋದ ಪ್ರತಿ ಪ್ರವಾಸದಲ್ಲೂ ಪ್ರವಾಸಿಗಳಿಗೆ ಹೊಸತನ, ಸ್ಥಳೀಯತೆ, ಸಂತೋಷ, ಇತಿಹಾಸ, ಜನ-ಮನ, ಆಹಾರಗಳನ್ನು ಪರಿಚಯಿಸುವುದು ಕೆಎಸ್‌ಟಿಡಿಸಿಯ ನಡೆ. ಒಬ್ಬ ಪಯಣಿಗ ಇರಬೇಕಾದ ರೀತಿಯೇ ಹೀಗಲ್ಲವೇ?

Untitled design (62)

ನಮ್ಮ ರಾಜ್ಯದ ಉದ್ದಗಲಕ್ಕೂ ನಾನ್‌ ಸ್ಟಾಪ್‌ ಪ್ರವಾಸಗಳನ್ನು ಕೈಗೊಂಡಿರುವ ಕೆಎಸ್‌ಟಿಡಿಸಿಯ ಒಂದು ಪ್ರವಾಸಿ ಪ್ಯಾಕೇಜ್‌ ಹೀಗಿದೆ. ಇಲ್ಲಿ ನೀವು ಕಾಡಿನ ಒಡನಾಡಿಯಾಗುತ್ತೀರಿ. ಆಧ್ಯಾತ್ಮಿಕ ಹಂದರಕ್ಕೆ ಹೊಂದಿಕೊಳ್ಳುತ್ತೀರಿ. ನದಿತೀರದಲ್ಲಿ ನೆಲೆನಿಂತಿರುವ ಇತಿಹಾಸವನ್ನು ಕಣ್ಮನಕ್ಕೆ ಒತ್ತಿಕೊಳ್ಳುತ್ತೀರಿ. ಇದು ಕೃಷ್ಣಮೃಗಗಳ ನಾಡು ರಾಣೇಬೆನ್ನೂರು ಪ್ರವಾಸ. ರಾಷ್ಟ್ರ ಪ್ರಸಿದ್ಧ ʻರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯʼ, ಇರಾನಿ ಕೋಟೆ, ಮಲ್ಲಪ್ಪನ ಗುಡ್ಡ, ಚೌಡಯ್ಯ ದಾನಾಪುರದ ಮುಕ್ತೇಶ್ವರ ದೇವಾಲಯ, ಹರಿಹರದ ಹರಿಹರೇಶ್ವರ ದೇವಾಲಯ ಮತ್ತಿತರ ತಾಣಗಳನ್ನು ಕಾಣುತ್ತೀರಿ.

ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯ

ರಾಣೇಬೆನ್ನೂರು ಕರ್ನಾಟಕದಲ್ಲಿನ ಕೃಷ್ಣಮೃಗಗಳ ನಾಡು. ಇಲ್ಲಿ ಅಳಿವಿನಂಚಿನ ಪಟ್ಟಿಯಲ್ಲಿನ ಆಂಟಿಲೋಪ್ ಕೃಷ್ಣಮೃಗಗಳನ್ನು ಕಾಪಿಡಲಾಗಿದೆ. ಇವುಗಳಿಗೆ ವಿಶಿಷ್ಟ ಹುಲ್ಲುಗಾವಲು ನೆಚ್ಚಿನ ತಾಣ. ಹಾಗಾಗಿ ರಾಣೇಬೆನ್ನೂರಿನಲ್ಲಿ ಅವುಗಳಿಗೆ ಒಗ್ಗುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ. 1974ರಲ್ಲಿ ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯವನ್ನು ಸ್ಥಾಪಿಸಲಾಯಿತು. ಈ ಅಭಯಾರಣ್ಯ119 ಚದರ ಕಿಮೀ ವಿಶಾಲವಾಗಿದೆ. ಸ್ವಚ್ಛಂದ ಪರಿಸರದಲ್ಲಿ ಮುಕ್ತವಾಗಿ ಸಂಚರಿಸುವ ಕೃಷ್ಣಮೃಗಗಳ ದೊಡ್ಡ ಹಿಂಡುಗಳನ್ನು ಪ್ರವಾಸಿಗರು ಇಲ್ಲಿ ನೋಡಬಹುದು. ಚಿರತೆ, ತೋಳ, ಗೋಲ್ಡನ್ ಜಾಕಲ್ನಂಥ ಮಾಂಸಾಹಾರಿ ಪ್ರಾಣಿಗಳು, ಟಿಟ್ಟಿಬ, ನವಿಲುಗಳು, ಕೊಳಕುಮಂಡಲ, ಹೆಬ್ಬಾವು, ನಾಗರ ಹಾವುಗಳಂಥ ಸರಿಸೃಪಗಳು, ನೆಲಗುಬ್ಬಿ, ಕೌಜುಗ, ಕಪ್ಪು ಕಾಜಾಣ, ಕಲ್ಲು ಗೊರವದಂಥ ಪಕ್ಷಿಗಳು ಸೇರಿ ಕುರುಚಲ ಕಾಡಿನ ಸಾಕಷ್ಟು ಪ್ರಾಣಿ ಪಕ್ಷಿ ಪ್ರಭೇದಗಳು ಇಲ್ಲಿವೆ. ವಿದೇಶಿ ಹಕ್ಕಿಗಳಿಗೂ ಈ ತಾಣ ಅಚ್ಚು ಮೆಚ್ಚಾಗುತ್ತಿರುವುದು ವಿಶೇಷ. ಇಲ್ಲಿ ಪ್ರವಾಸಿಗರು ಸಫಾರಿ ಅನುಭವವನ್ನೂ ಪಡೆಯಬಹುದು.

Untitled design (63)

ಬೆಟ್ಟದ ಮಲ್ಲಪ್ಪನ ಗುಡ್ಡ

ಇದು ರಾಣೇಬೆನ್ನೂರು ಸಮೀಪದಲ್ಲಿನ ಸುಂದರ ಗುಡ್ಡಗಾಡು. ಭಕ್ತಿ, ಶಾಂತಿ, ಪ್ರಕೃತಿ ಸೌಂದರ್ಯ ಒಂದೆಡೆ ಮೈದಳೆದ ತಾಣ. ಚಾರಣ ಮತ್ತು ಸಾಹಸಮಯ ಜೀಪ್‌ ಸವಾರಿ ಎರಡಕ್ಕೂ ಈ ತಾಣ ಅವಕಾಶ ನೀಡುತ್ತದೆ. ಬೆಟ್ಟದ ತುದಿಯಲ್ಲಿ ಮಲ್ಲಪ್ಪ ದೇವರಿಗೆ ಸಮರ್ಪಿತ ದೇವಾಲಯವಿದೆ. ಹಾಗಾಗಿ ಇದು ಭಕ್ತರು ಮತ್ತು ಪ್ರವಾಸಿಗರು ಇಬ್ಬರನ್ನೂ ತನ್ನತ್ತ ಸೆಳೆಯುವ ತಾಣ. ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟಗಳು ಮೋಹಕವಾಗಿರುತ್ತವೆ. ರಾಜ್ಯಾದ್ಯಂತ ಮಳೆಯಾಡುತ್ತಿರುವ ಈ ಸಮಯದಲ್ಲಿ ಮಲ್ಲಪ್ಪನ ಗುಡ್ಡಕ್ಕೆ ಹೋಗಿಬನ್ನಿ. ಬೇಸಗೆಯಲ್ಲಿ ಎಲೆಯುದುರಿ ಬರಿದಾದ ಸಸ್ಯಗಳು ಹಸಿರೊಡೆದ ಈ ಕಾಲದಲ್ಲಿ ಇಲ್ಲಿ ಸಗ್ಗದ ಸೌಂದರ್ಯವಿರುತ್ತದೆ. ಕಣ್ಣಾಡಿಸಿದಷ್ಟು ದೂರಕ್ಕೂ ಕಾಡು-ಗುಡ್ಡಗಾಡು. ಥೇಟ್‌ ಮಲೆನಾಡಿನಂಥ ಮೈಸಿರಿಯನ್ನು ಕಣ್ತುಂಬಿಕೊಳ್ಳುತ್ತೀರಿ. ಮತ್ತೊಂದು ಗ್ರೇಟ್‌ ವಿಷಯವೆಂದರೆ ಇದು ಹಿಡನ್‌ ಟ್ರೆಷರ್‌. ಪ್ರವಾಸಿ ಪಾದಗಳು ಹೆಚ್ಚಾಗಿ ಬೆಳೆದಿಲ್ಲದ ಈ ತಾಣ ಪ್ರಕೃತಿಯ ಕೈಸೆರೆಯಲ್ಲಿದೆ. ಛಾಯಾಗ್ರಹಣಕ್ಕೆ ಇದು ಸೂಕ್ತ ತಾಣ ಮತ್ತು ಸಮಯ. ಸೆಲ್ಫೀ ಪಾಯಿಂಟ್‌, ಆಫ್ ರೋಡ್ ಚಾರಣ ಮಾರ್ಗ ವ್ಯವಸ್ಥೆಯಿದೆ. ಔಷಧೀಯ ಸಸ್ಯವರ್ಗ, ಗುಡ್ಡಗಾಡಿನ ರಮಣೀಯ ನೋಟ, ಕೃಷ್ಣಮೃಗಗಳ ಸೈಟಿಂಗೂ ಉಚಿತ.

ಚೌಡಯ್ಯ ದಾನಪುರ

ಚೌಡಯ್ಯದಾನಪುರ ಅಗಣಿತ ಅದ್ಭುತಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ತಾಣ. ಊರಿನ ಹೆಸರಿಗೂ ಒಂದು ವಿಶೇಷವಿದೆ. ವಚನ ಶ್ರೇಷ್ಠ ಅಂಬಿಗರ ಚೌಡಯ್ಯನವರು ದಾನ ಶ್ರೇಷ್ಠರೂ ಹೌದು ಎನ್ನುವುದಕ್ಕೆ ಈ ಊರು ಸಾಕ್ಷಿ. ತಮಗೆ ಬಳುವಳಿಯಾಗಿ ಬಂದ ಸ್ಥಳವನ್ನು ತಮ್ಮ ಗುರುಗಳಿಗೆ ಅಂಬಿಗರ ಚೌಡಯ್ಯನವರು ದಾನ ನೀಡಿದರು. ಹಾಗೆ ದಾನ ನೀಡಿದ ತಾಣವೇ ಇಂದಿನ ಚೌಡಯ್ಯ ದಾನಪುರ.

ಮುಕ್ತೇಶ್ವರ ದೇವಾಲಯ ಇಲ್ಲಿನ ಮತ್ತೊಂದು ವಿಶೇಷ. ಉತ್ತರ ಕರ್ನಾಟಕದ ಗುಪ್ತ ವಾಸ್ತುಶಿಲ್ಪದ ರತ್ನ. ಐತಿಹ್ಯದ ತೊಟ್ಟಿಲು. ಈ ದೇವಾಲಯದ ಆವರಣದಲ್ಲಿ ಹಳೆಗನ್ನಡದ ಶಾಸನಗಳಿವೆ. ಅವುಗಳ ಪ್ರಕಾರ ಇದನ್ನು ಜಟಾಚೋಳವಂಶದ ಗುತ್ತರಸರ ಮಾಂಡಳಿಕ ಮಲ್ಲ ಕ್ರಿಶ 1115-1120 ಮಧ್ಯೆ ಕಟ್ಟಿಸಿದನೆಂದೂ, ನಂತರ ಕ್ರಿಶ ಸುಮಾರು 1225ರಲ್ಲಿ ಕಾಳಾಮುಖ ಸಂಪ್ರದಾಯಕ್ಕೆ ಸೇರಿದ ಶಿವದೇವರು ಜೀರ್ಣೋದ್ಧಾರ ಮಾಡಿದರೆಂದು ತಿಳಿದುಬಂದಿದೆ. ಈ ದೇವಾಲಯದ ವಾಸ್ತುಶಿಲ್ಪವೇ ಸುಂದರವಾಗಿದ್ದು, ಅದರ ಭೌಗೋಳಿಕ ಹಿನ್ನೆಲೆ ಈ ತಾಣವನ್ನು ಅಸಾಧಾರಣ ಸೌಂದರ್ಯದ ಖನಿಯಾಗಿಸಿದೆ. ಈ ದೇವಾಲಯದ ಹಿಂದೆ ತುಂಗಭದ್ರಾ ನದಿ ಹರಿಯುತ್ತದೆ. ಅದರ ದಡದಲ್ಲೇ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ, ಆ ಮಂಟಪದ ಪಕ್ಕದಲ್ಲೇ ಶಿವನಿಗೆ ಸಮರ್ಪಿತ ಈ ವಾಸ್ತುಶಿಲ್ಪದ ಕಲಾಕೌಸ್ತುಬ ಮುಕ್ತೇಶ್ವರ ದೇವಾಲಯವಿದೆ.

ಇರಾನಿ ಕೋಟೆ

ರಾಣೇಬೆನ್ನೂರಿನ ಐತಿಹ್ಯದ ಕುರುಹುಗಳಲ್ಲಿ ಪ್ರಮುಖವಾದುದು ಈ ಐತಿಹಾಸಿಕ ಇರಾನಿ ಕೋಟೆ. ಮಧ್ಯಕಾಲೀನ ವಾಸ್ತುಶಿಲ್ಪ, ಅಂದಿನ ಸಂಸ್ಕೃತಿ ಮತ್ತು ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಕೋಟೆಯು ಹಳೆಯ ಕಲ್ಲಿನ ರಚನೆಗಳು ಮತ್ತು ಪ್ರಾಚೀನ ರಕ್ಷಣಾತ್ಮಕ ತಂತ್ರದ ರಚನೆಗಳನ್ನು ಒಳಗೊಂಡಿದೆ. ಇಂದು ಇದು ರಾಣೇಬೆನ್ನೂರಿನಲ್ಲಿನ ಐತಿಹಾಸಿಕ ಪ್ರವಾಸೋದ್ಯಮದ ತಾಣ. ಕೋಟೆಯ ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತದೆ. ಸುತ್ತಲೂ ಹಚ್ಚ ಹಸುರಿನ ಹೊಲ-ಗದ್ದೆಗಳು, ಕುರುಚಲ ಅರಣ್ಯ ವ್ಯವಸ್ಥೆ ಇದೆ.

Untitled design (64)

ದಿನ-1

ಬೆಳಗ್ಗೆ ನಿಗದಿತ ಸಮಯಕ್ಕೆ ಯಶವಂತಪುರದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ರಾಣೆಬೆನ್ನೂರಿಗೆ ಪ್ರಯಾಣ ಆರಂಭ. ಮಾರ್ಗಮಧ್ಯೆ ಹರಿಹರೇಶ್ವರ ದೇವಸ್ಥಾನಕ್ಕೆ (ಹರಿಹರ) ಭೇಟಿ ನೀಡಿ.

ಮಧ್ಯಾಹ್ನ 1.00 ಗಂಟೆಗೆ ರಾಣೇಬೆನ್ನೂರು ತಲುಪಿ, ಹೊಟೇಲ್‌ಗೆ ಚೆಕ್- ಇನ್ ಮಾಡಿ.

ಮಧ್ಯಾಹ್ನ 1.30ಕ್ಕೆ ದೊಡ್ಡ ಕೆರೆಗೆ ಭೇಟಿ (ಕೆರೆಯ ನೋಟ, ದೋಣಿ ವಿಹಾರ ಮತ್ತು ವಿಶ್ರಾಂತಿ)

ಸಂಜೆ 4:30ಕ್ಕೆ ಕೃಷ್ಣಮೃಗ ಅಭಯಾರಣ್ಯಕ್ಕೆ ಭೇಟಿ ನೀಡಿ ವನ್ಯಜೀವಿಗಳನ್ನು ವೀಕ್ಷಿಸುವುದು (ಕೃಷ್ಣಮೃಗಗಳು, ಪಕ್ಷಿಗಳು) ಮತ್ತು ಪ್ರಕೃತಿ ಛಾಯಾಗ್ರಹಣ.

ರಾಣೇಬೆನ್ನೂರಿನಲ್ಲಿ ರಾತ್ರಿ ವಾಸ್ತವ್ಯ.

ದಿನ-2

ಬೆಳಗ್ಗೆ 7.30- 8.30ರವರೆಗೆ ಉಪಾಹಾರ

ಬೆಳಗ್ಗೆ 8.30ಕ್ಕೆ ಬೆಟ್ಟದ ಮಲ್ಲಪ್ಪ ಗುಡ್ಡ (ಬೆಟ್ಟದ ತುದಿಯ ನೋಟಗಳು) ಟ್ರೆಕ್ಕಿಂಗ್ ಅಥವಾ ಜೀಪ್ ಸವಾರಿ ಮತ್ತು ಇರಾನಿ ಕೋಟೆಗೆ ಭೇಟಿ ನೀಡಿ.

ಬೆಳಗ್ಗೆ 11.30ಕ್ಕೆ ಚೌಡಯ್ಯ ದಾನಾಪುರದಲ್ಲಿನ ಮುಕ್ತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ನಂತರ ಹರಳಹಳ್ಳಿ ಸೋಮನಾಥ ದೇವಸ್ಥಾನಕ್ಕೆ ಭೇಟಿ (ಹೊಯ್ಸಳ ವಾಸ್ತುಶಿಲ್ಪ).

ಮಧ್ಯಾಹ್ನ 1.30ಕ್ಕೆ ಊಟದ ವಿರಾಮ

ಮಧ್ಯಾಹ್ನ 2.30ಕ್ಕೆ ಹೊಳೆ ಅನ್ವೇರಿಗೆ ಭೇಟಿ ನೀಡಿ.

ಮಧ್ಯಾಹ್ನ 3.30ಕ್ಕೆ ಬೆಂಗಳೂರಿಗೆ ಪ್ರಯಾಣ.

ರಾತ್ರಿ 8.30ಕ್ಕೆ ಬೆಂಗಳೂರಿಗೆ ಹಿಂತಿರುಗಿ.

ಇಲ್ಲಿ ಗಮನಿಸಿ

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ


ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.

ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.

  • ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
  • ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
  • ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
  • ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಶಿಲಾಬಾಲಿಕೆಗಳ ನಾಡಲ್ಲಿ ಮೈಮರೆಸುವ ಆತಿಥ್ಯ

ದೊಡ್ಡದೊಡ್ಡ ಪ್ರವಾಸಗಳಲ್ಲಿ ಪುಟ್ಟಪುಟ್ಟ ವಿಶ್ರಾಂತಿ ಬೇಕೇ ಬೇಕು. ಈ ಸಮಯದಲ್ಲೇ ನಿಜಾವದ ಪ್ರವಾಸದ ಅನುಭವಗಳು ಮನಸಿಗಿಳಿಯುವುದು. ಸುತ್ತಾಡಿ ದಣಿದಾಗ ತಾಣಗಳಲ್ಲಾದ ನೆನಪುಗಳನ್ನು ಮೆಲುಕು ಹಾಕಲೋ ಅಥವಾ ಆ ಪ್ರವಾಸದಲ್ಲಿ ನೀವು ಇನ್ನೂ ಗಳಿಸದ ಅನುಭವಗಳು ನಿಮ್ಮನ್ನು ಆವರಿಸಲು ಈ ಆಯ್ಕೆ ಮಹತ್ವದ್ದಾಗುತ್ತದೆ. ವಾಸ್ತವ್ಯದ ಆಯ್ಕೆಗಳು ಕೆಲಸ ಮಾಡುವುದು ಥೇಟ್‌ ರಾಮನ ಸೇತುವೆಗೆ ಅಳಿಲು ಸೇವೆಯಂತೆ. ದೊಡ್ಡ ಪ್ರವಾಸದಲ್ಲಿ ತುಂಬದೆ ಖಾಲಿ ಉಳಿದ ಅನುಭವಗಳ ಸಂದಿಯನ್ನು ವಾಸ್ತವ್ಯ ತುಂಬುತ್ತದೆ. ಇಲ್ಲಿ ನೀವು ಆಹಾರ, ಜನ-ಮನ, ಅತಿಥಿ ಸತ್ಕಾರ, ಹಾವಾಭಾವ ಮತ್ತಿನ್ನೇನನ್ನಾದರೂ ಊಹಿಸಬಹುದು. ಇಂಥ ವಾಸ್ತವ್ಯದ ಅನುಭವವನ್ನು ಅನುಭವಿಯೇ ನೀಡಬೇಕು.

Untitled design (61)

ಒಮ್ಮೆ ಯೋಚಿಸಿ ವಿದೇಶಕ್ಕೆ ಹೋದಾಗ ಉಳಿದುಕೊಳ್ಳಲು ಗೂಗಲ್‌ ಬಳಸದೆ ನೀವೊಂದು ಸ್ಥಳವನ್ನು ಗುರುತಿಸಬಲ್ಲಿರಾ? ಖಂಡಿತಾವಾಗಿಯೂ ಅದರ ಬಗ್ಗೆ ಯಾರಿಗೂ ಓನಾಮವೂ ತಿಳಿದಿರುವುದಿಲ್ಲ. ಆದರೆ ನಮ್ಮ ನಾಡಿಗೆ ಬರುವ ವಿದೇಶೀ ಪ್ರವಾಸಿಗರನ್ನು ನೋಡಿ. ಅವರ ಬಹುಪಾಲು ಆಯ್ಕೆ ಹೊಟೇಲ್‌ ಮಯೂರವೇ ಆಗಿರುತ್ತದೆ. ಅವರು ಮಯೂರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಮಯೂರ ಆತಿಥ್ಯಕ್ಕೆ ಮನಸೋತಿದ್ದಾರೆ.

ನಿಜವಾದ ಪ್ರವಾಸಿಗೆ ಬೇಕಾದುದೇನು ಎಂಬುದನ್ನು ಮಯೂರ ಚೆನ್ನಾಗಿ ಬಲ್ಲದು. ವಿಶ್ವ ಪಾರಂಪರಿಕ ತಾಣ, ಬೆಟ್ಟದ ತುದಿ, ಘಟ್ಟದ ತಪ್ಪಲು, ಸೂರ್ಯೋದಯ ಮತ್ತು ಸೂರ್ಯಾಸ್ತಗಳ ನೋಟ ನೀಡುವ ತಾಣ, ಪ್ರವಾಸಿ ತಾಣಗಳಿಗೆ ಉತ್ತಮ ಸಾರಿಗೆ ಸಂಪರ್ಕದ ತಾಣ, ನದಿ ತೀರದಂಥ ಸುಂದರ ತಾಣಗಳಲ್ಲಿ ನೆಲೆ ನಿಂತಿದೆ. ಆಹಾರದ ಶುಚಿ-ರುಚಿಗೂ ಮಯೂರ ದಿ ಬೆಸ್ಟ್‌ ಆಯ್ಕೆ. ಮಯೂರದಲ್ಲಿ ಉಳಿದರೆ ಸ್ಥಳೀಯ ಪ್ರವಾಸಿ ತಾಣಗಳಿಗೆ ಕಸ್ಟಮೈಸ್ಡ್‌ ಟೂರ್‌ ಹೋಗಬಹುದು. ಇದಕ್ಕೆ ದಿ ಬೆಸ್ಟ್‌ ಆಯ್ಕೆ ಎಂಬಂತಿರುವ ಶಿಲ್ಪಕಲೆಗಳ ತವರು ಬೇಲೂರಿನಲ್ಲಿ ನೀವು ಮಯೂರ ವಾಸ್ತವ್ಯ ಬಯಸಿದರೆ ʻಮಯೂರ ವೇಲಾಪುರಿ ಬೇಲೂರುʼ ಆಯ್ಕೆ ನಿಮಗಾಗಿ.

ಹೊಯ್ಸಳ ರಾಜವಂಶದ ರಾಜಧಾನಿಗಳಲ್ಲಿ ಬೇಲೂರು ಕೂಡ ಒಂದಾಗಿತ್ತು. ಇಲ್ಲಿ ಹೊಯ್ಸಳರ ವಾಸ್ತುಶಿಲ್ಪದ ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ ನಿರ್ಮಿಸಿದ ಚೆನ್ನಕೇಶವ ದೇವಾಲಯ, ಚೆನ್ನಿಗರಾಯ ದೇವಾಲಯ, ವೀರನಾರಾಯಣ ದೇವಾಲಯ, ಶ್ರೀದೇವಿ ದೇವಾಲಯ ಮತ್ತು ಭೂದೇವಿ ದೇವಾಲಯಗಳು ದಕ್ಷಿಣ ಭಾರತದ ಭವ್ಯತೆಯ ಕಥೆಗಳನ್ನು ಹೇಳುತ್ತವೆ. ಇದು ಬೇಲೂರು ಭೇಟಿಗೆ ಹೇಳಿ ಮಾಡಿಸಿದ ಸಮಯ. ಈ ಸಮಯದಲ್ಲಿ ಇಲ್ಲಿನ ವಾತಾವರಣ ಹಚ್ಚಹಸುರಿನಿಂದ ಕಂಗೊಳಿಸುತ್ತಿರುತ್ತದೆ. ಹಾಂ. ಅಲ್ಲಿಗೆ ಹೋದಾಗ ಬೇಲೂರು ಮತ್ತು ಹಳೇಬೀಡುಗಳಲ್ಲಿನ ಸುಂದರ ದೇವಾಲಯಗಳ ಚಿತ್ರವಿರುವ ಪೋಸ್ಟ್‌ ಕಾರ್ಡ್‌ಗಳನ್ನು ನಿಮ್ಮ ಮನೆಗಳಿಗೆ ಪೋಸ್ಟ್‌ ಮಾಡಲು ಮರೆಯಬೇಡಿ.

ಹೊಟೇಲ್‌ ಮಯೂರ ವೇಲಾಪುರಿ ಬೇಲೂರು ದೇವಾಲಯಗಳ ಸಂಕೀರ್ಣದಿಂದ ಐದು ನಿಮಿಷಗಳ ನಡಿಗೆಯ ದೂರದಲ್ಲಿದೆ. ಬೈ ವಾಕ್‌ ನೀವು ನಿಮ್ಮ ವಾಸ್ತವ್ಯದ ತಾಣ ಮತ್ತು ದೇವಾಲಯಗಳ ಸಂಕೀರ್ಣಕ್ಕೆ ಅಡ್ಡಾಡಬಹುದು. ಈ ಹೊಟೇಲ್‌ನಲ್ಲಿ ನೀವು ಉಳಿಯಲು ಬಯಸಿದರೆ ನಿಮ್ಮ ಆಯ್ಕೆಗಾಗಿ ಹವಾನಿಯಂತ್ರಿತ 14 ಸೂಟ್ ಕೊಠಡಿಗಳು, ಹವಾನಿಯಂತ್ರಿತವಲ್ಲದ ಕೊಠಡಿಗಳು ಮತ್ತು 2 ಡಾರ್ಮೆಟರಿ ಆಯ್ಕೆಗಳಿವೆ. ರೆಸ್ಟೋರೆಂಟ್ ಮತ್ತು ಪುಟ್ಟ ಬಾರ್ ವ್ಯವಸ್ಥೆ ಇದೆ.

ಸಂಪರ್ಕ:
Yogesh. MK

Manager (Tours)

Mob No: +91 960 6987 822 | Email ID: tour.manager@kstdc.co

Karnataka State Tourism Development Corporation Ltd. (KSTDC)

Corporate Office: 5th Floor | Indhana Bhavan|Race Course Road | Opposite to Renaissance Hotel,

Bangalore- 560009 | Karnataka | India

Office: 080-43344334 | Fax: 080-43344376

Email: feedback@kstdc.co | info@kstdc.co | website: www.kstdc.co | www.goldenchariot.org