ನಮ್ಮ ದೇಶದಲ್ಲಿ ವಿದ್ಯಾವಂತರಿಗೇನೂ ಕಮ್ಮಿ ಇಲ್ಲ. ಹೆಜ್ಜೆ ಹೆಜ್ಜೆಗೂ ಸಾಫ್ಟ್ ವೇರ್ ಎಂಜಿನಿಯರ್ ಗಳೇ ಇದ್ದಾರೆ. ಎಂಜಿನಿಯರ್ ಅಲ್ಲದವರಲ್ಲೂ ತಂತ್ರಜ್ಞಾನ ಅರೆದುಕುಡಿದ ಮಹಾನುಭಾವರಿದ್ದಾರೆ. ಆದರೆ ಒಂದು ವಿಷಯದಲ್ಲಿ ಮಾತ್ರ ಇವತ್ತಿಗೂ ಎಲ್ಲರೂ ದಡ್ಡರು. ಲಿಫ್ಟ್ ಬಳಕೆ ಬಗ್ಗೆ ಇವತ್ತಿಗೂ ನಮ್ಮಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿಗೆ ಗೊಂದಲವಿದೆ. ಇವತ್ತಿಗೂ ಹೊಟೇಲ್, ರೆಸಾರ್ಟ್ ಆಫೀಸ್ ಅಪಾರ್ಟ್ ಮೆಂಟ್ ಎಲ್ಲಿಗೇ ಹೋದರೂ ಲಿಫ್ಟ್ ಮುಂದೆ ನಿಂತಾಗ ಯಾವ ಬಟನ್ ಪ್ರೆಸ್ ಮಾಡಬೇಕು ಅಂತ ಗೊತ್ತಿರುವುದಿಲ್ಲ. ಎರಡೂ ಬಟನ್ ಪ್ರೆಸ್ ಮಾಡೋವ್ರೇ ಹೆಚ್ಚು.

Untitled design (61)

ಇನ್ನು ಕೆಲವರು ಮೇಲಕ್ಕೆ ಹೋಗಬೇಕಿರುತ್ತದೆ. ಅವರು ಪ್ರೆಸ್ ಮಾಡುವುದು ಕೆಳದಿಕ್ಕಿನ ಬಟನ್. ಕೆಳಕ್ಕೆ ಹೋಗಬೇಕಿರುತ್ತದೆ ಅವರು ಒತ್ತುವುದು ಮೇಲ್ದಿಕ್ಕಿನ ಬಟನ್. ತಾವು ಎಲ್ಲಿಗೆ ಹೋಗಬೇಕೋ ಆ ದಿಕ್ಕಿನ ಬಟನ್ ಒತ್ತುವ ಬದಲು ಲಿಫ್ಟ್ ಗೆ ಇವರು ದಿಕ್ಕು ತೋರಿಸುತ್ತಾರೆ. ನಾವು ಹೋಗಬೇಕಿರುವ ದಿಕ್ಕು ಸೂಚಿಸುವ ಬಟನ್ ಒತ್ತಬೇಕು ಎಂಬ ಕಾಮನ್ ಸೆನ್ಸ್ ಇರುವ ಮಂದಿ ನೂರಕ್ಕೊಬ್ಬರು. ಇಂಥವರಿಗೆ ಲಿಫ್ಟ್ ಅರ್ಥವಾಗಬೇಕು ಅಂದರೆ ಲಿಫ್ಟ್ ನ ಅತಿ ಕೆಳಗಿನ ನಿಲ್ದಾಣಕ್ಕೆ ಮತ್ತು ಅತಿ ಮೇಲಿನ ನಿಲ್ದಾಣಕ್ಕೆ ಕರೆದೊಯ್ದು ಬಟನ್ ತೋರಿಸಬೇಕು.

ಅತಿ ಕೆಳಗಿನ ನಿಲ್ದಾಣದಲ್ಲಿ ಇರೋದೇ ಒಂದು ಬಟನ್; ಮೇಲ್ಮುಖದ್ದು. ಅದೇ ರೀತಿ ಪೂರ್ತಿ ಮೇಲಿನ ಲಿಫ್ಟ್ ನ ಹೊರಗಿರೋದು ಒಂದೇ ಬಟನ್; ಕೆಳಮುಖದ್ದು. ನಾವಿರುವ ಜಾಗಕ್ಕಿಂತ ಮೇಲೆ ಹೋಗಬೇಕಾದಲ್ಲಿ ಮೇಲ್ದಿಕ್ಕಿನ ಬಟನ್, ಕೆಳಗೆ ಹೋಗಬೇಕಾದಲ್ಲಿ ಕೆಳದಿಕ್ಕು ಸೂಚಿಸುವ ಬಟನ್ ಒತ್ತುವ ಅಭ್ಯಾಸ ಇನ್ನಾದರೂ ಮಾಡಿಕೊಳ್ಳುತ್ತೀರಾ ಅಥವಾ ಇನ್ಮುಂದೆಯೂ ಎರಡೂ ಬಟನ್ ಒತ್ತಿ ಲಿಫ್ಟ್ ಜತೆ ಆಟವಾಡುತ್ತೀರಾ?