ʼಮಹಿಳಾ ಸಬಲೀಕರಣಕ್ಕಾಗಿ ದೃಢ ಹೆಜ್ಜೆಗಳುʼ ಇದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಧ್ಯೇಯ ವಾಕ್ಯ. ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಅಕ್ಷರಶಃ ಆ ವಾಕ್ಯವನ್ನು ದಿಟವಾಗಿಸಿದೆ. ಹಳ್ಳಿಗಾಡಿನ ಸಾವಿರಾರು ಮಹಿಳೆಯರ ಬದುಕನ್ನು ಹಸನುಗೊಳಿಸಿ ಅವರಿಗೊಂದು ಭದ್ರವಾದ ಬದುಕನ್ನು ಕಟ್ಟಿಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನ್ಮತಾಳಿದ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಇಂದು ರಾಜ್ಯದಾದ್ಯಂತ ತನ್ನ ರೆಂಬೆ ಕೊಂಬೆಗಳನ್ನು ಚಾಚಿಕೊಂಡು ವಿಶಾಲವಾಗಿ ಬೆಳೆದಿದೆ. ಈ ಸಂಸ್ಥೆಯ ಮೂಲಕ ಸಾವಿರಾರು ಮಹಿಳೆಯರು ಉದ್ಯೋಗಿಗಳಾಗಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕವಾಗಿ ಸಶಕ್ತವಾಗಿವೆ. ʼಒಬ್ಬ ವ್ಯಕ್ತಿಗೆ ಮೀನೊಂದನ್ನು ಕೊಟ್ಟರೆ ಆ ಕ್ಷಣಕ್ಕೆ ಅವನ ಹೊಟ್ಟೆ ತುಂಬುತ್ತದೆ. ಆದರೆ ಅದೇ ಮೀನನ್ನು ಹೇಗೆ ಸಂಪಾದಿಸುವುದು ಎಂದು ಹೇಳಿಕೊಟ್ಟರೆ ಅವನು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಾನೆʼ ಇದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರ ಮಾತು.

ಇದನ್ನೂ ಓದಿ: ರಾಮಪುರಂ ಕುಟುಂಬದ ಕನಸಿನ ಕೂಸು ಇಂದು ಜಗತ್‌ ಪ್ರಸಿದ್ಧ ಆತಿಥ್ಯ ಕ್ಷೇತ್ರದ ಬ್ರ್ಯಾಂಡ್‌

ವೀರೇಂದ್ರ ಹೆಗ್ಗಡೆಯವರು ದೂರದೃಷ್ಠಿಯುಳ್ಳ ಸಮರ್ಥ ನಾಯಕ. ಸಮಾಜದ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡಿರುವ, ಸಮಾಜಕ್ಕಾಗಿಯೇ ತುಡಿಯುವ ಮತ್ತು ಮಿಡಿಯುವ ವ್ಯಕ್ತಿ. ಅವರು ಅಭಿವೃದ್ಧಿಗಳ ಹರಿಕಾರ. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಕನಸಿನ ಪರಿಕಲ್ಪನೆಯನ್ನು ತಮ್ಮ ಕಾರ್ಯಗಳ ಮೂಲಕ ನನಸಾಗಿಸಿದವರು. ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಅಪಾರವಾಗಿ ಶ್ರಮಿಸಿದ್ದಾರೆ. ತಮ್ಮದೇ ದೃಷ್ಟಿಕೋನದಲ್ಲಿ ಹತ್ತಾರು ವಿಶೇಷ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಎಸ್‌ಕೆಡಿಆರ್‌ಡಿಪಿ (Shri Kshethra Dharmasthala Rural Development Project) ಅತ್ಯಂತ ಮಹತ್ವಕಾಂಕ್ಷಿ ಯೋಜನೆ. ಸ್ವಸಹಾಯ ಸಂಘಗಳ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಾಲ ಒದಗಿಸಿಕೊಟ್ಟು ಅವರಿಗೆ ನೆರವಾದ ಯೋಜನೆ. ಸಂಘದ ಮೂಲಕ ಸಾಲ ಪಡೆದುಕೊಂಡ ಅದೆಷ್ಟೋ ಮಹಿಳೆಯರು ಇಂದು ಆರ್ಥಿಕವಾಗಿ ಸಬಲರಾಗಿದ್ದಾರೆ. ಇಡೀ ಸಂಸಾರದ ನೊಗವನ್ನು ತಾವೇ ಹೊರುವ ಹಂತಕ್ಕೆ ಬಂದು ನಿಂತಿದ್ದಾರೆ. ಅವರ ಮಕ್ಕಳು ಸುಶಿಕ್ಷಿತರಾಗಿ ತಮ್ಮ ಕಾಲಿನ ಮೇಲೆ ತಾವು ನಿಂತುಕೊಂಡಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಸದಾ ಕನಸನ್ನು ಬೆನ್ನು ಹತ್ತುವ ವ್ಯಕ್ತಿ. ಅದು ನನಸಾಗುವವರೆಗೂ ಅವರು ತಮ್ಮ ಪಟ್ಟನ್ನು ಸಡಿಲಿಸುವುದಿಲ್ಲ. ಅದನ್ನು ಕಾರ್ಯಗತಕ್ಕೆ ತಂದೇ ತರುತ್ತಾರೆ. ಆಸೆ, ಕನಸು ಮತ್ತು ಕನವರಿಕೆಗಳೊಂದಿಗೆ ಮಾನ್ಯ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಸಂಸ್ಥೆಯೆಂದರೆ ಅದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ.

Untitled design - 2026-03-27T192622.952

ಇದು ಲಾಭರಹಿತವಾದ ಏಕೈಕ ಸಂಸ್ಥೆ. ದಕ್ಷಿಣ ಕನ್ನಡ ಜಿಲ್ಲೆಯ 2000ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳ ಮಾಲಿಕತ್ವ ಹೊಂದಿರುವ ಕಲಂ 8ರ ಕಂಪೆನಿ ಕಾಯಿದೆ 2013ರ ಅಡಿಯಲ್ಲಿ ನೋಂದಾಣಿಯಾದ ಸಂಸ್ಥೆಯಿದು. ಹೆಮ್ಮೆ ಎಂದರೆ ಸಿರಿ ಸಂಸ್ಥೆಯು ಯಾವುದೇ ಲಾಭದ ಉದ್ದೇಶವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಆದಾಯ ತೆರಿಗೆ ಕಾಯಿದೆ-1961ರ ಅಡಿಯಲ್ಲಿ ವಿಶೇಷವಾಗಿ ಕೊಡಲ್ಪಡುವ ಕಲಂ 12ಎ ಮತ್ತು ಕಲಂ 80ಜಿಯ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಂಡಿದೆ. ಕರ್ನಾಟಕ ಸರಕಾರ ಹಾಗೂ ಭಾರತ ಸರಕಾರಗಳ ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸಿನ ನೆರವಿನೊಂದಿಗೆ 2004ನೆಯ ಇಸವಿಯಲ್ಲಿ ಸ್ಥಾಪಿತವಾದ ಸಿರಿ ಸಂಸ್ಥೆಯ ಉತ್ಪನ್ನಗಳನ್ನು ರಾಜ್ಯದಾದ್ಯಂತ ಸಿರಿ ಬ್ರ್ಯಾಂಡ್​​ನಲ್ಲಿ ಮಾರಾಟ ಮಾಡುತ್ತಿದೆ. ಪ್ರಸ್ತುತ ಸಿರಿ ಸಂಸ್ಥೆಯಲ್ಲಿ ವಾರ್ಷಿಕ ರೂ.30.00-40 ಕೋಟಿ ಮೊತ್ತದ ಆರ್ಥಿಕ ವ್ಯವಹಾರ ನಡೆಯುತ್ತಿದ್ದು, ಎಸ್.ಕೆ.ಡಿ.ಆರ್.ಡಿ.ಪಿ ಹಾಗೂ ಸಿರಿ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದೆಲ್ಲೆಡೆ ಸಿರಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬೆಳ್ತಂಗಡಿಯಲ್ಲಿ ಸ್ಥಾಪನೆಯಾಗಿರುವ ನೂತನ ಕೇಂದ್ರ ಘಟಕದಲ್ಲಿ ನೇರ ಏಳು ನೂರು ಉದ್ಯೋಗಿಗಳಿದ್ದು, ಅವರಿಗೆ ಬಸ್‌ ವ್ಯವಸ್ಥೆ, ಆಕರ್ಷಕ ಸಂಬಳದ ಜತೆಗೆ ವಿಶೇಷ ಭತ್ಯೆ, ಸಮವಸ್ತ್ರ ಮತ್ತು ಇಎಫ್‌ , ಪಿಎಫ್‌ನಂಥ ಸೌಲಭ್ಯಗಳಿವೆ. ಇದು ಗ್ರಾಮೀಣ ಭಾಗದಲ್ಲಾಗಿರುವ ಉದ್ಯೋಗ ಕ್ರಾಂತಿ ಎಂದೇ ಹೇಳಬಹುದು.

ನಂ.1 ಸಿರಿ ಉತ್ಪನ್ನಗಳು- ಗ್ರಾಹಕರೂ ಅಂಬಾಸಿಡರ್

ಸ್ವಾವಲಂಬಿ ಮಹಿಳೆಯರು ತಯಾರಿಸುವ ಗುಣಮಟ್ಟದ ಸಿರಿ ಉತ್ಪನ್ನಗಳು ಇಂದು ರಾಜ್ಯದ ಉದ್ದಗಲಕ್ಕೂ ತಲುಪುತ್ತಿದೆ. ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಯುತ್ತಿದೆ. ಸಂಸ್ಥೆ ತಾನು ಆರ್ಥಿಕವಾಗಿ ಸದೃಢಗೊಳ್ಳುವುದರೊಂದಿಗೆ ಮಹಿಳೆಯರನ್ನು ಸದೃಢಗೊಳಿಸುತ್ತಿದೆ. ಶ್ಲಾಘನೀಯವಾದ ವಿಷಯವೆಂದರೆ ಸಂಸ್ಥೆಯ ಅಷ್ಟೂ ಲಾಭವನ್ನು ಖಾವಂದರಾದ ವೀರೇಂದ್ರ ಹೆಗ್ಗಡೆಯವರು ಸಂಸ್ಥೆಯ ಅಭಿವೃದ್ಧಿ ಮತ್ತು ಉದ್ಯೋಗಿಗಳ ಭವಿಷ್ಯದ ಭದ್ರತೆಗಾಗಿ ಮೀಸಲಿಟ್ಟಿದ್ದಾರೆ. ಸಿರಿ ಇಂದು ಹತ್ತಾರು ವಿವಿಧ ಉತ್ಪನ್ನಗಳನ್ನು ತಯಾರಿಸುವ ಮೂಲಕ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಸ್ವತಃ ಗ್ರಾಹಕರೇ ಸಿರಿಯ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ಅದರ ಗುಣಮಟ್ಟ ಮತ್ತು ಆಕರ್ಷಕ ಬೆಲೆಯ ಕುರಿತು ಬಾಯಿ ತುಂಬಾ ಹೊಗಳುತ್ತಾರೆ. ಬಾಯಿಂದ ಬಾಯಿಗೆ ಹರಡಿ ಸಿರಿ ಇಂದು ನಿರೀಕ್ಷೆಗೂ ಮೀರಿ ಪ್ರಚಾರ ಪಡೆದಿದೆ. ಬೆಳ್ತಂಗಡಿಯಂಥ ಗ್ರಾಮದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳು ಇಂದು ಎಲ್ಲ ಜಿಲ್ಲೆಗಳಿಗೂ ತಲುಪುತ್ತಿದೆ. ಆಹಾರ ಉತ್ಪನ್ನಗಳು, ಡಿಟರ್ಜೆಂಟ್‌ಪೌಡರ್‌, ಸೋಪು, ಶ್ಯಾಂಪು, ಅಗರಬತ್ತಿ, ಬ್ಯಾಗು, ಉಡುಪು, ಸಿಹಿ ತಿನಿಸುಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ದಿನ ನಿತ್ಯದ ಬದುಕಿಗೆ ಅಗತ್ಯವಿರುವ ಅಷ್ಟೂ ವಸ್ತುಗಳನ್ನು ಸಿರಿ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.

ಫುಡ್‌ ಪ್ರಾಡಕ್ಟ್ಸ್

ಸಿರಿಯ ಆಹಾರ ಉತ್ಪನ್ನಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಕೋಕಮ್ ಜ್ಯೂಸ್, ಅಕ್ಕಿರೊಟ್ಟಿ, ಮೆಣಸಿನಹುಡಿ, ಪುಳಿಯೊಗರೆ ಪೌಡರ್, ಸಾಂಬಾರ್ ಪೌಡರ್, ಗರಂ ಮಸಾಲ, ರಸಂ ಪುಡಿ, ಪಲಾವ್ ಮಸಾಲೆ, ಬಿಸಿಬೇಳೆ ಬಾತ್, ಉಪ್ಪಿಟ್ಟು ಮಿಕ್ಸ್, ರವೆ ಇಡ್ಲಿ ಮಿಕ್ಸ್, ಬಾದಾಮಿ ಹಾಲು ಮಿಕ್ಸ್, ಕೊಬ್ಬರಿ ಎಣ್ಣೆ, ಜೇನುತುಪ್ಪ ಸೇರಿದಂತೆ ಹತ್ತಾರು ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ, ಬೆಳ್ತಂಗಡಿ ಮತ್ತು ಹಲವು ಕಡೆಗಳಲ್ಲಿ ಉತ್ಪಾದನಾ ಘಟಕಗಳಿವೆ.

Untitled design - 2026-03-27T192615.038

ನೈರ್ಮಲ್ಯ ಉತ್ಪನ್ನಗಳು

ಬಗೆಬಗೆಯ ಸುವಾಸನೆಯ ಫೆನಾಯಿಲ್‌ಗಳು, ಲಿಕ್ವಿಡ್ ಸೋಪ್‌, ಹ್ಯಾಂಡ್ ವಾಷ್, ಫ್ಲೋರ್ ವಾಷ್, ವೆಹಿಕಲ್ ವಾಷ್ ಮತ್ತು ಡಿಶ್ ವಾಷ್‌ಗಳು, ಬ್ಲೀಚಿಂಗ್ ಪೌಡರ್, ಡಿಶ್‌ವಾಷ್ ಪೌಡರ್, ಡಿಟರ್ಜೆಂಟ್ ಸೋಪ್, ಡಿಟರ್ಜೆಂಟ್ ಪೌಡರ್‌ಗಳನ್ನು ತಯಾರಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ದೊಂಡೋಲೆ, ಬೆಳಾಲು, ಗೇರುಕಟ್ಟೆ ಮೊದಲಾದ ಸ್ಥಳಗಳಲ್ಲಿ ಘಟಕಗಳು ಕಾರ್ಯನಿರ್ವಹಿಸುತ್ತಿದೆ.

ಅಗರಬತ್ತಿಗಳು

ಬಹುತೇಕರಿಗೆ ಗೊತ್ತಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಸ್ರಾರು ಮಹಿಳೆಯರು ಬೀಡಿ ಉದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದರು. ಆ ಉದ್ಯಮಕ್ಕೆ ಪರ್ಯಾಯವಾಗಿ ಅಗರಬತ್ತಿ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ಸಿರಿ ಸಂಸ್ಥೆಗೆ, ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರಿಗೆ ಸಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಗರ್ಡಾಡಿ, ನೈನಾಡು, ಪೆರಿಯಡ್ಕ, ನಾವೂರು, ತುಂಬೆ ಮುಂತಾದ ಸ್ಥಳಗಳಲ್ಲಿ ಅಗರಬತ್ತಿ ಉತ್ಪನ್ನಗಳ ತಯಾರಿಕಾ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ರೋಸ್, ಶ್ರೀಗಂಧ, ಚಂಪಾ, ಮೋಗ್ರ, ಫ್ಯಾನ್ಸಿ ಇಂಟಿಮೆಟ್, ವಿಭೂತಿ ಸುವಾಸನೆಯ 20ಕ್ಕೂ ಹೆಚ್ಚು ಬಗೆಯ ಅಗರಬತ್ತಿಗಳನ್ನು ರೋಲ್, ಪೌಚ್ ಹಾಗೂ ಪ್ಯಾಕೆಟ್‌ಗಳಲ್ಲಿ ಗ್ರಾಹಕರಿಗೆ ಪೂರೈಸಲಾಗುತ್ತಿದೆ.

ಉಡುಪುಗಳು

ಸಿರಿ ಗ್ರಾಮೋದ್ಯೋಗ ಸಂಸ್ಥೆ ಸಿದ್ಧ ಉಡುಪುಗಳನ್ನೂ ತಯಾರಿಸುತ್ತದೆ. ಈ ಮೂಲಕ ಬಟ್ಟೆ ಉದ್ಯಮದಲ್ಲೂ ದಾಖಲೆಯ ಮಾರಾಟ ಮಾಡಿ ಲಾಭಗಳಿಸುತ್ತಿದೆ. ಗ್ರಾಮೀಣ ಭಾಗದ ಗ್ರಾಹಕರಷ್ಟೇ ಅಲ್ಲದೆ ನಗರಗಳಲ್ಲಿ ವಾಸಿಸುತ್ತಿರುವ ಗ್ರಾಹಕರೂ ಸಿರಿ ಉಡುಪುಗಳನ್ನು ಸಂತಸದಿಂದ ಖರೀದಿ ಮಾಡಿ ಧರಿಸುತ್ತಿದ್ದಾರೆ. ಪುರುಷರಿಗಾಗಿ ಶರ್ಟುಗಳು, ಕುರ್ತಾ, ಸಾಂಪ್ರದಾಯಿಕ ಶೈಲಿಯ ಉಡುಗೆಗಳು, ಬರ್ಮುಡಾ, ಜೀನ್ಸ್ ಪ್ಯಾಂಟ್‌ಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಮಹಿಳೆಯರಿಗಾಗಿ ಕುರ್ತಿಗಳು, ಟಾಪ್ಸ್, ನೈಟಿ, ಸೀರೆ, ಸ್ಕರ್ಟ್ ಮುಂತಾದವುಗಳನ್ನು ಉತ್ಪಾದಿಸಲಾಗುತ್ತಿದೆ. ಬೆಳ್ತಂಗಡಿಯಲ್ಲಿ ಹುಟ್ಟುಪಡೆದ ಸಿರಿ ಗ್ರಾಮೋದ್ಯೋಗ ಬಟ್ಟೆ ಉತ್ಪಾದನ ಘಟಕಗಳ ಮೂಲಕ ಹಾವೇರಿ ಜಿಲ್ಲೆಯ ಚಿಕ್ಕಾಂಶಿ, ಧಾರವಾಡ ಜಿಲ್ಲೆಯ ಪಶುಪತಿಹಾಳ, ಕಣವಿಹೊನ್ನಾಪುರ, ಗದಗ ಜಿಲ್ಲೆಯ ಸೊರಟೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಗ್ಗಳಿಕೆ ಎಂಬಂತೆ ಖಾದಿ ಉತ್ಪನ್ನಗಳ ರಾಯಭಾರಿಯಾಗಿ ಸಿರಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಸಿರಿ ಕಿರೀಟಕ್ಕೆ ಇದು ಗರಿ ಅಲ್ಲವೇ?

ಬ್ಯಾಗುಗಳು

ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಬ್ಯಾಗ್‌ಗಳನ್ನೂ ಉತ್ಪಾದಿಸಲಾಗುತ್ತದೆ. ಸ್ಕೂಲ್ ಬ್ಯಾಗ್, ಎಕ್ಸಿಕ್ಯೂಟಿವ್ ಬ್ಯಾಗ್, ಫೈಲ್ ಬ್ಯಾಗ್, ಲಗೇಜ್ ಬ್ಯಾಗ್, ಲ್ಯಾಪ್‌ಟಾಪ್ ಬ್ಯಾಗುಗಳು, ಅಷ್ಟೇ ಅಲ್ಲ. ರೆಕ್ಸಿನ್ ಬ್ಯಾಗ್‌ಗಳನ್ನು ಕೂಡ ಸಿರಿ ಸಂಸ್ಥೆಯಲ್ಲಿ ತಯಾರಿಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ, ಹೊಸ್ಮಾರು, ಕೊಕ್ಕಡ, ಕೊಕ್ರಾಡಿ ಮುಂತಾದ ಸ್ಥಳಗಳಲ್ಲಿ ರೆಕ್ಸಿನ್ ಬ್ಯಾಗ್ ತಯಾರಿಕಾ ಘಟಕಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.

Untitled design - 2026-03-27T192552.116

ಸಿರಿಧಾನ್ಯ ಸಂಸ್ಕರಣಾ ಘಟಕ

ಸಿರಿಧಾನ್ಯ ಉತ್ಪನ್ನಗಳ ಮೂಲಕ ಆಹಾರ ಕ್ಷೇತ್ರದಲ್ಲಿ ಹೆಚ್ಚು ಕ್ರಾಂತಿ ಮಾಡಿದ್ದು ಇದೇ ಸಿರಿ ಗ್ರಾಮೋದ್ಯೋಗ ಸಂಸ್ಥೆ. ರಕ್ತದೊತ್ತಡ, ಮಧುಮೇಹ, ಬೊಜ್ಜು ಮತ್ತು ಇನ್ನಿತರ ಸಮಸ್ಯೆಗಳಿರುವ ಜನರಿಗೆ ಸಿರಿ ಉತ್ಪನ್ನಗಳನ್ನು ಪರಿಚಯ ಮಾಡಿಕೊಟ್ಟಿತು. ಧಾರವಾಡ ಜಿಲ್ಲೆಯ ರಾಯಪುರದಲ್ಲಿ ಸುಸಜ್ಜಿತವಾದ ಸಿರಿಧಾನ್ಯ ಘಟಕವನ್ನು ಆರಂಭಿಸಿದ್ದು, ಸಿರಿ ಸಂಸ್ಥೆಯು ಸಾವೆ, ಕೊರಲೆ, ನವಣೆ, ರಾಗಿ, ಜೋಳ, ಊದಲು, ಸಜ್ಜೆ, ಹಾರಕ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ರಾಜ್ಯದಾದ್ಯಂತ ಗ್ರಾಹಕರಿಗೆ 1 ಕೆ.ಜಿ ಹಾಗೂ ಬಲ್ಕ್ ಪ್ಯಾಕೆಟ್‌ಗಳಲ್ಲಿ ತಲುಪಿಸಲಾಗುತ್ತಿದೆ.

ಸಿರಿಧಾನ್ಯದ ಬೇಕರಿ ಉತ್ಪನ್ನ

ಸಿರಿ ಗ್ರಾಮೋದ್ಯಗ ಸಂಸ್ಥೆ ಏನು ಮಾಡಿದರೂ ವಿಶೇಷವಾಗಿರುತ್ತದೆ. ಅದೇನೆ ಹೊಸತನ್ನು ಪರಿಚಯಿಸಿದರೂ ಸಂಚಲನವಾಗುತ್ತದೆ. ನವ ಕ್ರಾಂತಿಯ ಅಲೆ ಏಳುತ್ತದೆ. ಸಿರಿ ಧಾನ್ಯಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದ ಸಿರಿ ಸಂಸ್ಥೆಯು ಸಿರಿ ಧಾನ್ಯಗಳಿಂದ ಬೇಕರಿ ತಿನಿಸನ್ನೂ ಉತ್ಪಾದಿಸುತ್ತಿದೆ. ಧಾರವಾಡ ಜಿಲ್ಲೆಯ ರಾಯಪುರದಲ್ಲಿರುವ ಸಿರಿಧಾನ್ಯಗಳ ಸಂಸ್ಕರಣಾ ಘಟಕದಲ್ಲಿ ರಸ್ಕ್, ಬ್ರೆಡ್, ಕುಕ್ಕೀಸ್ ಸೇರಿದಂತೆ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು ನಿವಾರಕ ಹಾಗೂ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗುವ, ಹೃದಯಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಮಿಲೆಟ್ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಸಹಸ್ರಾರು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಮತ್ತೊಂದು ವಿಶೇಷ ಎಂಬಂತೆ ಸಿರಿ ಮಿಲ್ಲೆಟ್‌ ಕೆಫೆಯೂ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಏಕೈಕ ಸಿರಿಧಾನ್ಯದ ಉಪಾಹಾರ ಗೃಹವಿದು. ಅಲ್ಲಿ ಆರೊಗ್ಯಕರ ಸಿರಿಧಾನ್ಯಗಳ ಭೋಜನ ಮತ್ತು ಖಾದ್ಯಗಳ ಜತೆಗೆ ಮಕ್ಕಳಿಗೆ ಆಟವಾಡಲು ವಿಶಾಲವಾದ ಮೈದಾನವಿದೆ.

ಸಿರಿ ಸಾಧನೆ

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಕಳೆದ ಎರಡು ದಶಕಗಳಲ್ಲಿ ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ. ಕರ್ನಾಟಕದ ಹಲವೆಡೆ ತನ್ನ ಶಾಖೆ ಮತ್ತು ಮಳಿಗೆಗಳನ್ನು ತೆರೆದಿದೆ. ಸಾವಿರಾರು ಮಹಿಳೆಯರು ಉದ್ಯೋಗಿಗಳಾಗಿದ್ದಾರೆ. ಆರ್ಥಿಕವಾಗಿಯೂ ಸಬಲರಾಗಿದ್ದಾರೆ. ಸಿರಿ ಗ್ರಾಮೋದ್ಯೋಗ ಸಂಸ್ಥೆಯು ತನ್ನದೇ ಆದ 17 ಮಳಿಗೆಗಳನ್ನು ಹೊಂದಿದೆ. ಗ್ರಾಮೀಣ ಭಾಗದ ಸಂಸ್ಥೆಯೊಂದು ಇಂದು ರಾಜಧಾನಿ ಬೆಂಗಳೂರಿನವರೆಗೂ ಹಬ್ಬಿದೆ. ಪ್ರಮುಖ ಮಳಿಗೆಗಳೆಂದರೆ, ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ, ಧಾರವಾಡ, ಹಾಸನ, ಬೆಂಗಳೂರು ಹಾಗೂ ಮಂಗಳೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗಳ ವಠಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಿರಿ ಲೈನ್‌ಸೇಲ್​ಗಳು

ರಾಜ್ಯದಾದ್ಯಂತ 11 ಸಿರಿ ವಾಹನಗಳ ಮೂಲಕ ರಿಟೈಲ್ ಮಳಿಗೆಗಳಿಗೆ ಸಿರಿ ಉತ್ಪನ್ನಗಳನ್ನು ಲೈನ್‌ಸೇಲ್ ಮಾಡಲಾಗುತ್ತಿದೆ. ಸಿರಿ ಸಂಚಾರಿ ವಾಹನದಲ್ಲಿಯೂ ಗ್ರಾಹಕರಿಗೆ ಸಿರಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.

Untitled design - 2026-03-27T192607.815

ಸಿರಿಯ ಫ್ರಾಂಚೈಸಿ ಮಳಿಗೆಗಳು

ಗ್ರಾಮೀಣ ಭಾಗದ ಜನರು ಅದರಲ್ಲೂ ವಿದ್ಯಾವಂತ ಯುವ ಸಮೂಹ ನಿರುದ್ಯೋಗ ಸಮಸ್ಯೆಯನ್ನು ಎದುರಿಸಬಾರದು ಎಂಬ ಉದ್ದೇಶದಲ್ಲಿಯೇ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹುಟ್ಟಿಕೊಂಡಿದ್ದು.
ಪದವಿ ಪಡೆದ ಯುವಕ ಯುವತಿಯರನ್ನು ಉದ್ಯೋಗಿಗಳನ್ನಾಗಿಸಲು ಸಿರಿ ಸಂಸ್ಥೆಯು ಫ್ರಾಂಚೈಸಿಗಳನ್ನು ತೆರೆಯುವ ನಿರ್ಧಾರಕ್ಕೆ ಬಂತು. ಇಂದು ಅಸಂಖ್ಯಾತ ಯುವಕ ಯುವತಿಯರು ನಗರ ಪ್ರದೇಶದಲ್ಲಿ ಸಿರಿ ಫ್ರಾಂಚೈಸಿ ಮಳಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮೀಣ ಸಿರಿ ಮಳಿಗೆಗಳನ್ನು ತೆರೆದು, ಸಿರಿ ಉತ್ಪನ್ನಗಳನ್ನು ದಾಖಲೆಮಟ್ಟದಲ್ಲಿ ಮಾರಾಟ ಮಾಡಿ ಸ್ವ ಉದ್ಯೋಗದಲ್ಲಿ ಸ್ವಾವಲಂಬಿಯಾಗಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ.

ವಿತರಕರೇ ಸಂಸ್ಥೆಯ ಬೆನ್ನೆಲುಬು

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳನ್ನು ಗ್ರಾಹಕರಿಗೆ ವೇಗವಾಗಿ ಅಂದರೆ ಸಕಾಲದಲ್ಲಿ ತಲುಪಿಸುವ ನಿಟ್ಟಿನಲ್ಲಿ ಸಿರಿ ಸಂಸ್ಥೆಯಿಂದ ವಿತರಕರನ್ನು ವಿಸ್ತರಿಸಲಾಗಿದ್ದು, ಈಗಾಗಲೇ ರಾಜ್ಯದಾದ್ಯಂತ 18 ಸೂಪರ್ ಸ್ಟಾಕಿಸ್ಟಾರರು ಹಾಗೂ 175ಕ್ಕೂಹೆಚ್ಚು ವಿತರಕರನ್ನು ಆಯ್ಕೆ ಮಾಡಲಾಗಿದೆ. ವಿತರಕರ ಮುಖಾಂತರವೇ ಸಿರಿ ಉತ್ಪನ್ನಗಳು ಸಾವಿರಾರು ಅಂಗಡಿಗಳಿಗೆ ಮತ್ತು ನೇರ ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ.

ಏಳು ಎಕರೆ ಭೂಮಿಯಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್

ಡಾ. ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಕನಸಿನಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಬೆಳ್ತಂಗಡಿಯಲ್ಲಿ ಖರೀದಿಸಲಾದ ಸುಮಾರು ಏಳು ಎಕರೆ ಪ್ರದೇಶದಲ್ಲಿ ಒಟ್ಟು 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಿರಿ ಸಂಸ್ಥೆಯ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಅದನ್ನು ಅಚ್ಚುಕಟ್ಟಾದ ಇಂಡಸ್ಟ್ರಿಯಲ್‌ ಪಾರ್ಕ್ ಆಗಿ ಮಾರ್ಪಾಡು ಮಾಡಲಾಗಿದೆ. ಇಲ್ಲಿ ಸಿರಿಯ ಎಲ್ಲಾ ಉತ್ಪನ್ನಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಕಡಿಮೆ ಮತ್ತು ಆಕರ್ಷಕ ಬೆಲೆ, ಉತ್ತಮ ಗುಣಮಟ್ಟ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಿರಿ ಉತ್ಪನ್ನಗಳನ್ನು ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಸಿರಿ ನೂತನ ಕಟ್ಟಡದಲ್ಲಿಯೇ ಏಳುನೂರಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗವಕಾಶವನ್ನು ನೀಡಲಾಗಿದೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರಿ ಕೆ.ಎನ್. ಜನಾರ್ಧನ ಅವರು ಸಮರ್ಥವಾಗಿ ಆಡಳಿತವನ್ನು ನಿಭಾಯಿಸುತ್ತಾ ಬರುತ್ತಿದ್ದಾರೆ. ರಾಜ್ಯದಾದ್ಯಂತ ಸಿರಿಯ ಏಳು ಮಳಿಗೆಗಳಿದ್ದು ಐದು ಸಾವಿರ ಕುಟುಂಬಗಳ ಆ ಮೂಲಕ ಆರ್ಥಿಕವಾಗಿ ಚೈತನ್ಯಯುತವಾಗಿವೆ.

ನಟ ರಮೇಶ್‌ ಅರವಿಂದ್‌ ರಾಯಭಾರಿ

ಸಿರಿ ಉತ್ಪನ್ನಗಳ ಬೇಡಿಕೆ ಹೆಚ್ಚಿಸುವ ಸಲುವಾಗಿ ಮತ್ತು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ರಮೇಶ್‌ ಅರವಿಂದ್‌ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಕನ್ನಡ ಚಲನಚಿತ್ರರಂಗದಲ್ಲಿ ನಟ ಮತ್ತು ನಿರ್ದೇಶಕರಾಗಿ ಖ್ಯಾತರಾಗಿರುವ ರಮೇಶ್‌ ಸಿರಿ ಉತ್ಪನ್ನಗಳ ಬಗ್ಗೆ ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಾ ನಾಡಿನ ಜನರ ಗಮನಸೆಳೆಯುತ್ತಿದ್ದಾರೆ. ಎಸ್‌ಕೆಡಿಆರ್‌ಡಿಪಿ ಬಿಸಿ ಟ್ರಸ್ಟ್‌ನ ಸಂಪೂರ್ಣ ಸಹಯೋಗದೊಂದಿಗೆ ಹತ್ತಾರು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಿರಿ ಉತ್ಪನ್ನಗಳು ಎಲ್ಲ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

Untitled design - 2026-03-27T192630.938



ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಿರಿ ನೆರವು
ಡಾ.ವೀರೇಂದ್ರ ಹೆಗ್ಗಡೆ ಅವರು ದೂರದೃಷ್ಠಿಯುಳ್ಳ ನಾಯಕ. ಅವರು ಸದಾ ಸಮಾಜದ ಹಿತವನ್ನು ಬಯಸುತ್ತಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರು ಕಳೆದ ಮೂರು ದಶಕಗಳಿಂದ ಹತ್ತಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹೇಮಾವತಿ ಹೆಗ್ಗ್ಡೆ ಆ ಪೈಕಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಅವರ ಕನಸಿನ ಕೂಸು. ಎರಡು ದಶಕಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆ ಸಾವಿರಾರು ಮಹಿಳೆಯರಿಗೆ ಉದ್ಯೋಗವನ್ನು ನೀಡಿದೆ. ಅವರ ಸ್ವಾವಲಂಬಿ ಬದುಕಿಗೆ ನೆರವಾಗಿದೆ. ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಇಂದು ಆತ್ಮವಿಶ್ವಾಸದಿಂದ ಬದುಕು ನಡೆಸುತ್ತಿವೆ. ಕಳೆದ ವರ್ಷ ಸಿರಿಯ ನೂತನ ಕಟ್ಟಡ ಪ್ರಾರಂಭವಾಗಿದೆ. ಇದು ಸಿರಿಯ ಕೇಂದ್ರ ಕಚೇರಿ. ಏಳು ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಇಂಡಸ್ಟ್ರಿಯಲ್‌ ಪಾರ್ಕ್‌ ಇದೆ. ಬೆಳ್ತಂಗಡಿಯಂಥ ಗ್ರಾಮದಲ್ಲಿ ಉದ್ಯೋಗ ಕ್ರಾಂತಿಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಭರವಸೆಯ ಬೆಳಕಾಗಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ರಾಜ್ಯದಾದ್ಯಂತ ಹೆಸರುವಾಸಿಯಾಗಿದೆ. ಆಕರ್ಷಕ ಬೆಲೆಯಲ್ಲಿ ಸಿಗುವ ಗುಣಮಟ್ಟದ ಸಿರಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಹಿಂದುಳಿದ ಮಹಿಳೆಯರ ಸಬಲೀಕರಣಕ್ಕಾಗಿ ಎಲ್ಲರೂ ಸಹಕರಿಸಿ.
-ಕೆ.ಎನ್‌ ಜನಾರ್ದನ, ವ್ಯವಸ್ಥಾಪಕ ನಿರ್ದೇಶಕರು
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ(ರಿ)