ಅವನೇ ಶ್ರೀ ವೈದ್ಯನಾಥೇಶ್ವರ ಜ್ಯೋತಿರ್ಲಿಂಗ!
ಇದೇ ರೀತಿಯ ಕತೆಯನ್ನು ಗೋಕರ್ಣ ಪುಣ್ಯಕ್ಷೇತ್ರದ ಬಗ್ಗೆಯೂ ಹೇಳುತ್ತಾರೆ. ಅಲ್ಲಿರುವುದೂ ಆತ್ಮಲಿಂಗವೇ ಎನ್ನುತ್ತಾರೆ. ಈ ಕತೆಗಳ ನೈಜತೆಯನ್ನು ಪ್ರಶ್ನಿಸುವ ಬದಲು ನಮ್ಮ ನಡುವೆ ಗೋಕರ್ಣದಲ್ಲೋ, ಪರ್ಲಿಯಲ್ಲೋ, ದೇವಘರ್ ದಲ್ಲಿಯೋ ಜ್ಯೋತಿರ್ಲಿಂಗ ಇದೆ ಎಂದು ಸಂತಸಪಡೋಣ!
- ಅರುಣ ಷಡಕ್ಷರಿ
ನಾವು ಇಂದು ಪರಿಚಯ ಮಾಡಿಕೊಳ್ಳುತ್ತಿರುವ ಜ್ಯೋತಿರ್ಲಿಂಗವು ವೈದ್ಯನಾಥ ಎಂದು ಹೆಸರು ಪಡೆದ ಜ್ಯೋತಿರ್ಲಿಂಗ. ಈ ಜ್ಯೋತಿರ್ಲಿಂಗವು ಜಾರ್ಖಂಡ್ ರಾಜ್ಯದ ದೇವಘರ್ ಎಂಬ ಊರಿನಲ್ಲಿದೆ. ಇಲ್ಲೊಂದು ವಿಚಿತ್ರವೂ ಇದೆ, ಕೆಲವರು ಈ ದೇವಘರ್ ನ ಜ್ಯೋತಿರ್ಲಿಂಗವೇ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಭಾವಿಸುತ್ತಾರೆ. ಆದರೆ ಕೆಲವರು ಮಹಾರಾಷ್ಟ್ರದ ಪರ್ಲಿ ಎಂಬ ಊರಿನಲ್ಲಿರುವ ಜ್ಯೋತಿರ್ಲಿಂಗವೇ ವೈದ್ಯನಾಥ ಜ್ಯೋತಿರ್ಲಿಂಗ ಎಂದು ಭಾವಿಸುತ್ತಾರೆ. ನಾವೀಗ ನಂಬಿಕೆ-ಭಾವನೆಗಳ ಜಗಳಕ್ಕೆ ಹೋಗದೆ ಎರಡೂ ಜ್ಯೋತಿರ್ಲಿಂಗಗಳ ಪರಿಚಯ ಮಾಡಿಕೊಳ್ಳೋಣ. ಜಾರ್ಖಂಡಿನ ದೇವಘರ್ ಗೆ ಬೆಂಗಳೂರಿನಿಂದ ನೇರ ವಿಮಾನ ಸಂಪರ್ಕವಿದೆ. ವಿಮಾನ ನಿಲ್ದಾಣದ ಹೊರಗಡೆ ನೂರಾರು ಆಟೋರಿಕ್ಷಾಗಳು ನಿಂತಿರುತ್ತವೆ. ಅವು ನಮ್ಮನ್ನು ವೈದ್ಯನಾಥ ಜ್ಯೋತಿರ್ಲಿಂಗದ ದೇವಾಲಯದವರೆಗೂ ಕರೆದುಕೊಂಡು ಹೋಗುತ್ತವೆ. ದೇವಾಲಯದ ಸುತ್ತಮುತ್ತಲಿನ ರಸ್ತೆಗಳು ಬಹಳ ಇಕ್ಕಟ್ಟಾಗಿರುವುದರಿಂದ ಅಲ್ಲಿ ಕಾರುಗಳಿಗೆ ಪ್ರವೇಶವಿಲ್ಲ.
ಇದನ್ನೂ ಓದಿ: ಮಹಾಕಾಳೇಶ್ವರ ಜ್ಯೋತಿರ್ಲಿಂಗ – ಕಾಲ ಮತ್ತು ಮರಣದ ಅಧಿಪತಿ !
ವಿ ಐ ಪಿ ಪಾಸ್ ಇದೆ!
ಈ ದೇವಾಲಯದಲ್ಲಿ ಒಂದು ವಿಶೇಷ ರೀತಿಯ ಅರ್ಚನಾ ಪದ್ಧತಿ ಚಾಲ್ತಿಯಲ್ಲಿದೆ. ನಾವು ದೇವಾಲಯದ ಹೊರಗಡೆ ಮಾರುವ ಅಂಗಡಿಗಳಿಂದ ನೀರಿನ ಪುಟ್ಟಪುಟ್ಟ ಪ್ಲಾಸ್ಟಿಕ್ ಬಿಂದಿಗೆಗಳನ್ನು ಕೊಂಡುಕೊಂಡೆವು. ಸಾಮಾನ್ಯವಾಗಿ ಉಚಿತ ದರ್ಶನದ ಸಾಲು ಬಹಳ ಉದ್ದವಾಗಿರುತ್ತವೆ. ಆದರೆ ವಿ.ಐ.ಪಿ ದರ್ಶನದ ಟಿಕೇಟು ಪಡೆದಿದ್ದರೆ (ಅಥವಾ ಯಾರಾದರೂ ಗಣ್ಯರ ಶಿಫಾರಸು ಪಡೆದಿದ್ದರೆ) ಅರ್ಧ ಗಂಟೆಯಲ್ಲಿ ಗರ್ಭಗುಡಿಯನ್ನು ತಲುಪಬಹುದು. ಗರ್ಭಗುಡಿಯ ಒಳಗಡೆ ಜನಸಂದಣಿ ಇರುತ್ತದೆ. ಅಲ್ಲಿ ನಾವು ತೆಗೆದುಕೊಂಡು ಹೋಗಿರುವ ಪ್ಲಾಸ್ಟಿಕ್ ಬಿಂದಿಗೆಗಳ ನೀರಿನಿಂದ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಮಾಡಿ ಬಿಲ್ವಪತ್ರೆಯನ್ನು ಏರಿಸಿ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಬಹುದು. ಬಹುತೇಕ ಜನರು ಆ ಖಾಲಿ ಪ್ಲಾಸ್ಟಿಕ್ ಬಿಂದಿಗೆಗಳನ್ನು ಅಲ್ಲಿಯೇ ಬಿಸಾಡಿ ಬರುತ್ತಾರೆ. ಆ ಪ್ಲಾಸ್ಟಿಕ್ ಬಿಂದಿಗೆಗಳನ್ನು ಬಿಸಾಡಲು ದೊಡ್ಡ ದೊಡ್ಡ ಡ್ರಮ್ಮುಗಳನ್ನು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ, ಗರ್ಭಗುಡಿಯೊಳಗಿನ ಶುಚಿತ್ವವನ್ನು ಕಾಪಾಡಬಹುದಿತ್ತೋ ಏನೋ. ಸಾಕಷ್ಟು ಆದಾಯವಿರುವ ದೇವಸ್ಥಾನದ ಆಡಳಿತ ಮಂಡಳಿ ಶುಚಿತ್ವದ ಬಗ್ಗೆ ಗಮನ ಹರಿಸಿದರೆ ಒಳ್ಳೆಯದಾಗುತ್ತದೆ. ಗರ್ಭ ಗುಡಿಯೊಳಗೆ ಪ್ರವೇಶ ಮಾಡಿದ ನಂತರ ಅಭಿಷೇಕ, ಅರ್ಚನೆ, ಪೂಜೆಗಳು ಕೆಲವೇ ನಿಮಿಷಗಳಲ್ಲಿ ಮುಗಿದು ಹೋದವು. ಆದರೆ ಅದೊಂದು ಶಕ್ತಿಶಾಲಿ ಅನುಭವವಾಗಿತ್ತು. ಗರ್ಭಗುಡಿಯಿಂದಾಚೆಗೆ ಬಂದ ನಂತರ ಹಿಂತಿರುಗಿ ನೋಡಿದರೆ ಉಚಿತ ದರ್ಶನದ ಸಾಲಿನಲ್ಲಿ ನಿಂತಿದ್ದ ಸಾವಿರಾರು ಭಕ್ತರನ್ನು ನೋಡಿ ನಮಗೆ ಒಂದು ರೀತಿಯ ಮುಜುಗರವಾಯಿತು.

ಹೆಸರು ಹೇಗೆ ಬಂತು?
ಇಲ್ಲಿರುವ ಜ್ಯೋತಿರ್ಲಿಂಗವನ್ನು ವೈದ್ಯನಾಥ ಜ್ಯೋತಿರ್ಲಿಂಗ ಎಂದು ಕರೆಯುವುದಕ್ಕೆ ಕಾರಣವಾದ ಪೌರಾಣಿಕ ಕತೆಯನ್ನು ಹೇಳುತ್ತಾರೆ. ಈ ಕತೆಯ ಪ್ರಕಾರ ಲಂಕೆಯ ಅಧಿಪತಿಯಾಗಿದ್ದ ರಾವಣ ಮಹಾನ್ ಶಿವಭಕ್ತ. ಆತನಿಗೆ ಹತ್ತು ತಲೆಗಳು, ಇಪ್ಪತ್ತು ಕೈಗಳು ಇದ್ದವಂತೆ. ಆ ರಾವಣನಿಗೆ ಅತೀ ದೊಡ್ಡ ಆಸೆಯೊಂದಿತ್ತು. ಅದೇನೆಂದರೆ ತಾನು ಜೀವಂತವಾಗಿರುವಾಗಲೇ ತನ್ನ ಮನುಷ್ಯ ಕಣ್ಣುಗಳಿಂದ ಪರಶಿವನ ದಿವ್ಯ ದರ್ಶನವನ್ನು ಪಡೆಯುವ ಆಸೆ! ಅದಕ್ಕಾಗಿ ಆತ ತೀವ್ರತರವಾದ ತಪಸ್ಸನ್ನು ಮಾಡಿದನಂತೆ. ಆದರೆ ಶಿವನ ದರ್ಶನವಾಗಲಿಲ್ಲ. ತನ್ನ ಮಹತ್ತರ ಆಸೆಯನ್ನು ನೆರವೇರಿಸಿಕೊಳ್ಳಲು ತನ್ನನ್ನೇ ಬಲಿಯಾಗಿ ಕೊಡಲು ನಿರ್ಧರಿಸಿದ.
ಆತ ದೂರದ ಹಿಮಾಲಯ ಪರ್ವತಕ್ಕೆ ತೆರಳಿ ಒಂದು ದೊಡ್ಡ ಯಜ್ಞಕುಂಡವನ್ನು ನಿರ್ಮಿಸಿದ. ಹೆಚ್ಚಿನ ಮರಗಳನ್ನು ಸಂಗ್ರಹಿಸಿ ಯಾಗಾಗ್ನಿಯನ್ನು ಪ್ರಜ್ವಲಿಸಿದ. ಹರ ಹರ ಮಹಾದೇವ್ ಎಂಬ ಮಂತ್ರೋಚ್ಛಾರಣೆಯೊಂದಿಗೆ ತನ್ನ ತಲೆಗಳನ್ನೇ ಒಂದೊಂದಾಗಿ ಕತ್ತರಿಸಿ ಯಜ್ಞಕುಂಡಕ್ಕೆ ಎಸೆಯತೊಡಗಿದ. ಒಂದು, ಎರಡು, ಮೂರು ಹೀಗೆ ಒಂಬತ್ತು ತಲೆಗಳನ್ನು ಕತ್ತರಿಸಿ ಪರಶಿವನಿಗೆ ಅರ್ಪಿಸಿದ. ಇನ್ನೇನು ಕೊನೆಯ ತಲೆಯನ್ನು ಕತ್ತರಿಸಲು ಎತ್ತಿದ ಕ್ಷಣದಲ್ಲಿ ರುದ್ರ ಭಯಂಕರ ಶಬ್ದದೊಂದಿಗೆ ಆಕಾಶದಲ್ಲಿ ಪರಶಿವನು ಪ್ರತ್ಯಕ್ಷನಾದ. ಆತನ ದರ್ಶನದಿಂದ ರಾವಣ ಆನಂದಬಾಷ್ಪವನ್ನು ಸುರಿಸಿದ. ಆ ಪರಶಿವನನ್ನು ತನ್ನೊಂದಿಗೆ ಲಂಕೆಗೆ ಬಂದು ಅಲ್ಲಿಯೇ ಇರಲು ಕೇಳಿಕೊಂಡ. ಆದರೆ ಪರಶಿವನು ತಾನು ಕೈಲಾಸವಾಸಿಯಾದ್ದರಿಂದ ಲಂಕೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ. ಆದರೆ ರಾವಣನ ಹಠವನ್ನು ನೋಡಿ ನಾನು ನಿನಗೆ ನನ್ನ ಆತ್ಮಲಿಂಗವನ್ನು ಕೊಡುತ್ತೇನೆ. ಅದನ್ನು ಲಂಕೆಗೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪನೆ ಮಾಡು. ಆದರೆ ಒಂದು ಷರತ್ತು. ಲಂಕೆ ತಲುಪುವ ಮೊದಲು ನೀನು ಎಲ್ಲಿಯಾದರೂ ನನ್ನ ಆತ್ಮಲಿಂಗವನ್ನು ಕೆಳಕ್ಕೆ ಇಟ್ಟರೆ ಅದು ಅಲ್ಲಿಯೇ ಸ್ಥಿರವಾಗಿ ಬಿಡುತ್ತದೆ ಎಂದು ಹೇಳಿ ಪರಶಿವನು ಅಂತರ್ಧಾನನಾದನು. ಅಲ್ಲಿಯೇ ಪರಶಿವನ ಆತ್ಮಲಿಂಗ ಪ್ರತ್ಯಕ್ಷವಾಯಿತು. ಅದರ ಮಹಿಮೆಯಿಂದಾಗಿ ರಾವಣನು ಅಗ್ನಿಗೆ ಸಮರ್ಪಿಸಿದ್ದ ಒಂಬತ್ತು ತಲೆಗಳು ರಾವಣನಿಗೆ ಅಂಟಿಕೊಂಡವು. ಈ ಸರ್ಜರಿಯನ್ನು ಮಾಡಿದ ಜ್ಯೋತಿರ್ಲಿಂಗಕ್ಕೆ ವೈದ್ಯನಾಥ ಜ್ಯೋತಿರ್ಲಿಂಗ ಎಂಬ ಹೆಸರು ಬಂದಿತಂತೆ.
ಕತೆಯ ಮುಂದುವರಿದ ಭಾಗ ಕುತೂಹಲಕಾರಿಯಾಗಿದೆ. ಆ ಕತೆ ನಮಗೆಲ್ಲರಿಗೂ ಗೊತ್ತಿರುವುದೇ ಆಗಿದೆ. ಏಕೆಂದರೆ ಇದೇ ರೀತಿಯ ಕತೆಯನ್ನು ಗೋಕರ್ಣ ಪುಣ್ಯಕ್ಷೇತ್ರದ ಬಗ್ಗೆಯೂ ಹೇಳುತ್ತಾರೆ. ಅಲ್ಲಿರುವುದೂ ಆತ್ಮಲಿಂಗವೇ ಎನ್ನುತ್ತಾರೆ. ಈ ಕತೆಗಳ ನೈಜತೆಯನ್ನು ಪ್ರಶ್ನಿಸುವ ಬದಲು ನಮ್ಮ ನಡುವೆ ಗೋಕರ್ಣದಲ್ಲೋ, ಪರ್ಲಿಯಲ್ಲೋ, ದೇವಘರ್ ದಲ್ಲಿಯೋ ಜ್ಯೋತಿರ್ಲಿಂಗ ಇದೆ ಎಂದು ಸಂತಸಪಡೋಣ!

ಹೀಗೊಂದು ದಿಢೀರ್ ಮದುವೆ
ವೈದ್ಯನಾಥನ ದರ್ಶನದ ನಂತರ ನಾವು ಹೊರಗಡೆ ಬಂದೆವು. ಈ ಜ್ಯೋತಿರ್ಲಿಂಗ ಮಂದಿರದ ಎದುರುಗಡೆ ಇರುವ ದುರ್ಗಾಮಾತೆಯ ಮಂದಿರಕ್ಕೂ ಹೋದೆವು. ಅದು ದುರ್ಗಾಮಾತೆಯ ಹೃದಯ ಶಕ್ತಿಪೀಠ ಎಂದು ನಂಬಲಾಗುತ್ತದೆ. ಇಲ್ಲಿ ಇವೆರಡೂ ಮಂದಿರಗಳಲ್ಲದೆ 21 ಇತರ ದೇವತೆಗಳ ಸನ್ನಿಧಿಗಳೂ ಇವೆ.
ಅಲ್ಲಿ ನಾವು ಮತ್ತೊಂದು ವಿಶೇಷ ಸಂಪ್ರದಾಯವನ್ನು ಕಂಡೆವು. ಅದೇನೆಂದರೆ ವೈದ್ಯನಾಥೇಶ್ವರನಿಗೂ, ದುರ್ಗಾಮಾತೆಗೂ ದಿಢೀರ್ ಮದುವೆ ಮಾಡಿಸುತ್ತಾರೆ. ಹೇಗೆಂದರೆ ಅಲ್ಲಿರುವ ಅಂಗಡಿಗಳಲ್ಲಿ ಕೆಂಪು ಬಣ್ಣದ ಬಟ್ಟೆಯ ಪಟ್ಟಿಗಳ ಗಂಟುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ. ಭಕ್ತರು ಅದನ್ನು ಕೊಂಡುಕೊಂಡು ಅಲ್ಲಿಯೇ ಸಿದ್ಧರಾಗಿ ನಿಂತಿರುವ ನೂರಾರು ಪುರೋಹಿತರಲ್ಲಿ ಯಾರಾದರೊಬ್ಬರಿಗೆ ಕೊಡುತ್ತಾರೆ. ಆ ಪುರೋಹಿತರು ಆ ಬಟ್ಟೆಯ ಗಂಟನ್ನು ಪೂಜಿಸಿ ವೈದ್ಯನಾಥ ಲಿಂಗದ ಗೋಪುರದ ಮೇಲೆ ನಿಂತಿರುವ ಮತ್ತೊಬ್ಬ ಪುರೋಹಿತರು ಕೊಡುತ್ತಾರೆ. ಆತ ಆ ಬಟ್ಟೆಯ ಒಂದು ತುದಿಯನ್ನು ಆ ದೇವಾಲಯದ ಗೋಪುರಕ್ಕೆ ಕಟ್ಟುತ್ತಾನೆ. ಆನಂತರ ಉಳಿದ ಬಟ್ಟೆಯ ಗಂಟನ್ನು ಕೆಳಗೆಸೆಯುತ್ತಾನೆ. ಆಗ ಅಲ್ಲಿ ನಿಂತಿರುವ ಮಗದೊಬ್ಬ ಪೂಜಾರಿ ಆ ಗಂಟನ್ನು ಹೊತ್ತುಕೊಂಡು ದುರ್ಗಾಮಾತೆಯ ಮಂದಿರದ ಬಳಿ ಹೋಗುತ್ತಾನೆ. ಅಲ್ಲಿರುವ ನಾಲ್ಕನೆಯ ಪೂಜಾರಿ ಆ ಗಂಟನ್ನು ಹೊತ್ತುಕೊಂಡು ದುರ್ಗಾಮಾತೆಯ ಗೋಪುರದ ಮೇಲೆ ಹತ್ತಿ ಆ ಗಂಟಿನ ಮತ್ತೊಂದು ತುದಿಯನ್ನು ಗೋಪುರದ ಶಿಖರಕ್ಕೆ ಸುತ್ತಿ ಸಿಕ್ಕಿಸುತ್ತಾನೆ. ದುರ್ಗಾಮಾತೆಯ ಮತ್ತು ವೈದ್ಯನಾಥನ ಮದುವೆ ಆಗಿ ಹೋಯಿತೆಂದು ಚಪ್ಪಾಳೆ ತಟ್ಟುತ್ತಾರೆ. ಈ ದಿಢೀರ್ ಮದುವೆ ಸರಳವೂ ಹೌದು, ಚಂದವೂ ಹೌದು. ಈ ಎರಡೂ ಗೋಪುರದ ಮಧ್ಯೆ ನೂರಾರು ದಾರದ ಹಾರಗಳನ್ನು ಕಾಣಬಹುದು.
ಮಹಾರಾಷ್ಟ್ರದ ಪರ್ಲಿಯಲ್ಲಿರುವ ಜ್ಯೋತಿರ್ಲಿಂಗವೋ ಅಥವಾ ಜಾರ್ಖಂಡ್ ರಾಜ್ಯದಲ್ಲಿರುವ ಜ್ಯೋತಿರ್ಲಿಂಗವೋ ಎಂದು ಚರ್ಚೆಗಿಳಿಯುವ ಬದಲು ಎರಡನ್ನೂ ದರ್ಶಿಸಿ, ಅರ್ಚಿಸಿ ಪುಣ್ಯ ಪಡೆಯುವುದು ಒಳ್ಳೆಯದಲ್ಲವೇ ?