ಮೈಸೂರು ದಸರಾ ಕೇವಲ ಹಬ್ಬವಲ್ಲ, ಅದು ಕರ್ನಾಟಕದ ಐತಿಹಾಸಿಕ ಸಂಸ್ಕೃತಿಯ ಪ್ರತಿಬಿಂಬ. 400 ವರ್ಷಗಳ ಹಿಂದೆ ವಿಜಯನಗರದ ಅರಸರಿಂದ ಆರಂಭಗೊಂಡು, ಒಡೆಯರ ಕಾಲದಲ್ಲಿ ವೈಭವದ ಶಿಖರ ಮುಟ್ಟಿದ ಈ ನಾಡಹಬ್ಬ ಇಂದು ವಿಶ್ವವಿಖ್ಯಾತವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಆರಂಭಗೊಂಡು, ಬನ್ನಿಮಂಟಪದಲ್ಲಿ ಬನ್ನಿ ಮರದ ಪೂಜೆಯೊಂದಿಗೆ ಮುಕ್ತಾಯಗೊಳ್ಳುವ ಈ 11 ದಿನಗಳ ಯಾತ್ರೆಯಲ್ಲಿ ಇಡೀ ಮೈಸೂರೇ ಒಂದು ರಾಜ್ಯದಂತೆ ಮೆರೆಯುತ್ತದೆ. ಈ ಬಾರಿಯ 2026ರ ದಸರಾ ಎಂದಿಗಿಂತ ವಿಶೇಷ. ಅರಮನೆ, ಲಕ್ಷಾಂತರ ದೀಪಗಳು, ಚಿನ್ನದ ಅಂಬಾರಿ ಹೊತ್ತ ಗಜರಾಜ, ಜನಪದದ ನಿನಾದ, ಕಲೆಯ ಕಂಪು, ಬಾಯಲ್ಲಿ ನೀರೂರಿಸುವ ಆಹಾರ, ಕಣ್ಣು ತುಂಬುವ ಹೂವಿನ ಲೋಕ...ವಾಹ್! ಮೈಸೂರು ದಸರಾ ಎಂದರೆ ಕೇವಲ ಹಬ್ಬವಲ್ಲ. ಅದು ಕರ್ನಾಟಕವನ್ನು ಜಗತ್ತಿಗೆ ಪರಿಚಯಿಸುವ ಜೀವಂತ ಸಾಂಸ್ಕೃತಿಕ ವೈಭವ. ಬರದ ಛಾಯೆ ಇದ್ದರೂ ಈ ಬಾರಿಯ ದಸರಾ ಅದ್ದೂರಿತನದಲ್ಲಿ ಹಳೆಯ ದಾಖಲೆಗಳನ್ನು ಮುರಿಯುತ್ತಿದೆ. ದೇಶವಿದೇಶದ ಪ್ರವಾಸಿಗರ ಜತೆಗೆ ಇಡೀ ರಾಜ್ಯವನ್ನು ತನ್ನತ್ತ ಸೆಳೆಯುವಲ್ಲಿ ಈ ಬಾರಿಯ ಮೈಸೂರು ದಸರಾ ಯಶಸ್ವಿಯಾಗಿದೆ.

ಮೈಸೂರು ದಸರಾ-ಕರ್ನಾಟಕದ ಐಡೆಂಟಿಟಿ!

ಭಾರತದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ಪ್ರತಿ ರಾಜ್ಯಕ್ಕೂ ತನ್ನದೇ ಆದ ಆಚರಣೆ, ಸಂಪ್ರದಾಯ, ನಂಬಿಕೆ ಮತ್ತು ಸಂಭ್ರಮಗಳಿವೆ. ಆದರೆ ಒಂದು ಹಬ್ಬವೇ ಒಂದು ನಗರದ ಗುರುತಾಗಿ, ಒಂದು ರಾಜ್ಯದ ಹೆಮ್ಮೆಯಾಗಿ, ಪ್ರವಾಸಿಗರ ಸಂಭ್ರಮವಾಗಿ ರೂಪುಗೊಳ್ಳುವ ಉದಾಹರಣೆಗಳು ಅಪರೂಪ. ಮೈಸೂರು ದಸರಾ ಅಂಥದ್ದೊಂದು ವಿಶಿಷ್ಟ ಸಾಂಸ್ಕೃತಿಕ ಸಂಭ್ರಮ.

ಇದನ್ನೂ ಓದಿ: ವಿಜಯನಗರದ ಶಿಲ್ಪಿಗಳ ಕಲಾ ನೈಪುಣ್ಯ- ಲೇಪಾಕ್ಷಿ

ಮೈಸೂರು ಯಾವತ್ತಿಗೂ ಪ್ರವಾಸಿಗರ ನೆಚ್ಚಿನ ನಗರ. ಸಾಮಾನ್ಯ ದಿನಗಳಲ್ಲಿಯೇ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಮೈಸೂರು, ದಸರಾ ಸಂದರ್ಭದಲ್ಲಿ ಒಂದು ಬೃಹತ್ ಸಾಂಸ್ಕೃತಿಕ ವೇದಿಕೆಯಾಗಿ ಬದಲಾಗುತ್ತದೆ ಇತರ ದಿನಗಳಲ್ಲಿ ಇತಿಹಾಸ, ಅರಮನೆ, ಚಾಮುಂಡಿಬೆಟ್ಟ ಮತ್ತು ಮೃಗಾಲಯಕ್ಕಾಗಿ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು, ದಸರಾ ಹೊತ್ತಿನಲ್ಲಿ ರಾಜಕಳೆ ಪಡೆದುಕೊಳ್ಳುತ್ತದೆ.

Untitled design (68)

ಮೈಸೂರು ದಸರಾದ ಮೂಲ 1610ರಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಯಿತು ಎನ್ನಲಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ, ಮೈಸೂರು ಒಡೆಯರು ನವರಾತ್ರಿಯನ್ನು ರಾಜ್ಯದ ಅತ್ಯಂತ ಪವಿತ್ರ ಹಬ್ಬವನ್ನಾಗಿ ಆಚರಿಸಲು ಆರಂಭಿಸಿದರು. ದುರ್ಗೆಯು ಮಹಿಷಾಸುರನನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಚಾಮುಂಡೇಶ್ವರಿಯನ್ನು ಆರಾಧಿಸುವುದು ಇದರ ಮೂಲ ಉದ್ದೇಶ. ಈ ಬಾರಿ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಉದ್ಘಾಟನೆ ನೆರವೇರಿಸಿದ್ದಾರೆ. ಮೈಸೂರು ದಸರಾ ಅಕ್ಟೋಬರ್ 11ರಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಈಗಾಗಲೇ ಆರಂಭವಾಗಿದೆ. ಅಕ್ಟೋಬರ್ 21ರ ವಿಜಯದಶಮಿಯ ಜಂಬೂಸವಾರಿಯೊಂದಿಗೆ ಈ ವರ್ಷದ ಉತ್ಸವ ಸಮಾರೋಪಗೊಳ್ಳಲಿದೆ. 417ನೆಯ ಆವೃತ್ತಿಯ ದಸರಾ ಎನ್ನಲಾಗುತ್ತಿರುವ ಈ ಉತ್ಸವ, ಪರಂಪರೆಯ ಆಚರಣೆಗಳನ್ನು ಸಮಕಾಲೀನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಸೆಯುತ್ತಿದೆ.

ಮೈಸೂರು ದಸರಾ ಕೇವಲ ರಾಜಮನೆತನದ ವೈಭವದ ಪ್ರದರ್ಶನವಲ್ಲ. ದುಷ್ಟಶಕ್ತಿಯ ವಿರುದ್ಧ ಶಕ್ತಿಯ ವಿಜಯವನ್ನು ಸಾರುವ ಧಾರ್ಮಿಕ ಸಂಕೇತವೂ ಹೌದು; ಹಲವು ತಲೆಮಾರುಗಳ ಕಲಾ, ಸಂಗೀತ, ನೃತ್ಯ ಮತ್ತು ಜನಪದ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ವೇದಿಕೆಯೂ ಹೌದು. ಅದಕ್ಕಾಗಿಯೇ ಮೈಸೂರು ದಸರಾವನ್ನು ಕರ್ನಾಟಕದ ನಾಡಹಬ್ಬವೆಂದು ಕರೆಯಲಾಗುತ್ತದೆ.

ಸಾಟಿಯಿಲ್ಲದ ಅಂಬಾರಿಯ ಗಾಂಭೀರ್ಯ!

ದಸರಾ ಎಂದಾಕ್ಷಣ ಮನಸಿನಲ್ಲಿ ಮೂಡುವ ಮೊದಲ ಚಿತ್ರವೇ ಚಿನ್ನದ ಅಂಬಾರಿ. ಸುಂದರವಾಗಿ ಅಲಂಕರಿಸಲ್ಪಟ್ಟ ಗಜರಾಜನ ಬೆನ್ನಿನ ಮೇಲಿನ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿ, ಮುಂದೆ ಸಾಗುವ ಕಲಾತಂಡಗಳು, ನಾದಸ್ವರ, ಡೊಳ್ಳು, ವೀರಗಾಸೆಯ ಹೆಜ್ಜೆಗಳು, ಜನಪದ ಕಲಾವಿದರ ಪ್ರದರ್ಶನಗಳು... ಈ ದೃಶ್ಯವನ್ನು ಕಣ್ಣಾರೆ ಕಂಡವರಿಗಷ್ಟೇ ಅದರ ಭವ್ಯತೆಯ ಅನುಭವ ಪೂರ್ಣವಾಗಿ ಅರ್ಥವಾಗುತ್ತದೆ.

ಜಂಬೂಸವಾರಿ ಎಂದರೆ ಆನೆಗಳ ಮೆರವಣಿಗೆಯಷ್ಟೇ ಅಲ್ಲ. ಅದು ಮೈಸೂರು ಸಂಸ್ಥಾನದ ಇತಿಹಾಸ, ಧಾರ್ಮಿಕ ನಂಬಿಕೆ, ಶಿಸ್ತುಬದ್ಧ ಸಿದ್ಧತೆ ಮತ್ತು ಕಲಾತ್ಮಕ ವೈಭವಗಳ ಸಮಾಗಮ. ಮೆರವಣಿಗೆಯ ಪ್ರತಿಯೊಂದು ಭಾಗವೂ ಒಂದು ಕಥೆಯನ್ನು ಹೇಳುತ್ತದೆ. ಒಂದೆಡೆ ರಾಜಪರಂಪರೆಯ ನೆನಪು; ಮತ್ತೊಂದೆಡೆ ಕರ್ನಾಟಕದ ವೈವಿಧ್ಯಮಯ ಜನಪದ ಸಂಸ್ಕೃತಿಯ ಅನಾವರಣ.

ಈ ಬಾರಿಯ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಹೊಣೆಗಾರಿಕೆ ಹೊತ್ತಿರುವ ಆನೆಯ ಹೆಸರು ’ಪ್ರಶಾಂತ’. ಆನೆಗಳ ತರಬೇತಿ, ಅವುಗಳ ಪಾಲನೆ, ಮಾವುತರು ಮತ್ತು ಕಾವಾಡಿಗರ ಪರಿಶ್ರಮ ಇವೆಲ್ಲವೂ ದಸರಾ ವೈಭವದ ಹಿಂದೆ ಇರುವ ಕಾಣದ ಶ್ರಮವನ್ನು ನೆನಪಿಸುತ್ತವೆ.

Untitled design (69)

ವಿಜಯದಶಮಿ ದಿನದ ಜಂಬೂಸವಾರಿ ಮೈಸೂರು ದಸರಾದ ಪ್ರಮುಖಾಂಶ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು, ಪ್ರಶಾಂತ ನೇತೃತ್ವದ ಆನೆಗಳ ಪಡೆ ಸಾಗುವ ದೃಶ್ಯ ಕಣ್ಣಿಗೆ ಹಬ್ಬ. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿಮೀ. ಉದ್ದದ ರಾಜಬೀದಿಯಲ್ಲಿ ಲಕ್ಷಾಂತರ ಜನರು ಕಾಯುತ್ತಾರೆ.

ಹೊಸ ಆಕರ್ಷಣೆಗಳ ಸೇರ್ಪಡೆ

ದಸರಾ ಎಂದರೆ ಜಂಬೂಸವಾರಿ ಮತ್ತು ಅರಮನೆ ದೀಪಾಲಂಕಾರ ಅಷ್ಟೇ ಎಂದು ಭಾವಿಸಿದರೆ ಅದು ತಪ್ಪು. 2026ರ ಉತ್ಸವದ ಅಧಿಕೃತ ಕಾರ್ಯಕ್ರಮಪಟ್ಟಿಯಲ್ಲಿ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಿವೆ. ಹದಿನೈದಕ್ಕೂ ಹೆಚ್ಚು ಸ್ಥಳಗಳಿವೆ ಮತ್ತು ವಿಭಿನ್ನ ವಯೋಮಾನದವರನ್ನು ಸೆಳೆಯುವ ಹಲವು ಕಾರ್ಯಕ್ರಮಗಳಿವೆ.

ಆಹಾರ ಮೇಳ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳವು ದಸರಾ ಪ್ರವಾಸಕ್ಕೆ ರುಚಿಯ ಆಯಾಮವನ್ನು ಸೇರಿಸಿದೆ. ಕರ್ನಾಟಕದ ವಿವಿಧ ಭಾಗಗಳ ಖಾದ್ಯಗಳು, ಪ್ರಾದೇಶಿಕ ಅಡುಗೆಗಳ ವೈವಿಧ್ಯ ಮತ್ತು ಆಹಾರ ಸಂಸ್ಕೃತಿಯನ್ನು ಒಂದೇ ಜಾಗದಲ್ಲಿ ಪರಿಚಯಿಸುವ ಇಂಥ ಮೇಳಗಳು ಆಹಾರ ಪ್ರವಾಸೋದ್ಯಮದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಕ್ಟೋಬರ್ 25ರವರೆಗೆ ಈ ಆಹಾರ ಮೇಳ ನಡೆಯಲಿದೆ.

ಫಲಪುಷ್ಪ ಪ್ರದರ್ಶನ

ಹೂವುಗಳ ವಿನ್ಯಾಸ, ಬಣ್ಣಗಳ ಸಂಯೋಜನೆ, ಸಸ್ಯಗಳ ವೈವಿಧ್ಯ ಮತ್ತು ಸೃಜನಾತ್ಮಕ ಅಲಂಕಾರಗಳು ಕುಟುಂಬ ಸಮೇತ ಭೇಟಿ ನೀಡುವವರಿಗೆ ವಿಶೇಷ ಆಕರ್ಷಣೆ. ಅಕ್ಟೋಬರ್ 21ರವರೆಗೆ ಕುಪ್ಪಣ್ಣ ಪಾರ್ಕ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ “ಪ್ರಜಾಪ್ರಭುತ್ವದ ಹಬ್ಬ” ಎಂಬ ಲೇಪನ ನೀಡಲಾಗಿದೆ.

ಕಲೆ ಮತ್ತು ರಂಗಭೂಮಿ

ನಾಟಕ, ಸಂಗೀತ, ನೃತ್ಯ, ಕವಿಗೋಷ್ಠಿ, ಜನಪದ ಪ್ರದರ್ಶನಗಳು ಹಾಗೂ ಲಲಿತಕಲೆಗಳ ಚಟುವಟಿಕೆಗಳು ದಸರಾದ ಸಾಂಸ್ಕೃತಿಕ ಮುಖ ಎನ್ನಬಹುದು. ರಂಗಾಯಣದ ನವರಾತ್ರಿ ರಂಗೋತ್ಸವವೂ ಇದರಲ್ಲಿ ಸೇರಿರುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

Untitled design (72)

ಹೊಟೇಲ್ ಮತ್ತು ರೆಸಾರ್ಟ್‌ಗಳಿಗೆ ಡಿಮ್ಯಾಂಡ್

ದಸರಾ ಪ್ರಯುಕ್ತ ಹೊಟೇಲ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ಎಲ್ಲೆಡೆ ಬುಕಿಂಗ್ ಬೆಲೆ ಗಗನಕ್ಕೇರಿದೆ. ಪ್ರವಾಸಿ ವಾಹನಗಳು, ಆಟೋರಿಕ್ಷಾಗಳು, ಟ್ಯಾಕ್ಸಿಗಳು, ಸ್ಥಳೀಯ ಮಾರ್ಗದರ್ಶಕರು, ಹೂವಿನ ವ್ಯಾಪಾರಿಗಳು, ಕರಕುಶಲ ವಸ್ತುಗಳ ಮಾರಾಟಗಾರರು ಮತ್ತು ತಾತ್ಕಾಲಿಕ ಮಳಿಗೆಗಳನ್ನು ನಡೆಸುವವರು ಬೆಲೆ ಏರಿಸುವುದರ ಮೂಲಕ ಪ್ರವಾಸಿಗರಿಗೆ ಬಿಸಿ ನೀಡಿದ್ದಾರೆ. ಸುತ್ತಮುತ್ತಲಿನ ರೆಸಾರ್ಟ್‌ಗಳಲ್ಲಿ ರೂಮುಗಳು ಇಲ್ಲದಂತಾಗಿವೆ.

ಪ್ರವಾಸಿಗರಿಗಾಗಿ ವೆಬ್ ಸೈಟ್

ಈ ಬಾರಿ ದಸರಾವನ್ನು ಕಣ್ತುಂಬಿಕೊಳ್ಳಲು ಯೋಜಿಸುತ್ತಿರುವವರು ಕಾರ್ಯಕ್ರಮಗಳ ದಿನಾಂಕ ಮತ್ತು ಸ್ಥಳಗಳನ್ನು ಮುಂಚಿತವಾಗಿ ಪರಿಶೀಲಿಸುವುದು ಉತ್ತಮ. ಮುಖ್ಯವಾಗಿ ಜಂಬೂಸವಾರಿ ಅಕ್ಟೋಬರ್ 21ರಂದು ನಡೆಯಲಿದೆ. ಅರಮನೆಯ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಮತ್ತು ಇತರ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಅಧಿಕೃತ ದಸರಾ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಮೈಸೂರು ದಸರಾ ಸಮಿತಿಯ ಅಧಿಕೃತ ಜಾಲತಾಣ: mysoredasara.gov.in.

ಕರಾವಳಿಯ ಕಂಬಳ ಮೈಸೂರಿನಲ್ಲಿ!

ಈ ಬಾರಿಯ ದಸರಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ಕರಾವಳಿ ಕರ್ನಾಟಕದ ಜನಪ್ರಿಯ ಕ್ರೀಡೆಯಾದ ಕಂಬಳ. ಕರಾವಳಿಯ ಮಣ್ಣಿನೊಂದಿಗೆ ಬೆಸೆದುಕೊಂಡಿರುವ ಈ ಸಂಪ್ರದಾಯವನ್ನು ಮೈಸೂರಿನ ದಸರಾ ಉತ್ಸವದ ಭಾಗವಾಗಿಸುವ ಪ್ರಯತ್ನವು ರಾಜ್ಯದ ಪ್ರಾದೇಶಿಕ ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ದೃಷ್ಟಿಯಿಂದ ಮಹತ್ವದ್ದಾಗಿದೆ.

ಅಕ್ಟೋಬರ್ 18 ಮತ್ತು 19ರಂದು ಮೈಸೂರಿನ ವಿಟಿಯು ಕಾಲೇಜಿನ ಸಮೀಪ ಕಂಬಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದಸರಾ ಸಂಭ್ರಮಕ್ಕೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ಜೋಡಿಸಿರುವುದು ಈ ಬಾರಿಯ ಉತ್ಸವದ ಗಮನಾರ್ಹ ಹೊಸತನವಾಗಿದೆ.

Untitled design (70)

ಮೈಸೂರ ಆಗಸದಲ್ಲಿ ಸಾಹಸದ ಚಿತ್ತಾರ!

ಈ ಬಾರಿಯ ದಸರಾ ಕಾರ್ಯಕ್ರಮಗಳು ಭೂಮಿಯ ಮೇಲಿನ ಸಾಂಸ್ಕೃತಿಕ ವೈಭವಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವು ಅಕ್ಟೋಬರ್ 18 ಮತ್ತು 19ರಂದು ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿದೆ. ಆಕಾಶದಲ್ಲಿ ವಿಮಾನಗಳ ಸಾಹಸಮಯ ಚಲನೆಗಳು ಪ್ರವಾಸಿಗರಿಗೆ ಮತ್ತೊಂದು ವಿಭಿನ್ನ ಅನುಭವವನ್ನು ನೀಡಲಿವೆ.

ನಗರದ ಆಚೆಗೂ ಸಂಭ್ರಮ

ದಸರಾಗೆ ಮೈಸೂರಿಗೆ ಬಂದವರು ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ ಮತ್ತು ಜಂಬೂಸವಾರಿಯನ್ನು ನೋಡಿ ಹಿಂದಿರುಗಿದರೆ ಪ್ರವಾಸ ಅಪೂರ್ಣ. ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ ಮತ್ತು ಬೃಂದಾವನ ಗಾರ್ಡನ್, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಸೋಮನಾಥಪುರವನ್ನು ಪ್ರವಾಸದ ಯೋಜನೆಯಲ್ಲಿ ಸೇರಿಸಬಹುದು.

ಈ ಬಾರಿಯ ಆಕರ್ಷಣೆ

ಜಂಬೂಸವಾರಿ-

ಅಕ್ಟೋಬರ್ 21 ಸಂಜೆ 4:35ಕ್ಕೆ

ಡ್ರೋನ್ ಶೋ

ಅಕ್ಟೋಬರ್ 17,18,20,21

ಮೊದಲ ಬಾರಿಗೆ ಕಂಬಳ - ಸತಗಲ್ಲಿಯಲ್ಲಿ

ಅರಮನೆ ದೀಪಾಲಂಕಾರ

ಪ್ರತಿದಿನ ಸಂಜೆ 7-10 ಗಂಟೆ, ಕೊನೆಯ ದಿನ ಮಧ್ಯರಾತ್ರಿವರೆಗೆ

ಯುವ ದಸರಾ- ಅಕ್ಟೋಬರ್ 13-17

ಏರ್ ಶೋ

ಕಾವೇರಿ ಆರತಿ- ಕೆಆರ್‌ಎಸ್‌ನಲ್ಲಿ

ಅಕ್ಟೋಬರ್ 16-21 ಪ್ರತಿದಿನ ಸಂಜೆ 6ಕ್ಕೆ

ಫಲಪುಷ್ಪ ಪ್ರದರ್ಶನ - ಕುಪ್ಪಣ್ಣ ಪಾರ್ಕ್

ಆಹಾರ ಮೇಳ-

ಮಹಾರಾಜ ಕಾಲೇಜು ಮೈದಾನ

ಕುಸ್ತಿ ಪಂದ್ಯಾವಳಿ

ದಯವಿಟ್ಟು ಗಮನಿಸಿ

  • ಜನಸಂದಣಿಯನ್ನು ತಪ್ಪಿಸಲು ಸಾಧ್ಯವಾದಷ್ಟು ಮುಂಚಿತವಾಗಿ ಕಾರ್ಯಕ್ರಮದ ಸ್ಥಳ ತಲುಪುವುದು ಸೂಕ್ತ.
  • ಜಂಬೂಸವಾರಿ ವೀಕ್ಷಣೆಗೆ ತೆರಳುವವರು ಸಂಚಾರ ನಿರ್ಬಂಧ ಮತ್ತು ವಾಹನ ನಿಲುಗಡೆ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಬೇಕು.
  • ವಿಶೇಷ ಪ್ರವೇಶ ಅಥವಾ ಮೀಸಲು ಆಸನಗಳ ಅಗತ್ಯವಿದ್ದರೆ ಅಧಿಕೃತ ಟಿಕೆಟ್ ವ್ಯವಸ್ಥೆಯನ್ನೇ ಬಳಸಬೇಕು.
  • ಮಕ್ಕಳೊಂದಿಗೆ ಮತ್ತು ಹಿರಿಯರೊಂದಿಗೆ ಪ್ರಯಾಣಿಸುವವರು ಕುಡಿಯುವ ನೀರು, ಅಗತ್ಯ ಔಷಧಗಳು ಹಾಗೂ ವಾಪಸಾಗುವ ಸಾರಿಗೆ ವ್ಯವಸ್ಥೆಯನ್ನು ಮುಂಚಿತವಾಗಿ ಯೋಜಿಸಬೇಕು.
  • ಅರಮನೆ ಮತ್ತು ಐತಿಹಾಸಿಕ ಸ್ಥಳಗಳ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು, ಕಲಾವಿದರಿಗೆ ಗೌರವ ನೀಡುವುದು ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರವಾಸಿಗನ ಜವಾಬ್ದಾರಿ.