• ಸುವರ್ಣ ಲಕ್ಷ್ಮೀ ಎಂ.ಎಚ್.‌

ಇದೇನಿದು ಪಿಂಡದ ದೇಗುಲ ಅಂತ ಕುತೂಹಲವೇ ಬನ್ನಿ ಈ ವಿಶಿಷ್ಟ ದೇಗುಲದ ಬಗ್ಗೆ ತಿಳಿಯೋಣ.

ನವರಾತ್ರಿಯ ನಾಲ್ಕನೆಯ ದಿನ ನಾವು ಆರಾಧಿಸುವವರ ಹೆಸರೇ ಕೂಷ್ಮಾಂಡ ದೇವಿ. ಕಾನ್ಪುರದ ಘಟಂಪುರದಲ್ಲಿ ಕೂಷ್ಮಾಂಡ ದೇವಿಯು ಪಿಂಡದ ರೂಪದಲ್ಲಿ ನೆಲೆಸಿದ್ದಾಳೆ. ಅಲ್ಲದೆ ಇಲ್ಲಿ ಸದಾ ನೀರು ಒಸರುತ್ತಲೇ ಇರುತ್ತದೆ. ಈ ದೇಗುಲದ ಐತಿಹ್ಯ ಸ್ವಲ್ಪ ತಿಳಿಯೋಣ.

ತುಂಬಾ ಹಿಂದೆ ಘಟಂಪುರ ಪ್ರದೇಶವೆಲ್ಲ ದಟ್ಟವಾದ ಅರಣ್ಯವಾಗಿತ್ತು ಅಲ್ಲಿ ಕುದ ಎಂಬ ಹಸು ಮೇಯಿಸುವವನು ತನ್ನ ಒಂದು ಹಸು ದಿನವೂ ಒಂದು ಹುತ್ತದಲ್ಲಿ ಹಾಲನ್ನು ಧಾರೆ ಎರೆಯುತ್ತಿರುವುದನ್ನು ನೋಡುತ್ತಾನೆ. ನಂತರ ಅಲ್ಲಿ ನೋಡಲು ಹೋದಾಗ, ಒಂದು ಪಿಂಡವು ಇರುತ್ತದೆ. ಅದರ ಆದಿ ಅಂತ್ಯವು ತಿಳಿಯುವುದಿಲ್ಲ. ಆಗ ತಾಯಿಯು ಆತನ ಕನಸಿನಲ್ಲಿ ಬಂದು ತಾನು ಕೂಷ್ಮಾಂಡ ದೇವಿ ಎಂದೂ, ತನ್ನನ್ನು ಈ ಪಿಂಡದ ರೂಪದಲ್ಲಿಯೇ ಸ್ಥಾಪಿಸಿ ಪೂಜಿಸಬೇಕೆಂದು ಮಾಹಿತಿ ನೀಡುತ್ತಾಳೆ.

Untitled design - 2026-10-21T201410.787

ಅದರಂತೆ ಅವನು ಇದನ್ನು ಆ ಪ್ರಾಂತ್ಯದ ರಾಜನಾದ ಘಟಂದೇವನಿಗೆ ತಿಳಿಸುತ್ತಾನೆ. ಘಟಂದೇವನು 1400ರಲ್ಲಿ ಈ ದೇಗುಲವನ್ನು ನಿರ್ಮಿಸಿದನು. ಇದು ಮರಾಠಾ ಶೈಲಿಯಲ್ಲಿದೆ. ಪಿಂಡದ ರೂಪದಲ್ಲಿ ಇರುವ ಈ ದೇವತೆಯನ್ನು ಪೂಜಿಸಲು ಇಲ್ಲಿ ಯಾವುದೇ ಪುರೋಹಿತರು ಇರುವುದಿಲ್ಲ. ಹೆಂಗಸರೇ ಈ ದೇವಿಗೆ ಅಲಂಕಾರ, ಪೂಜೆಗಳನ್ನು ಮಾಡುತ್ತಾರೆ. ಈ ವಿಗ್ರಹದಿಂದ ಒಸರುವ ನೀರನ್ನು 21ದಿನ ಸತತವಾಗಿ ಸೇವಿಸಿದರೆ ಎಂಥ ಕಾಯಿಲೆಯಾದರೂ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಇದು ಜಗತ್ತಿನ ಏಕೈಕ ಪಿಂಡದ ದೇಗುಲವಾಗಿದೆ.

ಕೂಷ್ಮಾಂಡ ದೇವಿಯ ಸ್ವರೂಪ ಹಾಗೂ ಐತಿಹ್ಯ

ಜಗತ್ತು ಪ್ರಳಯವಾಗಿ ಎಲ್ಲ ಶೂನ್ಯವಾದ ಕೂಷ್ಮಾಂಡ ದೇವಿಯು ಕೇವಲ ತನ್ನ ಮಂದಹಾಸದಿಂದ ಈ ಜಗತ್ತನ್ನು ಸೃಷ್ಟಿಸುತ್ತಾಳೆ ಈ ಸೂರ್ಯನ ಮಧ್ಯದಲ್ಲಿ ವಾಸಿಸುತ್ತಾಳೆ ಸೂರ್ಯನ ಶಕ್ತಿಶಾಲಿ ತನ್ನ ಒಂದು ನಗುವಿನಿಂದ ಬ್ರಹ್ಮಾಂಡ ಸೃಷ್ಟಿ ಮಾಡಿದ್ದಕ್ಕಾಗಿ ಈಕೆಯನ್ನು ಕೂಷ್ಮಾಂಡ ದೇವಿ ಎಂದು ಕರೆಯಲಾಗುತ್ತದೆ. ಈಕೆ ಸಿಂಹಾರೂಢೆ ಎಂಟು ಕೈಗಳನ್ನು ಹೊಂದಿದ್ದು ಕೈಗಳಲ್ಲಿ ಬಿಲ್ಲು, ಕಮಲ, ಕಮಂಡಲ , ಚಕ್ರ, ಜಪಮಾಲೆ, ಗದೆಯನ್ನು ಹೊಂದಿದ್ದು ಒಂದು ಕೈಯಲ್ಲಿ ಸದಾ ಅಭಯ ನೀಡುತ್ತಿರುತ್ತಾಳೆ. ಸೌರವ್ಯೂಹವನ್ನೂ ಸಹ ಈಕೆ ನಿಯಂತ್ರಿಸಬಲ್ಲಳು ಹಾಗೂ ಈಕೆ ಇರುವ ಸ್ಥಳದಲ್ಲಿ ಜ್ಞಾನ ಮತ್ತು ಬೆಳಕು ಇರುತ್ತದೆ. ಈಕೆಯನ್ನು ಆಶ್ರಯಿಸಿದರೆ ನಮಗೆ ಸೂರ್ಯನ ದೋಷಗಳು ನಿವಾರಣೆಯಾಗಿ ಜ್ಞಾನ ಹಾಗೂ ಬೆಳಕು ಸಿಗುತ್ತವೆ. ಕೂಷ್ಮಾಂಡ ಎಂದರೆ ಸಂಸ್ಕೃತದಲ್ಲಿ ಬೂದುಕುಂಬಳಕಾಯಿ ಎಂದು ಅರ್ಥ ಇದು ತಾಯಿಯಂತೆಯೇ ಜ್ಞಾನವರ್ಧಕ, ತೇಜೋವರ್ಧಕ ಸಕಲ ತಾಪ ನಿವಾರಕ.

ಕು ಅಂದರೆ ಸ್ವಲ್ಪ, ಉಷ್ಮ ಅಂದರೆ ಉಷ್ಣ ಶಕ್ತಿ, ಅಂಡ ಎಂದರೆ ಭ್ರೂಣ ಇದರ ಸಂಪೂರ್ಣ ಅರ್ಥವೇನೆಂದರೆ, ಕೂಷ್ಮಾಂಡ ಎಂದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯ ಶಕ್ತಿಯನ್ನು ತನ್ನಲ್ಲಿ ಹೊಂದಿರುವ ತಾಯಿ ಎಂದು. ಎಂಟು ಕೈಗಳನ್ನು ಹೊಂದಿರುವ ಈಕೆಯನ್ನು ಅಷ್ಟಭುಜ ದೇವಿಯೆಂದೂ ಕರೆಯುತ್ತಾರೆ.