- ಯಶಸ್ವಿ ದೇವಾಡಿಗ, ಶಿರಸಿ

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಹಾ ಶಿವರಾತ್ರಿಯೂ ಒಂದು. ಇದನ್ನು ಶಿವ ಮತ್ತು ಪಾರ್ವತಿಯ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಬ್ರಹ್ಮಾಂಡದ ಎರಡು ಅತ್ಯುನ್ನತ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾಶಿವರಾತ್ರಿಯ ಆಚರಣೆ ಮಾಡಲಾಗುತ್ತದೆ. ಶಿವ ಭಕ್ತರು ಶಿವರಾತ್ರಿ ಪೂಜೆ ಜತೆ ಕೆಲವು ದೇವಸ್ಥಾನಗಳಿಗೆ ಭೇಟಿ ಕೊಡಬೇಕು ಎಂಬ ಹಂಬಲವಿದ್ದರೆ ಇಲ್ಲೊಂದು ಕ್ಷೇತ್ರವಿದೆ. ಅದುವೇ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನ. ಈ ದೇವಸ್ಥಾನದಲ್ಲಿ ಮಹಾಶಿವರಾತ್ರಿಯಂದು ವಿಶೇಷ ಪೂಜೆಗಳೂ ನೆರವೇರುತ್ತವೆ.

ಇದನ್ನೂ ಓದಿ: ಮಹಾಶಿವರಾತ್ರಿ ನೀಲಕಂಠನ ಮಹಾತ್ಮೆಯನ್ನು ದೇಶವಿಡೀ ಸಾರುವ ಹಬ್ಬ

ಏನಿದು ಇತಿಹಾಸ?

ಇಟಗಿ, ಈ ಪ್ರದೇಶವನ್ನು ವಿಜಯನಗರ ಸಾಮ್ರಾಜ್ಯದ ಮೇಲಾಡಳಿತದಡಿ ಕ್ರಿ.ಶ 1475ರಿಂದ ಕ್ರಿ.ಶ. 1700 ರವರೆಗೆ ಆಳಿರುವ ಐಸೂರು-ಬಿಳಗಿ ರಾಜಮನೆತನದ ಇತಿಹಾಸದ ಭಾಗವಾಗಿದೆ. ಇಟಗಿಯನ್ನು ಇಟ್ಗೆ, ಇಷ್ಠಿಕಾಪುರ ಎಂದು ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು ಎಂಬ ಉಲ್ಲೇಖಗಳಿವೆ. ಈ ಇಟಗಿಯ ದೇವಾಲಯಗಳಲ್ಲಿ ಕಾಳಾ ಮುಖಶೈವದ ಶಿಲ್ಪಗಳಿದೆ ಎಂಬ ವರದಿಗಳೂ ಇವೆ.

ಇಟಗಿ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನ

New Project (2)

ಇಟಗಿಯ ಅಧಿದೇವತೆ ಶ್ರೀ ರಾಮೇಶ್ವರ. ಇದರ ಜತೆಗೆ ಮಾತೋಬಾರ ರಾಮೇಶ್ವರ ದೇವಾಲಯ, ಅಮ್ಮನವರ ಗುಡಿ, ಶ್ರೀ ವಿಠಲ ದೇವಾಲಯ ಪ್ರಮುಖವಾಗಿರುವ ಇಟಗಿಯ ಸ್ಮಾರಕಗಳು ಆಗಿವೆ. ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ನಿತ್ಯ ಬಲಿ ನಡೆಯುತ್ತದೆ. ಪ್ರತಿದಿನ ಮೂರು ಸವನಗಳಲ್ಲಿ ಬಲಿಹರಣ ಇಂದಿಗೂ ನಡೆಯುತ್ತಿದೆ. ಈ ಪೂಜಾವಿಧಾನವು ದೇಶದ ಇನ್ಯಾವುದೇ ಪುಣ್ಯಕ್ಷೇತ್ರಗಳಲ್ಲಿ ಕಂಡು ಬರುವುದಿಲ್ಲ.

ಉತ್ಸವಗಳು

ಶ್ರೀರಾಮೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದೆ. ಪೂರ್ವದ್ವಾರದ ಎದುರಿಗೆ ಶಿಲಾಧ್ವಜ ಸ್ತಂಭವಿದ್ದು, ಸ್ತಂಭಾಗ್ರಹದ ಮೇಲೆ ನಂದಿಯ ವಿಗ್ರಹವಿದೆ. ರಾಮೇಶ್ವರ ದೇವಸ್ಥಾನದಲ್ಲಿ ಸುಮಾರು ಒಂದು ವಾರ ಕಾಲ ಜಾತ್ರಾಮಹೋತ್ಸವ ಮತ್ತು ಎರಡು ದಿನಗಳ ಕಾಲ ರಥೋತ್ಸವ ನಡೆಯುತ್ತದೆ. ಅದನ್ನು ದೊಡ್ಡತೇರು ಮತ್ತು ಚಿಕ್ಕತೇರು ಎಂದು ಕರೆಯುತ್ತಾರೆ. ಉತ್ಸವದ ಅಂಗವಾಗಿ ಮುಂಚೆಯೇ ತೇರು ಕಟ್ಟುವ ಕೆಲಸ ಪ್ರಾರಂಭವಾಗುತ್ತದೆ.

ಇನ್ನು ಮಹಾಶಿವರಾತ್ರಿ, ಫಾಲ್ಗುಣ ನವಮಿ, ದಶಮಿಗೆ ವಿಶೇಷ ರಥೋತ್ಸವ ನಡೆಯುವುದರೊಂದಿಗೆ ಸಾವಿರಾರು ಭಕ್ತರ ಸಾನಿಧ್ಯಕ್ಕೆ ಸಾಕ್ಷಿಯಾಗುತ್ತದೆ. ಚಂದ್ರಮಾನ ಯುಗಾದಿ, ವಸಂತಮಹೋತ್ಸವ, ಉಪಾಕರ್ಮ, ಗಣೇಶ ಚೌತಿ, ನವರಾತ್ರಿ, ಗಂಗಾಷ್ಠಮಿ, ಮಹಾಶಿವರಾತ್ರಿ ಇತರೆ ಉತ್ಸವಗಳನ್ನು ಈ ಸನ್ನಿಧಿಯಲ್ಲಿ ಆಚರಿಸುತ್ತಾರೆ.

ದೇವಸ್ಥಾನದ ಸಮಯ

6:30 AM -1PM

3:30PM – 8PM

(ಹಬ್ಬ ಮತ್ತು ವಿಶೇಷ ಪೂಜೆಯ ದಿನ ಸಮಯದಲ್ಲಿ ಬದಲಾವಣೆ ಆಗುತ್ತದೆ.)

ಬಲಿ ಉತ್ಸವ ಪೂಜಾ ಸಮಯ

7:30 AM

12:15 PM

7:00 PM

(ನಿತ್ಯ ಬಲಿ ಉತ್ಸವ ಪೂಜೆಯ ನಂತರ ಯಾವುದೇ ವಯಕ್ತಿಕ ಪೂಜೆಗೆ ಅವಕಾಶ ಇರುವುದಿಲ್ಲ ಎಂಬ ಉಲ್ಲೇಖ ಇದೆ.)

ಹತ್ತಿರದ ಸ್ಥಳಗಳು

New Project (3)

ಇನ್ನು ಈ ದೇವಸ್ಥಾನಕ್ಕೆ ಮಾತ್ರವಲ್ಲದೇ ಇನ್ನುಳಿದ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಬಹುದು. ಸಿದ್ಧಾಪುರ ತಾಲೂಕಿನ ಬಿಳಗಿಯಲ್ಲಿರುವ ಪುರಾತನ ಕಾಲದ ಜೈನ ಬಸದಿ,ವಿರೂಪಾಕ್ಷ ದೇವಾಲಯ ಮತ್ತು ಗೋಲಬಾವಿ ಕೂಡ ವೀಕ್ಷಿಸಬಹುದು. (ಸಿದ್ಧಾಪುರದಿಂದ 13 ಕಿಲೋಮೀಟರ್) ದೂರದಲ್ಲಿರುವ ಬಿಳಗಿಯಲ್ಲಿ ಪುರಾತನ ಕಾಲದ ಜೈನ ಬಸದಿ, ವಿರೂಪಾಕ್ಷ ದೇವಾಲಯ ಮತ್ತು ಗೋಲಬಾವಿ ಎಂಬ ಪ್ರೇಕ್ಷಣೀಯ ಸ್ಥಳಗಳೂ ಇವೆ. ಈ ಬಿಳಗಿ ಊರಿಗೆ ಐತಿಹಾಸಿಕ ಹಿನ್ನೆಲೆ ಇದೆ, ಈ ಊರಿಗೆ ಶ್ವೇತಪುರ ಎಂದೂ ಕರೆಯುತ್ತಿದ್ದರು, ಸುಮಾರು 12ನೆಯ ಶತಮಾನದ ಅವಧಿಯಲ್ಲಿ ಬಿಳಗಿಯ ಅರಸರು ಆಳ್ವಿಕೆ ಮಾಡಿದ್ದರು. ಅಂದಿನ ಕಾಲದಲ್ಲಿ ಅರಸರು ನಿರ್ಮಿಸಿದ ಬಸದಿ, ವಿರೂಪಾಕ್ಷ ದೇವಾಲಯ ಮತ್ತು ಅಗತ್ಯ ಬಂದಾಗ ಶತ್ರುಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿಕೊಂಡ ಗೋಲಬಾವಿ ವೀಕ್ಷಿಸಬಹುದು.

ದಾರಿ ಹೇಗೆ?

ಇಲ್ಲಿಗೆ ಹೋಗುವುದಕ್ಕೆ ನೀವು ಇಷ್ಟಪಟ್ಟರೆ ಪ್ರಯಾಣದ ಮಾಹಿತಿ ಇಲ್ಲಿದೆ. ಸಿದ್ದಾಪುರದಿಂದ ಬಸ್‌ ವ್ಯವಸ್ಥೆ ಇದೆ. ಸಿದ್ದಾಪುರದಿಂದ ಬಾಡಿಗೆ ವಾಹನ ಮೂಲಕ ಭೇಟಿ ನೀಡಬಹುದು.ಸಿದ್ದಾಪುರದಿಂದ 18 ಕಿ.ಮೀ ದೂರದಲ್ಲಿ ದೇವಾಲಯವಿದೆ.

ಲೇಖಕರು: ಫ್ರೀಲ್ಯಾನ್ಸ್‌ ಬರಹಗಾರ್ತಿ, ಪ್ರವಾಸಿ