ಬ್ರಹ್ಮಚಾರಿಣಿಯ ಸ್ವರೂಪ ಹೇಗಿದೆ ಗೊತ್ತಾ?
ಪಾರ್ವತಿಯ ಕಠಿಣ ತಪಸ್ಸಿನ ಬಗ್ಗೆ ಅರಿತ ಶಿವನು ಮಾರುವೇಷದಲ್ಲಿ ಪಾರ್ವತಿಯ ಮುಂದೆ ಬಂದು, ಆಕೆಗೆ ಶಿವನ ದೌರ್ಬಲ್ಯಗಳನ್ನು ಹೇಳಿ ಆಕೆಯನ್ನು ತಪಸ್ಸಿನಿಂದ ವಿಮುಖಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಆಕೆ ತನ್ನ ನಿರ್ಧಾರದಿಂದ ವಿಮುಖವಾಗುವುದಿಲ್ಲ.
- ಸುವರ್ಣ ಲಕ್ಷ್ಮೀ ಎಂ.ಎಚ್.
ಬ್ರಹ್ಮಚಾರಿಣಿ ದೇಗುಲವು ವಾರಣಾಸಿಯ ದುರ್ಗಾಘಾಟ್ ನಲ್ಲಿ ಇದೆ. ಈ ದೇವಿದರ್ಶನಕ್ಕಾಗಿ ಪ್ರತಿದಿನ ಭಕ್ತರು ಬರುತ್ತಾರಾದರೂ ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನಾ ದಿನವಾದದ್ದರಿಂದ ಅಂದು ಬೆಳಗ್ಗಿನ ಜಾವ ಐದರಿಂದಲೇ ಭಕ್ತರು ಇಲ್ಲಿ ಕಿಕ್ಕಿರಿದು ತುಂಬಿರುತ್ತಾರೆ. ಅಂದು ದೇವಿಯನ್ನು ಆರಾಧಿಸಿದರೆ ತಪಸ್ಸು, ಸಂಯಮ, ವೈರಾಗ್ಯ ,ಸದಾಚಾರ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.
ಬ್ರಹ್ಮಚಾರಿಣಿಯ ಸ್ವರೂಪ:
ಬಿಳಿಯ ವಸ್ತ್ರಗಳನ್ನು ಧರಿಸಿ ಬಲಗೈಯಲ್ಲಿ ಜಪಮಾಲೆ ಎಡಗೈಯಲ್ಲಿ ಕಮಂಡಲ ಹಿಡಿದು ತೋಳು, ಮುಂಗೈ ಹಾಗೂ ಕತ್ತುಗಳಲ್ಲಿ ಪುಷ್ಪಗಳನ್ನೇ ಆಭರಣಗಳನ್ನು ಧರಿಸಿರುತ್ತಾಳೆ.
ಬ್ರಹ್ಮಚಾರಿಣಿ ಎಂದರೆ ಬ್ರಹ್ಮ ಎಂದರೆ ತಪಸ್ಸು. ಚಾರಿಣಿ ಎಂದರೆ ಆಚರಿಸುವವಳು ಎಂದರ್ಥ.

ಹಿಮವಂತ ಮತ್ತು ಮೇನಾದೇವಿಯ ಮಗಳಾಗಿ ಜನಿಸಿದ ಪಾರ್ವತಿಯು ಯೌವನಾವಸ್ಥೆಗೆ ಬಂದಾಗ ನಾರದರು ಆಕೆಯನ್ನು ಭೇಟಿಯಾಗಿ ನೀನು ಕಠಿಣ ತಪ ಆಚರಿಸಿದರೆ ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಶಿವನನ್ನೇ ಪತಿಯಾಗಿ ಪಡೆಯಬಹುದು ಎಂದು ಸಲಹೆ ನೀಡುತ್ತಾರೆ. ಆಕೆ ಅದರಂತೆ ತಪವನ್ನು ಪ್ರಾಂಭಿಸುತ್ತಾಳೆ. ಈ ತಪವು ಹಲವಾರು ವರ್ಷಗಳು ಮುಂದುವರೆಯುತ್ತದೆ. ಪ್ರಾರಂಭದಲ್ಲಿ ಕೆಲವು ವರ್ಷ ಆಕೆ ಹೂ ಹಣ್ಣುಗಳನ್ನು ಮಾತ್ರ ಸೇವಿಸಿ ತಪಸ್ಸಾಚರಿಸುತ್ತಾಳೆ. ಮತ್ತೆ ಕೆಲವು ವರ್ಷ ಒಣಗಿದ ಬಿಲ್ವಪತ್ರೆ ಎಲೆಗಳನ್ನು ಮಾತ್ರ ಸೇವಿಸಿ ತಪಸ್ಸಾಚರಿಸುತ್ತಾಳೆ. ನಂತರ ಎಲೆ(ಪರ್ಣ)ಗಳನ್ನು ಸಹ ತಜ್ಯಿಸುತ್ತಾಳೆ. ಅದಕ್ಕೇ ಆಕೆಯನ್ನು ಅಪರ್ಣಾ ಎಂದು ಸಹ ಕರೆಯುತ್ತಾರೆ. ಎಲ್ಲಾ ರೀತಿಯ ಆಹಾರ ತ್ಯಜಿಸಿದ ಆಕೆ ಬಹಳ ಕೃಶಳಾಗಿ ಹೋಗುತ್ತಾಳೆ. ಆಗ ಆಕೆಯ ತಾಯಿ ಓ...ಮಾ ಎಂದು ವಿಲಪಿಸುತ್ತಾರೆ. ಅದೇ ಮುಂದೆ ಉಮಾ ಎಂದು ಹೆಸರಾಗುತ್ತದೆ. ಈ ಕಠಿಣ ತಪಸ್ಸಿನ ಬಗ್ಗೆ ಅರಿತ ಶಿವನು ಮಾರುವೇಷದಲ್ಲಿ ಪಾರ್ವತಿಯ ಮುಂದೆ ಬಂದು, ಆಕೆಗೆ ಶಿವನ ದೌರ್ಬಲ್ಯಗಳನ್ನು ಹೇಳಿ ಆಕೆಯನ್ನು ತಪಸ್ಸಿನಿಂದ ವಿಮುಖಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಆಕೆ ತನ್ನ ನಿರ್ಧಾರದಿಂದ ವಿಮುಖವಾಗುವುದಿಲ್ಲ.
ಕಡೆಗೆ ಈಕೆಯ ಕಠಿಣ ತಪಸ್ಸನ್ನು ಕಂಡು ಬ್ರಹ್ಮದೇವನು ಪ್ರತ್ಯಕ್ಷನಾಗಿ ಶಿವನನ್ನೇ ಪತಿಯಾಗಿ ಹೊಂದು ಎಂದು ಆಶೀರ್ವಾದ ಮಾಡುತ್ತಾರೆ. ಇನ್ನೇನು ಆಕೆಯ ತಪಸ್ಸು ಮುಗಿಯಬೇಕೆನ್ನುವಷ್ಟರಲ್ಲಿ ಪ್ರಕಾಂಡಾಸುರನೆಂಬ ರಾಕ್ಷಸನು ಪಾರ್ವತಿಯ ಮೇಲೆ ತನ್ನ ಸಹಸ್ರಾರು ಸೈನಿಕರೊಂದಿಗೆ ದಾಳಿ ನಡೆಸುತ್ತಾನೆ. ಆಗ ಪಾರ್ವತಿಯ ತಪಸ್ಸು ಕಡೆಯ ಹಂತದಲ್ಲಿ ಇದ್ದುದರಿಂದ ಪ್ರತಿದಾಳಿ ನಡೆಸಲು ಆಕೆ ಅಶಕ್ತಳಾಗುತ್ತಾಳೆ. ಆಗ ಈಕೆಗೆ ಲಕ್ಷೀ,ಸರಸ್ವತಿಯರು ಸಹಾಯ ಮಾಡಲು ಬರುತ್ತಾರೆ. ಆದರೆ ಅವರಿಂದಲೂ ಆತನನ್ನು ನಿವಾರಿಸಲು ಆಗುವುದಿಲ್ಲ.ಆಗ ಇದ್ದಕ್ಕಿದ್ದಂತೆ ಪಾರ್ವತಿಯ ಪಕ್ಕದಲ್ಲಿದ್ದ ಕಮಂಡಲವು ಉರುಳಿಬೀಳುತ್ತದೆ ಆಕೆಯ ತಪಃಶಕ್ತಿಯಿಂದ ಶಕ್ತಿವಂತವಾಗಿದ್ದ ನೀರು ಆ ಕಮಂಡಲದಿಂದ ಜಲಪಾತವಾಗಿ ಹರಿದು ಪ್ರಕಾಂಡಾಸುರನ ಸಹಸ್ರ ಅನಚರರು ನೀರಿನ ಪಾಲಾಗುತ್ತಾರೆ ಹಾಗೂ ಪಾರ್ವತಿಯ ಕ್ರೋಧದಿಂದ ಕಣ್ಣು ಬಿಡುತ್ತಾಳೆ. ಕ್ರೋಧದ ಉರಿಗೆ ತಪಃಶಕ್ತಿಗೆ ಅಸುರನು ಸುಟ್ಟು ಬೂದಿಯಾಗುತ್ತಾನೆ. ಇದರೊಂದಿಗೆ ಶಿವ ಪಾರ್ವತಿಯನ್ನು ಮದುವೆಯಾಗಲು ಒಪ್ಪಿ ಪರ್ವತರಾಜನು ಆಕೆಯನ್ನು ಶಿವನಿಗೆ ಧಾರೆ ಎರೆದು ಕೊಡುತ್ತಾನೆ. ಇದರಿಂದ ನಾವು ತಿಳಿಯಬೇಕಾದುದು ಏನೆಂದರೆ ನಾವು ಅಂದುಕೊಂಡ ಕೆಲಸವನ್ನು ತಪಸ್ಸಿನಂತೆ ಮಾಡಿ ಸಾಧಿಸಿಕೊಳ್ಳಬೇಕು ಬ್ರಹ್ಮಚಾರಿಣಿಯಂತೆ.