• ಬಿ.ಆರ್.ಸುಹಾಸ್

ಕರ್ನಾಟಕವು ಕಲಾತ್ಮಕ ದೇವಾಲಯಗಳಿಗೆ ಹೆಸರಾಗಿದೆ. ಬೇಲೂರು, ಹಳೇಬೀಡು, ಸೋಮನಾಥಪುರಗಳಂಥ ಜಗತ್ಪ್ರಸಿದ್ಧ ದೇವಾಲಯಗಳನ್ನು ನೋಡದವರಿಲ್ಲ. ಅವುಗಳ ಕೆತ್ತನೆಗಳಿಗೆ ಮಾರುಹೋಗದವರಿಲ್ಲ ಅಥವಾ ಅವುಗಳ ಬಗ್ಗೆ ಕೇಳದವದರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಕರ್ನಾಟಕದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿರುವ ಎಷ್ಟೋ ಸುಂದರ ದೇವಾಲಯಗಳು ಇವೆ. ಅಂಥವುಗಳಲ್ಲಿ ಬೆಳಗಾವಿ ಜಿಲ್ಲೆಯ ಹಲಸಿಯ ಭೂವರಾಹ ನರಸಿಂಹಸ್ವಾಮಿ ದೇವಾಲಯವೂ ಒಂದು.

ಇದನ್ನೂ ಓದಿ: ಕೂಷ್ಮಾಂಡ ಎಂಬ ಪಿಂಡದ ದೇಗುಲ

ದೇವಾಲಯದ ವಿಶೇಷ

ಮಹಾವಿಷ್ಣುವಿನ ದಶಾವತಾರಗಳು ಎಲ್ಲರಿಗೂ ಪರಿಚಯವಷ್ಟೆ! ಈ ಅವತಾರಗಳಲ್ಲಿ ವರಾಹ, ನರಸಿಂಹ, ರಾಮ, ಕೃಷ್ಣರಿಗೆ ಹೆಚ್ಚಿನ ದೇವಾಲಯಗಳಿವೆ. ಈ ಒಂದೊಂದೇ ಅವತಾರ ವಿಗ್ರಹವುಳ್ಳ ದೇವಾಲಯಗಳಿವೆ. ಆದರೆ ಹಲಸಿಯ ಈ ದೇವಾಲಯದ ವೈಶಿಷ್ಟ್ಯವೆಂದರೆ, ಇಲ್ಲಿ ವರಾಹ ಮತ್ತು ನರಸಿಂಹ ಎರಡೂ ಅವತಾರದ ವಿಗ್ರಹಗಳಿವೆ! ಇವುಗಳ ಜತೆಗೆ ಶ್ರೀಮನ್ನಾರಾಯಣನ ವಿಗ್ರಹವೂ ಇದೆ. ಹೀಗೆ ಇದು ಮೂರು ಮುಖ್ಯ ವಿಗ್ರಹಗಳುಳ್ಳ, ಎರಡು ಗರ್ಭಗೃಹಗಳುಳ್ಳ ವಿಶಿಷ್ಟ ದೇವಾಲಯ.

ಶಾಸನಗಳ ಪ್ರಕಾರ

ಹಲಸಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಿಂದ ಹದಿನಾಲ್ಕು ಕಿಮೀ ದೂರದಲ್ಲಿದೆ. ಶಾಸನಗಳ ಪ್ರಕಾರ ಹಲಸಿಯ ಪೂರ್ವ ಹೆಸರು ಪಲಾಶಿಕಾ. ಇದು ಗೋವಾದ ಕದಂಬರ ಎರಡನೆಯ ರಾಜಧಾನಿ ಅಥವಾ ಉಪರಾಜಧಾನಿಯಾಗಿತ್ತು ಎನ್ನಲಾಗಿದೆ. ಹಾಗಾಗಿ ಈ ದೇವಾಲಯವನ್ನು ಕದಂಬರು ನಿರ್ಮಿಸಿದರೆಂದು ಹೇಳಲಾಗುತ್ತದೆ.‌ ಶಾಸನಗಳ ಪ್ರಕಾರ ಈ ದೇವಾಲಯವು ನಿರ್ಮಾಣವಾಗಿದ್ದು ಐದನೆಯ ಶತಮಾನದಲ್ಲಿ. ದೇವಾಲಯದಲ್ಲಿ ಒಂದು ಕಲ್ಲಿನ ಶಾಸನವಿದೆ. ಅದರಲ್ಲಿ ಕದಂಬರ ರಾಜ ಶಿವಚಿತ್ತ ಎನ್ನುವವನು ಈ ದೇವಾಲಯಕ್ಕೆ ಗ್ರಾಮವನ್ನು ದತ್ತಿ ನೀಡಿದ ಮಾಹಿತಿ ಇದೆ. ಹಾಗಾಗಿ ಇವನೇ ಈ ದೇವಾಲಯವನ್ನು ನಿರ್ಮಿಸಿದ ಎಂದು ಹೇಳುತ್ತಾರೆ. ಈ ದೇವಾಲಯವನ್ನು ಪ್ರತಿಷ್ಠಾಪನೆ ಮಾಡಿದ್ದು ಮಾತಾಯೋಗಿ ಎಂದು ಆ ಶಾಸನದಲ್ಲಿ ಹೇಳಲಾಗಿದೆ. ಮೊದಲಿಗೆ ಇಲ್ಲಿ ಒಂದು ಉದ್ಭವ ನರಸಿಂಹ ವಿಗ್ರಹ ಇದ್ದು ಆ ವಿಗ್ರಹಕ್ಕಾಗಿ ಈ ದೇವಾಲಯವನ್ನು ಇವನು ನಿರ್ಮಿಸಿದ. ಅನಂತರ ಕದಂಬರ ಇನ್ನೊಬ್ಬ ದೊರೆ ಎರಡನೆಯ ವಿಜಯಾದಿತ್ಯನು ಈ ದೇವಾಲಯಕ್ಕೆ ಒಂದು ಗ್ರಾಮವನ್ನು ದಾನವಾಗಿ ನೀಡಿ ಭೂವರಾಹಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎನ್ನಲಾಗಿದೆ.

Untitled Design (3)

ಕಥೆಗಳ ಪ್ರಕಾರ

ಪಾಂಡವರು ವನವಾಸದಲ್ಲಿದ್ದಾಗ ಒಂದೇ ರಾತ್ರಿಯಲ್ಲಿ ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ. ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಜಕಣಾಚಾರಿಯು ಈ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗಿದೆ.

ಭೂವರಾಹಸ್ವಾಮಿ

ದೇವಾಲಯದ ಎಡಭಾಗದಲ್ಲಿನ ಗರ್ಭಗುಡಿಯಲ್ಲಿ ಬಹಳ ಸುಂದರವಾದ ಭೂವರಾಹಸ್ವಾಮಿಯ ವಿಗ್ರಹವಿದೆ. ಭೂವರಾಹಸ್ವಾಮಿಯು ತನ್ನ ಕೋರೆದಾಡೆಗಳ ಮೇಲೆ ಭೂದೇವಿಯನ್ನು ಎತ್ತಿಕೊಂಡು ನಿಂತ ಭಂಗಿಯಲ್ಲಿದ್ದು, ತನ್ನ ಒಂದು ಪಾದವನ್ನು ಆದಿಶೇಷನ ಮೇಲೆ ಇಟ್ಟಿದ್ದರೆ, ಇನ್ನೊಂದು ಪಾದವನ್ನು ಒಂದು ಆಮೆಯ ಮೇಲೆ ಇಟ್ಟಿದ್ದಾನೆ. ಇಲ್ಲಿ ವರಾಹಸ್ವಾಮಿಯ ಕಥೆಯನ್ನು ನೆನೆಯಬಹುದು. ಸೃಷ್ಟಿಯ ಆದಿಯಲ್ಲಿ ಭೂಮಿಯು ತನ್ನ ಸ್ಥಾನದಿಂದ ಜಾರಿಹೋಗಲು, ಹಿರಣ್ಯಾಕ್ಷನೆಂಬ ದೈತ್ಯನು ಭೂಮಿಯನ್ನು ಅತಿ ಕೆಳಗಿನ ರಸಾತಲ ಲೋಕದಲ್ಲಿ ಅಡಗಿಸಿಟ್ಟನು. ಆಗ ಮಹಾವಿಷ್ಣುವು ವರಾಹ ಅವತಾರ ತಾಳಿ ರಸಾತಲಕ್ಕೆ ನುಗ್ಗಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ತನ್ನ ಕೋರೆದಾಡೆಗಳ ಮೇಲೆ ಎತ್ತಿಕೊಂಡು ಬಂದು ಪುನಃ ಅದರ ಸ್ಥಾನದಲ್ಲಿ ಸ್ಥಾಪಿಸಿದನು. ಭೂದೇವಿಯು ವಿಷ್ಣುವಿನ ಪತ್ನಿಯೂ ಹೌದು. ಹಾಗಾಗಿ, ಈ ಅವತಾರಕ್ಕೆ ಭೂವರಾಹಸ್ವಾಮಿ ಎಂದು ಕರೆಯುತ್ತಾರೆ.

Untitled Design (1)

ಅವನೇ ಶ್ರೀಮನ್ನಾರಾಯಣ

ಬಲಭಾಗದಲ್ಲಿನ ಗರ್ಭಗುಡಿಯಲ್ಲಿ ಶ್ರೀಮನ್ನಾರಾಯಣನ ಸುಂದರ ವಿಗ್ರಹವಿದೆ. ಶಂಖ- ಚಕ್ರಗಳನ್ನು ಧರಿಸಿ ಯೋಗ ಭಂಗಿಯಲ್ಲಿ ಕುಳಿತಿರುವ ವಿಗ್ರಹ ಇದಾಗಿದೆ.

ನರಸಿಂಹಸ್ವಾಮಿ

ಶ್ರೀಮನ್ನಾರಾಯಣನ ವಿಗ್ರಹದ ಸನಿಹವೇ ಗರ್ಭಗೃಹದಲ್ಲೇ ಒಂದು ಗೂಡಿನಲ್ಲಿ ನರಸಿಂಹಸ್ವಾಮಿಯ ವಿಗ್ರಹವಿದೆ. ಈ ನರಸಿಂಹಸ್ವಾಮಿ ಉಗ್ರರೂಪಿಯಲ್ಲ. ಬದಲಿಗೆ ಯೋಗ ಭಂಗಿಯಲ್ಲಿ ಕುಳಿತಿರುವ ವಿಗ್ರಹವಾಗಿದೆ. ಇದು ಸ್ವಯಂಭೂ ವಿಗ್ರಹವೆಂದು ಹೇಳಲಾಗಿದೆ.‌ ಇಲ್ಲಿ ನರಸಿಂಹಸ್ವಾಮಿಯ ಕಥೆಯನ್ನು ನೆನೆಯಬಹುದು. ‌ಹಿರಣ್ಯಾಕ್ಷನ ಅಣ್ಣನಾದ ಹಿರಣ್ಯಕಶಿಪು ಎಂಬ ದೈತ್ಯನು ವಿಷ್ಣುವಿನ ಮೇಲೆ ಹಗೆ ಸಾಧಿಸುತ್ತಾ ಬ್ರಹ್ಮನ ವರಗರ್ವಿತನಾಗಿ ಲೋಕಕಂಟಕನಾಗಲು, ಅವನ ಪುತ್ರ ಪ್ರಹ್ಲಾದನು ವಿಷ್ಣುಭಕ್ತನಾಗಿಯೇ ಬೆಳೆದನು. ಇದನ್ನು ಸಹಿಸದ ಹಿರಣ್ಯಕಶಿಪು, ಅವನಿಗೆ ಸಾಕಷ್ಟು ಹಿಂಸೆ ಕೊಟ್ಟು, ಕೊನೆಗೆ ಅವನು ಹೇಳುವಂತೆ ಹರಿಯು ಎಲ್ಲೆಲ್ಲೂ ಇರುವುದಾದರೆ, ಅರಮನೆಯ ಕಂಬದಲ್ಲೂ ಏಕಿರಬಾರದೆಂದು ಅದನ್ನು ಒಡೆದಾಗ, ವಿಷ್ಣುವು ನರಸಿಂಹ ರೂಪದಲ್ಲಿ ಅವತರಿಸಿ ಅವನನ್ನು ಕೊಂದು ಪ್ರಹ್ಲಾದನನ್ನು ಪೊರೆದನು.

ಇದನ್ನೂ ಓದಿ: ವಾರಾಣಸಿಯ ಜೈತ್ಪುರದಲ್ಲಿ ಚಂದ್ರಘಂಟಾ ದುರ್ಗಾ ದೇವಿ

ಈ ಗರ್ಭಗುಡಿಯ ಹೊರಗೆ ಅಂತರಾಳದಲ್ಲಿ ಒಂದು ಕಡೆ ಆಂಜನೇಯನ ವಿಗ್ರಹ ಇದ್ದರೆ, ಇನ್ನೊಂದು ಕಡೆ ಸೂರ್ಯನಾರಾಯಣ ಹಾಗೂ ಮಹಾಲಕ್ಷ್ಮಿಯರ ವಿಗ್ರಹಗಳಿವೆ. ಈ ವಿಗ್ರಹಗಳು ಅಂತರಾಳದ ಪುಟ್ಟ ಪುಟ್ಟ ಗೂಡುಗಳಲ್ಲಿವೆ. ಎರಡೂ ಗರ್ಭಗುಡಿಗಳಿಗೆ ಅವುಗಳದೇ ಆದ ಅಂತರಾಳ ಹಾಗೂ ಒಂದು ಸಾಮಾನ್ಯವಾದ ನವರಂಗವಿದೆ. ಈ ನವರಂಗದ ನೆಲದಲ್ಲಿ ಒಂದು ಆಮೆಯ ಕೆತ್ತನೆ ಇದೆ.

Untitled Design (2)

ಇನ್ನೂ ಏನೇನಿವೆ?

ದೇವಾಲಯದ ಹೊರಗೆ ಒಂದು ಸುಂದರವಾದ ತುಳಸಿ ಕಟ್ಟೆ ಹಾಗೂ ಎರಡು ರಥಗಳಿವೆ. ರಥಯಾತ್ರೆಯ ಸಮಯದಲ್ಲಿ ಇವುಗಳನ್ನು ಬಳಸುತ್ತಾರೆ. ಈ ದೇವಾಲಯದ ವಾಸ್ತುಶಿಲ್ಪ ಸೊಗಸಾಗಿದೆ. ದೇವಾಲಯವು ನಕ್ಷತ್ರಾಕಾರದ ಜಗಲಿಯ ಮೇಲೆ ನಿಂತಿದೆ. ಒಳಗೆ ಎರಡು ಗರ್ಭಗೃಹಗಳಿದ್ದರೂ ಹೊರಗೆ ನಾಗರಶೈಲಿಯ ಒಂದೇ ಶಿಖರವಿದೆ. ದೇವಾಲಯದ ಹೊರಗೋಡೆಯ ಮೇಲೆ ಯಾವುದೇ ಕೆತ್ತನೆಗಳಿಲ್ಲ. ದೇವಾಲಯದ ಹೊರಗೆ ಇನ್ನೂ ಕೆಲವು ಪುಟ್ಟ ದೇವಾಲಯಗಳಿವೆ. ಮಹಾಪ್ರಸಾದ ಭೋಜನ ವಿತರಣೆಯ ಸ್ಥಳವೂ ಇದೆ. ದೇವಾಲಯದ ಆವರಣದಲ್ಲಿ ಮರಗಳ ಸಹಿತವಾಗಿ ಹಸಿರು ಹುಲ್ಲಿನ ಸುಂದರ ಉಪವನವಿದ್ದು ಮನಸಿಗೆ ಮುದ ನೀಡುತ್ತದೆ. ದೇವಾಲಯದ ಪರಿಸರವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ.

ಹಲಸಿಯಲ್ಲಿ ಈ ದೇವಾಲಯವಲ್ಲದೇ, ಸುವರ್ಣೇಶ್ವರ, ಗೋಕರ್ಣೇಶ್ವರ ಮೊದಲಾದ ಶೈವ, ವೈಷ್ಣವ ದೇವಾಲಯಗಳಿವೆ. ಹಾಗೆಯೇ ಜೈನ ಬಸದಿಯೂ ಇದೆ. ಕದಂಬರು ಎಲ್ಲಾ ಮತಗಳಿಗೂ ಆಶ್ರಯ ನೀಡಿದ್ದರು ಎನ್ನುವುದಕ್ಕೆ ಇವು ಸಾಕ್ಷಿ. ಬೆಳಗಾವಿಗೆ ಹೋದಾಗ ಈ ಸುಂದರ ಭೂವರಾಹ ನರಸಿಂಹಸ್ವಾಮಿ ದೇವಾಲಯವನ್ನು ನೋಡಲು ಮರೆಯಬೇಡಿ.