ಹೊಯ್ಸಳರ ಶಿಲ್ಪಕಲಾ ವೈಭವದ ದೇಗುಲ
ಈ ದೇವಾಲಯ ಸಂಕೀರ್ಣದಲ್ಲಿ ಪರಸ್ಪರ ಮುಖಾಮುಖಿಯಾಗಿರುವ ಅವಳಿ ದೇಗುಲಗಳಿವೆ. ಒಂದರಲ್ಲಿ ಶಿವ ಇನ್ನೊಂದರಲ್ಲಿ ಸೂರ್ಯದೇವ ಇರುವುದು ವಿಶೇಷ. ಪೂರ್ವದ ದೇವಾಲಯವು ಶ್ರೀ ಬೂಚೇಶ್ವರ ಸ್ವಾಮಿಯದು. ಪಶ್ಚಿಮದ ದೇಗುಲದಲ್ಲಿ ಪೂರ್ವಕ್ಕೆ ಎದುರಾಗಿರುವ ಸೂರ್ಯ ದೇವರ ಚಿತ್ರವಿದೆ
- ಸುಮಾ ಸೂರ್ಯ
ಹೊಯ್ಸಳ ರಾಜ ಎರಡನೆಯ ವೀರಬಲ್ಲಾಳ ಇವರ ಪಟ್ಟಾಭಿಷೇಕದ ಸಲುವಾಗಿ, ರಾಜ ಒಂದನೆಯ ನರಸಿಂಹನಿಗೆ ಸೇವೆ ಸಲ್ಲಿಸುತ್ತಿದ್ದ ಬ್ರಾಹ್ಮಣ ಅಧಿಕಾರಿ ಬುಚ್ಚಿರಾಜ ಇದನ್ನು ಕಟ್ಟಿಸಿದ. ಹಾಗಾಗಿ ಇದಕ್ಕೆ ಬೂಚೇಶ್ವರ ಎಂಬ ಹೆಸರು ಬಂದಿದೆ.
‘ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು’ ಎಂದು ಸುಮ್ಮನೇ ಹೇಳಲಿಲ್ಲ ಬಿ.ಆರ್. ಲಕ್ಷ್ಮಣರಾವ್‌ರವರು. ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ದ್ಯೋತಕಗಳಾದ ಅದ್ಭುತ ಶಿಲ್ಪಕಲೆಯ ಐತಿಹಾಸಿಕ ದೇವಾಲಯಗಳನ್ನು ನೋಡುವಾಗಲೆಲ್ಲಾ ಇದು ಸಾಬೀತಾಗುತ್ತದೆ. ಅಂಥ ಭವ್ಯ, ದಿವ್ಯ ಶಿಲ್ಪಕಲಾವೈಭವದ ತವರೂರು ನಮ್ಮ ನಾಡು! ಅಂಥದ್ದೇ ಒಂದು ಅತ್ಯದ್ಭುತ ಶಿಲ್ಪಕಲಾ ದೇಗುಲ ಬೂಚೇಶ್ವರ ಸ್ವಾಮಿ ದೇವಸ್ಥಾನ.

ಹಾಸನದಿಂದ ಸುಮಾರು 12 ಕಿಮೀ ದೂರದ ಪುಟ್ಟ ಹಳ್ಳಿ ಕೋರವಂಗಲ. ಅಲ್ಲಿರುವ 12ನೆಯ ಶತಮಾನದ ಹೊಯ್ಸಳ ವಾಸ್ತುಶಿಲ್ಪದ ಅತ್ಯದ್ಭುತ ಶಿವಾಲಯ ಶ್ರೀ ಬೂಚೇಶ್ವರ ಸ್ವಾಮಿ ದೇವಸ್ಥಾನ. ಅದರ ಸೊಬಗು ನಿಜಕ್ಕೂ ಮೈಮನ ಸೆಳೆಯುವಂಥದ್ದು. ಈ ದೇವಾಲಯಕ್ಕೆ ಬೂಸೇಶ್ವರ, ಬೂಕೇಶ್ವರ, ಬುಚೇಶ್ವರ ಎಂಬ ಹೆಸರೂ ಇವೆ.
ಕಟ್ಟಿದವರು ಯಾರು?
ಹೊಯ್ಸಳ ರಾಜ ಎರಡನೆಯ ವೀರಬಲ್ಲಾಳ ಇವರ ಪಟ್ಟಾಭಿಷೇಕದ ಸಲುವಾಗಿ, ರಾಜ ಒಂದನೆಯ ನರಸಿಂಹನಿಗೆ ಸೇವೆ ಸಲ್ಲಿಸುತ್ತಿದ್ದ ಬ್ರಾಹ್ಮಣ ಅಧಿಕಾರಿ ಬುಚ್ಚಿರಾಜ ಇದನ್ನು ಕಟ್ಟಿಸಿದ. ಹಾಗಾಗಿ ಇದಕ್ಕೆ ಬೂಚೇಶ್ವರ ಎಂಬ ಹೆಸರು ಬಂದಿದೆ. ಆತನ ಇನ್ನಿಬ್ಬರು ಸಹೋದರರು ಈ ದೇವಾಲಯದ ಪಕ್ಕದಲ್ಲೇ ಇನ್ನೆರಡು ಶಿವಾಲಯಗಳನ್ನು ಕಟ್ಟಿಸಿದರು. ಆದರೂ ಬೂಚೇಶ್ವರ ದೇಗುಲ ಹೆಚ್ಚು ಪ್ರವರ್ಧಮಾನಕ್ಕೆ ಬಂದು ಪ್ರಸಿದ್ಧಿ ಪಡೆದಿದೆ. ಉಳಿದೆರಡು ಶಿಥಿಲಗೊಂಡಿವೆ.
ಇದನ್ನೂ ಓದಿ:ಹಸಿವಿಲ್ಲದವರು ಉದ್ಯಮಕ್ಕೆ ಅಪಾಯಕಾರಿ!
ಶಿವ ಮತ್ತು ಸೂರ್ಯ ದೇವಾಲಯಗಳು
ಈ ದೇವಾಲಯ ಸಂಕೀರ್ಣದಲ್ಲಿ ಪರಸ್ಪರ ಮುಖಾಮುಖಿಯಾಗಿರುವ ಅವಳಿ ದೇಗುಲಗಳಿವೆ. ಒಂದರಲ್ಲಿ ಶಿವ ಇನ್ನೊಂದರಲ್ಲಿ ಸೂರ್ಯದೇವ ಇರುವುದು ವಿಶೇಷ. ಪೂರ್ವದ ದೇವಾಲಯವು ಶ್ರೀ ಬೂಚೇಶ್ವರ ಸ್ವಾಮಿಯದು. ಪಶ್ಚಿಮದ ದೇಗುಲದಲ್ಲಿ ಪೂರ್ವಕ್ಕೆ ಎದುರಾಗಿರುವ ಸೂರ್ಯ ದೇವರ ಚಿತ್ರವಿದೆ. ಮುಚ್ಚಿದ ಹಾಗೂ ಅರೆ ಮುಚ್ಚಿದ ಮಂಟಪಗಳ ಮೂಲಕ ಈ ಎರಡೂ ದೇಗುಲಗಳು ಸಂಪರ್ಕಗೊಂಡಿದ್ದು, ಈ ದೇವಾಲಯಗಳ ಪೂರ್ವ ತುದಿಯಲ್ಲಿ ಭೈರವನ ಪುಟ್ಟ ದೇಗುಲವಿದೆ.
ಬೂಚೇಶ್ವರ ದೇವಸ್ಥಾನ
ಈ ದೇವಾಲಯ 32 ಕಂಬಗಳ ಮುಖಮಂಟಪ, 4 ಕಂಬಗಳ ನವರಂಗ, ಸುಕನಾಸಿ ಮತ್ತು ಗರ್ಭಗೃಹಗಳನ್ನು ಹೊಂದಿದೆ. ಗರ್ಭಗುಡಿಗೆ ಮುಖಮಾಡಿ ಮತ್ತು ಮುಖಮಂಟಪಕ್ಕೆ ತಾಗಿಕೊಂಡಂತೆ ಸೂರ್ಯನಾರಾಯಣ ದೇವರ ಗರ್ಭಗುಡಿಯಿದೆ. ಈ ದೇವಾಲಯದ ಪ್ರವೇಶದ್ವಾರ ಮುಂದಿನಿಂದಲ್ಲ; ಬದಲಿಗೆ ಎರಡೂ ಪಾರ್ಶ್ವಗಳಲ್ಲಿವೆ. ಹೊರ ಗೋಡೆಗಳಲ್ಲಿ ಶೈವ, ವೈಷ್ಣವ, ಶಕ್ತಿ ದೇವತೆಗಳು, ರಾಮಾಯಣ, ಮಹಾಭಾರತ ಹಾಗೂ ಭಾಗವತದ ದೃಶ್ಯಾವಳಿಗಳು ಬಹು ಸುಂದರವಾಗಿ ಕೆತ್ತಲ್ಪಟ್ಟಿವೆ. ಸಪ್ತಮಾತೃಕೆಯರು, ಸರಸ್ವತಿ, ದುರ್ಗಾಮಾತೆ, ನರಸಿಂಹ, ಬ್ರಹ್ಮ, ವೇಣುಗೋಪಾಲ, ಗಣೇಶ ಹೀಗೆ ಹಲವು ದೇವತೆಗಳ ಶಿಲ್ಪಗಳನ್ನು ಸುಂದರವಾಗಿ ಕೆತ್ತಲಾಗಿದೆ.

ಬೇಲೂರು- ಹಳೇಬೀಡಿನ ದೇವಾಲಯಗಳಷ್ಟು ಪ್ರಚಲಿತದಲ್ಲಿರದ ಈ ಬೂಚೇಶ್ಟರ ದೇವಸ್ಥಾನ, ಅವುಗಳಷ್ಟೇ ಸೊಗಸಾಗಿದೆ. ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ ಇಂಥ ಕ್ಷೇತ್ರಗಳನ್ನು ಎಲ್ಲರಿಗೂ ಪರಿಚಯಿಸಿ, ಸಂರಕ್ಷಿಸಿ, ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.
ಮಾಹಿತಿ ಪೆಟ್ಟಿಗೆ
ಈ ದೇವಾಲಯದಲ್ಲಿ ನಿತ್ಯವೂ ಪೂಜೆ ನಡೆಯುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ದೇಗುಲ ತೆರೆದಿರುತ್ತದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದ್ದು, ಸ್ವಚ್ಛವಾಗಿ ಕಾಪಾಡಿಕೊಂಡು ಬಂದಿದ್ದಾರೆ.