ಚಿನ್ನ, ಹೀಗಂದಾಗ ಮೊದಲಿಗೆ ನೆನಪಾಗುವುದು ದುಬೈ. ನೀವು ಹೌದು ಅನ್ನಿ ಅಥವಾ ಇಲ್ಲ ಅನ್ನಿ ಆದರೆ ಅಲ್ಲಿನ ಶೇಕ್‌ಗಳ ಮಡದಿಯರ ಚಿತ್ರ ನಮ್ಮ ಮನಃಪಟಲಗಳಲ್ಲಿ ಮೂಡುವುದು ಮಾತ್ರ ಬಟ್ಟೆಗಿಂತ ಹೆಚ್ಚು ಚಿನ್ನವನ್ನು ಧರಿಸಿದಂತೆಯೇ. ಅದೇನು ಶೋಕಿ ಅದೇನು ಸಿರಿವಂತಿಕೆ ಅಬ್ಬಾ. ದುಬೈ ಬಡವನ ಮನೆಯಲ್ಲೂ ಬಂಗಾರ ಇದ್ದೇ ಇರುತ್ತದೆ. ನಮ್ಮೂರಿನ ತರಕಾರಿ ಅಂಗಡಿಗಳಲ್ಲಿ ಕೂಗಿ ರಸ್ತೆ ಹೋಕರನ್ನು ಕರೆದು ಕೊಳ್ಳಲು ಪ್ರೇರೇಪಿಸುತ್ತಾರಲ್ಲ, ಥೇಟ್‌ ಹಾಗೆಯೇ ದುಬೈನ ಚಿನ್ನಾಭರಣಗಳ ಅಂಗಡಿಯವರೂ ಕರೆಯುತ್ತಾರೆ. ಸಣ್ಣಪುಟ್ಟ ಸರಗಳಲ್ಲ, ಮೈಮುಚ್ಚುವ ಆಭರಣಗಳನ್ನು ಹಾಕಿಯೇ ನಿಮ್ಮನ್ನು ಚಿನ್ನಕೊಳ್ಳುವಂತೆ ಪ್ರೇರೇಪಿಸುತ್ತಾರೆ.

ದುಬೈನಲ್ಲಿ ಭಾರತಕ್ಕಿಂತ ಅಗ್ಗ ಏಕೆ?

ಇಷ್ಟೆಲ್ಲಾ ನೋಡಿದ ಮೇಲೆ ಅಲ್ಲಿ ಚಿನ್ನದ ಬೆಲೆ ಕಮ್ಮಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ, ಅದಕ್ಕೆ ಕಾರಣ ತಿಳಿಯಿರಿ. ದುಬೈನಲ್ಲಿ ಗೂಡ್ಸ್‌ ಸರ್ವಿಸ್‌ ಟ್ಯಾಕ್ಸ್‌ ಅಂದರೆ ಜಿಎಸ್‌ಟಿ ಅಳವಡಿಕೆ ಇಲ್ಲ. ಆಭರಣಗಳ ಮೇಕಿಂಗ್‌ ಚಾರ್ಜ್‌ ಸಹ ಕಡಿಮೆಯೇ ಅನ್ನಬಹುದು. ಈ ಕಾರಣಗಳಿಂದಲೇ ಅಲ್ಲಿ ಆಭರಣ ಬೆಲೆ ಭಾರತದಲ್ಲಿನ ಬಂಗಾರದ ಆಭರಣಗಳಿಗಿಂತ ಕಮ್ಮಿಯಾಗಿರುತ್ತದೆ.

New Project (85)

ಅಳತೆ ಮೀರಿದರೆ ಆಪತ್ತು

ದುಬೈನಲ್ಲಿ ಬಂಗಾರಕ್ಕೆ ಭಾರತಕ್ಕಿಂತ ಬೆಲೆ ಅಗ್ಗ. ಈ ವಿಷಯ ಕೇಳಿದ ನಂತರವಂತೂ ಭಾರತದಿಂದ ದುಬೈಗೆ ಹೋದ ಎಂಥ ಪ್ರವಾಸಿಗೂ ಅಲ್ಲಿಂದ ಮರಳುವಾಗ ಒಂದಷ್ಟು ಬಂಗಾರ ತರುವ ಆಸೆಯಾಗುವುದು ಸಹಜ. ಆದರೆ, ಚಿನ್ನ ಕಳ್ಳ ಸಾಗಣೆ ಪ್ರಕರಣ ಕೇಳಿದ ನಂತರ ಗೊಂದಲಗಳು ಮೂಡುವುದೂ ಸಹಜ. ಭಾರತದ ಕಸ್ಟಮ್ಸ್‌ ನಿಯಮಗಳು ಮಾತ್ರ ಅಳತೆ ಮೀರಿದರೆ ಆಪತ್ತು ಅನ್ನುತ್ತವೆ. ನೀವು ಬಂಗಾರವನ್ನು ಭಾರತಕ್ಕೆ ಕೊಂಡು ತರಬಹುದು. ಆದರೆ, ಅದರ ಪ್ರಮಾಣ, ಸುಂಕದ ಮಿತಿಗಳು, ಯಾವ ರೀತಿ ಬಂಗಾರವನ್ನು ಭಾರತಕ್ಕೆ ತಂದರೆ ಉತ್ತಮ ಎಂದು ತಿಳಿದಿರಬೇಕು.

ಬದಲಾದ ಬಂಗಾರದ ನಿಯಮಗಳು

ಬಂಗಾರ ಮತ್ತಿತರ ಬ್ಯಾಗೇಜ್‌ ನಿಯಮಗಳನ್ನು ಇತ್ತೀಚೆಗೆ ಅಂದರೆ 2026ರ ಫೆಬ್ರವರಿ 2ರಿಂದ ಜಾರಿಗೆ ಬರುವಂತೆ ಕೇಂದ್ರ ಹಣಕಾಸು ಸಚಿವಾಲಯ ಜಾರಿಗೊಳಿಸಿದೆ. ಈ ಹಿಂದೆ ಅಂದರೆ 2016ರಿಂದ ಭಾರತಕ್ಕೆ ವಿದೇಶದಿಂದ ಪುರುಷರು 50,000 ರು. ಮತ್ತು ಮಹಿಳೆಯರು 1,00,000 ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸುಂಕ ರಹಿತವಾಗಿ ಭಾರತಕ್ಕೆ ತರಲು ಅವಕಾಶವಿತ್ತು. ಬದಲಾದ ನಿಯಮಗಳ ಅನ್ವಯ ಈ ಹಣಕಾಸು ಮೌಲ್ಯವನ್ನು ಕೈಬಿಡಲಾಗಿದ್ದು, ತೂಕಕ್ಕೆ ಒತ್ತು ನೀಡಲಾಗಿದೆ.

ನಿಯಮಗಳ ಪ್ರಕಾರ

ಸುಂಕ ರಹಿತ

2026ರ ಫೆಬ್ರವರಿ 2ರಿಂದ ಜಾರಿಗೆ ಬಂದಿರುವ ನಿಯಮದಂತೆ, ಆಭರಣಗಳ ರೂಪದಲ್ಲಿ ಒಬ್ಬ ಪುರುಷ 20 ಗ್ರಾಂ ಮತ್ತು ಮಹಿಳೆ ಹಾಗೂ ಮಕ್ಕಳು ತಲಾ 40 ಗ್ರಾಂ ಬಂಗಾರವನ್ನು ಭಾರತಕ್ಕೆ ತರಬಹುದು. ಇದಕ್ಕೆ ಸುಂಕ ತೆರುವ ಅಗತ್ಯವೂ ಇರುವುದಿಲ್ಲ. ಆದರೆ, ಹೀಗೆ ಬಂಗಾರವನ್ನು ನೀವು ತರಲು ಒಂದು ವರ್ಷ ಕಾಲ ಆಯಾ ದೇಶದಲ್ಲಿ ವಾಸವಾಗಿರಬೇಕು.

ಇದನ್ನೂ ಓದಿ: ದುಬೈ ʼಬಂಗಾರದ ನಗರಿʼಯಾಗಿದ್ದು ಹೇಗೆ ಗೊತ್ತಾ?

ಸುಂಕ ಸಹಿತ

ಆರು ತಿಂಗಳುಗಳ ಕಾಲ ನೀವು ಯಾವುದೇ ದೇಶದಲ್ಲಿ ವಾಸವಾಗಿದ್ದರೆ, ಅಲ್ಲಿಂದ ಒಂದು ಕಿಲೋ ವರೆಗೆ ಬಂಗಾರವನ್ನು ಆಮದು ಮಾಡಿಕೊಳ್ಳಬಹುದು. ಈ ರೀತಿಯ ಬಂಗಾರವು ಆಭರಣ, ನಾಣ್ಯ ಅಥವಾ ಬಾರ್‌ ರೂಪದಲ್ಲಿದ್ದು, ಅದಕ್ಕೆ ಕಸ್ಟಮ್ಸ್‌ ಸುಂಕವನ್ನು ತೆರಬೇಕಾಗುತ್ತದೆ. ಈ ಸುಂಕ 6ರಿಂದ 36 ಪ್ರತಿಶತದವರೆಗೂ ಇರಬಹುದು. ಏಕೆಂದರೆ ಅದು ಅಂದಿನ 24 ಕ್ಯಾರೆಟ್‌ ಬಂಗಾರದ ಬೆಲೆ, ಅದರ ಖರೀದಿಯ ಇನ್‌ವಾಯ್ಸ್‌ ಮತ್ತು ಆಗಾಗ್ಗೆ ಬದಲಾಗುವ ಸುಂಕ ಮೌಲ್ಯಗಳ ಆಧಾರದ ಮೇಲೆ ನಿರ್ಧಾರವಾಗಬಹುದು.

ATITHI ಮೊಬೈಲ್‌ ಅಪ್ಲಿಕೇಷನ್‌ ಬಳಸಿ

ಸುಂಕ ರಹಿತ ಭತ್ಯೆ ಮಿತಿ ಮೀರಿ ತಂದ ಚಿನ್ನದ ವಿವರಗಳನ್ನು ಭಾರತಕ್ಕೆ ಬರುವಾಗ ATITHI ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಅಥವಾ ಬಂದಿಳಿದ ನಿಲ್ದಾಣದಲ್ಲೇ ಕಸ್ಟಮ್ಸ್‌ ಘೋಷಣೆ ಫಾರ್ಮ್‌ಗಳಲ್ಲಿ ಘೋಷಿಸಬೇಕು. ವಿಮಾನ ನಿಲ್ದಾಣದ ರೆಡ್‌ ಚಾನೆಲ್‌ನಲ್ಲಿ ಮುಂದುವರಿಯಬೇಕು. ಅಲ್ಲಿನ ಕಸ್ಟಮ್ಸ್‌ ಅಧಿಕಾರಿಗಳು ನೀವು ತೆರಬೇಕಾದ ಸುಂಕವನ್ನು ನಿರ್ಧರಿಸುತ್ತಾರೆ. ಈ ನಿಯಮಗಳನ್ನು ಪಾಲಿಸುವುದು ಒಂದು ಕಿಲೋ ವರೆಗೂ ಬಂಗಾರ ಆಮದು ಮಾಡಿಕೊಳ್ಳುವ ಸರ್ವರಿಗೂ ಕಡ್ಡಾಯವಾಗಿರುತ್ತದೆ.