ಕನೆಕ್ಟಿಂಗ್ ಫ್ಲೈಟ್ ಅಂದರೆ ಒಂದು ಫ್ಲೈಟ್‌ನಿಂದ ಮತ್ತೊಂದು ಫ್ಲೈಟ್‌ಗೆ ಕನೆಕ್ಟ್ ಮಾಡಿಕೊಂಡು ಪ್ರಯಾಣಿಸುವುದು ಇವತ್ತಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ, ಮೊದಲನೆಯ ಫ್ಲೈಟ್ ಕೊಂಚ ಲೇಟ್ ಆದರೂ ಸಾಕು, ಎದೆ ಬಡಿತ ಜೋರಾಗಿಬಿಡುತ್ತದೆ. ʼಅಯ್ಯೋ.. ಮುಂದಿನ ಫ್ಲೈಟ್ ಮಿಸ್ ಆಗಿಬಿಟ್ಟರೆ ಏನು ಮಾಡುವುದು? ಲಗೇಜ್ ಕಥೆ ಏನು? ಹೊಸ ಟಿಕೆಟ್‌ಗೆ ಮತ್ತೆ ದುಡ್ಡು ಕೊಡಬೇಕಾ?ʼ ಎಂಬ ನೂರಾರು ಆತಂಕಗಳು ಕಣ್ಣೆದುರು ಬಂದು ನಿಲ್ಲುತ್ತವೆ.

ಇದನ್ನೂ ಓದಿ:ವಿಮಾನ ಪ್ರಯಾಣ: ಟಿಕೆಟ್‌ ಬುಕಿಂಗ್‌ಗೂ ಮುನ್ನ ತಿಳಿಯಿರಿ

ಪ್ರಯಾಣದ ಸಮಯದಲ್ಲಿ ಫ್ಲೈಟ್ ಮಿಸ್ ಆಗುವುದು ನಿಜಕ್ಕೂ ಒಂದು ದೊಡ್ಡ ತಲೆನೋವು. ಆದರೆ, ಇಂಥ ಪರಿಸ್ಥಿತಿ ಎದುರಾದಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತಿ ಮುಖ್ಯವಾದ ನಿಯಮವೆಂದರೆ, ಅದು ʼಸಿಂಗಲ್ ಕಾಂಟ್ರಾಕ್ಟ್ ಟಿಕೆಟಿಂಗ್ʼ. ಸಿಂಗಲ್‌ ಕಾಂಟ್ರಾಕ್ಟ್‌ ಟಿಕೆಟಿಂಗ್‌ ಎಂದರೆ ನೀವು ನಿಮ್ಮ ಇಡೀ ಪ್ರಯಾಣದ ಟಿಕೆಟ್‌ಗಳನ್ನು ಒಂದೇ ಏರ್‌ಲೈನ್ಸ್ ಮೂಲಕ ಅಥವಾ ಅವರದೇ ಪಾರ್ಟ್‌ನರ್ ಏರ್‌ಲೈನ್ಸ್ ಮೂಲಕ ಒಂದೇ ಬುಕಿಂಗ್ ಐಡಿ (ಪಿಎನ್‌ಆರ್‌) ಅಡಿಯಲ್ಲಿ ಖರೀದಿಸಿರಬೇಕು.

Untitled design (2)

ಈ ರೂಲ್‌ನ ಲಾಭಗಳೇನು?

ಉಚಿತವಾಗಿ ಮುಂದಿನ ಫ್ಲೈಟ್ ಬುಕಿಂಗ್: ನೀವು ಒಂದೇ ಟಿಕೆಟ್ ಅಡಿಯಲ್ಲಿ ಎರಡೂ ಫ್ಲೈಟ್‌ಗಳನ್ನು ಬುಕ್ ಮಾಡಿದ್ದು, ಮೊದಲನೆಯ ಫ್ಲೈಟ್ ತಡವಾದ ಕಾರಣ ಕನೆಕ್ಟಿಂಗ್ ಫ್ಲೈಟ್ ಮಿಸ್ ಆಗಿದ್ದರೆ, ಅದರ ಸಂಪೂರ್ಣ ಜವಾಬ್ದಾರಿ ಏರ್‌ಲೈನ್ಸ್ ಸಂಸ್ಥೆಯದ್ದಾಗಿರುತ್ತದೆ. ಅವರು ನಿಮಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಮುಂದಿನ ಲಭ್ಯವಿರುವ ಫ್ಲೈಟ್‌ನಲ್ಲಿ ಸೀಟ್ ವ್ಯವಸ್ಥೆ ಮಾಡಿಕೊಡಬೇಕು.

ಊಟ ಮತ್ತು ವಸತಿ ಸೌಲಭ್ಯ: ಒಂದು ವೇಳೆ ಮುಂದಿನ ಫ್ಲೈಟ್ ಸಿಗಲು ಗಂಟೆಗಟ್ಟಲೆ ಕಾಯಬೇಕಾಗಿ ಬಂದರೆ ಅಥವಾ ಮರುದಿನದವರೆಗೆ ಯಾವುದೇ ಫ್ಲೈಟ್ ಇಲ್ಲದಿದ್ದರೆ, ಏರ್‌ಲೈನ್ಸ್ ಸಂಸ್ಥೆಯೇ ನಿಮಗೆ ಉಚಿತವಾಗಿ ಹೊಟೇಲ್ ರೂಮ್ ಮತ್ತು ಊಟದ ಕೂಪನ್‌ಗಳನ್ನು ನೀಡಬೇಕಾಗುತ್ತದೆ.

ಲಗೇಜ್ ಟ್ರಾನ್ಸ್‌ಫರ್ ಚಿಂತೆ ಇರುವುದಿಲ್ಲ: ಸಿಂಗಲ್ ಟಿಕೆಟ್ ಇದ್ದಾಗ, ನಿಮ್ಮ ಚೆಕ್-ಇನ್ ಲಗೇಜ್‌ಗಳನ್ನು ಮೊದಲನೇ ಏರ್‌ಪೋರ್ಟ್‌ನಲ್ಲೇ ಕಳುಹಿಸಿದರೆ ಸಾಕು, ಅವು ನೇರವಾಗಿ ನಿಮ್ಮ ಕೊನೆಯ ತಾಣ ತಲುಪುತ್ತವೆ. ಮಧ್ಯದ ಏರ್‌ಪೋರ್ಟ್‌ನಲ್ಲಿ ನೀವು ಮತ್ತೆ ಲಗೇಜ್ ಕಲೆಕ್ಟ್ ಮಾಡಿಕೊಂಡು ರೀ-ಚೆಕ್-ಇನ್ ಮಾಡುವ ಗೋಜಲು ಇರುವುದಿಲ್ಲ.

Untitled design (1)

ಪ್ರಯಾಣಿಕರ ಸಾಮಾನ್ಯ ತಪ್ಪುಗಳೇನು?

ಬಹಳಷ್ಟು ಜನ ಪ್ರವಾಸಿಗರು ಸ್ವಲ್ಪ ಹಣ ಉಳಿಸುವ ಆಸೆಗೆ ಬಿದ್ದು, ಬೇರೆ ಬೇರೆ ವೆಬ್‌ಸೈಟ್‌ಗಳಲ್ಲಿ ಅಥವಾ ಬೇರೆ ಬೇರೆ ಏರ್‌ಲೈನ್ಸ್‌ಗಳಲ್ಲಿ ಮಲ್ಟಿ ಸಿಟಿ ಅಥವಾ ಸೆಪರೇಟ್‌ ಟಿಕೆಟ್ಗಳನ್ನು ಬುಕ್ ಮಾಡುತ್ತಾರೆ. ಉದಾಹರಣೆಗೆ, ಬೆಂಗಳೂರಿನಿಂದ ಮುಂಬೈಗೆ ಒಂದು ಏರ್‌ಲೈನ್ಸ್, ಅಲ್ಲಿಂದ ಲಂಡನ್‌ಗೆ ಮತ್ತೊಂದು ಏರ್‌ಲೈನ್ಸ್ ಟಿಕೆಟ್ ಅನ್ನು ಪ್ರತ್ಯೇಕವಾಗಿ ಬುಕ್ ಮಾಡುತ್ತಾರೆ.

ಹೀಗೆ ಮಾಡಿದಾಗ, ಮೊದಲನೆಯ ಫ್ಲೈಟ್ ಲೇಟ್ ಆಗಿ ಎರಡನೆಯ ಫ್ಲೈಟ್ ಮಿಸ್ ಆದರೆ, ಎರಡನೆಯ ಏರ್‌ಲೈನ್ಸ್ ಸಂಸ್ಥೆ ಅದಕ್ಕೆ ಜವಾಬ್ದಾರಿಯಾಗುವುದಿಲ್ಲ. ನೀವು ʼನೋ-ಶೋʼ ಅಂದರೆ ಫ್ಲೈಟ್‌ಗೆ ಹಾಜರಾಗದ ಪ್ರಯಾಣಿಕರೆಂದು ಪರಿಗಣಿಸಲ್ಪಡುತ್ತೀರಿ. ಆಗ ನಿಮ್ಮ ಹಣವೂ ರೀಫಂಡ್ ಆಗುವುದಿಲ್ಲ. ದರ ಜತೆಗೆ ಹೊಸ ಟಿಕೆಟ್‌ಗೆ ನಿಮ್ಮ ಜೇಬಿನಿಂದಲೇ ಭಾರಿ ಹಣ ತೆರಬೇಕಾಗುತ್ತದೆ.

ಕನೆಕ್ಟಿಂಗ್ ಫ್ಲೈಟ್‌ಗಳ ನಡುವೆ ಕನಿಷ್ಠ 2 ರಿಂದ 3 ಗಂಟೆಗಳ ಸಮಯ ಇರುವಂತೆ ನೋಡಿಕೊಳ್ಳುವುದು ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ, ಇಡೀ ಜರ್ನಿಯನ್ನು ಒಂದೇ ಕಾಂಟ್ರಾಕ್ಟ್ ಟಿಕೆಟ್ ಅಡಿಯಲ್ಲಿ ಬುಕ್ ಮಾಡಿ. ಇದು ನಿಮ್ಮ ಪ್ರಯಾಣವನ್ನು ಸುರಕ್ಷಿತ ಮತ್ತು ನಿಶ್ಚಿಂತೆಯನ್ನಾಗಿಸುತ್ತದೆ!

ಬೋರ್ಡಿಂಗ್ ಪಾಸ್ ರೂಲ್

ಕನೆಕ್ಟಿಂಗ್ ಫ್ಲೈಟ್ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸಲು 'ಬೋರ್ಡಿಂಗ್ ಪಾಸ್' ನಿಯಮದ ಬಗ್ಗೆಯೂ ತಿಳಿಯುವುದು ಮುಖ್ಯ. ನೀವು ಒಂದೇ ಕಾಂಟ್ರಾಕ್ಟ್ ಅಡಿಯಲ್ಲಿ ಟಿಕೆಟ್ ಬುಕ್ ಮಾಡಿದಾಗ, ಮೊದಲ ಏರ್‌ಪೋರ್ಟ್‌ನಲ್ಲೇ ನಿಮಗಾಗುವ ಇಡೀ ಜರ್ನಿಯ ಎಲ್ಲಾ ಬೋರ್ಡಿಂಗ್ ಪಾಸ್‌ಗಳನ್ನು ಒಟ್ಟಿಗೆ ನೀಡುತ್ತಾರೆ. ಇದರಿಂದ ಮಧ್ಯದ ಏರ್‌ಪೋರ್ಟ್‌ನಲ್ಲಿ ಇಳಿದು ಮತ್ತೆ ಕ್ಯೂ ನಿಲ್ಲುವ ಅವಶ್ಯಕತೆ ಇರುವುದಿಲ್ಲ.

ಜತೆಗೆ, ಒಂದು ವೇಳೆ ಮೊದಲ ಫ್ಲೈಟ್ ತಡವಾಗಿ ನೀವು ಕನೆಕ್ಟಿಂಗ್ ಫ್ಲೈಟ್ ಮಿಸ್ ಮಾಡಿಕೊಳ್ಳುವ ಮುನ್ಸೂಚನೆ ಸಿಕ್ಕರೆ, ತಕ್ಷಣವೇ ಫ್ಲೈಟ್ ಒಳಗಿರುವ ಕ್ಯಾಬಿನ್ ಕ್ರೂ ಸಿಬ್ಬಂದಿಯನ್ನು ಅಥವಾ ಏರ್‌ಪೋರ್ಟ್‌ನ ಗ್ರೌಂಡ್ ಸ್ಟಾಫ್ ಸಂಪರ್ಕಿಸಿ. ಸಿಂಗಲ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗಾಗಿ ಏರ್‌ಲೈನ್ಸ್ ಸಂಸ್ಥೆಗಳು ಹೆಚ್ಚಾಗಿ ಏರ್‌ಪೋರ್ಟ್‌ನಲ್ಲಿ 'ಸ್ಪೆಷಲ್ ಗೇಟ್ ಅಸಿಸ್ಟೆನ್ಸ್' ಅಥವಾ ವೇಗದ ಭದ್ರತಾ ತಪಾಸಣೆಯ ವ್ಯವಸ್ಥೆ ಮಾಡಿ, ಮುಂದಿನ ಫ್ಲೈಟ್ ತಲುಪಲು ಸಹಾಯ ಮಾಡುತ್ತವೆ.