ಮಕ್ಕಳಿಗೆ ದೀರ್ಘ ಕಾಲ ರಜೆ ಸಿಗುವ ಸಂದರ್ಭವೆಂದರೆ ಬೇಸಗೆ. ಪರೀಕ್ಷೆ ಮುಗಿಸಿ ಯಾವುದೇ ಚಿಂತೆಯಿಲ್ಲದೆ ಕುಟುಂಬದ ಜತೆಗೆ, ಗೆಳೆಯರ ಜತೆಗೆ ಸಮಯ ಕಳೆಯುಲು, ಎಲ್ಲೋ ಪ್ರವಾಸ ಹೋಗಿ ಸಮಾಜವನ್ನು ಗಮನಿಸಲು ಸಿಕ್ಕ ಸುಂದರ ಸಮಯ. ಈ ಸಮಯವನ್ನು ಪ್ರಪಂಚದ ವಿವಿಧ ದೇಶಗಳು ಒಂದೊಂದು ರೀತಿ ಉಪಯೋಗಿಸುತ್ತವೆ.

ಅಮೆರಿಕ ಮತ್ತು ಕೆನಡಾ

ಮಕ್ಕಳಿಗೇನೋ ರಜೆ ಇರುತ್ತದೆ. ಆದರೆ, ಪೋಷಕರ ಕಥೆ? ಅವರಿಗೆ ಆಫೀಸಿನಲ್ಲಿ ಎಂದಿನಂತೆ ವಿಪರೀತ ಕೆಲಸವಿರುತ್ತದೆ. ಮಕ್ಕಳಿಗೆ ರಜೆ ಇದೆ, ಅದಕ್ಕಾಗಿ ಎರಡು ತಿಂಗಳ ರಜೆ ಬೇಕು ಎಂದೇನಾದರೂ ಆಫೀಸಿನಲ್ಲಿ ಕೇಳಿದರೆ ಅದೇ ಕೊನೆಯ ದಿನವಾಗುತ್ತದೆ. ಅಮೆರಿಕ ಮತ್ತು ಕೆನಡಾದಂಥ ಸ್ಥಳಗಳಲ್ಲಿ ಅದಕ್ಕೆ ಸಮ್ಮರ್‌ ವೆಕೇಶನ್‌ ಶುರುವಾಗುವ ಮೊದಲೇ ಮಕ್ಕಳನ್ನು ʼಸಮ್ಮರ್‌ ಕ್ಯಾಂಪ್‌ʼಗಳಿಗೆ ಸೇರಿಸಲಾಗುತ್ತದೆ. ಇಲ್ಲಿ ಕ್ರೀಡಾ ತರಬೇತಿ, ಸಾಹಸಮಯ ಚಟುವಟಿಕೆಗಳೊಂದಿಗೆ ಮಕ್ಕಳನ್ನು ಇಡೀ ದಿನ ಬ್ಯುಸಿಯಾಗಿಡುವಂತೆ ಮಾಡಲಾಗುತ್ತದೆ. ಪೋಷಕರು ತಿಂಗಳುಗಳ ಮುಂಚಿತವಾಗಿಯೇ ಮಕ್ಕಳನ್ನು ದುಬಾರಿ ಖಾಸಗಿ ಶಿಬಿರಗಳಿಗೆ ಸೇರಿಸುತ್ತಾರೆ. ಸಮಯ ಸಿಕ್ಕಾಗ ಅವರ ಜತೆ ಸಮಯ ಕಳೆಯುತ್ತಾರೆ.

ಇದನ್ನೂ ಓದಿ: ಮಾಯಾನಗರಿಯೀಗ ಕಿಡ್ಸ್‌ ಅಡ್ಡಾ!

ಯುರೋಪ್‌

ಯುರೋಪ್‌ನ ಅನೇಕ ಭಾಗಗಳಲ್ಲಿ ಬೇಸಿಗೆಯು ಸುದೀರ್ಘವಾಗಿರುತ್ತದೆ. ಮಕ್ಕಳಿಗೆ ಎರಡರಿಂದ ಮೂರು ತಿಂಗಳವರೆಗೆ ರಜೆ ಇರುತ್ತದೆ. ಫ್ರಾನ್ಸ್‌ ಮತ್ತು ಇಟಲಿಯಲ್ಲಿ ʼಲೆಸ್‌ ಗ್ರಾಂಡೆಸ್‌ ವೇಕೆನ್ಸ್‌ʼ ಅಂದರೆ ʼದೀರ್ಘ ರಜೆʼ ಎಂಬ ಸಂಪ್ರದಾಯವೇ ಇದೆ. ಇಲ್ಲಿನವರು ಕುಟುಂಬ ಸಮೇತರಾಗಿ ಎರಡು ತಿಂಗಳ ಕಾಲ ಯಾವುದಾದರೂ ಕರಾವಳಿ ಭಾಗಕ್ಕೆ ತಾತ್ಕಾಲಿಕವಾಗಿ ಶಿಫ್ಟ್‌ ಆಗುತ್ತಾರೆ. ಅಲ್ಲೇ ಇದ್ದು, ಅಲ್ಲೇ ಕೆಲಸ ಮಾಡುತ್ತಾ, ದಿನ ನಿತ್ಯದ ವೇಗದ ಜೀವನದ ಗೇರ್‌ ಅನ್ನು ಕಡಿಮೆ ಮಾಡಿ ನಿಧಾನವಾಗಿ ಸಾಗುತ್ತಾರೆ. ನಿಜವಾಗಿಯೂ ವಿರಾಮ ಪಡೆಯುವ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ.

Untitled design - 2026-04-22T122120.652

ನೈಜೀರಿಯಾ

ನೈಜೀರಿಯಾದಂಥ ದೇಶಗಳಲ್ಲಿ ಬೇಸಿಗೆಯ ಅನುಭವವು ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಇದು ಬಹುಶಃ ಎಲ್ಲ ದೇಶದ ಜನರಿಗೂ ಅನ್ವಯವಾಗುತ್ತದೆ. ದುಡ್ಡಿದ್ದರೆ ತಿರುಗಾಟ ಇಲ್ಲದಿದ್ದರೆ ಮನೆಯಲ್ಲೇ ಕಿರುಚಾಟ. ಆದರೆ, ನೈಜೀರಿಯಾದಲ್ಲಿ ಸಾಮಾನ್ಯ ಕುಟುಂಬಗಳ ಮಕ್ಕಳು ತಮ್ಮಅಜ್ಜಿ ಮನೆಗೆ ಹೋಗಿ ಅಥವಾ ನೆರೆಹೊರೆಯವರೊಂದಿಗೆ ಕಾಲ ಕಳೆಯುತ್ತಾರೆ. ಇಲ್ಲಿಯವರಿಗೆ ಪ್ರಯಾಣವು ಯಾವಾಗಲೂ ಮುಖ್ಯವಲ್ಲ. ದೈನಂದಿನ ಜೀವನವೇ ಒಂದು ಸಂಭ್ರಮದಂತೆ ಇರುತ್ತದೆ. ಇನ್ನು ಶ್ರೀಮಂತ ಕುಟುಂಬದವರು ಬೇಸಗೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಮಾಡುತ್ತಾರೆ. ಯುರೋಪ್‌, ಅಮೆರಿಕ ಸುತ್ತಾಡುತ್ತಾರೆ. ಈ ಎರಡೂ ವರ್ಗದವರನ್ನು ಭಾರತದಲ್ಲೂ ಕಾಣಬಹುದು.

ನೆದರ್‌ಲ್ಯಾಂಡ್‌

ಮಕ್ಕಳ ಜತೆಗೆ ಕುಟುಂಬದವರು ಪ್ರೀತಿಯ ಕ್ಷಣಗಳನ್ನು ಕಳೆಯಲು ಈ ರಜೆಯನ್ನು ಬಳಸಿಕೊಳ್ಳುತ್ತಾರೆ. ಮಕ್ಕಳನ್ನೊಬ್ಬರನ್ನೇ ಯಾವುದೋ ಸಮ್ಮರ್‌ ಕ್ಯಾಂಪ್‌ಗೆ ಸೇರಿಸುವ ಬದಲು ಪೋಷಕರು, ಅಜ್ಜ-ಅಜ್ಜಿ ಅವರ ಜತೆಗೆ ಸೈಕ್ಲಿಂಗ್‌ ಅಥವಾ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೋಗಿ ಉಳಿದು ಒಟ್ಟಿಗೆ ಸಮಯ ಕಳೆಯುತ್ತಾರೆ. ಸಂಬಂಧಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಈ ರಜೆಯನ್ನು ಉಪಯೋಗಿಸಿಕೊಳ್ಳುವುದು ವಿಶೇಷ.

ಯುನೈಟೆಡ್ ಅರಬ್ ಎಮಿರೇಟ್ಸ್

ಯುಎಇಯಂಥ ದೇಶಗಳಲ್ಲಿ ಬೇಸಗೆಯಲ್ಲಿ ಏನು ಮಾಡಬೇಕು ಎನ್ನುವುದು ಹವಾಮಾನ ನಿರ್ಧಾರ ಮಾಡುತ್ತದೆ. ಸಿಕ್ಕಾಪಟ್ಟೆ ಸೆಕೆಯಿರುವುದರಿಂದ ಜನರು ಬೇಸಗೆ ಶುರುವಾಗುತ್ತಿದ್ದಂತೆ ಮೊದಲು ಈ ಜಾಗ ಬಿಟ್ಟು ಬೇರೆ ದೇಶಕ್ಕೆ ಪ್ರಯಾಣ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಬೇರೆ ದೇಶಗಳಿಗೆ ಹೋದಾಗ ಮಕ್ಕಳು ಅಲ್ಲಿನ ಸಂಸ್ಕೃತಿ, ಜಾಗಗಳ ವಿಶೇಷತೆ ಹಾಗೂ ಜನರ ನಡವಳಿಕೆಯನ್ನು ಕಲಿಯುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಬೇಸಗೆ ಸೆಕೆಯಿಂದ ದೂರವಾಗುತ್ತಾರೆ.

ಸ್ವಿಟ್ಜರ್‌ಲ್ಯಾಂಡ್‌

ಸ್ವಿಟ್ಜರ್‌ಲ್ಯಾಂಡ್‌ನ ವಿಶೇಷತೆ ಎಂದರೆ ಇಲ್ಲಿನ ಸರಕರಾವೇ ಹಲವು ಬೇಸಗೆ ಶಿಬಿರಗಳನ್ನು ಆಯೋಜಿಸುತ್ತವೆ. ಇವು ಕೈಗೆಟಕುವ ಬೆಲೆಯಲ್ಲಿ ಜನರಿಗೆ ಸಿಗುತ್ತವೆ. ಇಂಥ ಶಿಬಿರಗಳಿಗೆ ಯಾರು ಬೇಕಾದರೂ ಹೋಗಬಹುದು. ಪರ್ವತಾರೋಹಣ, ಪ್ರಕೃತಿಯ ನಡುವೆ ಕಾಲ ಕಳೆಯುವ ಅವಕಾಶ, ಹೊರಾಂಗಣ ಚಟುವಟಿಕೆ, ಕೌಶಲ ಅಭಿವೃದ್ಧಿ ಎಲ್ಲವೂ ಒಳಗೊಂಡಂಥ ಶಿಬಿರ ಇದಾಗಿರುತ್ತದೆ.

Untitled design - 2026-04-22T122106.473

ಬೇಸಗೆಯಲ್ಲಿ ಮಕ್ಕಳೊಂದಿಗೆ ಭೇಟಿ ನೀಡಬಹುದಾದ ಪ್ರಮುಖ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳು ಇಲ್ಲಿವೆ:

ಸಿಂಗಾಪುರ: ಇದು ಸೆಂಟೋಸಾ ಐಲ್ಯಾಂಡ್, ಯುನಿವರ್ಸಲ್ ಸ್ಟುಡಿಯೋಸ್ ಸಿಂಗಾಪುರ, ಎಸ್.ಇ.ಎ. ಅಕ್ವೇರಿಯಂ ಮತ್ತು ಸಿಂಗಾಪುರ ಮೃಗಾಲಯಕ್ಕೆ ಹೆಸರುವಾಸಿ. ಇಲ್ಲಿ ಮಕ್ಕಳಿಗೆ ಇಷ್ಟವಾಗುವ ಹಲವು ವಿಷಯಗಳು ಸಿಗುತ್ತವೆ.

ದುಬೈ, ಯುಎಇ: ಬುರ್ಜ್ ಖಲೀಫಾ, ಕಿಡ್ಜಾನಿಯಾ ಮತ್ತು ವಿವಿಧ ಥೀಮ್ ಪಾರ್ಕ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು.

ಇಂಡೋನೇಷ್ಯಾ (ಬಾಲಿ): ಸುಂದರವಾದ ಕಡಲತೀರಗಳು, ಸರ್ಫಿಂಗ್, ಬಾಲಿ ಸಫಾರಿ ಮತ್ತು ವಾಟರ್‌ಬಾಮ್ ಪಾರ್ಕ್‌ಗೆ ಇದು ಪ್ರಸಿದ್ಧ. ಹೊಸ ಬಗೆಯ ಅಡ್ವೆಂಚರ್‌ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದು.

ತಾಂಜೇನಿಯಾ: ಆನೆಗಳು ಮತ್ತು ಸಿಂಹಗಳು ಸೇರಿದಂತೆ ಕಾಡು ಪ್ರಾಣಿಗಳ ಸಫಾರಿಗೆ ಇದು ಅತ್ಯಂತ ಜನಪ್ರಿಯ ತಾಣ. ಸ್ಥಳೀಯ ಸಫಾರಿಗಿಂತ ವಿಶೇಷವಾದ ಅನುಭವ ಪಡೆಯಲು ಇದು ಬೆಸ್ಟ್‌.

ಟರ್ಕಿ: ಕ್ಯಾಪಡೋಸಿಯಾ ಗುಹೆಗಳು, ಟರ್ಕಿಶ್ ಐಸ್‌ಕ್ರೀಮ್ ಮತ್ತು ಬೋಸ್ಫರಸ್ ಜಲಸಂಧಿಯ ಫೆರಿ ಪ್ರಯಾಣದಂತಹ ವಿಶಿಷ್ಟ ಅನುಭವಗಳನ್ನು ಇಲ್ಲಿ ಪಡೆಯಬಹುದು.

ವಿಯೆಟ್ನಾಂ: ಇಲ್ಲಿ ಸಫಾರಿಗಳು ಮತ್ತು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಥೀಮ್ ಪಾರ್ಕ್‌ಗಳಿವೆ.

ಮಲೇಷ್ಯಾ: ಪೆಟ್ರೋನಾಸ್ ಅವಳಿ ಗೋಪುರಗಳು ಮತ್ತು ವಿಶೇಷವಾದ ಇಂಟರಾಕ್ಟಿವ್‌ ಸೈನ್ಸ್‌ ಮ್ಯೂಸಿಯಂಗಳಿಗೆ ಇದು ಹೆಸರುವಾಸಿ.

ಆಸ್ಟ್ರೇಲಿಯಾ: ಇಲ್ಲಿ ಕಡಲತೀರದ ಚಟುವಟಿಕೆಗಳು ಮತ್ತು ಸಾಹಸಮಯ ಹೊರಾಂಗಣ ಕ್ರೀಡೆಗಳನ್ನು ಆನಂದಿಸಬಹುದು. ಇದು ಮಕ್ಕಳಿಗೆ ಖುಷಿ ನೀಡುತ್ತವೆ.

ಜರ್ಮನಿ: ಸುಂದರವಾದ ಕೋಟೆಗಳು ಮತ್ತು ಕಾಲ್ಪನಿಕ ಕಥೆಗಳ ಆಧಾರಿತ ಪ್ರವಾಸಗಳಿಗೆ ಇದು ಪ್ರಸಿದ್ಧವಾಗಿದೆ.

ಅಮೆರಿಕಾ: ಡಿಸ್ನಿಲ್ಯಾಂಡ್‌ನಂಥ ಬೃಹತ್ ಥೀಮ್ ಪಾರ್ಕ್‌ಗಳಿಗೆ ಇದು ಅತ್ಯಂತ ಜನಪ್ರಿಯ ತಾಣ. ಟಿವಿ ಅಲ್ಲಿ ನೋಡುವ ದೃಶ್ಯವನ್ನು ನೇರವಾಗಿ ನೋಡಿದಾಗ ಮಕ್ಕಳಿಗೆ ಹೆಚ್ಚು ಖುಷಿಯಾಗುತ್ತದೆ.

ಗ್ರೀಸ್: ಸುಂದರ ಕಡಲತೀರಗಳು ಮತ್ತು ಪ್ರಾಚೀನ ಇತಿಹಾಸವನ್ನು ತಿಳಿಯಲು ಇದು ಸೂಕ್ತವಾದ ಸ್ಥಳ.

ಶ್ರೀಲಂಕಾ: ಕಡಿಮೆ ದರದಲ್ಲಿ ಕಡಲತೀರ, ಥೀಮ್‌ ಪಾರ್ಕ್‌, ಗುಹೆಗಳು ಸೇರಿದಂತೆ ಹಲವು ಪುರಾಣ ಪ್ರಸಿದ್ಧ ಸ್ಥಳಗಳನ್ನು ನೋಡಬಹುದು.

ಲೇಖಕರು: ಪತ್ರಕರ್ತರು