• ಪ್ರಮೋದ ಮೋಹನ ಹೆಗಡೆ

ಇತ್ತೀಚೆಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಜೆನ್‌ ಜಿ಼ ಏನು ಮಾಡುತ್ತಾರೆ? ಹೇಗೆ ಯೋಚನೆ ಮಾಡುತ್ತಾರೆ ಎಂಬ ಕುತೂಹಲವಿದೆ. 2026ರಲ್ಲಿ ಒಂದು ಸಂಸ್ಥೆ ಮಾಡಿರುವ ವರದಿ ಪ್ರಕಾರ, ಜೆನ್‌ ಜಿ಼, ಪ್ರವಾಸ, ಹೊಟೇಲ್‌ ಬುಕಿಂಗ್‌, ವಿಮಾನ ಪ್ರಯಾಣ ಎಲ್ಲದರಲ್ಲೂ ಹೊಸ ದೃಷ್ಟಿಕೋನ ಇಟ್ಟುಕೊಂಟಿದೆ ಎಂದು ಹೇಳಲಾಗಿದೆ. ಅವರ ಆಯ್ಕೆಗಳು ಹಿಂದಿನ ತಲೆಮಾರಿಗಿಂತ ವಿಭಿನ್ನ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವ್ಯಾಪಾರ ಪ್ರವಾಸದ ಬಗ್ಗೆ ನಿಮಗೆ ಗೊತ್ತಾ?

ಪ್ರಯಾಣದ ಆಯ್ಕೆ:

ಸಾಮಾನ್ಯವಾಗಿ ಮಿಲೇನಿಯಲ್‌ ತಲೆಮಾರಿನವರೆಗೂ ಯಾವುದೇ ಜಾಗಕ್ಕೆ ಹೋಗುವುದಾದರೆ ಅಲ್ಲಿ ಕಡಿಮೆ ಬೆಲೆಗೆ ಏನು ಸಿಗುತ್ತದೆ, ಎಲ್ಲೆಲ್ಲಿಗೆ ಹೋಗಬಹುದು ಎಂದು ನಿರ್ಧರಿಸಲಾಗುತ್ತಿತ್ತು. ಬಜೆಟ್‌ ಟ್ರಾವೆಲ್‌ ಎಂದು ಕೂಡ ಹೇಳಬಹುದು. ಆದರೆ, ಜೆನ್‌ ಜಿ಼ ಯೋಚನೆ ಹಾಗಿಲ್ಲ. ಯಾವುದಕ್ಕೆ ಹೆಚ್ಚು ಖರ್ಚು ಮಾಡಬೇಕು ಎನ್ನುವುದನ್ನು ತೀರ್ಮಾನಿಸಿ ಪ್ರಯಾಣ ಮಾಡುತ್ತಾರೆ. ಉದಾಹರಣೆಗೆ ಯಾವುದಾದರೂ ಕಾನ್ಸರ್ಟ್‌ಗೆ ಹೋಗುವುದಾದರೆ ಅದರ ಟಿಕೆಟ್‌ಗೆ ಹೆಚ್ಚು ಖರ್ಚಾದರೆ ವಿಮಾನಕ್ಕೆ ಕಡಿಮೆ ಖರ್ಚು ಮಾಡುತ್ತಾರೆ. ಇತ್ತೀಚೆಗೆ ಬಹುತೇಕ ಜನರಿಗೆ ಜಪಾನ್‌ ಹೋಗುವ ಉತ್ಸಾಹ ಹೆಚ್ಚಾಗಿದೆಯಂತೆ. ಅದಕ್ಕೆ ಕಾರಣ, ಅಲ್ಲಿನ ಆಹಾರ, ಸಂಸ್ಕೃತಿ ಹಾಗೂ ಜೆಡಿಎಂ ಕಾರ್‌ ಕಡೆಗಿರುವ ಸೆಳೆತ.

ಹೊಟೇಲ್‌ ಬುಕಿಂಗ್:‌

ಈಗ ಎಲ್ಲದಕ್ಕೂ ಆಪ್‌ ಬಂದಿವೆ. ಅವುಗಳ ಸದುಪಯೋಗ ಮಾಡುತ್ತಿರುವುದು ಜೆನ್‌ ಜಿ಼. ನಾಲ್ಕರಲ್ಲಿ ಒಬ್ಬರು ಹೊಟೇಲ್‌ ಬುಕಿಂಗ್‌ ಎಲ್ಲವನ್ನೂ ನೇರವಾಗಿ ಆಪ್‌ ಮೂಲಕ ಮಾಡುತ್ತಾರೆ. ಹಾಗೇ ಹೊಟೇಲ್‌ ಆಯ್ಕೆ ಮಾಡುವಾಗ ಅದಕ್ಕೆ ಎಷ್ಟು ರೇಟಿಂಗ್‌ ಇದೆ, ಎಷ್ಟು ಜನ ಹೋಗಿದ್ದಾರೆ, ಫೊಟೋಗಳಲ್ಲಿ ಎಷ್ಟು ಸ್ವಚ್ಛವಾಗಿ ಕಾಣಿಸುತ್ತಿದೆ ಎಂದೆಲ್ಲ ನೋಡಿ ನಂತರ ನಿರ್ಧರಿಸುತ್ತಾರೆ. ಹಾಗೆಯೇ ವ್ಯೂ ಹೇಗಿದೆ, ಲೊಕೇಶನ್‌ ಎಲ್ಲಿದೆ ಎನ್ನುವುದು ಬಹಳ ಮುಖ್ಯ.

ವಿಮಾನ ಮತ್ತು ಕ್ಯಾಬ್‌:

ವಿಮಾನ ಆಯ್ಕೆ ಮಾಡುವಾಗ ಲೆಗ್‌ ರೂಮ್‌ ಎಷ್ಟಿದೆ, ಫ್ರೀ ಚೆಕ್‌ ಬ್ಯಾಗ್‌ ಮೊದಲ ಆದ್ಯತೆ. ಪ್ರಯಾಣ ಮಾಡುವಾಗ ಶೇ. 73ರಷ್ಟು ಜನರು ಉಬರ್‌ ಅಥವಾ ಸೆಲ್ಫ್‌-ಬುಕ್‌ ಕ್ಯಾಬ್‌ ಆಯ್ಕೆ ಮಾಡುತ್ತಾರೆ ಎನ್ನುತ್ತದೆ ವರದಿ. ಶೇ. 26ರಷ್ಟು ಜನ ಮಾತ್ರ ಸಾರ್ವಜನಿಕ ಸಾರಿಗೆ ಬಳಸುತ್ತಾರೆ.

ಸರ್ವಿಸ್‌ನಲ್ಲಿ ನಿರೀಕ್ಷೆ:

ಹೊಟೇಲ್‌ ಅಲ್ಲಿ ಕೆಲಸ ಮಾಡುವವರು ಪ್ರೀತಿಯಿಂದ ನಡೆದುಕೊಂಡಾಗ, ಸಣ್ಣ ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದಾಗ ಜೆನ್‌ ಜಿ಼ ಹೆಚ್ಚು ಖುಷಿ ಪಡುತ್ತಾರೆ. ಏನೇ ಆದರೂ ಕೊನೆಗೆ ಅವರ ನೆನಪಿನಲ್ಲಿ ಇರುವುದು ಕಾಳಜಿಯ ವರ್ತನೆ ಹಾಗೂ ಮಾತುಗಳು ಮಾತ್ರ. ಆರೈಕೆಯಲ್ಲಿ ಯಾವುದೇ ಗೊಂದಲಗಳನ್ನು ಜೆನ್‌ ಜಿ಼ ಇಷ್ಟಪಡುವುದಿಲ್ಲ. ಎಷ್ಟೇ ಪ್ರಾಕ್ಟಿಕಲ್‌ ಆಗಿದ್ದರೂ ಜೆನ್‌ ಜಿ಼ ಕೂಡ ಮನಸ್ಸು ಹಗುರವಾಗುವಂಥ ಅನುಭವಗಳನ್ನು ನಿರೀಕ್ಷೆ ಮಾಡುತ್ತಾರೆ. ಅದೇ ಮುಖ್ಯ ಕೂಡ.