- ಗೀರ್ವಾಣಿ

ನಮಗೆಲ್ಲ ಚಿಕ್ಕವರಿದ್ದಾಗ ಸೇಬು ಹಣ್ಣು ಗೊತ್ತಿತ್ತು ಆದರೆ ಆ್ಯಪಲ್‌ ಗೊತ್ತಿರಲಿಲ್ಲ! ಯಾಕೆ ಹೇಳಿ? ಯಾಕೆಂದರೆ ಆಗ ಆ್ಯಪಲ್‌ ಫೋನ್ ಇರಲಿಲ್ಲ. ಹೀಗಾಗಿ ಸೇಬು ಹಣ್ಣನ್ನು ಸಿಂಪಲ್ಲಾಗಿ ಸೇಬು ಎಂದೇ ಕರೆಯುತ್ತಿದ್ದೆವು. ಆದರೆ ಈಗ ಆ್ಯಪಲ್‌ ಅಂದರೆ ಮೊದಲು ಕಲ್ಪನೆಗೆ ಬರುವುದು ಅರ್ಧ ಕಚ್ಚಿದ ಸೇಬು. ಅದೇ ಆ್ಯಪಲ್‌ ಫೋನ್‌ನ‌ ಸಿಂಬಲ್.

ಮನೆ ಹತ್ತಿರ ಸಿಗುತ್ತಿದ್ದ ಬಾಳೆಹಣ್ಣು, ಚಿಕ್ಕು ಹಣ್ಣು ತಿಂದುಕೊಂಡಿದ್ದ ನಮಗೆ ಆಗೆಲ್ಲ ಮಾರ್ಕೆಟ್‌ನಿಂದ ತಂದ ಆ್ಯಪಲ್‌ ತಿನ್ನುವುದು ಲಕ್ಸುರಿ ಎನಿಸುತ್ತಿತ್ತು. ಹೋಗ್ತಾ ಹೋಗ್ತಾ ಹೇಗಾಯ್ತು ಅಂದರೆ ಆ್ಯಪಲ್‌ ಎನ್ನುವುದು ಸ್ಟೇಟಸ್ ಆಯ್ತು. ಆ್ಯಪಲ್‌ ಹಣ್ಣು ತಿನ್ನುವುದು ಹಾಗೂ ಆ್ಯಪಲ್‌ ಫೋನ್ ಇರಿಸಿಕೊಳ್ಳುವುದು ಎರಡೂ ಸ್ಟೇಟಸ್ ಆಗಿ ಹೋಯ್ತು. ಯಾಕೆಂದರೆ ಎರಡೂ ದುಬಾರಿ.

ಇದನ್ನೂ ಓದಿ: ದಾಂಡಿಯಾ ಸಂಭ್ರಮ

ನಾವೆಲ್ಲ ಆ್ಯಪಲ್‌ ಅನ್ನು ಅಂಗಡಿಗಳಲ್ಲಿ ಮಾತ್ರ ನೋಡಿರುತ್ತೇವೆ. ಅಂಗಡಿಯ ಶೆಲ್ಫ್‌ಗಳಲ್ಲಿ ಕೆಂಪು ಕೆಂಪಗೆ ಸಾಲಾಗಿ ಕುಳಿತ ಆ್ಯಪಲ್‌ ಅನ್ನು ಅದೆಷ್ಟೋ ಬಾರಿ ಇಷ್ಟಪಟ್ಟು ಖರೀದಿಸಿರುತ್ತೇವೆ. ಆ್ಯಪಲ್‌ ಅನ್ನು ಹಣ್ಣು ಎಂದಷ್ಟೇ ನೋಡುವವರಿಗೆ ಏನೂ ಅನ್ನಿಸದು. ಆದರೆ ಆ್ಯಪಲ್‌ನ‌ ಬಣ್ಣಕ್ಕೆ, ಆಕಾರಕ್ಕೆ ಹಾಗೂ ಅದರ ಪರಿಮಳಕ್ಕೆ ಮರುಳಾದವರು ಅದರ ಮೋಹಕ್ಕೆ ಬೀಳುತ್ತಾರೆ.

ನಾನು ಮೊದಲಿನಿಂದಲೂ ಆ್ಯಪಲ್‌ ಬಗ್ಗೆ ಒಂದು ಕುತೂಹಲವನ್ನು ಬೆಳೆಸಿಕೊಂಡವಳು. ಅದರ ಹೂವು ಹೇಗಿರುತ್ತದೆ? ಮರದ ತುಂಬಾ ಕೆಂಪು ಕೆಂಪಗಿನ ಸೇಬುಹಣ್ಣು ಬಿಟ್ಟರೆ ನೋಡಲು ಎಷ್ಟು ಚಂದ ಕಾಣಬಹುದು? ಆ್ಯಪಲ್‌ ಅನ್ನು ಮರದಿಂದಲೇ ಕಿತ್ತು ತಿಂದರೆ ಎಷ್ಟು ರುಚಿ ಇರಬಹುದು ಎಂದೆಲ್ಲ ಕಲ್ಪಿಸಿಕೊಂಡಿದ್ದೆ.

Untitled design - 2026-10-28T122019.575

ಕಳೆದುಕೊಂಡಿರುವ ಮಜ

ನಾವು ದಕ್ಷಿಣ ಭಾರತದವರು ಬಹುತೇಕ ಹಣ್ಣುಗಳನ್ನು ಮರ, ಬಳ್ಳಿಗಳ ಮೇಲೆಯೇ ನೋಡಿರುತ್ತೇವೆ. ಏಕೆಂದರೆ ನಮ್ಮಲ್ಲಿ ಅಷ್ಟು ವೆರೈಟಿ ಹಣ್ಣುಗಳು ಬೆಳೆಯುತ್ತವೆ. ಆದರೆ ಆ್ಯಪಲ್‌ ಮರಗಳನ್ನು ಮಾತ್ರ ಕಣ್ಣಲ್ಲಿ ನೋಡ್ತೀನಿ ಎಂದರೂ ನಮ್ಮಲ್ಲಿ ಸಿಗಲಾರದು. ಹೀಗಾಗಿ ಆ್ಯಪಲ್‌ ಯಾವಾಗಲೂ ನನ್ನ ಸೆಳೆಯುತ್ತಿತ್ತು.

ನಮ್ಮಲ್ಲಿ ಸಾಮಾನ್ಯವಾಗಿ ಕಾಶ್ಮೀರದ ಆ್ಯಪಲ್‌ ಜನಪ್ರಿಯ. ಆದರೆ ಹಿಮಾಚಲದಲ್ಲೂ ಅಷ್ಟೇ ಆ್ಯಪಲ್‌ ಬೆಳೆಯುತ್ತದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹೆಚ್ಚಿನ ಜನ ಹಿಮ ನೋಡಲು ಸಿಗುತ್ತದೆ ಹಾಗೂ ಹಿಮದಲ್ಲಿ ಆಟವಾಡಬಹುದು ಎಂದು ಕಾಶ್ಮೀರ ಅಥವಾ ಹಿಮಾಚಲ ಪ್ರದೇಶದ ಪ್ರವಾಸಕ್ಕೆ ಚಳಿಗಾಲದಲ್ಲಿ ಹೋಗುತ್ತಾರೆ. ಅಷ್ಟರಲ್ಲಿ ಆ್ಯಪಲ್‌ ಸೀಸನ್ ಮುಗಿದಿರುತ್ತದೆ. ಹೀಗಾಗಿ ತುಂಬಾ ಜನರಿಗೆ ಆ್ಯಪಲ್‌ ಹಾರ್ವೆಸ್ಟಿಂಗ್‌ನ ಮಜವೇ ಗೊತ್ತಿರುವುದಿಲ್ಲ. ಈಗೀಗ ರೀಲ್ಸ್ ಜ಼ಮಾನಾ ಆರಂಭವಾದಾಗಿನಿಂದ ಜನರಿಗೆ ಆ್ಯಪಲ್‌ ಗಿಡಗಳನ್ನು ನೋಡಲು ಸಿಗುತ್ತಿದೆ‌. ಅದನ್ನು ನೋಡಿ, ಆ್ಯಪಲ್‌ ಪಿಕಿಂಗ್ ಸಮಯಕ್ಕೆ ಸರಿಯಾಗಿ ಟೂರ್ ಪ್ಲ್ಯಾನ್ ಮಾಡುತ್ತಿದ್ದಾರೆ.

ಕಳೆದ ವರ್ಷ ಮೇ ಸಮಯದಲ್ಲಿ ಕಾಶ್ಮೀರಕ್ಕೆ ಹೋದಾಗಲೂ ನಮಗೆ ಆ್ಯಪಲ್‌ ಅನ್ನು ಮರದಲ್ಲಿ ನೋಡಲು ಸಿಕ್ಕಿರಲಿಲ್ಲ. ಆಗ ಹೂ ಬಿಡುವ ಸಮಯ. ಬರೀ ಹೂ ನೋಡಿ ಸಂಭ್ರಮಪಟ್ಟು ಬಂದಿದ್ದೆವು. ಅದಕ್ಕೇ ಈ ಸಲ ಗೂಗಲ್‌ನಲ್ಲಿ ಹಿಮಾಚಲ ಪ್ರದೇಶದಲ್ಲಿ ಆ್ಯಪಲ್‌ ಹಾರ್ವೆಸ್ಟಿಂಗ್ (ಸೇಬು ಕೊಯ್ಲು) ಯಾವಾಗ ಎಂದೆಲ್ಲ ಹುಡುಕಿ ಹಿಮಾಚಲದ ʼಬರ್ಗರನ್ʼ ಎನ್ನುವ ಹಳ್ಳಿಗೆ ಸೆಪ್ಟೆಂಬರ್ ಕೊನೆವಾರಕ್ಕೆ ಹೋಗಿ ಇಳಿದೆವು.

ನಿರೀಕ್ಷೆ ತಂದ ನಿರಾಸೆ

ಬರ್ಗರನ್ ಮನಾಲಿ ಹತ್ತಿರದ ಒಂದು ಹಳ್ಳಿ. ಆ ಹಳ್ಳಿ ತುಂಬ ಆ್ಯಪಲ್‌ ಮರಗಳಿವೆ. ಕುಲು ಮನಾಲಿ ಕಣಿವೆಯಲ್ಲಿ ಎಲ್ಲಿ ನೋಡಿದರೂ ಆ್ಯಪಲ್‌ ಮರಗಳೇ. ಹೋಗುವಾಗ ನಮ್ಮ ಪ್ರಕಾರ ನಮಗೆ ಮರದ ತುಂಬಾ ಆ್ಯಪಲ್‌ ನೋಡಲು ಸಿಗುತ್ತದೆ, ನಾವು ಕೈಯಾರೆ ಕಿತ್ತು ತಿನ್ನುತ್ತೇವೆ ಎಂದೆಲ್ಲ ಕಲ್ಪನೆ ಇತ್ತು. ಆದರೆ ನಮ್ಮ ದುರದೃಷ್ಟಕ್ಕೆ ಈ ಸಲ ಆ್ಯಪಲ್‌ ಹಾರ್ವೆಸ್ಟಿಂಗ್ ಎಂದಿಗಿಂತ ಹದಿನೈದು ದಿನ‌ ಮೊದಲೇ ಮುಗಿದು ಹೋಗಿತ್ತು. ನಾವು ಕುಲು ಕಣಿವೆಗೆ ಹೋಗಿ ಇಳಿದರೆ ಸೇಬು‌ಮರಗಳೆಲ್ಲ ಬೋಳು ಬೋಳಾಗಿ‌ ನಿಂತಿದ್ದವು‌. ಎಷ್ಟು ನಿರಾಸೆಯಾಯ್ತು ಗೊತ್ತಾ?

ರೂಮಿಗೆ ಹೋದವರೇ ಬ್ಯಾಗ್ ಇಟ್ಟು ಸುತ್ತ ಇದ್ದ ಆ್ಯಪಲ್‌ ಆರ್ಚರ್ಡ್‌ನಲ್ಲಿ ಒಂದು ಸುತ್ತು ಹೋಗಿ ನೋಡೋಣ ಎಂದು ಹೋದೆವು. ಏಕೆಂದರೆ ಸೇಬು ಕೊಯ್ಲು ಆಗಷ್ಟೇ ಮುಗಿದಿತ್ತು. ಹೀಗಾಗಿ ಕೆಲವು ಮರದಲ್ಲಾದರೂ ಇರಬಹುದು ಎಂಬ ಆಸೆ ನಮಗೆ. ಅದೇ ಪ್ರಕಾರ ಕೆಲವು ಮರಗಳಲ್ಲಿ ಅಲ್ಲೊಂದು ಇಲ್ಲೊಂದು ಹಣ್ಣುಗಳಿದ್ದವು. ಅದನ್ನೇ ಕಿತ್ತು ತಿಂದೆವು. ಅದೆಷ್ಟು ರುಚಿಯಿತ್ತು ಗೊತ್ತಾ! ರಸರಸವಾಗಿ, ತಂಪು ತಂಪಾಗಿ ಸಿಹಿ ಸಿಹಿಯಾಗಿತ್ತು‌. ಮಾರುಕಟ್ಟೆಯಿಂದ ಕೊಂಡು ತರುವ ಆ್ಯಪಲ್‌ಗು, ಫ್ರೆಶ್ ಆಗಿ ಮರದಿಂದ ಕಿತ್ತು ತಿನ್ನುವ ಆ್ಯಪಲ್‌ಗು ಸ್ವಾದದಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಅದನ್ನು ತಿಂದು ನೋಡಿಯೇ ಅನುಭವಿಸಬೇಕು.

ದೂರವಾದ ಕೊರಗು

ಗಿಡ ತುಂಬ ಆ್ಯಪಲ್‌ ನೋಡಲಾಗಲಿಲ್ಲವಲ್ಲ ಎಂಬ ನಮ್ಮ‌ಕೊರಗನ್ನು ನೋಡಿ ನಮ್ಮ ಹೋಂ ಸ್ಟೇ ಓನರ್ ನಮ್ಮನ್ನು ಅವರ ತೋಟಕ್ಕೆ ಕರೆದುಕೊಂಡು ಹೋದರು. ಹಿಮಾಲಯದ ತಪ್ಪಲಿನ ಎತ್ತರದ ಬೆಟ್ಟಗಳ ಕೆಳಗೆ ಎಕರೆಗಟ್ಟಲೆ ಜಾಗದಲ್ಲಿ ಅವರ ಆ್ಯಪಲ್‌ ಆರ್ಚರ್ಡ್ ಇತ್ತು. ಅಲ್ಲಿ ಕೆಲವು ಮರಗಳಲ್ಲಿ ಬೇರೆ ಬೇರೆ ಜಾತಿಯ ಹಣ್ಣುಗಳು ಕೂಡ ಇದ್ದವು. ಇದು ಗಾಲಾ, ಇದು ಗೋಲ್ಡನ್, ಇದು ಪಿಂಕ್ ಕ್ವೀನ್ ಎನ್ನುತ್ತಾ ಅವರು ವಿವರಿಸುತ್ತಾ ಹೋದಂತೆ ನಾವು ಕೈಯಾರೆ ಕಿತ್ತು ಬುಟ್ಟಿಯಲ್ಲಿ ತುಂಬಾ ತೊಡಗಿದೆವು. ಕೆಲವನ್ನು ಅಲ್ಲೇ ತಿಂದೆವು.

ಮೊದಲೆಲ್ಲ ಕೂಡು ಕುಟುಂಬಗಳಲ್ಲಿ ಬೆಳೆದ ಮಕ್ಕಳಿಗೆ ಒಂದಿಡೀ ಆ್ಯಪಲ್‌ ಅನ್ನು ಕಚ್ಚಿ ತಾನೊಬ್ಬನೇ ತಿನ್ನಬೇಕು ಎನ್ನುವ ಕನಸಿರುತ್ತಿತ್ತು. ಅದಕ್ಕೆ ಕಾರಣ ಮನೆಯಲ್ಲಿ ಜಾಸ್ತಿ‌ ಜನ‌ ಇರುತ್ತಿದ್ದರಿಂದ ಒಂದು ಅಥವಾ ಎರಡು ಪೀಸ್ ಮಾತ್ರ ಸಿಗುತ್ತಿತ್ತು. ಹೀಗಾಗಿ ತಾನೊಬ್ಬನೇ ಒಂದು ಇಡಿಯ ಸೇಬುಹಣ್ಣನ್ನು ಕಚ್ಚಿ ತಿನ್ನಬೇಕು ಎಂಬ ಆಸೆಯಾಗುತ್ತಿತ್ತು. ಈ ಅನುಭವ ನಿಮಗೂ ಇರಬಹುದು. ನನಗಂತೂ ಮರದಿಂದ ಕಿತ್ತು ತಿನ್ನುವಾಗ ಅಕ್ಷರಶಃ ಇದೇ ಆಸೆಗಳು ನೆನಪಾಯಿತು.

ಹಿಮಾಚಲದಲ್ಲಿ ಬೇಲಿಯ ಗಿಡವೂ ಆ್ಯಪಲ್‌ ಮರವೇ ಆಗಿರುತ್ತದೆ. ನಾವು ಹೋದಾಗ ಬೆಟ್ಟದ ತಪ್ಪಲಿನ ತೋಟಗಳಲ್ಲಿ ಆ್ಯಪಲ್‌ ಕೊಯ್ಲು ಮುಗಿದಿದ್ದರೂ ಬೆಟ್ಟದ ಮೇಲೆ ಇನ್ನೂ ಮುಗಿದಿರಲಿಲ್ಲ. ಬೆಟ್ಟದ ಮೇಲೆ ಬೆಳೆದ ಹಣ್ಣುಗಳ ಕ್ವಾಲಿಟಿ ಹಾಗೂ ಸೈಜ್ ಯಾವಾಗಲೂ ದೊಡ್ಡದಿರುತ್ತದೆ. ರುಚಿಯೂ ಹೆಚ್ಚು. ಹೀಗಾಗಿ ಅವು ವಿದೇಶಕ್ಕೆ ರಪ್ತಾಗುತ್ತವೆ. ನಾವು ಮಾರುಕಟ್ಟೆಯಲ್ಲಿ ನೋಡುವ ಹಣ್ಣಿಗಿಂತ ಇನ್ನು ದೊಡ್ಡಕೆ, ಕಪ್ಪು ಕೆಂಪಗಿನ ಬಣ್ಣದಲ್ಲಿರುತ್ತವೆ. ನಮ್ಮ ಅದೃಷ್ಟಕ್ಕೆ ಆ ಹಣ್ಣುಗಳು ಸಿಕ್ಕವು. ಬೆಟ್ಟದ ಮೇಲಿಂದ ಕೊಯ್ಲು ಮಾಡಿ ಟೆಂಪೋದಲ್ಲಿ ತರುತ್ತಿದ್ದ ಡ್ರೈವರ್ ಗಳು ನಮ್ಮನ್ನು ನೋಡಿ ತಾವಾಗಿಯೇ ತೆಗೆದು ಕೊಟ್ಟರು. ನಮಗೆ ಖುಷಿಯೋ ಖುಷಿ. ಆಮೇಲೆ ದಿನ ಕಳೆದಂತೆ ಅರ್ಥವಾಗಿದ್ದೇನೆಂದರೆ ಹಿಮಾಚಲದಲ್ಲಿ ಆ್ಯಪಲ್‌ ಸೀಸನ್ ನಲ್ಲಿ ಯಾರು ಸಿಕ್ಕರೂ ಆ್ಯಪಲ್‌ ಕೊಡುತ್ತಾರೆ ಎನ್ನುವುದು. ಟ್ಯಾಕ್ಸಿ ಡ್ರೈವರ್ ಇದು ನಮ್ಮದೇ ತೋಟದ ಹಣ್ಣು ತಗೊಳಿ ಎನ್ನುತ್ತಾ ರುಚಿ ರುಚಿಯಾದ ಆ್ಯಪಲ್‌ ತೆಗೆದು ಕೊಟ್ಟ.

ಮತ್ತೊಬ್ಬ ತನ್ನದೇ ತೋಟದ ಟೊಮ್ಯಾಟೊ ಮಾರಲು ಹೊರಟವ ಈ ಆ್ಯಪಲ್‌ ತಗೊಳ್ಳಿ ಎಂದು ಫ್ರೀಯಾಗಿ ಕೊಟ್ಟ. ಅದೇ ಊರಲ್ಲಿ ಒಬ್ಬರ ಮನೆಗೆ ಹೋದರೆ ಅವರೂ ಆ್ಯಪಲ್‌ಗಳನ್ನು ಕಟ್ ಮಾಡಿ ಕೊಟ್ಟರು. ಇಷ್ಟು ಆ್ಯಪಲ್‌ ಆತಿಥ್ಯ ಕಂಡ ನಮಗೆ ನಿಜವಾಗಿಯೂ ಆ್ಯಪಲ್‌ ಫೋನ್ ಒಂದು ಕ್ಷಣವೂ ನೆನಪಾಗಲಿಲ್ಲ. ಏಕೆಂದರೆ ನಿಜವಾದ ಆ್ಯಪಲ್‌ನ ಸ್ವಾದ ಹಾಗಿತ್ತು.

ವಿದೇಶಗಳಲ್ಲಿ ಆ್ಯಪಲ್‌ ಪಿಕ್ಕಿಂಗ್ ಎಂದೇ ವಿಶೇಷವಾಗಿ ಸೆಲಬ್ರೇಟ್ ಮಾಡಲಾಗುತ್ತದೆ. ಜನ ಬೇರೆಯವ ಆ್ಯಪಲ್‌ ಆರ್ಚರ್ಡ್‌ಗಳಿಗೆ ಹೋಗಿ ತಾವೇ ತಮಗೆ ಬೇಕಾದಷ್ಟು ಹಣ್ಣುಗಳನ್ನು ಕಿತ್ತು, ಹಣ ತೆತ್ತು ಬರುತ್ತಾರೆ. ನಮ್ಮಲ್ಲಿ ಹೀಗೆ ಮಾಡಿದರೆ ಏನಾಗುತ್ತದೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ. ಹೀಗಾಗಿ ಎಷ್ಟೋ ಇಂಥ ಸುಂದರ ಅನುಭವಗಳು ನಮಗೆ ತಪ್ಪಿ ಹೋಗುತ್ತವೆ. ಅದೇನೇ ಇದ್ದರೂ ಆ್ಯಪಲ್‌ ಅನ್ನು ಮರದಿಂದ ಕಿತ್ತು ತಿನ್ನುವ ಮಜವೇ ಬೇರೆ.

Untitled design - 2026-10-28T122014.698

ಆ್ಯಪಲ್‌ ಕೆಜಿಗೆಷ್ಟು?

ಹಿಮಾಚಲ, ಕಾಶ್ಮೀರಗಳಲ್ಲೆಲ್ಲ ಆ್ಯಪಲ್‌ ಅನ್ನು ಪರಿಚಯಿಸಿದ್ದು ಬ್ರಿಟಿಷರು. ಅಲ್ಲಿನ ತಂಪು ವಾತಾವರಣ ನೋಡಿ ಈಗೊಂದು ಇನ್ನೂರೈವತ್ತು ವರ್ಷಗಳ ಹಿಂದೆ ಯುರೋಪಿನಿಂದ ಕೆಲವು ಸೇಬು ಗಿಡಗಳನ್ನು ಬ್ರಿಟಿಷರು ತಂದು ನೆಡುತ್ತಾರೆ. ಅಲ್ಲಿಂದ ಆರಂಭವಾದ ಸೇಬು ಕೃಷಿ ಇಂದು ಇವೆರಡೂ ರಾಜ್ಯಗಳನ್ನು ಸೇಬು ಬೆಳೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇರಿಸಿದೆ. ಕಾಶ್ಮೀರದಲ್ಲಿ ಭಾರತದ ಶೇ.75ರಷ್ಟು ಸೇಬು ಬೆಳೆದರೆ, ಉಳಿದ ಶೇ.25ರಷ್ಟು ಹಿಮಾಚಲದಲ್ಲಿ ಬೆಳೆಯಲಾಗುತ್ತದೆ.

ರೈತರಿಗೆ ಏನು ಸಿಗುತ್ತಿದೆ?

ಎಲ್ಲ ಕಡೆಯಂತೆ ಇಲ್ಲಿಯೂ ರೈತರಿಗೆ ಅನ್ಯಾಯವೇ ಆಗುತ್ತಿದೆ. ಬೆಂಗಳೂರು, ಮುಂಬೈ, ದೆಹಲಿಯಂಥ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಆ್ಯಪಲ್‌ಗಳ ರೇಟ್ ಇಲ್ಲಿನ ರೈತರಿಗೆ ಸಿಗುತ್ತಿಲ್ಲ. ನಾವು ಆ್ಯಪಲ್‌ ಮಂಡಿಗೆ ಭೇಟಿ ಕೊಟ್ಟು ನೋಡಿದಾಗ ತಿಳಿದಿದ್ದೇನೆಂದರೆ, ನಾವೆಲ್ಲ ಇಲ್ಲಿ ಕೆಜಿಗೆ ರು. 301, ರು. 280 ಕೊಟ್ಟು ಖರೀದಿಸುವ ಆ್ಯಪಲ್‌ ಅಲ್ಲಿ ಕೇವಲ‌ 45 ರುಪಾಯಿಗೆ ಸಿಗುತ್ತಿದೆ. ಅಲ್ಲಿಂದ ಪ್ಯಾಕಿಂಗ್ ಆಗಿ, ಟ್ರಾನ್ಸಪೋರ್ಟ್ ಆಗಿ, ದೆಹಲಿಗೆ ಬಂದು ಅಲ್ಲಿ ಮತ್ತೆ ರಿಪ್ಯಾಕ್ ಆಗಿ ನಮಗೆ ಬರುವಷ್ಟರಲ್ಲಿ ಸೇಬಿನ‌ ಬೆಲೆ ಮೂರು ಪಟ್ಟು ಏರಿರುತ್ತದೆ. ಆದರೆ ರೈತರಿಗೆ ಈ ಬೆಲೆ ಸಿಗುವುದಿಲ್ಲ.

ಮಂಡಿಯಲ್ಲಿ ಸಣ್ಣ ಸೈಜಿನ‌ ಸೇಬು ಕೆಜಿಗೆ 8 ರುಪಾಯಿಂದ ಶುರುವಾಗಿ, 12 ರುಪಾಯಿ/ಕೆಜಿ, 17 ರುಪಾಯಿ/ಕೆಜಿ, 45 ರುಪಾಯಿ/ಕೆಜಿ ಹೀಗೆ ಆಯಾ ಕ್ವಾಲಿಟಿ ಮೇಲೆ ಬೆಲೆ ನಿಗದಿಯಾಗುತ್ತದೆ. ಅತ್ಯುತ್ತಮ ಗುಣಮಟ್ಟದ ವಿದೇಶಕ್ಕೆ ರಫ್ತಾಗುವ ಸೇಬು ಬೆಲೆ 85 ರುಪಾಯಿಗಳು ಅಷ್ಟೇ! ಹೀಗಾಗಿ ರೈತರಿಗೆ ಏನೂ ಲಾಭವಿಲ್ಲ. ಇವೇ ಹಣ್ಣುಗಳು ಮಾರ್ಕೆಟ್ ಗೆ ಬಂದಾಗ ದುಪ್ಪಟ್ಟು, ಮೂರು ಪಟ್ಟು ಬೆಲೆ ಏರಿಕೆಯಾಗಿರುತ್ತದೆ.

ಆ್ಯಪಲ್‌ ಉಪ್ಪಿನಕಾಯಿ!

ನಮಗೆ ಸೇಬು ಹಣ್ಣನ್ನು ಹೆಚ್ಚಿ ತಿನ್ನುವುದಷ್ಟೇ ಗೊತ್ತು. ಆದರೆ ಸ್ಥಳೀಯರು ಅದರಿಂದ ಉಪ್ಪಿನಕಾಯಿ ಮಾಡುತ್ತಾರೆ! ಚಟ್ನಿ‌ಮಾಡುತ್ತಾರೆ. ಜಾಮ್ ಮಾಡುತ್ತಾರೆ. ಪುಡಿಂಗ್ ಮಾಡುತ್ತಾರೆ. ಆ್ಯಪಲ್‌ ಒಣಗಿಸಿ ಡ್ರೈ ಫ್ರೂಟ್ ಥರ ಮಾಡುತ್ತಾರೆ‌. ಉಪ್ಪಿನಕಾಯಿ, ಚಟ್ನಿ‌ಮಾಡಲು ವಿಶೇಷವಾಗಿ ಗ್ರೀನ್ ಆ್ಯಪಲ್‌ ಬಳಸುತ್ತಾರೆ. ಗ್ರೀನ್ ಆ್ಯಪಲ್‌ನಲ್ಲಿ ಹುಳಿ ಅಂಶವಿರುತ್ತದೆ. ಹೀಗಾಗಿ ಹೆಚ್ಚು ದಿನ‌ಬಾಳಿಕೆ ಬರುತ್ತದೆ. ಕೆಂಪು ಸೇಬು ಕೊಯ್ಲು ಮುಗಿದ ಮೇಲೆ ಗ್ರೀನ್ ಆ್ಯಪಲ್‌ ಸೀಸನ್ ಶುರುವಾಗುತ್ತದೆ. ಇವುಗಳನ್ನು ಕೊಯ್ದು ಇಟ್ಟರೆ ಜನವರಿವರೆಗೂ ಕೆಡುವುದಿಲ್ಲ. ಹಾಗೆಯೇ ಹೊರಗಿನ ವಾತಾವರಣಕ್ಕೆ ಇಡಬಹುದು.