• ವಾಣಿ ಸುರೇಶ್ ಕಾಮತ್

ಪ್ರಪ್ರ ಸಂಚಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನ ಓದಿ ಮಹಿಳೆಯರು ಪ್ರತಿಕ್ರಿಯಿಸುತ್ತಿರುತ್ತಾರೆ. ನಾನು ಗಮನಿಸಿದ ಅಂಶವೆಂದರೆ ಅವರೆಲ್ಲರ ಪ್ರಶ್ನೆಗಳು ಹಣಕಾಸು ಮತ್ತು ಸಾಂಸಾರಿಕ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತವೆ. ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಬಗ್ಗೆ ಕೇಳುಗರೇ ಇಲ್ಲ! ಅಪರಿಚಿತ ಜನರೊಂದಿಗೆ ಪ್ರವಾಸ ಹೋದಾಗ ಆತ್ಮನಿರ್ಭರರಾಗಿ ಇರಬೇಕು. ಒಂಟಿ ಮಹಿಳೆ ಎನ್ನುವ ಅನುಕಂಪದ ಕಾರ್ಡ್‌ ಎಲ್ಲಾ ಸಮಯದಲ್ಲೂ ಕೆಲಸ ಮಾಡದು. ಟೂರ್ ಮ್ಯಾನೆಜರ್ಸ್‌ ಇರುವರಾದರೂ ನಮ್ಮ ಎಲ್ಲಾ ಜವಾಬ್ದಾರಿಗಳನ್ನು ಹೊರುವುದು ಅವರ ಕೆಲಸವಲ್ಲ.

ಇದನ್ನೂ ಓದಿ:ಜಪಾನ್‌ನಲ್ಲಿ ಹೆಮ್ಮೆಯ ಕನ್ನಡತಿ ಶ್ವೇತಾ ಆರಾಧ್ಯಾ

ಪ್ರಯಾಣ ಆರಂಭವಾಗುವುದೇ ಲಗೇಜನ್ನು ಪ್ಯಾಕಿಂಗ್ ಮಾಡುವ ಮೂಲಕ. ಎರಡು ದಿನಗಳ ಪ್ರವಾಸವಾದರೂ ಎರಡು ಬ್ಯಾಗುಗಳು ನಮ್ಮ ಹೆಗಲೇರುವುದು ಗ್ಯಾರಂಟಿ. ನಾನು ಧರಿಸುವ ಪ್ರತಿ ಬಟ್ಟೆಗೆ ಹೊಂದುವ ಚಪ್ಪಲಿ ಮತ್ತು ಹ್ಯಾಂಡ್ ಬ್ಯಾಗುಗಳನ್ನೂ ಹೊತ್ತೊಯ್ಯುತ್ತೇನೆ! ಹಾಗಾಗಿ ಒಂದು ವಾರದ ಪ್ರವಾಸಕ್ಕೆ 15- 20 ಕೆಜಿ ತೂಕ ಹೊರಬೇಕಾಗುತ್ತದೆ. ಈವರೆಗೂ ನಾನು ವಿಮಾನದ ಮೂಲಕವೇ ಪ್ರವಾಸ ಹೋಗಿರುವುದರಿಂದ ಸೂಟ್ಕೇಸ್‌ ಎಳೆದುಕೊಂಡೇ ಹೋಗಿದ್ದೇನೆ. ಬಸ್‌ ಅಥವಾ ರೈಲು ಪ್ರಯಾಣ ಮಾಡುವಾಗ ದೈಹಿಕ ಕ್ಷಮತೆ ಎಷ್ಟು ಮುಖ್ಯ ಎಂದು ಅರಿವಾಗುತ್ತದೆ.

Untitled design (49)

ಸೋಲೋ ಟ್ರಿಪ್‌ ಹೊರಾಟಾಗ

ಒಂಟಿಯಾಗಿ ಪ್ರವಾಸ ಹೊರಟಾಗ ನಮ್ಮ ಲಗೇಜ್‌ ಹೊತ್ತು ನಡೆಯಲು ನಾವು ಶಕ್ತರಿರಬೇಕು. ಕಿಮೀಗಟ್ಟಲೆ ನಡೆಯಲು, ನೂರಾರು ಮೆಟ್ಟಿಲುಗಳನ್ನು ಹತ್ತಿ ಇಳಿಯಲು ಕಾಲುಗಳು ಬಲವಾಗಿರಬೇಕು. ಅಪ್ಪರ್ ಬರ್ತ್‌ಗಳನ್ನು ಸಲೀಸಾಗಿ ಹತ್ತಿ, ಇಳಿಯಲು ತಯಾರಿರಬೇಕು. ನೀರಿನ ಮೇಲೆ ಅಲುಗಾಡುತ್ತಿರುವ ಬೋಟನ್ನು ಹತ್ತುವಾಗ ದೇಹವನ್ನು ಬ್ಯಾಲೆನ್ಸ್ ಮಾಡಲು ತಿಳಿದಿರಬೇಕು. ನೂಕುನುಗ್ಗಲಿನಲ್ಲಿ ಸಿಕ್ಕಿಹಾಕಿಕೊಂಡರೆ ನೆಲಕ್ಕೆ ಬೀಳದಂತೆ ಧೃಡವಾಗಿ ನಿಲ್ಲುವಷ್ಟು ಸಬಲರಾಗಿರಬೇಕು. ಒಂದು ವೇಳೆ ಬಿದ್ದರೂ ಟಕ್ಕನೆ ಎದ್ದೇಳುವಷ್ಟು ಚುರುಕಾಗಿರಬೇಕು. ಅಪಾಯಕಾರಿ ಪರಿಸ್ಥಿತಿಗಳು ಎದುರಾದರೆ ಯಾರ ಸಹಾಯಕ್ಕೂ ಕಾಯದೆ, ನಮ್ಮನ್ನು ನಾವೇ ರಕ್ಷಿಸಿಕೊಳ್ಳುವಂತಿರಬೇಕು. ಯಾವುದೇ ವ್ಯಕ್ತಿ ತೊಂದರೆ ಕೊಡುತ್ತಿದ್ದರೆ ಆತನ ಕಪಾಳಕ್ಕೆ ಎರಡು ಬಾರಿಸಿ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಕೊಡುವಷ್ಟು ಧೈರ್ಯಶಾಲಿ ಆಗಿರಬೇಕು. ಇವುಗಳಲ್ಲಿ ಎರಡ್ಮೂರು ಅಂಶಗಳು ಖಂಡಿತವಾಗಿಯೂ ಪ್ರವಾಸದ ಸಮಯದಲ್ಲಿ ಎದುರಿಸಬೇಕಾಗುತ್ತದೆ.

ಮನೆಗೆಲಸ ವ್ಯಾಯಾಮವಲ್ಲ

ದಿನನಿತ್ಯವೂ ಕನಿಷ್ಟ ಅರ್ಧಗಂಟೆಯಾದರೂ ಕಡ್ಡಾಯವಾಗಿ ದೈಹಿಕ ವ್ಯಾಯಾಮ ಮಾಡಬೇಕು. ಮನೆಗೆಲಸ ಮಾಡಿದರೆ ಸಾಕು, ಅದೇ ವ್ಯಾಯಾಮ ಎನ್ನುವ ಅನಿಸಿಕೆ ಹೆಚ್ಚಿನ ಮಹಿಳೆಯರದ್ದು. ಆದರೆ, ಅದು ನಿಜವಲ್ಲ. ಕೂಡುಕುಟುಂಬಗಳೇ ಇದ್ದ ಕಾಲಕ್ಕೆ ತೋಟ-ಗದ್ದೆಯ ಕೆಲಸಗಳಿದ್ದಾಗ, ದೈಹಿಕ ಶ್ರಮವನ್ನು ಬೇಡುವ ಕಾರ್ಯಗಳೇ ಹೆಚ್ಚಿದ್ದವು. ಅವುಗಳನ್ನು ಮಾಡಿಯೇ ಅಂದಿನ ಮಹಿಳೆಯರು ಗಟ್ಟಿಮುಟ್ಟಾಗಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಪುಟ್ಟ ಮನೆಯನ್ನು ಗುಡಿಸಿ, ಕೋಲು ಹಿಡಿದು ನೆಲ ಸಾರಿಸಿ, ಒಂದಿಬ್ಬರ ಬಟ್ಟೆ ತೊಳೆದರೆ ಅದರಿಂದ ಎಷ್ಟು ವ್ಯಾಯಾಮ ದೊರಕೀತು!

ವಾಕಿಂಗ್‌ ಮಾಡೋದು ಉತ್ತಮ

ಹಾಗೆಯೇ ತರಕಾರಿ, ದಿನಸಿ ತರಲು ಹತ್ತಿರದ ಅಂಗಡಿಗಳಿಗೆ ನಡೆದುಕೊಂಡು ಹೋಗುವುದು, ಪಾರ್ಕಿನಲ್ಲಿ ಹರಟೆ ಹೊಡೆಯುತ್ತಾ ಮೆಲ್ಲನೆ ನಡೆಯುವುದನ್ನು ‘ವಾಕಿಂಗ್’ ಎಂದು ಕರೆಯಲಾಗದು. ಉಸಿರಾಟ ಮತ್ತು ನಡಿಗೆಯ ಮೇಲೆ ಗಮನವಿರಿಸಿ, ನಮ್ಮ ದೈಹಿಕ ಕ್ಷಮತೆಗೆ ತಕ್ಕಂತೆ ವೇಗವಾಗಿ ನಡೆದಾಗ ಮಾತ್ರ ವಾಕಿಂಗ್ ವ್ಯಾಯಾಮ ಅನಿಸಿಕೊಳ್ಳುತ್ತದೆ. ವಾಕಿಂಗ್ ಒಂದು ವ್ಯಾಯಾಮ ಹೌದೋ, ಅಲ್ಲವೋ ಎನ್ನುವುದೂ ಬಹು ಚರ್ಚಿತ ವಿಷಯ. ವಾದಗಳು ಏನೇ ಇದ್ದರೂ ಕಾಲುಗಳು ಸಧೃಡವಾಗಿ, ಇಡೀ ದೇಹಕ್ಕೆ ರಕ್ತ ಪೂರೈಕೆಯನ್ನು ಮಾಡಲು ಹೃದಯಕ್ಕೆ ಸಹಾಯ ಮಾಡುವುದಂತೂ ನಿಜ. ವಾಕಿಂಗಿನಂತೆ ಯೋಗಾಭ್ಯಾಸವೂ ಗೃಹಿಣಿಯರು ಮೆಚ್ಚುವಂಥದ್ದು. ಶಿಸ್ತುಬದ್ಧವಾಗಿ ಮಾಡುವ ಯೋಗಾಸನಗಳು ದೇಹವನ್ನು ಬಾಗಿ, ಬಳುಕುವಂತೆ ಮಾಡಲು ಸಹಾಯ ಮಾಡುತ್ತವೆ.

Untitled design (48)

ಡು ಜಿಮ್‌ ಯಾ

ಜಿಮ್ ಎಂದರೆ ಅದೇಕೋ ಭಾರತೀಯ ಮಹಿಳೆಯರಿಗೆ ಹಿಂಜರಿಕೆ. ಸ್ಟ್ರೆನ್ತ್ ಟ್ರೈನಿಂಗ್ ಎಂದಾಕ್ಷಣ ಅದು ಕೇವಲ ಭಾರ ಹೊರುವುದು ಎಂಬ ನಂಬಿಕೆ. ಆದರೆ, ಈ ತೂಕದ ಕಲ್ಲುಗಳೇ ನಮ್ಮ ಮೂಳೆಗಳನ್ನು ಸಧೃಡಗೊಳಿಸಿ, ಸ್ನಾಯುಗಳಿಗೆ ಒಂದು ಸುಂದರ ರೂಪವನ್ನು ನೀಡಿ, ನಮ್ಮೊಳಗೆ ಆತ್ಮವಿಶ್ವಾಸವನ್ನು ತುಂಬುವುದಂತೂ ನೂರಕ್ಕೆ ಇನ್ನೂರರಷ್ಟು ಸತ್ಯ. ಪ್ರವಾಸದ ಸಮಯದಲ್ಲಿ ಭಾರವಾದ ಲಗೇಜನ್ನು ಹೊತ್ತೊಯ್ಯಲು ಸ್ಟ್ರೆನ್ತ್ ಟ್ರೈನಿಂಗ್ ತುಂಬಾ ಸಹಕಾರಿ. ಯೋಗ ಹಾಗೂ ಜಿಮ್- ಇವೆರಡನ್ನು ತರಬೇತಿ ಪಡೆದವರಿಂದಲೇ ಕಲಿಯಬೇಕು. ನಮಗಿರುವ ಆರೋಗ್ಯದ ಸಮಸ್ಯೆಗಳನ್ನು ಮೊದಲೇ ಇವರೊಂದಿಗೆ ಚರ್ಚಿಸಿ, ನಮ್ಮ ಶರೀರಕ್ಕೆ ಒಗ್ಗುವಂಥಾ ವ್ಯಾಯಾಮಗಳನ್ನು ಮಾತ್ರ ಮಾಡಿದರಾಯಿತು. ಇನ್ನು ಏರೋಬಿಕ್ಸ್, ಜುಂಬಾ ತರಗತಿಗಳಿಗೆ ಧಾರಾಳವಾಗಿ ಆನ್‌ಲೈನ್‌ ತರಗತಿಗಳನ್ನು ಸೇರಿಕೊಳ್ಳಿ. ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ ದೇಹ, ಮನಸು ಎರಡೂ ಖುಷ್ ಆಗುತ್ತವೆ. ಇಂಥ ವ್ಯಾಯಾಮಗಳ ಜತೆಗೆ ಸಮತೋಲಿತಾಹಾರ ಸೇವನೆಗೆ ಒತ್ತುನೀಡಿ.

ಉತ್ತಮ ವ್ಯಾಯಾಮ, ಸಮತೋಲಿತ ಆಹಾರ ದೇಹ ಮತ್ತು ಮನಸನ್ನು ಸದೃಢವಾಗಿಸುತ್ತದೆ ಮತ್ತು ಚುರುಕುಗೊಳಿಸುತ್ತದೆ. ಪ್ರಯಾಸಗಳೇ ಇಲ್ಲದೆ ಪ್ರವಾಸ ಮಾಡಬಹುದು.

  • ಮಹಿಳೆಯರು ಪ್ರವಾಸಕ್ಕೆ ದೇಹ ಮತ್ತು ಮನಸನ್ನು ಸಜ್ಜುಗೊಳಿಸಿಕೊಳ್ಳಬೇಕು.
  • ಒಂಟಿ ಮಹಿಳೆ ಎನ್ನುವ ಅನುಕಂಪದ ಕಾರ್ಡ್‌ ಎಲ್ಲೆಡೆ ನಡೆಯೋದಿಲ್ಲ.
  • ಒಂದು ವಾರದ ಪ್ರವಾಸಕ್ಕೆ 15- 20 ಕೆಜಿ ತೂಕ ಹೊರಬೇಕಾಗುತ್ತದೆ.
  • ಯಾವುದೇ ವ್ಯಕ್ತಿ ತೊಂದರೆ ಕೊಟ್ಟರೆ ಆತನ ಕಪಾಳಕ್ಕೆ ಎರಡು ಬಾರಿಸುವ ಧೈರ್ಯವಿರಲಿ.
  • ಮನೆಗೆಲಸ ವ್ಯಾಯಾಮವಲ್ಲ.
  • ಯೋಗಾ, ವಾಕಿಂಗ್‌, ವ್ಯಾಯಾಮ, ಏರೋಬಿಕ್ಸ್, ಜುಂಬಾ, ಸಮತೋಲಿತ ಆಹಾರಕ್ಕೆ ಒತ್ತು ನೀಡಿ