ಮಕ್ಕಳಿಗೆ ಈಗ ಬೇಸಗೆ ರಜೆಯ ಸಂಭ್ರಮ. ಸುಡು ಬಿಸಲಿದ್ದರೂ ಸುತ್ತಾಟಕ್ಕೇನೂ ಕಮ್ಮಿ ಇಲ್ಲ ಎನ್ನುವ ಹಾಗೆ ಶಾಲೆ, ಪಾಠ, ಮನೆ ಪಾಠ ಎಲ್ಲದಕ್ಕೂ ಬ್ರೇಕ್‌ ಹಾಕಿ ತಲೆ ಮೇಲೊಂದು ಟೋಪಿ ಹಾಕಿಕೊಂಡು ನೀರಿನ ಬಾಟಲ್‌, ಕುರುಕಲು ತಿಂಡಿಗಳನ್ನು ತುಂಬಿರುವ ಬ್ಯಾಗ್‌ ಹೆಗಲಿಗೇರಿಸಿ ಹೊರಡೋಣ ಎಂದುಬಿಡುತ್ತಾರ. ಆದರೆ ಮಕ್ಕಳ ಜತೆಗಿನ ಪ್ರವಾಸ ಬರಿಯ ಕಾಲಹರಣಕ್ಕಷ್ಟೇ ಸೀಮಿತವಾ? ಖಂಡಿತಾ ಅಲ್ಲ. ಪ್ರಕೃತಿಯೊಂದಿಗೆ ಬೆರೆಯುವುದಕ್ಕೆ, ಸಮಾಜದ ಬಗ್ಗೆ ತಿಳಿಯುವುದಕ್ಕೆ, ಪ್ರವಾಸಿ ತಾಣಗಳ ಬಗೆಗೆ ಜ್ಞಾನ ಹೊಂದುವುದಕ್ಕೆ ಹೀಗೆ ಅನೇಕ ವಿಚಾರಗಳಲ್ಲೂ ಸಹಕಾರಿಯಾಗಲಿದೆ.

ಹಾಗಾದರೆ ಬೆಂಗಳೂರಿನ ಸುತ್ತಮುತ್ತಲೂ ಈ ಬೇಸಗೆ ರಜೆಯಲ್ಲಿ ಮಕ್ಕಳ ಜತೆಗೆ ಭೇಟಿ ನೀಡಲು ಯೋಗ್ಯವಾದ ತಾಣಗಳು ಯಾವುವು ? ಈ ಪ್ರಶ್ನೆಗೆ ಉತ್ತರವೆಂಬಂತೆ ಅನೇಕ ಪಾರ್ಕ್‌ಗಳು, ವಿಜ್ಞಾನ ಕೇಂದ್ರಗಳು, ಪ್ರಾಣಿ ಉದ್ಯಾನಗಳು ಮತ್ತು ಮನರಂಜನಾ ಸ್ಥಳಗಳು ಹೀಗೆ ಲೆಕ್ಕವಿಲ್ಲದಷ್ಟು ಆಯ್ಕೆಗಳು ಮಕ್ಕಳಿಗಾಗಿ ಲಭ್ಯವಿದೆ. ಈ ಸ್ಥಳಗಳು ಮಕ್ಕಳಿಗೆ ಕೇವಲ ಆಟವಷ್ಟೇ ಅಲ್ಲದೆ, ಶಿಕ್ಷಣ ಮತ್ತು ಪ್ರಕೃತಿ ಅರಿವನ್ನೂ ನೀಡುತ್ತವೆ.

ಇದನ್ನೂ ಓದಿ: ಮಕ್ಕಳೆ ಪ್ರವಾಸ ಮಾಡಿಬನ್ನಿ

ಕಬ್ಬನ್‌ ಪಾರ್ಕ್‌ನ ಸುತ್ತಮುತ್ತ

ಬೆಂಗಳೂರಿನಲ್ಲಿರುವ ಮಕ್ಕಳ ಸ್ನೇಹಿ ಪಾರ್ಕ್‌ ಗಳ ಪೈಕಿ ಪ್ರಮುಖವಾದುದು ಕಬ್ಬನ್‌ ಪಾರ್ಕ್‌ ಹಾಗೂ ಅಲ್ಲೇ ಇರುವ ಬಾಲಭವನ್.‌ ಬಿರುಬಿಸಿಲಿನಲ್ಲೂ ಕಬ್ಬನ್‌ ಪಾರ್ಕ್‌ ಹಸಿರಿನ ಸೀರೆಯನ್ನುಟ್ಟು ಮಕ್ಕಳ ಕಣ್ಣಿಗೂ ಮನಸಿಗೂ ಮುದ ನೀಡಿದರೆ, ಪಾರ್ಕಿನಲ್ಲೇ ಇರುವಂಥ ಬಾಲಭವನವಂತೂ ಮಕ್ಕಳ ನೆಚ್ಚಿನ ತಾಣವೆನಿಸಿಕೊಂಡಿದೆ.‌ ಬಾಲಭವನ ಪ್ರವೇಶ ಮಕ್ಕಳಿಗೆ ಉಚಿತವಾದರೂ ಮಕ್ಕಳಿಗಾಗಿಯೇ ಮೀಸಲಾದ ಟಾಯ್‌ ಟ್ರೈನ್‌, ಗೊಂಬೆ ಮ್ಯೂಸಿಯಂ, ಬೋಟಿಂಗ್‌ ಬಳಕೆಗೆ ಪ್ರತಿಹಂತದಲ್ಲೂ ಹೆಚ್ಚುವರಿ ಮೊತ್ತವನ್ನು ತೆರಲೇಬೇಕು.ಇದರ ಸಮೀಪದಲ್ಲೇ ಇರುವ ನಮ್ಮ ಬೆಂಗಳೂರು ಅಕ್ವೇರಿಯಂ ಸದ್ಯ ಬಹಳ ಸುದ್ದಿಯಲ್ಲಿದ್ದು, ಈ ಹಿಂದೆ ಸರ್ಕಾರಿ ಅಕ್ವೇರಿಯಂ ಎಂದು ಗುರುತಿಸಿಕೊಂಡಿತ್ತು. ಈ ಅಕ್ವೇರಿಯಂನಲ್ಲಿ ಕೃತಕ ವಾಟರ್‌ ಫಾಲ್ಸ್‌, ಟನಲ್‌ ಅಕ್ವೇರಿಯಂಗಳೂ ಇದ್ದು, ಇಲ್ಲಿ ಬ್ಲೂ ಫಾಂಗ್, ಡಿಸ್ಕಸ್ ಫಿಶ್, ಗೌರಾಮಿ, ಲಯನ್ ಫಿಶ್ ಮತ್ತು ಜೆಲ್ಲಿ ಫಿಶ್‌ಗಳಂಥ ವಿಶೇಷ ಪ್ರಭೇದಗಳು ಕಂಡುಬರುತ್ತವೆ.

Untitled design - 2026-04-22T114211.277

ವಿಜ್ಞಾನ ಕೇಂದ್ರಗಳೊಳಗೊಂದು ಪ್ರವಾಸ

ಅಕ್ವೇರಿಯಂನಿಂದ ಕಸ್ತೂರ್‌ ಬಾ ರಸ್ತೆಯಲ್ಲೇ ನಡಿಗೆಯ ಮೂಲಕ ತೆರಳಿದರೆ ವಿಶ್ವೇಶ್ವರಯ್ಯ ಇಂಡಸ್ರ್ಟಿಯಲ್‌ ಹಾಗೂ ಟೆಕ್ನಾಲಾಜಿಕಲ್‌ ಮ್ಯೂಸಿಯಂ ಮಕ್ಕಳಿಗೆ ವಿಜ್ಞಾನ ಪ್ರಪಂಚವನ್ನೇ ತೆರೆದಿರಿಸುತ್ತದೆ. ಕಲಿಕೆಯ ಜತೆಗೆ ವಿನೋದ ಎಂಬ ಉದ್ದೇಶದೊಂದಿಗೆ ನಿರ್ಮಿಸಲಾದ ಈ ವಸ್ತು ಸಂಗ್ರಹಾಲಯ ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಮಕ್ಕಳ ಕಲಿಕೆಗೆ ಪೂರಕವಾಗಿರುವ ಅನೇಕ ವಸ್ತುಗಳ ಪ್ರಾತ್ಯಕ್ಷಿಕೆಯನ್ನು ಇಲ್ಲಿ ಕಾಣಬಹುದು.

ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಹಾಗೂ ಅನೌಪಚಾರಿಕ ವಿಜ್ಞಾನ ಶಿಕ್ಷಣವನ್ನು ಪರಿಚಯಿಸುವ ಉದ್ದೇಶದೊಂದಿಗೆ ಪ್ರಾರಂಭವಾದ ಜವಾಹರ್‌ ಲಾಲ್‌ ನೆಹರು ತಾರಾಲಯದಲ್ಲಿ ಮಕ್ಕಳಿಗಾಗಿ ವಿಜ್ಞಾನ ವನ, ಪ್ರದರ್ಶನ ಕೊಠಡಿಗಳನ್ನೂ ನಿರ್ಮಿಸಿದ್ದು, ನಕ್ಷತ್ರ ವೀಕ್ಷಣೆ, ವಿಜ್ಞಾನ ಕಮ್ಮಟಗಳು, ದೂರದರ್ಶಕ ವೀಕ್ಷಣಾಲಯ ಹೀಗೆ ಹತ್ತು ಹಲವು ಅವಕಾಶಗಳನ್ನು ನೀಡುತ್ತಿದೆ. ತಾರಾಲಯದ ಕೂಗಳತೆಯ ದೂರದಲ್ಲೇ ಇರುವ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನವನ್ನು ಭೇಟಿ ಮಾಡಲು ಮರೆಯಬೇಡಿ.

ಇವಿಷ್ಟೇ ಅಲ್ಲದೆ ಮಕ್ಕಳಲ್ಲಿ ಅಡಗಿರುವ ವಿಜ್ಞಾನದ ಆಸಕ್ತಿಯ ಪೋಷಿಸುವ ನಿಟ್ಟಿನಲ್ಲಿ ಕ್ಯೂರಿಯಸ್‌ ಸಿಟಿ ಡಿಸ್ಕವರಿ ಸೆಂಟರ್‌ ಕಾರ್ಯನಿರ್ವಹಿಸುತ್ತಿದೆ. ವೈಮಾನಿಕ ತಂತ್ರಜ್ಞಾನಗಳಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಹೇಳುವಲ್ಲಿ ಹೆಚ್‌ಎಎಲ್‌ ಹೆರಿಟೇಜ್‌ ಸೆಂಟರ್‌ ಹಾಗೂ ಏರೋ ಸ್ಪೇಸ್‌ ಮ್ಯೂಸಿಯಂ ಯಶಸ್ವಿಯಾಗಿದೆ. ಅಲ್ಲದೆ ಭಾರತದ ಶ್ರೀಮಂತವಾದ ಸಂಗೀತ ಪರಂಪರೆಯನ್ನು ಸಂರಕ್ಷಿಸುವುದಕ್ಕಾಗಿ ರೂಪಪಡೆದ ಇಂಡಿಯನ್‌ ಮ್ಯೂಸಿಕ್‌ ಎಕ್ಸ್ಪೀರಿಯನ್ಸ್‌ ಮ್ಯೂಸಿಯಂ ಚಿಣ್ಣರ ಮನಸಿಗೆ ಕನ್ನ ಹಾಕಲಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನ- ಚಿಟ್ಟೆ ಪಾರ್ಕ್‌

ದಿನ ಪೂರ್ತಿ ಬಿಡುವು ಮಾಡಿಕೊಳ್ಳುವುದಾದರೆ ಮಕ್ಕಳ ಜತೆಗೆ ಜೈವಿಕ ಉದ್ಯಾನವನದ ಭೇಟಿ ನೀಡುವುದು ಬಹಳ ಒಳ್ಳೆಯ ಆಯ್ಕೆ. ಬೆಂಗಳೂರಿನಿಂದ 22 ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ವಿವಿಧ ಸಸ್ಯಗಳು ಹಾಗೂ ಪ್ರಾಣಿ, ಪಕ್ಷಿಗಳ ಆಶ್ರಯತಾಣವಾಗಿದೆ. ಇಲ್ಲಿ ಮಕ್ಕಳ ಉದ್ಯಾನವನ, ಮೃಗಾಲಯ, ಸಿಂಹದ ಸಫಾರಿ, ಹುಲಿಯ ಸಫಾರಿ, ಮೊಸಳೆ ಫಾರ್ಮ್‌, ಹಾವು ಉದ್ಯಾನವನ, ವಸ್ತುಸಂಗ್ರಹಾಲಯಗಳೂ ಇದ್ದು ಚಿಣ್ಣರ ನೆಚ್ಚಿನ ತಾಣವೆನ್ನಿಸಿಕೊಂಡಿದೆ. ಅಲ್ಲದೆ ಇಲ್ಲಿ ಸರಿ ಸುಮಾರು 7.5 ಎಕ್ರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಈ ಚಿಟ್ಟೆ ಉದ್ಯಾನವದಲ್ಲಿ ಅನೇಕ ವಿಶಿಷ್ಟ ಜಾತಿಯ ಚಿಟ್ಟೆಗಳನ್ನು ಕಾಣಬಹುದು.

Untitled design - 2026-04-22T114219.869

ವಂಡರ್‌ ಎನಿಸುವ ನೀರಾಟದ ತಾಣಗಳು

ನೀರಿನಲ್ಲಿ ಆಡಲು ಬಯಸುವ ಮಕ್ಕಳಿಗಾಗಿ ಬೆಂಗಳೂರಿನ ಸಮೀಪದಲ್ಲೇ ಇರುವ ʻವಂಡರ್‌ಲಾʼ ಉತ್ತಮ ಆಯ್ಕೆಯಾಗಿದೆ. ಇಲ್ಲಿ 60ಕ್ಕೂ ಹೆಚ್ಚು ರೈಡ್‌ಗಳು, ವಾಟರ್ ಸ್ಲೈಡ್ಸ್, ವೇವ್ ಪೂಲ್ ಮತ್ತು ವಿವಿಧ ಸಾಹಸ ಕ್ರೀಡೆಗಳೂ ಇದ್ದು, ಕುಟುಂಬದೊಂದಿಗೆ ಒಂದು ಪೂರ್ಣ ದಿನ ಕಳೆಯಲು ಅತ್ಯುತ್ತಮ ಸ್ಥಳ. ಅಲ್ಲದೆ ಬೋಟಿಂಗ್‌ ಅನುಭವಕ್ಕಾಗಿ ನಾಗವಾರಾ ಸರೋವರದ ಬಳಿ ಇರುವ ಲುಂಬಿನಿ ಗಾರ್ಡನ್‌, ಕೃತಕ ಹಿಮದ ವಾತಾವರಣಕ್ಕಾಗಿ ಸ್ನೋ ಸಿಟಿ ಹೀಗೆ ಮಕ್ಕಳ ಬೇಸಗೆ ರಜೆಯನ್ನು ಸಂಭ್ರಮಿಸುವುದಕ್ಕೆ ಸಾಕಷ್ಟು ತಾಣಗಳಿವೆ.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಮಕ್ಕಳಿಗೆ ಬೇಸಿಗೆ ರಜಾದಿನಗಳಲ್ಲಿ ಭೇಟಿ ನೀಡಲು ಅನೇಕ ಆಸಕ್ತಿದಾಯಕ ಸ್ಥಳಗಳಿವೆ. ಕುಟುಂಬದ ಜತೆಗೆ ಉತ್ತಮ ಸಮಯವನ್ನು ಕಳೆಯುವುದರ ಜತೆಗೆ ಮಕ್ಕಳಿಗೆ ಹೊಸ ಅನುಭವಗಳನ್ನು ಕಟ್ಟಿಕೊಡಲು ಈ ತಾಣಗಳು ನೆರವಾಗಲಿವೆ.