• ಮಂಜುನಾಥ ಡಿ. ಎಸ್.

ಇತ್ತೀಚಿನ ಪ್ರವಾಸ ಸಂದರ್ಭದಲ್ಲಿ ಸ್ಲೊವೇನಿಯ ದೇಶದ ಹಿರಿಯ ಮಹಿಳೆಯೊಬ್ಬರು ನಮ್ಮ ತಂಡದಲ್ಲಿದ್ದರು. ಅವರು ಭಾರತದಲ್ಲಿ ಕೆಲವು ತಿಂಗಳುಗಳ ಕಾಲ ಉಳಿದು, ಬೇರೆ ಬೇರೆ ಪ್ರವಾಸಿ ತಾಣಗಳನ್ನು ನೋಡಲು ಅಪೇಕ್ಷಿಸಿದ್ದರು. ಅದರ ಭಾಗವಾಗಿ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದಲ್ಲಿ ದೇಗುಲಗಳ ದರ್ಶನವೂ ಸೇರಿತ್ತು. ಅವರು ವಿಶೇಷ ಅಸಕ್ತಿವಹಿಸಿ ಇಲ್ಲಿನ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಲೂ ಪ್ರಯತ್ನಿಸುತ್ತಿದ್ದರು. ತಿಳಿದುಕೊಂಡ ಸಂಪ್ರದಾಯಗಳನ್ನು ಪಾಲಿಸುವುದರಲ್ಲೂ ಅವರು ನಮ್ಮ ತಂಡದಲ್ಲಿ ಮೊದಲಿಗರಾಗಿರುತ್ತಿದ್ದರು.

Untitled design - 2026-04-18T160102.171

ದೇವಸ್ಥಾನಗಳಲ್ಲಿ ಒಡೆದ ಕಾಯಿಯನ್ನು ನಾಲ್ಕೈದು ದಿನಗಳು ಕಾಪಾಡಿಕೊಂಡು ಮನೆಗೆ ಕೊಂಡೊಯ್ಯುವುದು ಕಷ್ಟ. ಇದೇ ಕಾರಣದಿಂದಲೋ ಏನೋ ತಂಡದಲ್ಲಿದ್ದ ಭಾರತೀಯರಲ್ಲಿ ಯಾರೂ ದೇವಾಲಯಗಳಲ್ಲಿ ಕಾಯಿ ಒಡೆಸಿ, ನೈವೇದ್ಯ ಅರ್ಪಿಸಲು ಮುಂದಾಗಲಿಲ್ಲ. ಆದರೆ, ಈ ವಿದೇಶಿ ಮಹಿಳೆ ಮಾತ್ರ ಬನಶಂಕರಿ ದೇವಾಲಯದಲ್ಲಿ ಕಾಯಿ ಒಡೆಸಿ ಪೂಜೆ ಮಾಡಿಸಿದರು. ಅಷ್ಟೇ ಅಲ್ಲದೆ, ಕಾಯಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ, ಪ್ರಸಾದ ತೆಗೆದುಕೊಳ್ಳಿ ಎಂದು ಹೇಳುತ್ತಾ, ತಾವೇ ಖುದ್ದಾಗಿ ಬಸ್‌ನಲ್ಲಿ ಇದ್ದ ಪ್ರತಿಯೊಬ್ಬರಿಗೂ ಆ ಕಾಯಿಯ ಸಣ್ಣ ಸಣ್ಣ ಚೂರುಗಳನ್ನು ಹಂಚಿದರು. ವಿದೇಶಿ ಮಹಿಳೆಯ ಈ ನಡೆ ತಂಡದ ಎಲ್ಲರನ್ನೂ ನಿಬ್ಬೆರಗಾಗಿಸಿತು. ಆಕೆಯ ಬಗೆಗಿನ ಗೌರವವನ್ನು ಇಮ್ಮಡಿಸುವಂತೆ ಮಾಡಿತು.

ಇದನ್ನೂ ಓದಿ: ಶುಕಮುನಿಗಳನ್ನು ವಿನಮ್ರವಾಗಿಸಲು ಪ್ರಯಾಣಕ್ಕೆ ಕಳಿಸಿದ ವ್ಯಾಸರು

ಈ ಅಪೂರ್ವ ಘಟನೆ ನನ್ನನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಕಾಯಿಯನ್ನು ಮನೆಗೆ ತೆಗೆದುಕೊಂಡು ಹೋಗುವುದು ಕಷ್ಟ ಎಂಬ ನಮ್ಮ ಸಂಕುಚಿತ ಅಲೋಚನೆಯನ್ನು, ಒಡೆಸಿದ ಕಾಯಿಯನ್ನು ಎಲ್ಲರಿಗೂ ಹಂಚಬಹುದು ಎನ್ನುವ ವಿಶಾಲ ಮನಸಿನಿಂದ ಪೂಜೆ ಮಾಡಿಸಿದ ಅವರ ನಿಸ್ವಾರ್ಥ ಮನೋಭಾವನೆ ಬದಲಿಸಿತು. ಮಾತಿಗಿಂತ ಕೃತಿಯ ಮೂಲಕ ಮಾಡಿತೋರಿಸುವುದರ ಮಹತ್ವವನ್ನು ಮನಗಾಣಿಸಿತು. ಭಾರತೀಯ ಸಂಪ್ರದಾಯ ಪಾಲಿಸಿದ ಆ ಹಿರಿಯ ಶರಣೆಗೆ ತಾನಾಗೇ ಶಿರಬಾಗಿತು.