ಮೊನ್ನೆ ಹೊಸ ವರ್ಷದ ಮೂರನೇ ದಿನ ಆಫ್ರಿಕಾದ ಉದ್ಯಾನವೊಂದರಲ್ಲಿ ಆನೆಯೊಂದು ಸತ್ತಿದ್ದು ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಯಿತು. ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ಪತ್ರಿಕೆಗಳು ಇದನ್ನು ಮುಖಪುಟದಲ್ಲಿ ದೊಡ್ಡದಾಗಿ ಚಿತ್ರಸಮೇತ ಪ್ರಕಟಿಸಿದವು.

ಒಂದು ಆನೆಯ ಸಾವು ಪ್ರತಿಷ್ಠಿತ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾದದ್ದಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಕಂಬನಿಯನ್ನೇ ಹರಿಸಿತು. ಸತ್ತಿದ್ದು ಅಂತಿಂಥ ಆನೆಯಲ್ಲ. ಅದು ಜಗತ್ತಿನ ಅತ್ಯಂತ ಸ್ಪುರದ್ರೂಪಿ, ಸ್ಟಾರ್ ಅಥವಾ ಸೆಲೆಬ್ರಿಟಿ ಸ್ಟೇಟಸ್ ಹೊಂದಿರುವ ಆನೆ. ಆ ಆನೆಯ ಸಾವಿಗೆ ಗಣ್ಯರೆನಿಸಿಕೊಂಡವರ ಶೋಕ ಸಂದೇಶವನ್ನು ನೋಡಿದ ನಂತರ ಆ ಆನೆಯ ಅಸಲಿ ವ್ಯಕ್ತಿತ್ವ ಗೊತ್ತಾಯಿತು.

ಆಫ್ರಿಕಾ ಖಂಡದ ಕೀನ್ಯಾದಲ್ಲಿರುವ ಅಂಬೋಸೆಲಿ ರಾಷ್ಟ್ರೀಯ ಉದ್ಯಾನವನ ದೈತ್ಯ ಆನೆಗಳಿಗೆ ಹೆಸರುವಾಸಿ. ಅಲ್ಲಿನ ಆನೆಗಳಲ್ಲಿ ಅತ್ಯಂತ ಆಕರ್ಷಕ ಮತ್ತು ಜನಪ್ರಿಯವಾಗಿದ್ದ ವನೇ ಕ್ರೇಗ್. ಆತ ‘ಸೂಪರ್ ಟಸ್ಕರ್’ ಎಂದೇ ಪ್ರಸಿದ್ಧ. ಅವನ ದಂತಗಳು ಅತಿ ವಿರಳಾತಿ ವಿರಳ, ಅತಿ ಸುಂದರ, ಅಚ್ಚರಿಯೆನಿಸುವಷ್ಟು ಉದ್ದ ಮತ್ತು ಭಾರವಾಗಿದ್ದವು.

ಜಗತ್ತಿನಾದ್ಯಂತ ಛಾಯಾಗ್ರಾಹಕರು ಮತ್ತು ಪ್ರವಾಸಿಗರು ಮೌಂಟ್ ಕಿಲಿಮಂಜಾರೋ ಪರ್ವತದ ಹಿನ್ನೆಲೆಯಲ್ಲಿ ಕ್ರೇಗ್‌ನ ಒಂದು ಫೋಟೋ ತೆಗೆಯಲು ಕಾದು ಕುಳಿತಿರುತ್ತಿದ್ದರು. ಅವನ ಒಂದು ವಿಶೇಷ ಪೋಸು ಸಿಕ್ಕರೆ ತಮ್ಮ ಪ್ರವಾಸ, ಪ್ರಯತ್ನ ಸಾರ್ಥಕ ಎಂದು ಭಾವಿಸುತ್ತಿದ್ದರು.

ಇದನ್ನೂ ಓದಿ: ಮ್ಯೂಸಿಯಂ ಟೂರಿಸಂ ಎಂಬ ಗಳಿಕೆಯ ಹೊಸ ಹಾದಿ

ಆತ ರಾಜಗಾಂಭೀರ್ಯದಲ್ಲಿ ನಡೆದು ಬರುತ್ತಿದ್ದರೆ, ಅದು ದೈವಿಕವಾಗಿ ಗೋಚರಿಸುತ್ತಿತ್ತು. ಆಗ ಅವನನ್ನು ದಿಟ್ಟಿಸಿ ನೋಡಬೇಕೋ, ಫೋಟೋ ಕ್ಲಿಕ್ಕಿಸಬೇಕೋ ಎಂಬ ಬಗ್ಗೆ ಗೊಂದಲ ವಾಗುತ್ತಿತ್ತು. ಕ್ರೇಗ್ ಹಾಗಿದ್ದ. ಜಗತ್ತಿನ ಅಗ್ರಮಾನ್ಯ ವನ್ಯಜೀವಿ ಛಾಯಾಗ್ರಾಹಕರು ಆತನ ಫೋಟೋ ಸೆರೆ ಹಿಡಿದು ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು.

ಕ್ರೇಗ್ ಜನಿಸಿದ್ದು ಜನವರಿ 1972ರಲ್ಲಿ. ಅವನ ತಾಯಿ ಅಂಬೋಸೆಲಿಯ ಪ್ರಸಿದ್ಧ ಉದ್ಯಾ ನವನದ ಕುಟುಂಬದ ನಾಯಕಿ ಕ್ಯಾಸಂಡ್ರಾ. 1970 ಮತ್ತು 80ರ ದಶಕಗಳಲ್ಲಿ ಆಫ್ರಿಕಾದಲ್ಲಿ ಆನೆಗಳ ಬೇಟೆ ವಿಪರೀತವಾಗಿತ್ತು. ದಂತವಿರುವ ಆನೆಗಳನ್ನು ಸಾಯಿಸದೇ ಬಿಡುತ್ತಿರಲಿಲ್ಲ. ಆ ಸಮಯದಲ್ಲಿ ಜನಿಸಿದ ಕ್ರೇಗ್, ಬೇಟೆಗಾರರ ಕಣ್ಣಿಗೆ ಬೀಳದೇ ಬದುಕುಳಿದದ್ದು ಒಂದು ಅದ್ಭುತವೇ ಸರಿ.

Super Tusker 2

ಅವನ ಆರಂಭಿಕ ವರ್ಷಗಳು ಕಠಿಣವಾಗಿದ್ದರೂ, ಕೀನ್ಯಾ ವನ್ಯಜೀವಿ ಸೇವೆ ಮತ್ತು ಸ್ಥಳೀಯ ಮಸಾಯಿ ಸಮುದಾಯದವರ ಜಾಗರೂಕತೆಯಿಂದ ಅವನು ಬಚಾವ್ ಆದ. ಕ್ರೇಗ್‌ನ ದಂತಗಳು ನೆಲಕ್ಕೆ ತಾಗುವಷ್ಟು ಉದ್ದವಾಗಿದ್ದವು. ಅವನ ಪ್ರತಿಯೊಂದು ದಂತವು ಸುಮಾರು 45 ಕೆಜಿಗಿಂತಲೂ ಹೆಚ್ಚು ಭಾರವಿದ್ದವು. ದಂತಗಳು ಬಾಗಿ ನೆಲದ ಮೇಲೆ ತಾಗುವಷ್ಟು ಉದ್ದವಿದ್ದ ಕಾರಣ ಅವನ ನಡಿಗೆಯಲ್ಲಿ ಒಂದು ರೀತಿಯ ಗಾಂಭೀರ್ಯವಿತ್ತು.

ಆನೆಯ ಎರಡೂ ದಂತಗಳು ಮುರಿದುಹೋಗದೇ ಅಥವಾ ಸವೆದು ಹೋಗದೇ ಪೂರ್ಣ ಪ್ರಮಾಣದಲ್ಲಿ ಬೆಳೆದಿದ್ದು ಅವನ ವೈಶಿಷ್ಟ್ಯವಾಗಿತ್ತು. ಕ್ರೇಗ್ ತನ್ನ ಅಗಾಧ ಗಾತ್ರದ ಹೊರತಾಗಿಯೂ ಅತ್ಯಂತ ಶಾಂತ ಮತ್ತು ಸೌಮ್ಯ ಸ್ವಭಾವದವನಾಗಿದ್ದ. ಪ್ರವಾಸಿ ವಾಹನ ಗಳು ಅಥವಾ ವನ್ಯಜೀವಿ ಸಂಶೋಧಕರು ಹತ್ತಿರ ಬಂದಾಗಲೂ ಅವನು ಎಂದಿಗೂ ಆಕ್ರಮಣಕಾರಿಯಾಗಿ ವರ್ತಿಸುತ್ತಿರಲಿಲ್ಲ.

ಅವನ ಈ ತಾಳ್ಮೆಯೇ ಅವನನ್ನು ಪ್ರಪಂಚದ ಅತ್ಯಂತ ಹೆಚ್ಚು ಫೋಟೋ ತೆಗೆಸಿಕೊಂಡ ಆನೆಯನ್ನಾಗಿ ಮಾಡಿತು. ಅವನು ತನ್ನ ಗುಂಪಿನ ಇತರ ಕಿರಿಯ ಆನೆಗಳಿಗೆ ಮಾರ್ಗ ದರ್ಶಕನಾಗಿದ್ದ. ಆನೆಗಳ ಸಂಸ್ಕೃತಿಯಲ್ಲಿ ಹಿರಿಯ ಆನೆಗಳು ಹೇಗೆ ಕಿರಿಯರಿಗೆ ವರ್ತನೆ ಯನ್ನು ಕಲಿಸುತ್ತವೆ ಹಾಗೂ ಆಹಾರ ಮತ್ತು ನೀರಿನ ನೆಲೆಗಳನ್ನು ಹುಡುಕುವುದನ್ನು ಕಲಿಸುತ್ತವೆ ಎಂಬುದಕ್ಕೆ ಕ್ರೇಗ್ ಅತ್ಯುತ್ತಮ ಉದಾಹರಣೆಯಾಗಿದ್ದ.

ಕ್ರೇಗ್‌ನ ಕುತ್ತಿಗೆಗೆ ಅಳವಡಿಸಲಾಗಿದ್ದ ಜಿಪಿಎಸ್ ಕಾಲರ್ ಆತನ ರಕ್ಷಣೆಯ ಮೊದಲ ಕವಚ ವಾಗಿತ್ತು. ಈ ಕಾಲರ್ ಮೂಲಕ ಆತ ಅಂಬೋಸೆಲಿ ಉದ್ಯಾನವನದ ಯಾವ ಭಾಗ ದಲ್ಲಿದ್ದಾನೆ ಎಂಬುದು ಪ್ರತಿ ನಿಮಿಷವೂ ರೇಂಜರ್‌ಗಳ ನಿಯಂತ್ರಣ ಕೊಠಡಿಗೆ ತಿಳಿಯು ತ್ತಿತ್ತು.

ಉದ್ಯಾನವನದ ಸುತ್ತಲೂ ಡಿಜಿಟಲ್ ಗಡಿಯನ್ನು ಗುರುತಿಸಲಾಗಿತ್ತು. ಕ್ರೇಗ್ ಈ ಗಡಿಯನ್ನು ದಾಟಿ ರೈತರ ಜಮೀನುಗಳಿಗೆ ಅಥವಾ ಅಪಾಯಕಾರಿ ಪ್ರದೇಶಗಳಿಗೆ ಹೋದ ತಕ್ಷಣ ರೇಂಜರ್‌ಗಳ ಮೊಬೈಲ್‌ಗೆ ಅಲರ್ಟ್ ಸಂದೇಶ ಹೋಗುತ್ತಿತ್ತು.

ಕಾಲರ್‌ನಲ್ಲಿರುವ ಸೆನ್ಸರ್‌ಗಳು ಆತನ ನಡಿಗೆಯ ವೇಗವನ್ನು ಗಮನಿಸುತ್ತಿದ್ದವು. ಆತ ದೀರ್ಘಕಾಲ ಒಂದೇ ಕಡೆ ಅಲುಗಾಡದೇ ನಿಂತಿದ್ದರೆ, ಆತನಿಗೆ ಏನಾದರೂ ತೊಂದರೆ ಯಾಗಿದೆಯೇ ಎಂದು ಪರೀಕ್ಷಿಸಲು ತಂಡವು ತಕ್ಷಣ ಸ್ಥಳಕ್ಕೆ ಧಾವಿಸುತ್ತಿತ್ತು. ಕ್ರೇಗ್‌ಗೆ ಒಬ್ಬ ಸೆಲೆಬ್ರಿಟಿಯಂತೆ ರಕ್ಷಣೆ ನೀಡಲಾಗುತ್ತಿತ್ತು. ‘ಬಿಗ್ ಲೈಫ್ ಪ್ರತಿಷ್ಠಾನ’ ಮತ್ತು ಕೀನ್ಯಾ ವನ್ಯ ಜೀವಿ ಸೇವೆಯ ರೇಂಜರ್‌ಗಳು ಆತನಿಗೆ ನೆರಳಿನಂತೆ ಇರುತ್ತಿದ್ದರು.

ವಿಶೇಷವಾಗಿ ಹುಣ್ಣಿಮೆಯ ದಿನಗಳಲ್ಲಿ (ಬೇಟೆಗಾರರು ಹೆಚ್ಚಾಗಿ ಈ ಸಮಯದಲ್ಲಿ ಬರು ತ್ತಾರೆ) ರೇಂಜರ್‌ಗಳು ಆನೆ ಇರುವ ಸುತ್ತಮುತ್ತಲಿನ ಗುಡ್ಡಗಳ ಮೇಲೆ ನಿಂತು ನೈಟ್ ವಿಷನ್ ಬೈನಾಕ್ಯುಲರ್‌ಗಳ ಮೂಲಕ ಕಣ್ಗಾವಲು ಇಡುತ್ತಿದ್ದರು. ಕ್ರೇಗ್ ಆಹಾರಕ್ಕಾಗಿ ಹಳ್ಳಿಗಳ ಕಡೆ ಹೋದಾಗ, ರೇಂಜರ್‌ಗಳು ಗ್ರಾಮಸ್ಥರ ಮತ್ತು ಆನೆಯ ನಡುವೆ ಗೋಡೆಯಂತೆ ನಿಲ್ಲು ತ್ತಿದ್ದರು. ‌

ಪಟಾಕಿಗಳನ್ನು ಸಿಡಿಸಿ ಅಥವಾ ವಾಹನಗಳ ಬೆಳಕನ್ನು ಬಳಸಿ ಕ್ರೇಗ್‌ಗೆ ಯಾವುದೇ ಹಾನಿ ಯಾಗದಂತೆ ಮರಳಿ ಕಾಡಿಗೆ ಓಡಿಸುತ್ತಿದ್ದರು. ಕ್ರೇಗ್‌ನ ಸಂರಕ್ಷಣೆಯಲ್ಲಿ ಅಂಬೋಸೆಲಿ ಸುತ್ತಮುತ್ತ ವಾಸಿಸುವ ಮಸಾಯಿ ಜನರ ಪಾತ್ರ ಬಹಳ ದೊಡ್ಡದು. ಮಸಾಯಿ ಜನರು ಕ್ರೇಗ್‌ನನ್ನು ತಮ್ಮ ಸಮುದಾಯದ ಒಬ್ಬ ಹಿರಿಯ ಸದಸ್ಯನಂತೆ ಗೌರವಿಸುತ್ತಿದ್ದರು.

ಕಾಡಿನಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಮಸಾಯಿ ಜನರು ತಕ್ಷಣವೇ ರೇಂಜರ್‌ಗಳಿಗೆ ಮಾಹಿತಿ ನೀಡುತ್ತಿದ್ದರು. ಈ ಸಮುದಾಯದ ಸಹಭಾಗಿತ್ವವೇ ಕ್ರೇಗ್ 54 ವರ್ಷಗಳ ಕಾಲ ಸುದೀರ್ಘವಾಗಿ ಬದುಕಲು ಮುಖ್ಯ ಕಾರಣವಾಯಿತು.

ಕ್ರೇಗ್‌ನಂಥ ‘ಸೂಪರ್ ಟಸ್ಕರ್’ ಆನೆಯನ್ನು ರಕ್ಷಿಸುವುದು ಕೇವಲ ಒಂದು ಪ್ರಾಣಿಯನ್ನು ಉಳಿಸುವುದಲ್ಲ, ಬದಲಾಗಿ ಒಂದು ರಾಷ್ಟ್ರೀಯ ಸಂಪತ್ತನ್ನು ಕಾಯ್ದಂತಾಗಿತ್ತು. ಆತನ ಬೃಹತ್ ದಂತಗಳ ಕಾರಣದಿಂದಾಗಿ ಆತ ಸದಾ ಬೇಟೆಗಾರರ ಹಿಟ್ ಲಿಸ್ಟ್‌ನಲ್ಲಿದ್ದ. ನೆಲದ ಮೇಲಿನ ರಕ್ಷಣೆಯ ಜತೆಗೆ ಆಕಾಶದಿಂದಲೂ ಕ್ರೇಗ್‌ನ ಮೇಲೆ ನಿಗಾ ಇಡಲಾಗುತ್ತಿತ್ತು.

ಲಘು ವಿಮಾನಗಳು ಮತ್ತು ಡ್ರೋನ್‌ಗಳನ್ನು ಬಳಸಿ ಅಂಬೋಸೆಲಿಯ ವಿಶಾಲ ಭೂ ಪ್ರದೇಶವನ್ನು ಸ್ಕ್ಯಾನ್ ಮಾಡಲಾಗುತ್ತಿತ್ತು. ಇದರಿಂದ ದಟ್ಟ ಕಾಡಿನಲ್ಲಿ ಬೇಟೆಗಾರರು ಅಡಗಿಕೊಂಡಿದ್ದರೆ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿತ್ತು. ತಂತ್ರಜ್ಞಾನದಷ್ಟೇ ಪ್ರಮುಖವಾಗಿದ್ದುದು ‘ಹ್ಯೂಮನ್ ಇಂಟೆಲಿಜೆನ್ಸ್’.

ಸ್ಥಳೀಯ ಸಮುದಾಯದ ಜನರಿಗೆ ಆನೆಗಳನ್ನು ರಕ್ಷಿಸುವ ಬಗ್ಗೆ ತರಬೇತಿ ನೀಡಲಾಗಿತ್ತು. ಅಪರಿಚಿತ ವ್ಯಕ್ತಿಗಳು ಅಥವಾ ಬೇಟೆಗಾರರ ತಂಡಗಳು ಕಾಡಿನ ಹತ್ತಿರ ಸುಳಿದಾಡಿದರೆ ಅವರು ತಕ್ಷಣ ರೇಂಜರ್‌ಗಳಿಗೆ ರಹಸ್ಯ ಮಾಹಿತಿ ನೀಡುತ್ತಿದ್ದರು. ಸರಿಯಾದ ಮಾಹಿತಿ ನೀಡುವ ಹಳ್ಳಿಗರಿಗೆ ಬಹುಮಾನ ನೀಡುವ ಮೂಲಕ ರಕ್ಷಣಾ ಕಾರ್ಯದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲಾಗಿತ್ತು.

ಕ್ರೇಗ್ ಜನವಸತಿ ಪ್ರದೇಶಕ್ಕೆ ಹೋದಾಗ ಬೆಳೆ ಹಾನಿ ಮಾಡುವುದು ಸಹಜ. ಆದರೆ, ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ರೈತರಿಗೆ ಆಗುವ ಹಾನಿಗೆ ತಕ್ಷಣ ಪರಿಹಾರ ಧನ ನೀಡು ತ್ತಿದ್ದವು. ಇದರಿಂದ ಜನರು ಕ್ರೇಗ್ ಮೇಲೆ ಕೋಪಗೊಳ್ಳುವ ಬದಲು, ಅದನ್ನು ತಮ್ಮ ಹೆಮ್ಮೆ ಎಂದು ಭಾವಿಸಿ ರಕ್ಷಿಸುತ್ತಿದ್ದರು. ಆತ ಬೆಳೆ ಹಾನಿ ಮಾಡಿದರೂ ಆತನಿಗೆ ಕಸೆಯುತ್ತಿರಲಿಲ್ಲ. ಆತನಿಗೆ ಹಿಂಸೆ ನೀಡುತ್ತಿರಲಿಲ್ಲ.

ಆತ ಬಂದು ಬೆಳೆ ಧ್ವಂಸ ಮಾಡಿ ಹೋದರೆ, ರೈತರು ಬೇಸರಿಸಿಕೊಳ್ಳುತ್ತಿರಲಿಲ್ಲ. ಕ್ರೇಗ್‌ನಂಥ ದೈತ್ಯ ಆನೆಗಳನ್ನು ರಕ್ಷಿಸಲು ವಾರ್ಷಿಕವಾಗಿ ಕೋಟ್ಯಂತರ ರುಪಾಯಿ ವೆಚ್ಚವಾಗುತ್ತಿತ್ತು. ‘ಬಿಗ್ ಲೈಫ್ ಪ್ರತಿಷ್ಠಾನ’ ಕೇವಲ ಸರಕಾರಿ ಅನುದಾನವನ್ನು ನಂಬಿಕೊಳ್ಳದೇ, ಬೇರೆ ಬೇರೆ ಮೂಲಗಳಿಂದ ಹಣಕಾಸು ನೆರವನ್ನು ಸಂಗ್ರಹಿಸುತ್ತಿತ್ತು. ಕ್ರೇಗ್ ಹೆಸರು ಹೇಳಿ ನೆರವು ಯಾಚಿಸಿದರೆ, ವನ್ಯಜೀವಿ ಪ್ರೇಮಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ‌

ಕ್ರೇಗ್ ನಿಂದ ರೈತರ ಬೆಳೆ ನಾಶವಾಗದಂತೆ, ರೈತರ ಜಮೀನು ಮತ್ತು ಕಾಡಿನ ಮಧ್ಯೆ ಕಿಲೋ ಮೀಟರ್‌ಗಟ್ಟಲೆ ಉದ್ದದ ಆನೆ-ನಿರೋಧಕ ವಿದ್ಯುತ್ ಬೇಲಿಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಲಕ್ಷಾಂತರ ಡಾಲರ್ ವೆಚ್ಚವಾಗುತ್ತಿತ್ತು. ಹಣಕಾಸಿನ ಒಂದು ದೊಡ್ಡ ಭಾಗವು ಕೇವಲ ರಕ್ಷಣೆಗೆ ಮಾತ್ರವಲ್ಲದೇ, ಸ್ಥಳೀಯರೊಂದಿಗೆ ಶಾಂತಿ ಕಾಪಾಡಲು ಬಳಕೆ ಯಾಗುತ್ತಿತ್ತು.

‘ಬಿಗ್ ಲೈಫ್ ಫೌಂಡೇಶನ್’ ಸುಮಾರು 300ಕ್ಕೂ ಹೆಚ್ಚು ಸ್ಥಳೀಯ ರೇಂಜರ್‌ಗಳನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಅವರ ಸಂಬಳ, ಸಾರಿಗೆ, ಸಮವಸ, ಶಸ್ತ್ರಾಸ್ತ್ರ ಮತ್ತು ವೈದ್ಯಕೀಯ ವಿಮೆಯು ಸಂಸ್ಥೆಯ ಬಜೆಟ್‌ನ ಅತಿ ದೊಡ್ಡ ಭಾಗವಾಗಿತ್ತು. ಕ್ರೇಗ್‌ನನ್ನು ಕಾಯಲು ಒಂದು ಗಂಟೆಯ ವಿಮಾನ ಹಾರಾಟದ ಸರ್ವೇಗೆ ಇಂಧನ ಮತ್ತು ಪೈಲಟ್ ವೆಚ್ಚ ಸೇರಿ ಸಾವಿರಾರು ಡಾಲರ್‌ಗಳು ತಗುಲುತ್ತಿದ್ದವು.

ನೈಟ್ ವಿಷನ್ ಡ್ರೋನ್‌ಗಳ ಬಳಕೆಗೂ ವಿಪರೀತ ವೆಚ್ಚವಾಗುತ್ತಿತ್ತು. ಆದರೆ ‘ಬಿಗ್ ಲೈಫ್ ಫೌಂಡೇಶನ್’ ಈ ವಿಷಯದಲ್ಲಿ ರಾಜಿ ಆಗಲಿಲ್ಲ. ಸ್ಥಳೀಯ ಮಸಾಯಿ ಜನರನ್ನು ವಿಶ್ವಾಸ ಕ್ಕೆ ತೆಗೆದುಕೊಂಡು ಕ್ರೇಗ್ ನನ್ನ ಯಾಕೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಿ, ಅವರಲ್ಲಿ ಆತನ ಬಗ್ಗೆ ಅಭಿಮಾನವನ್ನು ಮೂಡಿಸಿತು.

ಕ್ರೇಗ್ ನ ಸಂರಕ್ಷಣೆಯಲ್ಲಿ ತಮ್ಮ ಅಸ್ತಿತ್ವವಿದೆ ಎಂದು ಆ ಜನ ಭಾ ವಿಸಿದ್ದರು. ಮಸಾಯಿ ಜನ ಆತನನ್ನು ತಮ್ಮ ಮಗನಂತೆ ಪ್ರೀತಿಸುತ್ತಿದ್ದರು. ಕೀನ್ಯಾದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಬಿಯರ್ ಬ್ರ್ಯಾಂಡ್ ಆದ ‘ಟಸ್ಕರ್’ ತನ್ನ ಲೋಗೋದಲ್ಲಿ ಕ್ರೇಗ್ ನ ಚಿತ್ರವನ್ನು ಹಾಕಿತು. 2021ರಲ್ಲಿ ತನ್ನ 100ನೇ ವರ್ಷಾಚರಣೆಯ ಸಂದರ್ಭದಲ್ಲಿ, ಈ ಸಂಸ್ಥೆಯು ಕ್ರೇಗ್‌ ನನ್ನು ತನ್ನ ‘ಬ್ರ್ಯಾಂಡ್ ರಾಯಭಾರಿ’ಯನ್ನಾಗಿ ಘೋಷಿಸಿತು.

ವನ್ಯಜೀವಿಗಳ ಸಂರಕ್ಷಣೆಗಾಗಿ ಹಣ ಸಂಗ್ರಹಿಸುವುದು ಮತ್ತು ಆನೆಗಳ ಅಕ್ರಮ ಬೇಟೆಯ ವಿರುದ್ಧ ಜಾಗೃತಿ ಮೂಡಿಸುವುದು ಆಶಯವಾಗಿತ್ತು. ಕ್ರೇಗ್‌ನನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಅಂಬೋಸೆಲಿ ರಾಷ್ಟ್ರೀಯ ಉದ್ಯಾನವನಕ್ಕೆ ಬರುತ್ತಿದ್ದರು, ಇದು ಕೀನ್ಯಾದ ಆರ್ಥಿಕತೆಗೆ ದೊಡ್ಡ ಬಲ ನೀಡುತ್ತಿತ್ತು. ಒಂದು ಆನೆ ತನ್ನ ಬದುಕಿನ ಮೂಲಕ ಇಡೀ ದೇಶದ ಪ್ರವಾಸೋದ್ಯಮವನ್ನು ಹೇಗೆ ಬೆಳೆಸಬಹುದು ಮತ್ತು ಜನರ ಮನಸ್ಸನ್ನು ಹೇಗೆ ಗೆಲ್ಲಬಹುದು ಎಂಬುದಕ್ಕೆ ಕ್ರೇಗ್ ಮಾದರಿಯಾಗಿದ್ದ.

ವನ್ಯಜೀವಿ ತಜ್ಞರ ಪ್ರಕಾರ, ವಯಸ್ಸಾದಂತೆ ಆನೆಗಳ ಹಲ್ಲುಗಳು ಸವೆಯುತ್ತವೆ. ಕ್ರೇಗ್‌ನ ಹಲ್ಲುಗಳು ಸಂಪೂರ್ಣವಾಗಿ ಸವೆದು ಹೋಗಿದ್ದರಿಂದ ಅವನಿಗೆ ಆಹಾರವನ್ನು ಸರಿಯಾಗಿ ಅಗಿಯಲು ಸಾಧ್ಯವಾಗುತ್ತಿರಲಿಲ್ಲ. ಸರಿಯಾದ ಪೋಷಕಾಂಶಗಳು ಸಿಗದೇ ಅವನು ತನ್ನ ಅಂತಿಮ ದಿನಗಳನ್ನು ಕಳೆದು, ಅಂಬೋಸೆಲಿಯ ಮುಕ್ತ ಭೂಮಿಯ ತನ್ನ 54ನೇ ವಯಸ್ಸಿ ನಲ್ಲಿ, ಜನೆವರಿ 3, 2026ರಂದು ಸಹಜ ಸಾವನ್ನಪ್ಪಿದ.

craig super tusker death

ಬೇಟೆಗಾರರಿಂದ ಸಾಯದೇ, ವಯೋಸಹಜವಾಗಿ, ನೈಸರ್ಗಿಕವಾಗಿ ಮರಣ ಹೊಂದುವುದು ಅತಿ ಉದ್ದದ ದಂತಗಳಿರುವ ಆನೆಗಳ ಮಟ್ಟಿಗೆ ದೊಡ್ಡ ವಿಜಯವೇ. ಕ್ರೇಗ್‌ನ ದಂತಗಳು ಕೇವಲ ಮೂಳೆಯ ಭಾಗಗಳಲ್ಲ, ಅವು ಪ್ರಕೃತಿಯ ಅದ್ಭುತ ವಾಸ್ತುಶಿಲ್ಪದಂತೆ ಇದ್ದವು. ಕ್ರೇಗ್ ಕೀನ್ಯಾದ ಆನೆ ಸಂರಕ್ಷಣಾ ವ್ಯವಸ್ಥೆಯ ಯಶಸ್ಸಿನ ಪ್ರತೀಕವಾಗಿದ್ದ. ಆತನ ಸಾವು ವನ್ಯಜೀವಿ ಪ್ರಿಯರಲ್ಲಿ ದುಃಖ ತಂದಿದ್ದರೂ, ಅವನು ಬಿಟ್ಟುಹೋದ ಪರಂಪರೆ ದೊಡ್ಡದು.

ಅವನು ತನ್ನ ಜೀವಿತಾವಧಿಯಲ್ಲಿ ಅನೇಕ ಆನೆಗಳಿಗೆ ‘ಅಪ್ಪ’ನಾಗಿದ್ದ. ಅವನ ಬಲಿಷ್ಠವಾದ ದಂತಗಳ ಗುಣಲಕ್ಷಣಗಳನ್ನು ಹೊಂದಿರುವ ಮುಂದಿನ ಪೀಳಿಗೆಯ ಆನೆಗಳು ಅಂಬೋಸೆಲಿಯಲ್ಲಿ ಈಗಲೂ ಇವೆ. ಆನೆಗಳ ದಂತದ ವ್ಯಾಪಾರ ಎಷ್ಟು ಅಪಾಯಕಾರಿ ಮತ್ತು ಅವುಗಳನ್ನು ಸಂರಕ್ಷಿಸುವುದು ಸಮಾಜಕ್ಕೆ ಎಷ್ಟು ಲಾಭ ಎಂಬ ಅರಿವನ್ನು ಕ್ರೇಗ್ ಮೂಡಿಸಿದ್ದ. ಆತ ಆಫ್ರಿಕಾದ ಕಾಡುಗಳ ‘ಕೊನೆಯ ದೈತ್ಯ’ನಂತೆ ಬದುಕಿದ.

ಅವನ ಕಥೆಯು ನಮಗೆ ಪ್ರಕೃತಿಯ ಮೇಲಿನ ಗೌರವ ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಸದಾ ನೆನಪಿಸುತ್ತದೆ. ಇಂದು ಅಂಬೋಸೆಲಿಯಲ್ಲಿ ಕೇವಲ ಒಂಬತ್ತು ‘ಸೂಪರ್ ಟಸ್ಕರ್’ಗಳು ಉಳಿದಿದ್ದು, ಅವುಗಳನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ ವಾಗಿದೆ.

ಕ್ರೇಗ್ ನ ಸಹಜ ಸಾವಿನ ನಂತರ, ಕೀನ್ಯಾ ಸರಕಾರವು ಅವನ ದಂತಗಳ ಸುರಕ್ಷತೆಗೆ ಆದ್ಯತೆ ನೀಡಲು ತೀರ್ಮಾನಿಸಿದೆ. ಕಾನೂನಿನ ಪ್ರಕಾರ, ಅತಿ ಮೌಲ್ಯಯುತವಾದ ಇಂಥ ದಂತ ಗಳನ್ನು ಕಾಡಿನಲ್ಲಿ ಬಿಡುವಂತಿಲ್ಲ. ರೇಂಜರ್‌ಗಳು ತಕ್ಷಣವೇ ಆ ದಂತಗಳನ್ನು ಸುರಕ್ಷಿತ ವಾಗಿ ಹೊರತೆಗೆದು ಕೀನ್ಯಾ ವನ್ಯಜೀವಿ ಸೇವೆಯ ಕೇಂದ್ರ ಕಚೇರಿಗೆ ರವಾನಿಸಿದ್ದಾರೆ.

ಕ್ರೇಗ್‌ನ ಈ ಅಪರೂಪದ ದಂತಗಳನ್ನು ಸುಟ್ಟುಹಾಕುವ ಬದಲು, ಶೈಕ್ಷಣಿಕ ಮತ್ತು ಸಂರಕ್ಷಣಾ ಅರಿವು ಮೂಡಿಸಲು ಯಾವುದಾದರೂ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಸಂರಕ್ಷಿಸಿಡುವ ಸಾಧ್ಯತೆಯಿದೆ. ಇದು ಮುಂದಿನ ಪೀಳಿಗೆಗೆ ಆನೆಗಳ ಸಂರಕ್ಷಣೆಯ ಮಹತ್ವ ವನ್ನು ಸಾರಲಿದೆ.

ಕ್ರೇಗ್ 54 ವರ್ಷಗಳ ಕಾಲ ಸುದೀರ್ಘವಾಗಿ ಬದುಕಲು ಈ ವ್ಯವಸ್ಥಿತ ರಕ್ಷಣಾ ತಂತ್ರವೇ ಕಾರಣವಾಯಿತು. ಆತನ ಸಾವಿನ ನಂತರವೂ, ಇದೇ ತಂತ್ರಜ್ಞಾನವನ್ನು ಆತನ ವಂಶಸ್ಥ ರಾದ ಇತರ ಸಣ್ಣ ಟಸ್ಕರ್‌ಗಳ ರಕ್ಷಣೆಗೆ ಬಳಸಲಾಗುತ್ತಿದೆ. ಕ್ರೇಗ್ ನೈಸರ್ಗಿಕವಾಗಿ ಮರಣ ಹೊಂದಿದ್ದು ಸಂರಕ್ಷಣಾ ಲೋಕದ ದೊಡ್ಡ ಗೆಲುವು. ಸಾಮಾನ್ಯವಾಗಿ ಇಷ್ಟು ದೊಡ್ಡ ದಂತವಿರುವ ಆನೆಗಳನ್ನು ಬೇಟೆಗಾರರು ಗುಂಡಿಕ್ಕಿ ಕೊಲ್ಲುತ್ತಾರೆ. ಆದರೆ ಕ್ರೇಗ್ ವೃದ್ಧಾಪ್ಯ ದವರೆಗೂ ಬದುಕಿದ್ದು, ದಂತದ ವ್ಯಾಪಾರಕ್ಕೆ ಕೀನ್ಯಾ ನೀಡುತ್ತಿರುವ ಪ್ರಬಲ ಏಟಿಗೆ ಸಾಕ್ಷಿ ಯಾಗಿದೆ.

ಕ್ರೇಗ್‌ನ ದಂತಗಳು ಕೇವಲ ಸೌಂದರ್ಯದ ವಸ್ತುಗಳಲ್ಲ, ಅವು ಮಾನವನ ಕ್ರೌರ್ಯದ ನಡುವೆಯೂ ಪ್ರಕೃತಿಯನ್ನು ಹೇಗೆ ಉಳಿಸಬಹುದು ಎಂಬುದರ ಪ್ರತೀಕವಾಗಿದೆ. ಅವನ ದಂತಗಳನ್ನು ಸಂರಕ್ಷಿಸುವ ಮೂಲಕ, ‘ಆನೆ ಬದುಕಿದ್ದರೆ ಅದರ ಮೌಲ್ಯ, ಸತ್ತಾಗಿನ ದಂತಕ್ಕಿಂತ ಸಾವಿರ ಪಟ್ಟು ಹೆಚ್ಚು’ ಎಂಬ ಸಂದೇಶವನ್ನು ಜಗತ್ತಿಗೆ ಸಾರಲಾಗುತ್ತಿದೆ.

ಪ್ರಾಣಿಗಳನ್ನು ರಕ್ಷಿಸುವಲ್ಲಿ ಸ್ಥಳೀಯ ಸಮುದಾಯಗಳ ಪಾತ್ರ ಎಷ್ಟು ದೊಡ್ಡದು ಎಂಬು ದಕ್ಕೆ ಕ್ರೇಗ್ ಬದುಕಿದ್ದ ಹಾದಿಯೇ ಸಾಕ್ಷಿ.