ಭಾರತೀಯ ಪ್ರವಾಸಿಗರಿಗೆ ಉಜ್ಬೇಕಿಸ್ತಾನ ಮಹತ್ವದ ಸೌಲಭ್ಯ ಘೋಷಿಸಿದೆ. ಭಾರತೀಯ ನಾಗರಿಕರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶ ವ್ಯವಸ್ಥೆಯನ್ನು ಉಜ್ಬೇಕಿಸ್ತಾನ ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಜ್ಬೇಕಿಸ್ತಾನ ಪ್ರವಾಸದ ವೇಳೆ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಈ ಘೋಷಣೆ ಮಾಡಿದರು. ಈ ಕ್ರಮವು ಉಭಯ ದೇಶಗಳ ನಡುವಿನ ಜನರ ಸಂಪರ್ಕ, ಪ್ರವಾಸೋದ್ಯಮ ಮತ್ತು ವ್ಯಾಪಾರ ವಿನಿಮಯವನ್ನು ಮತ್ತಷ್ಟು ಉತ್ತೇಜಿಸುವ ನಿರೀಕ್ಷೆಯಿದೆ.

ಭಾರತ ಮತ್ತು ಉಜ್ಬೇಕಿಸ್ತಾನ ನಡುವಿನ ದ್ವಿಪಕ್ಷೀಯ ವ್ಯಾಪಾರ ಕಳೆದ ವರ್ಷ ಮೊದಲ ಬಾರಿಗೆ 1 ಬಿಲಿಯನ್ ಅಮೆರಿಕನ್ ಡಾಲರ್ ಗಡಿ ದಾಟಿದೆ. ಎರಡೂ ದೇಶಗಳ ನಡುವೆ ಪ್ರತಿ ವಾರ 14 ನೇರ ವಿಮಾನಗಳು ಸಂಚರಿಸುತ್ತಿವೆ ಎಂದು ಉಜ್ಬೇಕಿಸ್ತಾನ ಅಧ್ಯಕ್ಷರು ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಜಂಟಿ ಉದ್ಯಮಗಳ ಸಂಖ್ಯೆಯೂ ಇತ್ತೀಚಿನ ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗಿದೆ.

ಯೋಗ ಸೇರಿದಂತೆ ಭಾರತೀಯ ಸಂಸ್ಕೃತಿಗೂ ಉಜ್ಬೇಕಿಸ್ತಾನದಲ್ಲಿ ಹೆಚ್ಚಿನ ಜನಪ್ರಿಯತೆ ದೊರೆಯುತ್ತಿದೆ. 2018ರಿಂದ ಅಲ್ಲಿನ ಯೋಗ ಫೆಡರೇಷನ್ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಜೂನ್‌ನಲ್ಲಿ ದೇಶಾದ್ಯಂತ ಯೋಗ ಉತ್ಸವವನ್ನೂ ಆಯೋಜಿಸಲಾಗಿತ್ತು. ಹೊಸ ವೀಸಾ ಮುಕ್ತ ವ್ಯವಸ್ಥೆಯಿಂದ ಭಾರತೀಯರಿಗೆ ಉಜ್ಬೇಕಿಸ್ತಾನದ ಐತಿಹಾಸಿಕ ತಾಣಗಳು, ಸಂಸ್ಕೃತಿ ಮತ್ತು ಪ್ರವಾಸಿ ಆಕರ್ಷಣೆಗಳನ್ನು ಸುಲಭವಾಗಿ ಅನ್ವೇಷಿಸಲು ಅವಕಾಶ ಸಿಗಲಿದೆ.