ಕೋಲ್ಕತ್ತಾದ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ಉಬರ್ ಶಟಲ್' ಸೇವೆ 2026ರ ಏಪ್ರಿಲ್ 2ರಿಂದ ಅಧಿಕೃತವಾಗಿ ಸ್ಥಗಿತಗೊಳ್ಳುತ್ತಿದೆ. ಉಬರ್ ಕಂಪನಿಯು ತನ್ನ ಆ್ಯಪ್ ಮೂಲಕ ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಿದ್ದು, ಏಪ್ರಿಲ್ 2ರ ನಂತರ ಕೋಲ್ಕತ್ತಾದಲ್ಲಿ ಯಾವುದೇ ಶಟಲ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಈ ಮೂಲಕ ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಉಬರ್ ಶಟಲ್ ಸೇವೆ ಸಂಪೂರ್ಣವಾಗಿ ಬಂದ್ ಆದಂತಾಗಿದೆ.

ಕೋಲ್ಕತ್ತಾದ ನ್ಯೂ ಟೌನ್, ಸೆಕ್ಟರ್ ವಿ ಮತ್ತು ರಾಜರ್‌ಹಾಟ್‌ನಂಥ ಐಟಿ ಹಬ್‌ಗಳಿಗೆ ಪ್ರಯಾಣಿಸುವ ಉದ್ಯೋಗಿಗಳಿಗೆ ಈ ಶಟಲ್ ಸೇವೆ ಅನುಕೂಲಕರವಾಗಿತ್ತು. ಈಗ ಈ ಸೇವೆ ನಿಲ್ಲುತ್ತಿರುವುದರಿಂದ ಪ್ರಯಾಣಿಕರು ಮತ್ತೆ ಟ್ಯಾಕ್ಸಿ ಅಥವಾ ಇತರ ಸಾರಿಗೆಗಳನ್ನು ಅವಲಂಬಿಸಬೇಕಾಗಿದೆ. ಬಳಕೆದಾರರ ಶಟಲ್ ಪಾಸ್‌ಗಳಲ್ಲಿ ಅಥವಾ ವಾಲೆಟ್‌ನಲ್ಲಿ ಬಾಕಿ ಇರುವ ಹಣವನ್ನು ಮುಂದಿನ 7 ಕೆಲಸದ ದಿನಗಳೊಳಗೆ 'ಉಬರ್ ಕ್ರೆಡಿಟ್ಸ್' ರೂಪದಲ್ಲಿ ಮರುಪಾವತಿ ಮಾಡಲಾಗುವುದು ಎಂದು ಕಂಪನಿ ಭರವಸೆ ನೀಡಿದೆ.

ಇದನ್ನೂ ಓದಿ: ಗೋವಾ ಪ್ರವಾಸೋದ್ಯಮಕ್ಕೆ 3 ಕೋಟಿ ರು.

ವರದಿಗಳ ಪ್ರಕಾರ, ಉಬರ್ ತನ್ನ ವ್ಯವಹಾರದ ಗಮನವನ್ನು ಬದಲಾಯಿಸುತ್ತಿದೆ. ವೈಯಕ್ತಿಕ ಪ್ರಯಾಣಿಕರಿಗಾಗಿ ಇರುವ ಶಟಲ್ ಸೇವೆಗಿಂತ ಹೆಚ್ಚಾಗಿ, ಕಾರ್ಪೊರೇಟ್ ಕಂಪನಿಗಳಿಗಾಗಿ 'ನೌಕರರ ಸಾರಿಗೆ ಸೇವೆ' ನೀಡುವತ್ತ ಉಬರ್ ಗಮನಹರಿಸುತ್ತಿದೆ.

ಉಬರ್‌ನ ಇತರ ಸೇವೆಗಳಾದ ಉಬರ್ ಕ್ಯಾಬ್, ಆಟೋ ಮತ್ತು ಮೋಟೋ ಎಂದಿನಂತೆ ಮುಂದುವರಿಯಲಿವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.