ಅಕ್ಟೋಬರ್‌ನಲ್ಲಿ ರೈಲು ಪ್ರಯಾಣಿಸುವವರು ಕಡ್ಡಾಯವಾಗಿ ಗುರುತಿನ ದಾಖಲೆಗಳನ್ನು ಹೊಂದಿರುವಂತೆ ಕೇಂದ್ರ ರೈಲ್ವೇ ಸೂಚಿಸಿದೆ. ಅಕ್ಟೋಬರ್ 1ರಿಂದ 31ರವರೆಗೆ ಕೇಂದ್ರ ರೈಲ್ವೇ ವ್ಯಾಪ್ತಿಯಲ್ಲಿ ವಿಶೇಷ ಟಿಕೆಟ್ ತಪಾಸಣಾ ಅಭಿಯಾನ ನಡೆಯುತ್ತಿದ್ದು, ಟಿಕೆಟ್ ಇಲ್ಲದೆ ಪ್ರಯಾಣಿಸುವವರಷ್ಟೇ ಅಲ್ಲದೆ ರಿಯಾಯಿತಿ ಟಿಕೆಟ್, ನಿರ್ದಿಷ್ಟ ಮೀಸಲಾತಿ ಕೋಟಾ, ರೈಲ್ವೇ ಪಾಸ್ ಹಾಗೂ ಅನ್‌ರಿಸರ್ವ್ಡ್ ಟಿಕೆಟ್‌ಗಳನ್ನೂ ತಪಾಸಣೆ ಮಾಡಲಾಗುತ್ತಿದೆ.

ರಿಯಾಯಿತಿ ಟಿಕೆಟ್ ಅಥವಾ ವಿಶೇಷ ಮೀಸಲಾತಿ ಕೋಟಾದಡಿ ಪ್ರಯಾಣಿಸುವವರು ಅರ್ಹತೆಯನ್ನು ದೃಢಪಡಿಸಲು ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಆಧಾರ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಸೇರಿದಂತೆ ಸರಕಾರ ನೀಡಿರುವ ಮಾನ್ಯ ಫೊಟೋ ಗುರುತಿನ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ. ಮೊಬೈಲ್‌ನಲ್ಲಿರುವ ಫೊಟೋ ಅಥವಾ ಜೆರಾಕ್ಸ್ ಪ್ರತಿ ಮಾತ್ರ ಸಾಕಾಗುವುದಿಲ್ಲ.

ಗುಂಪು ಟಿಕೆಟ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ನಲ್ಲಿರುವ ಕನಿಷ್ಠ ಒಬ್ಬ ಪ್ರಯಾಣಿಕರು ಅಗತ್ಯ ಮೂಲ ಗುರುತಿನ ದಾಖಲೆ ಹೊಂದಿರಬೇಕು. ಇ-ಪಾಸ್ ಅಥವಾ PTO ಬಳಕೆದಾರರೂ ಮೂಲ ಗುರುತಿನ ಚೀಟಿ ಹೊಂದಿರಬೇಕು. ಮಾನ್ಯ ಟಿಕೆಟ್ ಅಥವಾ ಪ್ರಯಾಣದ ಅನುಮತಿ ದಾಖಲೆ ಇಲ್ಲದೆ ಪ್ರಯಾಣಿಸಿದರೆ ಕನಿಷ್ಠ ರು.500 ದಂಡ ವಿಧಿಸಬಹುದು. ಈ ದಂಡವನ್ನು ಜೂನ್ 20ರಿಂದ ರು.250ರಿಂದ ರು.500ಕ್ಕೆ ಹೆಚ್ಚಿಸಲಾಗಿದೆ.