ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಭಾರತದ ಪ್ರಯತ್ನಕ್ಕೆ ಮತ್ತೊಂದು ದೊಡ್ಡ ಯಶಸ್ಸು ಸಿಗುವ ಸಾಧ್ಯತೆಯಿದೆ. ಯುರೋಪಿಯನ್ ಒಕ್ಕೂಟದ ಪ್ರಮುಖ ದೇಶವಾದ ಸ್ಪೇನ್‌ನಲ್ಲಿ ಭಾರತೀಯ ಪ್ರವಾಸಿಗರು ಇನ್ಮುಂದೆ ರುಪಾಯಿ ಅಥವಾ ಯೂರೋ ನಗದು ಕ್ಯಾರಿ ಮಾಡುವ ತಲೆಬಿಸಿ ಇಲ್ಲದೆ, ಭಾರತದಂತೆಯೇ ನೇರವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ಪಾವತಿ ಮಾಡುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ.

ಇದನ್ನೂ ಓದಿ: ಯುನೈಟೆಡ್ ಏರ್‌ಲೈನ್ಸ್‌ನಿಂದ ಹೊಸ ‘ಇಕಾನಮಿ ಪ್ಲಸ್’ ಆಸನ ವ್ಯವಸ್ಥೆ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಇತ್ತೀಚಿನ ಯುರೋಪ್ ಪ್ರವಾಸದ ವೇಳೆ ಭಾರತ ಮತ್ತು ಸ್ಪೇನ್ ನಡುವೆ ಈ ಮಹತ್ವದ ತಾಂತ್ರಿಕ ಒಪ್ಪಂದದ ಮಾತುಕತೆಗಳು ನಡೆದಿವೆ.

ಭಾರತದ ರಾಷ್ಟ್ರೀಯ ಪಾವತಿ ನಿಗಮದ 'ಯುಪಿಐ' ತಂತ್ರಜ್ಞಾನವನ್ನು ಸ್ಪೇನ್‌ನ ಅತ್ಯಂತ ಜನಪ್ರಿಯ ಸ್ಥಳೀಯ ಮೊಬೈಲ್ ಪಾವತಿ ಪ್ಲಾಟ್‌ಫಾರ್ಮ್ ಆದ 'ಬಿಜುಮ್' (Bizum) ಜತೆಗೆ ಜೋಡಿಸಲು ತಾಂತ್ರಿಕ ಚರ್ಚೆಗಳನ್ನು ನಡೆಸಲಾಗುತ್ತಿದೆ. ಸ್ಪೇನ್‌ನಲ್ಲಿ ಬರೋಬ್ಬರಿ 2.5 ಕೋಟಿಗೂ ಹೆಚ್ಚು ಜನರು ಬಿಜುಮ್ ಪ್ಲಾಟ್‌ಫಾರ್ಮ್ ಬಳಸುತ್ತಿದ್ದಾರೆ. ಈ ಎರಡೂ ಸಿಸ್ಟಮ್‌ಗಳು ಲಿಂಕ್ ಆದ ನಂತರ ಭಾರತೀಯ ಪ್ರವಾಸಿಗರು ಸ್ಪೇನ್‌ನ ಹೊಟೇಲ್, ರೆಸ್ಟೋರೆಂಟ್, ಟ್ಯಾಕ್ಸಿ ಹಾಗೂ ಸೂಪರ್‌ಮಾರ್ಕೆಟ್‌ಗಳಲ್ಲಿ ಯುಪಿಐ ಆಪ್‌ಗಳ ಮೂಲಕವೇ ಹಣ ಪಾವತಿಸಬಹುದು.

ಪ್ರಸ್ತುತ ಜಾಗತಿಕವಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಪ್ರದರ್ಶಿಸುತ್ತಿರುವ ಭಾರತವು ಈಗಾಗಲೇ ವಿಶ್ವದ 17 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯುಪಿಐ ಸೇವೆಗಳನ್ನು ಆರಂಭಿಸಿದೆ. ಫ್ರಾನ್ಸ್, ಸಿಂಗಾಪುರ, ಯುಎಇ, ಕತಾರ್, ಶ್ರೀಲಂಕಾ, ಮಾರಿಷಸ್, ನೇಪಾಳ ಮತ್ತು ಭೂತಾನ್ ಆ ದೇಶಗಳು.