ಆಹಾರ ವಿತರಣೆ ಹಾಗೂ ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ವಿಗ್ಗಿ ಇದೀಗ ಪ್ರವಾಸೋದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದೆ. ಕಂಪನಿಯು ‘CREW’ ಹೆಸರಿನ ಪ್ರೀಮಿಯಂ ವೈಯಕ್ತಿಕ ಟ್ರಾವೆಲ್ ಕನ್ಸಿಯರ್ಜ್ ಸೇವೆಯನ್ನು ಪರಿಚಯಿಸಿದೆ. ಈ ಹೊಸ ಸೇವೆ ಸದ್ಯ ಪಾವತಿಸುವ ಸದಸ್ಯರು ಮತ್ತು ಆಹ್ವಾನಿತ ಪ್ರವಾಸಿಗರಿಗೆ ಮಾತ್ರ ಲಭ್ಯವಿದೆ.

CREW ಆ್ಯಪ್‌ ಮೂಲಕ ಪ್ರವಾಸಿಗರಿಗೆ ಪ್ರಯಾಣದ ಮುನ್ನ, ಪ್ರಯಾಣದ ಸಮಯದಲ್ಲಿ ಹಾಗೂ ಅಗತ್ಯವಿದ್ದಾಗ ಪ್ರವಾಸ ಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲೂ ವೈಯಕ್ತಿಕ ಸಹಾಯ ನೀಡುವುದು ಸ್ವಿಗ್ಗಿಯ ಉದ್ದೇಶವಾಗಿದೆ. ಪ್ರವಾಸಕ್ಕೆ ಸಂಬಂಧಿಸಿದ ವಿವಿಧ ಅಗತ್ಯಗಳನ್ನು ಸುಗಮವಾಗಿ ನಿರ್ವಹಿಸಲು ಈ ಸೇವೆಯನ್ನು ರೂಪಿಸಲಾಗಿದೆ.

CREW ಅನ್ನು ವೈಯಕ್ತಿಕ ಕನ್ಸಿಯರ್ಜ್ ಸೇವೆಯಾಗಿ ಆರಂಭಿಸಿ ಒಂದು ವರ್ಷದಲ್ಲಿ ಪಡೆದ ಅನುಭವದ ಆಧಾರದ ಮೇಲೆ ಪ್ರವಾಸ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವುದಾಗಿ ಸ್ವಿಗ್ಗಿ ತಿಳಿಸಿದೆ. ಈ ಅವಧಿಯಲ್ಲಿ ಬಳಕೆದಾರರಿಂದ ಪ್ರವಾಸಕ್ಕೆ ಸಂಬಂಧಿಸಿದ ಸರಳ ಮತ್ತು ಸಂಪೂರ್ಣ ಅನುಭವಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ ಎಂದು ಕಂಪನಿ ಹೇಳಿದೆ.

ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಸಿಇಓ ರೋಹಿತ್ ಕಪೂರ್, ಪ್ರವಾಸದ ಗಮ್ಯಸ್ಥಾನಕ್ಕಿಂತಲೂ ಬುಕಿಂಗ್ ಮತ್ತು ನೈಜ ಪ್ರವಾಸ ಅನುಭವದ ನಡುವಿನ ಅಂತರವೇ ಪ್ರಮುಖ ಸಮಸ್ಯೆಯಾಗಿತ್ತು ಎಂದು ಹೇಳಿದ್ದಾರೆ. ಈ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ CREW ಸೇವೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.