ಮೊದಲ ಟ್ರಾವೆಲೇಟರ್ ಹೊಂದಿದ ಸ್ಕೈವಾಕ್ ಶೀಘ್ರದಲ್ಲೇ ಲೋಕಾರ್ಪಣೆ
ಮುಂಬಯಿ ನಗರದ ಮಹಾಲಕ್ಷ್ಮೀ ಪ್ರದೇಶದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಟ್ರಾವೆಲೇಟರ್ (ಚಲಿಸುವ ಪಾದಚಾರಿ ಮಾರ್ಗ) ಹೊಂದಿದ ಸ್ಕೈವಾಕ್ ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ತೆರೆಯಲಾಗುತ್ತಿದೆ.
ಮುಂಬಯಿ ನಗರದ ಮಹಾಲಕ್ಷ್ಮೀ ಪ್ರದೇಶದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಟ್ರಾವೆಲೇಟರ್ (ಚಲಿಸುವ ಪಾದಚಾರಿ ಮಾರ್ಗ) ಹೊಂದಿದ ಸ್ಕೈವಾಕ್ ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ತೆರೆಯಲಾಗುತ್ತಿದೆ. ಸುಮಾರು 283 ಮೀಟರ್ ಉದ್ದ ಮತ್ತು 11 ಮೀಟರ್ ಅಗಲದ ಈ ಅತ್ಯಾಧುನಿಕ ಸ್ಕೈವಾಕ್‌ನಲ್ಲಿ ಆರು ಟ್ರಾವೆಲೇಟರ್‌ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರು ಮೆಟ್ರೋ, ಮೊನೊರೈಲು ಹಾಗೂ ಉಪನಗರ ರೈಲು ಸೇವೆಗಳ ನಡುವೆ ಸುಲಭವಾಗಿ ಸಂಚರಿಸಲು ಅನುಕೂಲವಾಗಲಿದೆ.

ಮಹಾಲಕ್ಷ್ಮೀ ರೈಲು ನಿಲ್ದಾಣ, ಮುಂಬಯಿ ಮೆಟ್ರೋ-3 ಹಾಗೂ ಮೊನೊರೈಲು ಜಾಲವನ್ನು ಒಂದೇ ಸಂಪರ್ಕ ವ್ಯವಸ್ಥೆಯಡಿ ತರುವ ಉದ್ದೇಶದಿಂದ ಈ ಬಹುಮಾದರಿ ಸಂಪರ್ಕ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ಪ್ರಯಾಣಿಕರ ನಡೆದು ಹೋಗುವ ಸಮಯ ಕಡಿಮೆಯಾಗುವುದರ ಜತೆಗೆ, ಸಂಚಾರ ದಟ್ಟಣೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯೂ ಇಳಿಕೆಯಾಗಲಿದೆ.
ವಿಶೇಷವಾಗಿ ಹಿರಿಯ ನಾಗರಿಕರು, ದಿವ್ಯಾಂಗರು ಹಾಗೂ ಭಾರವಾದ ಸಾಮಾನುಗಳೊಂದಿಗೆ ಪ್ರಯಾಣಿಸುವವರಿಗೆ ಈ ಸ್ಕೈವಾಕ್ ಹೆಚ್ಚಿನ ಅನುಕೂಲ ಒದಗಿಸಲಿದೆ. ಮುಂಬಯಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಆಧುನಿಕ ಮತ್ತು ಸುಗಮಗೊಳಿಸುವ ಮಹತ್ವದ ಹೆಜ್ಜೆಯಾಗಿ ಈ ಯೋಜನೆಯನ್ನು ಪರಿಗಣಿಸಲಾಗಿದ್ದು, ದೇಶದ ಇತರ ಮಹಾನಗರಗಳಿಗೂ ಇದು ಮಾದರಿಯಾಗುವ ನಿರೀಕ್ಷೆಯಿದೆ.