ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಗೌಹಾಟಿ-ಕೊಲ್ಕತ್ತಾ ಮಾರ್ಗದಲ್ಲಿ ತನ್ನ ಸಂಚಾರ ನಡೆಸಲು ಸಿದ್ಧವಾಗಿದೆ. ಕೊಲ್ಕತ್ತಾದಿಂದ ಗುವಾಹಟಿಗೆ ಸಂಚರಿಸುವ ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಜನವರಿ 18 ಅಥವಾ 19ರಂದು ಉದ್ಘಾಟಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ವಂದೇ ಭಾರತ್ ಚೇರ್ ಕಾರ್ ಭಾರತೀಯ ರೈಲ್ವೆಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದೆ. ಜನರು ಇದನ್ನು ತುಂಬಾ ಇಷ್ಟಪಡಲು ಪ್ರಾರಂಭಿಸಿದ್ದಾರೆ. ವಂದೇ ಭಾರತ್ ರೈಲುಗಳ ಸಂಚಾರಕ್ಕೆ ದೇಶದ ಮೂಲೆ ಮೂಲೆಗಳಿಂದ ಬೇಡಿಕೆಗಳು ಬರುತ್ತಿವೆ. ವಂದೇ ಭಾರತ್ ಸ್ಲೀಪರ್ ರೈಲನ್ನು ಸಾವಿರ ಕಿಲೋಮೀಟರ್‌ಗಳಿಗೂ ಅಧಿಕ ದೂರದ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಆಧುನಿಕ ಪ್ರಯಾಣದ ಅನುಭವವನ್ನು ವಂದೇ ಭಾರತ್ ನೀಡಲಿದೆ.

ವಂದೇ ಭಾರತ್ ಸ್ಲೀಪರ್ ಆಧುನಿಕ ಟೆಕ್ನಾಲಜಿಯೊಂದಿಗೆ, ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಮತ್ತು ರಾತ್ರಿ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ವಿಶ್ವ ದರ್ಜೆಯ ಸ್ಲೀಪರ್ ಕೋಚ್‌ಗಳನ್ನು ಹೊಂದಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.