ಪ್ರತಿ ವರ್ಷದಂತೆ ಈ ವರ್ಷವೂ 'ಟೈಮ್ ಔಟ್' ಸಂಸ್ಥೆಯು ವಿಶ್ವದ 50 ಅತ್ಯುತ್ತಮ ನಗರಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್ ನಗರವು ಮೊದಲ ಸ್ಥಾನವನ್ನು ಅಲಂಕರಿಸಿದೆ. ಈ ಆಯ್ಕೆಯು ಕೇವಲ ಪ್ರವಾಸಿಗರ ಅಭಿಪ್ರಾಯವಲ್ಲದೆ, ಅಲ್ಲಿನ ಸ್ಥಳೀಯ ನಿವಾಸಿಗಳ ಜೀವನಶೈಲಿ, ಆಹಾರ, ಸಂಸ್ಕೃತಿ ಮತ್ತು ಮನೋರಂಜನೆಯ ಆಧಾರದ ಮೇಲೆ ಮಾಡಲಾಗಿದೆ.

ಈ ಪಟ್ಟಿಯನ್ನು ಸಿದ್ಧಪಡಿಸಲು ವಿಶ್ವದಾದ್ಯಂತ ಸುಮಾರು 20,000ಕ್ಕೂ ಹೆಚ್ಚು ನಗರವಾಸಿಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಅವರ ನಗರಗಳಲ್ಲಿನ ಆಹಾರದ ಗುಣಮಟ್ಟ, ಕೈಗೆಟುಕುವ ದರಗಳು, ನೈಟ್ ಲೈಫ್, ಸಂಸ್ಕೃತಿ ಮತ್ತು ಅಲ್ಲಿನ ಜನರ ಸಂತೋಷದ ಮಟ್ಟವನ್ನು ಆಧಾರವಾಗಿಟ್ಟುಕೊಂಡು ಈ ಶ್ರೇಯಾಂಕ ನೀಡಲಾಗಿದೆ.

ನ್ಯೂಯಾರ್ಕ್ ಯಾಕೆ ನಂಬರ್ ‌1 ?

ನ್ಯೂಯಾರ್ಕ್ ನಗರವನ್ನು 'ವಿಶ್ವದ ರಾಜಧಾನಿ' ಎಂದು ಕರೆಯಲಾಗುತ್ತದೆ. ಅಲ್ಲಿನ ವಸ್ತುಸಂಗ್ರಹಾಲಯಗಳು, ರಂಗಭೂಮಿ ಚಟುವಟಿಕೆಗಳು ಮತ್ತು ವಿಶ್ವದ ವಿವಿಧ ಮೂಲೆಯ ಆಹಾರಗಳು ಲಭ್ಯವಿರುವುದು ಈ ನಗರಕ್ಕೆ ಮೊದಲ ಸ್ಥಾನ ತಂದುಕೊಟ್ಟಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 15ರಷ್ಟು ಜನರು ತಾವು ಬೇರೆ ನಗರಕ್ಕೆ ವಲಸೆ ಹೋಗುವುದಾದರೆ ನ್ಯೂಯಾರ್ಕ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಮೆಲ್ಬರ್ನ್‌ ನಗರದಲ್ಲಿ ಮರೆಯಲಾಗದ ದಿನಗಳು

ಭಾರತದ ಹೆಮ್ಮೆ - ಮುಂಬೈ:

ಈ ಜಾಗತಿಕ ಪಟ್ಟಿಯಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈ 12ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದಿಂದ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ನಗರ ಇದು. ಮುಂಬೈನ ವೇಗದ ಜೀವನಶೈಲಿ, ಆಹಾರದ ವಿವಿಧತೆ ಮತ್ತು ಸಂಸ್ಕೃತಿ ಇಲ್ಲಿ ಪ್ರಮುಖವಾಗಿ ಗಮನ ಸೆಳೆದಿವೆ.

ಅಗ್ರ 10 ನಗರಗಳ ಪಟ್ಟಿ:

  1. ನ್ಯೂಯಾರ್ಕ್, ಅಮೆರಿಕ
  2. ಕೇಪ್ ಟೌನ್, ದಕ್ಷಿಣ ಆಫ್ರಿಕಾ
  3. ಬರ್ಲಿನ್, ಜರ್ಮನಿ
  4. ಲಂಡನ್, ಯುನೈಟೆಡ್ ಕಿಂಗ್‌ಡಮ್
  5. ಮ್ಯಾಡ್ರಿಡ್, ಸ್ಪೇನ್
  6. ಮೆಕ್ಸಿಕೋ ಸಿಟಿ, ಮೆಕ್ಸಿಕೋ
  7. ಲಿವರ್‌ಪೂಲ್, ಯುನೈಟೆಡ್ ಕಿಂಗ್‌ಡಮ್
  8. ಟೋಕಿಯೋ, ಜಪಾನ್
  9. ರೋಮ್, ಇಟಲಿ
  10. ಪೋರ್ಟೊ, ಪೋರ್ಚುಗಲ್