ಕೊಚ್ಚಿ ಬೀದಿಗಳಲ್ಲಿ ಕಥೆಯ ಚಿತ್ರಕಲೆ
ಒಂದು ಕಾಲದಲ್ಲಿ ಕೇವಲ ವ್ಯಾಪಾರ ಕೇಂದ್ರವಾಗಿದ್ದ ಕೊಚ್ಚಿ, ಇಂದು ಸ್ಟ್ರೀಟ್ ಆರ್ಟ್ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಕೇರಳದ ಸುಂದರ ಬಂದರು ನಗರಿ ಕೊಚ್ಚಿಯು ತನ್ನ ಐತಿಹಾಸಿಕ ಪರಂಪರೆಯ ಜತೆಗೆ ಈಗ ಆಧುನಿಕ ಕಲೆಯ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ. ನಗರದ ಗೋಡೆಗಳ ಮೇಲೆ ವರ್ಣರಂಜಿತ ಕಲೆಗಲು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಪ್ರತಿ ಚಿತ್ರದಲ್ಲೂ ಅಲ್ಲಿನ ಸಂಸ್ಕೃತಿ, ಇತಿಹಾಸದ ಕಥೆಗಳನ್ನು ಹೇಳಲಾಗುತ್ತಿದೆ.
ವಿಶೇಷವಾಗಿ 'ಫೋರ್ಟ್ ಕೊಚ್ಚಿ' ಮತ್ತು 'ಮಟ್ಟಂಚೇರಿ' ಭಾಗಗಳು ಈಗ ಒಪನ್ ಆರ್ಟ್ ಗ್ಯಾಲರಿಗಳಂತೆ ಕಾಣಿಸುತ್ತಿವೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರು ಸಾಮಾನ್ಯ ಗೋಡೆಗಳನ್ನು ಅದ್ಭುತ ಕಲಾಕೃತಿಗಳನ್ನಾಗಿ ಪರಿವರ್ತಿಸಿದ್ದಾರೆ. ಈ ಮುರಲ್ ಚಿತ್ರಕಲೆಗಳು ಕೊಚ್ಚಿಯ ಹಳೆಯ ಪದಾರ್ಥಗಳ ವ್ಯಾಪಾರದ ಇತಿಹಾಸ, ಸ್ಥಳೀಯ ಮೀನುಗಾರರ ದೈನಂದಿನ ಜೀವನ, ಕೇರಳದ ಸಾಂಪ್ರದಾಯಿಕ ಕಲೆಗಳಾದ ಕಥಕ್ಕಳಿ, ವಸಾಹತುಶಾಹಿ ಕಾಲದ ಪ್ರಭಾವಗಳು ಮತ್ತು ಆಧುನಿಕ ಸಾಮಾಜಿಕ ಸಂದೇಶಗಳನ್ನು ಸಾರುತ್ತವೆ.
ಕೊಚ್ಚಿಯಲ್ಲಿ ನಡೆಯುವ ಪ್ರತಿಷ್ಠಿತ 'ಕೊಚ್ಚಿ-ಮುಜಿರಿಸ್ ಬಿನಾಲೆ' ಕಲಾ ಉತ್ಸವವು ಈ ಬೀದಿ ಚಿತ್ರಕಲೆಗಳ ಬೆಳವಣಿಗೆಗೆ ಪ್ರಮುಖ ಕಾರಣ. ಈ ಉತ್ಸವವು ಜಗತ್ತಿನಾದ್ಯಂತದ ಕಲಾವಿದರನ್ನು ಆಕರ್ಷಿಸಿದ್ದು, ಅವರು ಬಿಟ್ಟು ಹೋದ ಕಲಾಕೃತಿಗಳು ಈಗ ನಗರದ ಅವಿಭಾಜ್ಯ ಅಂಗವಾಗಿವೆ.