ಹಿಮಾಚಲ ಪ್ರದೇಶದ ಅತ್ಯಂತ ಕಠಿಣ ಹಾಗೂ ಪವಿತ್ರ ಆಧ್ಯಾತ್ಮಿಕ ಚಾರಣಗಳಲ್ಲಿ ಒಂದಾದ 'ಕಿನ್ನೌರ್ ಕೈಲಾಶ್ ಯಾತ್ರೆ 2026' (Kinnaur Kailash Yatra) ಜುಲೈ 30, 2026 ರಿಂದ ಆರಂಭಗೊಳ್ಳಲಿದೆ. ಸಮುದ್ರ ಮಟ್ಟದಿಂದ ಸುಮಾರು 19,849 ಅಡಿ ಎತ್ತರದಲ್ಲಿರುವ, ಭಗವಾನ್ ಶಿವನ ಪ್ರಾಕೃತಿಕ ಶಿವಲಿಂಗ ರೂಪದ ದರ್ಶನಕ್ಕಾಗಿ ದೇಶದಾದ್ಯಂತ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಸ್ಥಳೀಯ ಜಿಲ್ಲಾಡಳಿತವು ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಜಿಮ್ ಕಾರ್ಬೆಟ್, ಚಾರ್‌ಧಾಮ ಯಾತ್ರೆಗೆ ಹೊಸ ರೈಲು ಸಂಪರ್ಕ

ಯಾತ್ರಾರ್ಥಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಕೃತಿ ವಿಕೋಪ ಹಾಗೂ ನೂಕುನುಗ್ಗಲು ತಡೆಯಲು ದಿನಕ್ಕೆ ಗರಿಷ್ಠ 350 ಯಾತ್ರಾರ್ಥಿಗಳಿಗೆ ಮಾತ್ರ ಯಾತ್ರೆಗೆ ತೆರಳಲು ಅವಕಾಶ ನೀಡಲಾಗುತ್ತದೆ. 250 ಟಿಕೆಟ್‌ಗಳನ್ನು ಕಿನ್ನೌರ್ ಜಿಲ್ಲಾಡಳಿತದ ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಕಾಯ್ದಿರಿಸಬಹುದು. 100 ಟಿಕೆಟ್‌ಗಳನ್ನು ಕಲ್ಪಾ/ಸಾಂಗ್ಲಾ ಬ್ಲಾಕ್‌ನ ಆಫ್‌ಲೈನ್ ಕೌಂಟರ್‌ಗಳಲ್ಲಿ ಸ್ಥಳದಲ್ಲೇ ನೀಡಲಾಗುತ್ತದೆ. ವೈದ್ಯಕೀಯ ತಪಾಸಣೆ ಮತ್ತು ಇ-ಪಾಸ್ ಇಲ್ಲದೆ ಯಾತ್ರೆಗೆ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚಾರಣ ಆರಂಭಿಸುವ ಮುನ್ನ ತಾಂಗ್ಲಿಂಗ್ ಮೂಲ ಶಿಬಿರದಲ್ಲಿ ಆಡಳಿತ ನಿಯೋಜಿಸಿರುವ ವೈದ್ಯಕೀಯ ತಂಡದಿಂದ 'ಫಿಟ್‌ನೆಸ್ ಪ್ರಮಾಣಪತ್ರ' ಪಡೆಯುವುದು ಕಡ್ಡಾಯ. 18 ರಿಂದ 55 ವರ್ಷದೊಳಗಿನ ದೈಹಿಕವಾಗಿ ಶಕ್ತರಾಗಿರುವ ವ್ಯಕ್ತಿಗಳಿಗೆ ಮಾತ್ರ ಯಾತ್ರೆಗೆ ಅನುಮತಿ ನೀಡಲಾಗುತ್ತದೆ. ಹಿಮಾಲಯದ ಸೂಕ್ಷ್ಮ ಪರಿಸರವನ್ನು ರಕ್ಷಿಸಲು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಕವರ್‌ಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಮಳೆಗಾಲದ ಸಮಯವಾಗಿರುವುದರಿಂದ, ದಿಢೀರ್ ಪ್ರವಾಹ ಅಥವಾ ಭೂಕುಸಿತ ಸಂಭವಿಸಿದರೆ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಹಕ್ಕು ಆಡಳಿತಕ್ಕಿರುತ್ತದೆ.