ಕೇರಳದ ಸನೀದ್‌ ಎಂಬ ಸೈಕಲ್ ಸಾಹಸಿ ಮುಂಭಾಗದ ಚಕ್ರವಿಲ್ಲದ ವಿಶಿಷ್ಟ ಸೈಕಲ್‌ನಲ್ಲಿ ಬರೋಬ್ಬರಿ 11,000 ಕಿಮೀ. ಪ್ರಯಾಣ ಕೈಗೊಂಡಿದ್ದಾರೆ. ಕೇರಳದಿಂದ ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್‌ ತಲುಪುವುದು ಅವರ ಗುರಿಯಾಗಿದ್ದು, ಈಗಾಗಲೇ 7,000 ಕಿಮೀ.ಗೂ ಹೆಚ್ಚು ದೂರ ಕ್ರಮಿಸಿದ್ದಾರೆ. ಇತ್ತೀಚೆಗೆ ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.

ಸಾಮಾನ್ಯ ಸೈಕಲ್‌ನ ಮುಂಭಾಗದ ಚಕ್ರವನ್ನು ತೆಗೆದುಹಾಕಲಾಗಿದ್ದು, ಕೇವಲ ಹಿಂಬದಿ ಚಕ್ರದ ಸಹಾಯದಿಂದ ಸನೀದ್‌ ಸಮತೋಲನ ಕಾಯ್ದುಕೊಂಡು ಸವಾರಿ ಮಾಡುತ್ತಿದ್ದಾರೆ. ಅವರು ದಿನಕ್ಕೆ ಸುಮಾರು 50ರಿಂದ 60 ಕಿಮೀ. ಕ್ರಮಿಸುತ್ತಿದ್ದು, ಒಂದೇ ದಿನದಲ್ಲಿ ಗರಿಷ್ಠ 150 ಕಿಮೀ. ಸವಾರಿ ಮಾಡಿದ್ದಾರೆ. ರಸ್ತೆ ಪರಿಸ್ಥಿತಿ ಮತ್ತು ಹವಾಮಾನಕ್ಕೆ ಅನುಗುಣವಾಗಿ ದಿನದ ಪ್ರಯಾಣದ ದೂರ ಬದಲಾಗುತ್ತದೆ.

ಈ ಸಾಹಸದ ಉದ್ದೇಶ ಕೇವಲ ದಾಖಲೆ ನಿರ್ಮಿಸುವುದಲ್ಲ. ‘ಮಾದಕವಸ್ತುಗಳಿಗೆ ಇಲ್ಲ ಎನ್ನಿ’ ಎಂಬ ಸಂದೇಶವನ್ನು ಜನರಿಗೆ, ವಿಶೇಷವಾಗಿ ಯುವಜನರಿಗೆ ತಲುಪಿಸುವುದು ಅವರ ಪ್ರಮುಖ ಗುರಿಯಾಗಿದೆ. ಸನೀದ್‌ ವೃತ್ತಿಪರ ಬೈಕ್ ಸ್ಟಂಟರ್ ಆಗಿದ್ದು, ಭಾರತೀಯ ಸೇನೆಗೆ ಪರೇಡ್ ಸ್ಟಂಟ್‌ ತರಬೇತಿಯನ್ನೂ ನೀಡುತ್ತಾರೆ.