ಕಳೆದ ಕೆಲವು ತಿಂಗಳುಗಳಲ್ಲಿ, ಸ್ಲೀಪರ್ ಕೋಚ್‌ಗಳು ಮತ್ತು ಹವಾನಿಯಂತ್ರಿತ ಬಸ್‌ಗಳಲ್ಲಿ ಸಂಭವಿಸುವ ಬೆಂಕಿ ಅವಘಡಗಳು ಮತ್ತು ಹೆದ್ದಾರಿಗಳಲ್ಲಿ ಸಂಭವಿಸಿರುವ ಅಪಘಾತಗಳಿಂದ ಎಚ್ಚೆತ್ತ ರಾಜ್ಯ ಸರಕಾರ, ಕೆಎಸ್ಆರ್‌ಟಿಸಿ ಎಲ್ಲಾ ಸ್ಲೀಪರ್ ಕೋಚ್ ಬಸ್ಸುಗಳಲ್ಲಿ ಡ್ಯಾಶ್ ಕ್ಯಾಮ್ ಹಾಗೂ ಸಲೂನ್ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ.

ರಾಜ್ಯ ಸರಕಾರವು ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ, ಡ್ಯಾಶ್ ಕ್ಯಾಮ್‌ಗಳು ಮತ್ತು ಸಲೂನ್ ಕ್ಯಾಮೆರಾಗಳ ಮೊರೆ ಹೋಗಿದೆ. ಈ ಕ್ಯಾಮೆರಾಗಳು ಚಾಲಕರ ನಡವಳಿಕೆ ಮತ್ತು ವಾಹನ ಚಲಾಯಿಸುವ ಬಗೆಯನ್ನು ಪರಿಶೀಲಿಸಲು ಉಪಯುಕ್ತವಾಗಲಿವೆ.

ಮೊದಲ ಹಂತದಲ್ಲಿ ಸ್ಲೀಪರ್ ಕೋಚ್ ಮತ್ತು ಹವಾನಿಯಂತ್ರಿತ ಸೇವೆಗಳ ಬಸ್ಸುಗಳಲ್ಲಿ ಜಾರಿಗೊಳಿಸಲು ಸರಕಾರ ತೀರ್ಮಾನಿಸಿದೆ. ಇದಲ್ಲದೆ ಚಾಲಕರಿಗೆ ತುರ್ತು ಪರಿಸ್ಥಿತಿಯಲ್ಲಿ ಸಲಹೆ ನೀಡುವ ತಂತ್ರಜ್ಞಾನ ಬಳಕೆಗೆ ಸರಕಾರ ಚಿಂತಿಸುತ್ತಿದೆ. ಇದರಿಂದಾಗಿ ಯಾವುದೇ ರೀತಿಯ ದುರಂತಗಳು ನಡೆಯದ ಹಾಗೆ ಕೆಎಸ್‌ಆರ್‌ಟಿಸಿ ಸಿದ್ಧಗೊಳ್ಳುತ್ತಿದೆ.