ರೈಲುಗಳಲ್ಲಿ ಕಸ ವಿಲೇವಾರಿಗೆ ಹೊಸ ವ್ಯವಸ್ಥೆ
ದೀರ್ಘ ದೂರದ ರೈಲು ಪ್ರಯಾಣದ ವೇಳೆ ಕೋಚ್‌ಗಳಲ್ಲಿ ಕಸದ ಬುಟ್ಟಿಗಳು ತುಂಬಿ ಹೋಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತೀಯ ರೈಲ್ವೇ ಹೊಸ ಕಸ ವಿಲೇವಾರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ದೀರ್ಘ ದೂರದ ರೈಲು ಪ್ರಯಾಣದ ವೇಳೆ ಕೋಚ್‌ಗಳಲ್ಲಿ ಕಸದ ಬುಟ್ಟಿಗಳು ತುಂಬಿ ಹೋಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತೀಯ ರೈಲ್ವೇ ಹೊಸ ಕಸ ವಿಲೇವಾರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಝಾನ್ಸಿಯ Wagon Repair Workshop ಈ ವ್ಯವಸ್ಥೆಯ ಮಾದರಿಯನ್ನು (ಪ್ರೊಟೋಟೈಪ್) ಸಿದ್ಧಪಡಿಸಿದೆ.
ಪ್ರಸ್ತುತ LHB ಕೋಚ್‌ಗಳಲ್ಲಿ ತಲಾ 15ರಿಂದ 20 ಲೀಟರ್ ಸಾಮರ್ಥ್ಯದ ಎರಡು ಕಸದ ಬುಟ್ಟಿಗಳಿದ್ದು, ದೀರ್ಘ ಪ್ರಯಾಣದಲ್ಲಿ ಅವುಗಳನ್ನು ಪದೇಪದೆ ಖಾಲಿ ಮಾಡಬೇಕಾಗುತ್ತದೆ. ಹೊಸ ವ್ಯವಸ್ಥೆಯಲ್ಲಿ 376.4 ಲೀಟರ್ ಸಾಮರ್ಥ್ಯದ ದೊಡ್ಡ ಕಸ ಸಂಗ್ರಹಕವನ್ನು ಕೋಚ್‌ನ ಕೆಳಭಾಗದಲ್ಲಿ ಅಳವಡಿಸಲಾಗುತ್ತದೆ. ಪ್ರಯಾಣಿಕರು ಎಂದಿನಂತೆ ಕಸವನ್ನು ಡ್ರಾಪ್‌ಬಾಕ್ಸ್‌ಗೆ ಹಾಕಬಹುದಾಗಿದ್ದು, ಕನೆಕ್ಟರ್ ಮೂಲಕ ಕಸ ಕೆಳಭಾಗದಲ್ಲಿರುವ ಸಂಗ್ರಹಕಕ್ಕೆ ಸೇರುತ್ತದೆ. ಗುರುತ್ವಾಕರ್ಷಣೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಈ ವ್ಯವಸ್ಥೆಯಿಂದ ಪ್ರಯಾಣದ ಮಧ್ಯೆ ಕಸವನ್ನು ಪದೇಪದೆ ತೆರವುಗೊಳಿಸುವ ಅಗತ್ಯ ಕಡಿಮೆಯಾಗಲಿದೆ.
ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಾಗುವ ಸಂಗ್ರಹಕವನ್ನು ಸುಲಭವಾಗಿ ಸ್ವಚ್ಛಗೊಳಿಸಲು ಮತ್ತು ದುರ್ವಾಸನೆ ನಿಯಂತ್ರಿಸಲು ವಿಶೇಷ ವಿನ್ಯಾಸ ಮಾಡಲಾಗಿದೆ. ಈ ವ್ಯವಸ್ಥೆಯನ್ನು RDSO ಪರಿಶೀಲನೆ ಹಾಗೂ ಅನುಮೋದನೆಗಾಗಿ ಕಳುಹಿಸಲಾಗಿದೆ. ಅನುಮೋದನೆ ದೊರೆತ ಬಳಿಕ ಪ್ರತಿ ಕೋಚ್‌ನಲ್ಲಿ ಎರಡು ಸಂಗ್ರಹಕಗಳನ್ನು ಅಳವಡಿಸುವ ಯೋಜನೆ ಇದೆ.