ಬೆಂಗಳೂರು – ಹೈದರಾಬಾದ್‌ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ ಅಂತಾರಾಷ್ಟ್ರೀಯ ಚಿತ್ರ ನಿರ್ಮಾಪಕ ಮೈಕ್‌ ನೂನ್‌, ರೈಲಿನ ಸೌಲಭ್ಯಗಳು ಮತ್ತು ದಕ್ಷಿಣ ಭಾರತದ ಪ್ರಕೃತಿ ಸೌಂದರ್ಯವನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಪ್ರಯಾಣದ ಅನುಭವವನ್ನು ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಹಂಚಿಕೊಂಡಿರುವ ಅವರು, ವಂದೇ ಭಾರತ್‌ ಅನ್ನು ಭಾರತದ ʼಅತ್ಯುತ್ತಮ ಪ್ರಯಾಣಿಕ ರೈಲುʼ ಎಂದು ಕರೆದಿದ್ದಾರೆ.

ಭಾರತದಲ್ಲಿ ಕೆಲವರು ಸಾಮಾನ್ಯವಾಗಿ ಕಷ್ಟಕರ ಅಥವಾ ಅಸೌಕರ್ಯದ ಪ್ರಯಾಣದ ದೃಶ್ಯಗಳನ್ನು ತೋರಿಸುತ್ತಾರೆ. ಆದರೆ, ತಾವು ಭಾರತದ ಮತ್ತೊಂದು ಮುಖವನ್ನು ಪರಿಚಯಿಸಲು ಬಯಸಿದ್ದಾಗಿ ಮೈಕ್‌ ಹೇಳಿದ್ದಾರೆ.

ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರ ಮಾಹಿತಿ ಪುಸ್ತಕವೂ ಅವರ ಗಮನ ಸೆಳೆಯಿತು. ವಿವಿಧ ನಿಲ್ದಾಣಗಳ ಪ್ರಸಿದ್ಧ ಆಹಾರಗಳಾದ ಹೈದರಾಬಾದ್ ಬಿರಿಯಾನಿ, ಬೆಂಗಳೂರಿನ ಕಬಾಬ್ ಮತ್ತು ಕೋಲ್ಕತ್ತಾದ ಮೀನು ಖಾದ್ಯಗಳ ಬಗ್ಗೆ ಅದರಲ್ಲಿ ಮಾಹಿತಿ ನೀಡಲಾಗಿತ್ತು.

ರೈಲಿನ ಆರಾಮದಾಯಕ ಆಸನಗಳು, ಕಿಟಕಿಯತ್ತ ಮುಖಮಾಡಿ ಹೊರಗಿನ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಹಾಗೂ ಪ್ರಯಾಣದ ವೇಳೆ ನೀಡಲಾದ ತಿಂಡಿ, ಸೂಪ್, ಊಟ ಮತ್ತು ಐಸ್‌ಕ್ರೀಂ ಅವರ ಮೆಚ್ಚುಗೆಗೆ ಪಾತ್ರವಾಯಿತು. ವಿಶೇಷವಾಗಿ ದಕ್ಷಿಣ ಭಾರತದ ಹಸಿರುಮಯ ಗ್ರಾಮೀಣ ಪ್ರದೇಶಗಳ ನೈಸರ್ಗಿಕ ಸೌಂದರ್ಯ ಅದ್ಭುತವಾಗಿದೆ ಎಂದು ಅವರು ಹೇಳಿದರು.

ಸುಮಾರು ಎಂಟು ಗಂಟೆಗಳ ಪ್ರಯಾಣದ ಬಳಿಕ ಹೈದರಾಬಾದ್ ತಲುಪಿದ ಮೈಕ್ ನೂನ್ ರೈಲು ಪ್ರಯಾಣ ಅತ್ಯಂತ ತೃಪ್ತಿದಾಯಕವಾಗಿತ್ತು ಎಂದು ಹೇಳಿ, “ಥ್ಯಾಂಕ್ಸ್ ಫಾರ್ ದಿ ಲಿಫ್ಟ್, ವಂದೇ ಭಾರತ್” ಎಂದು ತಮ್ಮ ಅನುಭವಕ್ಕೆ ತೆರೆ ಎಳೆದಿದ್ದಾರೆ.