ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಡೈವಿಂಗ್ ಶಾಲೆಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿದೆ. ಇತ್ತೀಚಿನ ಅವಧಿಯಲ್ಲಿ ಈ ಕ್ಷೇತ್ರದ ಆದಾಯವು ಶೇ.47.7ರಷ್ಟು ಏರಿಕೆಯಾಗಿದೆ ಎಂದು ಮಾಲ್ಡೀವ್ಸ್ ಇನ್‌ಲ್ಯಾಂಡ್‌ ರೆವೆನ್ಯೂ ಅಥಾರಿಟಿ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮ ಪಿಎಸ್‌ಎಂ ನ್ಯೂಸ್ ವರದಿ ಮಾಡಿದೆ.

2025ರ ಡಿಸೆಂಬರ್‌ನಿಂದ 2026ರ ಫೆಬ್ರುವರಿ ಅವಧಿಯಲ್ಲಿ ಮಾಲ್ಡೀವ್ಸ್‌ನ ಒಟ್ಟು ಪ್ರವಾಸೋದ್ಯಮ ಕ್ಷೇತ್ರವು 447 ಮಿಲಿಯನ್ ಅಮೆರಿಕನ್ ಡಾಲರ್‌ಗಳ ಔಟ್‌ಪುಟ್ ತೆರಿಗೆ ಆದಾಯ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 371 ಮಿಲಿಯನ್ ಡಾಲರ್ ಆಗಿದ್ದು, ಈ ಬಾರಿ ಶೇ.20.5ರಷ್ಟು ಹೆಚ್ಚಳ ಕಂಡಿದೆ.

Untitled design (38)

ಡೈವಿಂಗ್ ಶಾಲೆಗಳ ಆದಾಯವು ಕಳೆದ ವರ್ಷದ 21.68 ಮಿಲಿಯನ್ ಡಾಲರ್‌ನಿಂದ 32.03 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗ ಎಂಬ ಹೆಗ್ಗಳಿಕೆಗೆ ಡೈವಿಂಗ್ ಸ್ಕೂಲ್‌ ಗಳು ಪಾತ್ರವಾಗಿವೆ.

ಸಮುದ್ರ ಆಧಾರಿತ ಇತರ ಮನರಂಜನಾ ಚಟುವಟಿಕೆಗಳೂ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿವೆ. ವಾಟರ್ ಸ್ಪೋರ್ಟ್ಸ್ ಕೇಂದ್ರಗಳ ಆದಾಯವು 8.2 ಮಿಲಿಯನ್ ಡಾಲರ್‌ನಿಂದ 12.37 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿ ಶೇ.49.2ರಷ್ಟು ಹೆಚ್ಚಳ ಕಂಡಿದೆ. ಇದೇ ವೇಳೆ ಹೋಮ್‌ಸ್ಟೇ ಅತಿಥಿಗೃಹಗಳ ಆದಾಯವು ಶೇ.60.8ರಷ್ಟು ಏರಿಕೆಯಾದರೂ, ಒಟ್ಟಾರೆ ಪ್ರವಾಸೋದ್ಯಮ ಆದಾಯದಲ್ಲಿ ಅವುಗಳ ಪಾಲು ಇನ್ನೂ ಕಡಿಮೆಯಾಗಿದೆ.

Untitled design (36)

ಮಾಲ್ಡೀವ್ಸ್ ಪ್ರವಾಸೋದ್ಯಮದ ಪ್ರಮುಖ ಆಧಾರವಾಗಿರುವ ರೆಸಾರ್ಟ್‌ಗಳ ಆದಾಯವೂ ಶೇ.21ರಷ್ಟು ಏರಿಕೆಯಾಗಿದೆ. ದೇಶದ ಪ್ರವಾಸೋದ್ಯಮ ಆದಾಯದಲ್ಲಿ ರೆಸಾರ್ಟ್‌ಗಳೇ ಅತಿದೊಡ್ಡ ಪಾಲು ಹೊಂದಿವೆ.

ಪ್ರವಾಸಿಗರ ಸಂಖ್ಯೆಯ ಏರಿಕೆಯು ಈ ಬೆಳವಣಿಗೆಗೆ ಪ್ರಮುಖ ಕಾರಣ ಎಂದು ತಜ್ಞರು ಉಲ್ಲೇಖಿಸಿದ್ದಾರೆ. ವರದಿ ಅವಧಿಯಲ್ಲಿ ಮಾಲ್ಡೀವ್ಸ್‌ಗೆ ಆಗಮಿಸಿದ ವಿದೇಶಿ ಪ್ರವಾಸಿಗರ ಸಂಖ್ಯೆ ಶೇ.11.6ರಷ್ಟು ಹೆಚ್ಚಳ ಕಂಡಿರುವುದರಿಂದ ಪ್ರವಾಸೋದ್ಯಮದ ವಿವಿಧ ವಿಭಾಗಗಳ ಆದಾಯವೂ ಗಮನಾರ್ಹವಾಗಿ ವೃದ್ಧಿಯಾಗಿದೆ ಎಂದು ವರದಿ ತಿಳಿಸಿದೆ.