ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಲು 2030ರ ವೇಳೆಗೆ ಚಾಲಕರಹಿತ ಆಟೋಮೇಟೆಡ್ ಪೀಪಲ್ ಮೂವರ್‌ (APM) ವ್ಯವಸ್ಥೆ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಸುಮಾರು ರು.3,500 ಕೋಟಿ ವೆಚ್ಚದ ಈ ಯೋಜನೆಯಡಿ ಒಟ್ಟು 7.3 ಕಿಮೀ. ಉದ್ದದ ಮಾರ್ಗ ನಿರ್ಮಾಣವಾಗಲಿದ್ದು, ಆರು ನಿಲ್ದಾಣಗಳು ಇರಲಿವೆ. ಟರ್ಮಿನಲ್‌ 1, ಟರ್ಮಿನಲ್‌ 2, ಟರ್ಮಿನಲ್‌ 3, ಕಾರ್ಗೊ ಟರ್ಮಿನಲ್‌, ಏರೋಸಿಟಿ ಹಾಗೂ ದೆಹಲಿ ಮೆಟ್ರೋ ನಿಲ್ದಾಣವನ್ನು ಈ ವ್ಯವಸ್ಥೆ ಸಂಪರ್ಕಿಸಲಿದೆ.

ಚಾಲಕರಹಿತ ಸಾರಿಗೆ ವ್ಯವಸ್ಥೆಯಿಂದ ಟರ್ಮಿನಲ್‌ 1ರಿಂದ ಟರ್ಮಿನಲ್‌ 3ಕ್ಕೆ ಪ್ರಯಾಣಿಸುವ ಸಮಯವು ಸುಮಾರು 13 ನಿಮಿಷಗಳಿಗೆ ಇಳಿಯುವ ನಿರೀಕ್ಷೆಯಿದೆ. ಆರಂಭಿಕ ವರ್ಷದಲ್ಲಿ ಪ್ರತಿದಿನ ಸುಮಾರು 55,000 ಪ್ರಯಾಣಿಕರು ಎಪಿಎಂ ಸೇವೆ ಬಳಸುವ ಸಾಧ್ಯತೆ ಇದೆ. ಇದರಿಂದ ದೇಶದ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲಿ ಒಂದಾದ ದೆಹಲಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.

ವಿಮಾನ ನಿಲ್ದಾಣದ ಮಾಸ್ಟರ್‌ ಪ್ಲಾನ್‌ 2036ರ ಪ್ರಕಾರ, ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಪ್ರಸ್ತುತ 106 ದಶಲಕ್ಷದಿಂದ 125 ದಶಲಕ್ಷಕ್ಕೆ ಹೆಚ್ಚಿಸುವ ಗುರಿಯಿದೆ. ಕೆಲವು ಅಂದಾಜುಗಳ ಪ್ರಕಾರ ಇದು 129 ದಶಲಕ್ಷದವರೆಗೂ ಏರಿಕೆಯಾಗಬಹುದು. ಟರ್ಮಿನಲ್‌ 3ರಲ್ಲಿ ಹೊಸ ಪಿಯರ್‌ E ನಿರ್ಮಾಣವೂ 2030ರ ಏಪ್ರಿಲ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.