ಪ್ರವಾಸಿಗರ ಸುರಕ್ಷತೆ ಹಾಗೂ ವಾಸ್ತವ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಭೂತಾನ್‌ ಸರಕಾರ ಪ್ರವಾಸಿಗರ ವಾಸ್ತವ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ದೇಶದ ಪ್ರವಾಸೋದ್ಯಮ ಇಲಾಖೆ ಹೊರಡಿಸಿರುವ ಹೊಸ ಸೂಚನೆಯಂತೆ, ಪ್ರವಾಸಿಗರಿಗೆ ವಾಸ್ತವ್ಯ ಒದಗಿಸುವುದು ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಮತ್ತು ಪ್ರಮಾಣೀಕರಣ ಪಡೆದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಲಿದೆ. ಈ ನಿಯಮ ಹೊಟೇಲ್‌ಗಳಷ್ಟೇ ಅಲ್ಲದೆ ಗ್ರಾಮೀಣ ಹೋಮ್‌ಸ್ಟೇಗಳಿಗೂ ಅನ್ವಯಿಸುತ್ತದೆ.

ಕ್ಯಾಂಪಿಂಗ್‌, ಹೊರಾಂಗಣ ವಾಸ್ತವ್ಯ ಸೇರಿದಂತೆ ಪ್ರವಾಸಿಗರ ಎಲ್ಲ ರಾತ್ರಿ ತಂಗುವಿಕೆಗಳು ಇಲಾಖೆಯಿಂದ ಅನುಮೋದಿತ ಹಾಗೂ ಪ್ರಮಾಣೀಕೃತ ವಸತಿ ಅಥವಾ ನಿಗದಿತ ಸ್ಥಳಗಳಲ್ಲೇ ನಡೆಯಬೇಕು.

ಪ್ರಮಾಣೀಕರಣವಿಲ್ಲದ ಖಾಸಗಿ ಮನೆಗಳು, ಆವರಣಗಳು ಅಥವಾ ಅನುಮತಿಯಿಲ್ಲದ ತೆರೆದ ಪ್ರದೇಶಗಳಲ್ಲಿ ಪ್ರವಾಸಿಗರು ರಾತ್ರಿ ತಂಗುವುದನ್ನು ನಿಷೇಧಿಸಲಾಗಿದೆ.

ಅನುಮತಿ ಪಡೆಯದೆ ಪ್ರವಾಸಿಗರಿಗಾಗಿ ವಸತಿ ನಿರ್ಮಿಸುವ ಅಥವಾ ಬಳಸುವ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಪ್ರಮಾಣೀಕೃತ ವಸತಿ ಸಂಸ್ಥೆಗಳು ಮಾನ್ಯ ಸ್ಟಾರ್‌ ರೇಟಿಂಗ್‌ ಪ್ರಮಾಣಪತ್ರ ಹೊಂದಿರಬೇಕು ಮತ್ತು ನಿಗದಿತ ಅವಧಿಯಲ್ಲಿ ನವೀಕರಿಸಬೇಕು. ಹೊಸ ನಿಯಮಗಳು ಭೂತಾನ್‌ನ 2024ರ ಪ್ರವಾಸೋದ್ಯಮ ನಿಯಮಗಳಿಗೆ ಅನುಗುಣವಾಗಿವೆ.