ಪ್ರಯಾಣಿಕರಿಗೆ ಹೆಚ್ಚು ವೈಯಕ್ತಿಕಗೊಳಿಸಿದ ಹಾಗೂ ಸಮಗ್ರ ಡಿಜಿಟಲ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಏರ್ ಇಂಡಿಯಾ ತನ್ನ ಮುಂದಿನ ಪೀಳಿಗೆಯ ‘ವಿಸ್ಟಾ ಡಿಜಿಟಲ್ ಪ್ಲಾಟ್‌ಫಾರ್ಮ್‌’ನ ಪೂರ್ವವೀಕ್ಷಣೆಯನ್ನು ಅನಾವರಣಗೊಳಿಸಿದೆ.

ಸಂಪರ್ಕಿತ ಇನ್-ಫ್ಲೈಟ್ ಎಂಟರ್‌ಟೈನ್‌ಮೆಂಟ್‌ (IFE) ಸಾಫ್ಟ್‌ವೇರ್ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಈ ವೇದಿಕೆ, ವಿಮಾನ ಪ್ರಯಾಣದ ಅನುಭವವನ್ನು ಮತ್ತಷ್ಟು ಸುಧಾರಿಸುವ ಗುರಿ ಹೊಂದಿದೆ.

ಏರ್ ಇಂಡಿಯಾದ ಆಂತರಿಕ ವಿನ್ಯಾಸ ಮತ್ತು ಸಾಫ್ಟ್‌ವೇರ್ ತಂಡಗಳು ಅಭಿವೃದ್ಧಿಪಡಿಸಿರುವ ವಿಸ್ಟಾ ವೇದಿಕೆಯಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿರುವ ಹಲವು ಹೊಸ ಆವಿಷ್ಕಾರಗಳು ಇರಲಿವೆ. ಪ್ರಸ್ತುತ ಈ ವ್ಯವಸ್ಥೆಯನ್ನು ವಿಮಾನಗಳಲ್ಲಿರುವ ಇನ್-ಫ್ಲೈಟ್ ಎಂಟರ್‌ಟೈನ್‌ಮೆಂಟ್ ಹಾರ್ಡ್‌ವೇರ್‌ಗಳೊಂದಿಗೆ ಸಂಯೋಜಿಸಲಾಗುತ್ತಿದೆ.

2028ರ ಆರ್ಥಿಕ ವರ್ಷದಿಂದ ಹಂತ ಹಂತವಾಗಿ ಅನುಷ್ಠಾನಗೊಳಿಸುವ ಯೋಜನೆ ಇದೆ. ಆರಂಭದಲ್ಲಿ ಹೊಸದಾಗಿ ಸೇರ್ಪಡೆಯಾಗುವ ಆಯ್ದ ವಿಮಾನಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ. ನಂತರ ಏರ್ ಇಂಡಿಯಾದ ಇತರ ವಿಮಾನಗಳಿಗೂ ವಿಸ್ತರಿಸಲಾಗುವುದು.

ವಿವಿಧ ಮಾದರಿಯ ವಿಮಾನಗಳಲ್ಲಿ ಅಳವಡಿಸಿರುವ ಮನೋರಂಜನಾ ವ್ಯವಸ್ಥೆಗಳ ನಡುವೆ ಹೆಚ್ಚಿನ ಏಕರೂಪತೆ ತರುವ ಉದ್ದೇಶ ವಿಸ್ಟಾ ವೇದಿಕೆಯದ್ದಾಗಿದೆ. ವಿಮಾನ ಹತ್ತುವ ಮೊದಲು, ಪ್ರಯಾಣದ ವೇಳೆ ಹಾಗೂ ಇಳಿದ ನಂತರವೂ ಪ್ರಯಾಣಿಕರ ಅನುಭವವನ್ನು ಸಂಪರ್ಕಿಸುವ ಡಿಜಿಟಲ್ ಸೇವೆಗಳಿಗೆ ಇದು ಬೆಂಬಲ ನೀಡಲಿದೆ. ತಂತ್ರಜ್ಞಾನ ಆಧಾರಿತ ಪ್ರಯಾಣಿಕ ಸೇವೆಗಳ ಸುಧಾರಣೆಯ ಭಾಗವಾಗಿ ಏರ್ ಇಂಡಿಯಾ ಈ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.